ನವದೆಹಲಿ: ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯ ವಲಸಿಗ ಕಾರ್ಮಿಕರು ಎದುರಿಸುತ್ತಿರುವ ಶೋಷಣೆ ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿದೇಶದಲ್ಲಿರುವ ಭಾರತೀಯರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಕುರಿತು ವಿ. ಸಿವದಾಸನ್ ಸಂಸದರು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ್ದಾರೆ.
ರಾಜ್ಯಸಭೆಯಲ್ಲಿ ಡಾ. ವಿ. ಸಿವದಾಸನ್ ಸಂಸದರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಉತ್ತರದ ಪ್ರಕಾರ, ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಭಾರತೀಯರು ಎದುರಿಸುತ್ತಿರುವ ಕಾರ್ಮಿಕ ಸಮಸ್ಯೆಗಳು ಹಾಗೂ ಇತರೆ ಹಿಂಸಾಚಾರದ ದೂರುಗಳು ಗಣನೀಯವಾಗಿ ಹೆಚ್ಚಾಗಿವೆ.
2021ರಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ 11,632 ದೂರುಗಳು ಸಲ್ಲಿಕೆಯಾಗಿದ್ದರೆ, 2025ರ ವೇಳೆಗೆ ಈ ಸಂಖ್ಯೆ ಎರಡು ಪಟ್ಟು ಹೆಚ್ಚು ಏರಿ 22,771ಕ್ಕೆ ತಲುಪಿದೆ. ಕಳೆದ ಐದು ವರ್ಷಗಳ ದೇಶವಾರು ದೂರುಗಳ ಮಾಹಿತಿಯನ್ನೂ ಸಚಿವಾಲಯ ತನ್ನ ಉತ್ತರದಲ್ಲಿ ಒದಗಿಸಿದೆ.
ಇದನ್ನೂ ಓದಿ: ಗಾಂಧೀಜಿಯವರ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರ ಮಧ್ಯೆ ಕೊಂಡೊಯ್ಯಬೇಕಿದೆ: ಬಸವರಾಜ ಪೂಜಾರ
ವರ್ಷವಾರು ದೂರುಗಳ ಸಂಖ್ಯೆ:
2021 – 11,632
2022 – 15,577
2023 – 15,088
2024 – 16,443
2025 – 22,771
ಸಚಿವಾಲಯದ ಪ್ರಕಾರ, ಹೆಚ್ಚಿನ ದೂರುಗಳು ವೇತನ ಪಾವತಿಯಾಗದಿರುವುದು, ಪಾಸ್‌ಪೋರ್ಟ್‌ಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು, ರಜೆ ನೀಡದೆ ದೀರ್ಘ ಸಮಯ ಕೆಲಸಕ್ಕೆ ಒತ್ತಾಯಿಸುವುದು, ನೇಮಕಾತಿಯ ಸಮಯದಲ್ಲಿ ಭರವಸೆ ನೀಡಿದ ಕೆಲಸ ಒದಗಿಸದಿರುವುದು, ವೈದ್ಯಕೀಯ ವಿಮೆ ನಿರಾಕರಿಸುವುದು ಹಾಗೂ ಮರಣೋತ್ತರ ಪರಿಹಾರ ನೀಡದಿರುವಂತಹ ಸಮಸ್ಯೆಗಳ ಕುರಿತು ಸಲ್ಲಿಕೆಯಾಗಿವೆ. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕಂಬೋಡಿಯಾ, ಮ್ಯಾನ್ಮಾರ್, ಮಲೇಶಿಯಾ, ಓಮಾನ್, ಕುವೈತ್, ಲಾವೋಸ್ ಮತ್ತು ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳಿಂದ ಅತ್ಯಧಿಕ ದೂರುಗಳು ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ.
ವಿದೇಶಗಳಲ್ಲಿ ಮೃತರಾದ ಭಾರತೀಯರ ಕುರಿತಾದ ದೇಶವಾರು ಮಾಹಿತಿಯನ್ನೂ ಸಚಿವಾಲಯ ಒದಗಿಸಿದೆ. 2021ರಲ್ಲಿ ವಿದೇಶಗಳಲ್ಲಿ 8,329 ಭಾರತೀಯರು ಮೃತಪಟ್ಟಿದ್ದಾರೆ. ವರ್ಷವಾರು ಮೃತರ ಸಂಖ್ಯೆ ಹೀಗಿದೆ:
2021 – 8,329
2022 – 6,715
2023 – 7,288
2024 – 7,720
2025 – 7,861
ಕಾರ್ಮಿಕ ಹಾಗೂ ಮಾನವಶಕ್ತಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ರಾಷ್ಟ್ರಗಳು ಮತ್ತು ಜೋರ್ಡಾನ್‌ನೊಂದಿಗೆ ಜಾರಿಯಲ್ಲಿವೆ ಎಂದು ಸಚಿವಾಲಯ ತಿಳಿಸಿದೆ. ಗೃಹಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿ ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನೊಂದಿಗೆ ವಿಶೇಷ ಒಪ್ಪಂದಗಳನ್ನೂ ಸಹಿ ಮಾಡಲಾಗಿದೆ ಎಂದು ಹೇಳಿದೆ.
ಸಚಿವಾಲಯ ಕಾರ್ಮಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದರೂ, ಲಭ್ಯವಿರುವ ಅಂಕಿಅಂಶಗಳು ಕಾರ್ಮಿಕ ಸಮಸ್ಯೆಗಳು ಹಾಗೂ ಶೋಷಣೆ ನಿರಂತರವಾಗಿ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ವಿ. ಸಿವದಾಸನ್ ಪ್ರತಿಕ್ರಿಯಿಸಿದರು.
ಯುರೋಪಿಯನ್ ದೇಶಗಳಲ್ಲಿಯೂ ದೌರ್ಜನ್ಯ ಘಟನೆಗಳು ಹೆಚ್ಚುತ್ತಿರುವುದನ್ನು ಅವರು ಗಮನಕ್ಕೆ ತಂದರು. ತಾಂತ್ರಿಕ ಕ್ರಮಗಳಿಗಿಂತ ಮುಂದೆ ಹೋಗಿ, ಗಲ್ಫ್ ರಾಷ್ಟ್ರಗಳನ್ನು ಒಳಗೊಂಡಂತೆ ಕಾರ್ಮಿಕರನ್ನು ಸ್ವೀಕರಿಸುವ ದೇಶಗಳೊಂದಿಗೆ ಕೇಂದ್ರ ಸರ್ಕಾರ ಹೆಚ್ಚು ನಿಕಟ ಸಂವಹನ ಕಾಪಾಡಿಕೊಳ್ಳಬೇಕು ಮತ್ತು ವಿದೇಶದಲ್ಲಿರುವ ಭಾರತೀಯರ ಹಕ್ಕುಗಳನ್ನು ರಕ್ಷಿಸಲು ಇನ್ನಷ್ಟು ಬಲವಾದ ಹಸ್ತಕ್ಷೇಪ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ನೋಡಿ: ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media
