ಕ್ವಾರಿ-ಕ್ರಷರ್ ಉದ್ಯಮದ ಮೇಲಿನ ಅವೈಜ್ಞಾನಿಕ ತೀರ್ಮಾನ ಹಿಂಪಡೆಯಲು ಒತ್ತಾಯ

ಬೆಂಗಳೂರು: ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದ ಮೇಲೆ ರಾಜ್ಯ ಸರ್ಕಾರ ಗದಾಪ್ರಹಾರ ಮಾಡುತ್ತಿದ್ದು, ಅನಗತ್ಯ ದಂಡ, ಅವೈಜ್ಞಾನಿಕ ತೀರ್ಮಾನಗಳನ್ನು ರಾಜ್ಯ ಸರ್ಕಾರ ಹಿಂಪಡೆದು ಪಾರದರ್ಶಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ‍್ಸ್‌ ಅಸೋಸಿಯೇಷನ್ಸ್ ಒತ್ತಾಯಿಸಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿ ʻಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡು ಕಾನೂನುಬದ್ಧವಾಗಿ ಬಂಡವಾಳವನ್ನು ಹೂಡಿಕೊಂಡು ಉದ್ಯಮವನ್ನು ನಡೆಸುತ್ತಿರುವ ನಮಗೆ ಸರ್ಕಾರದ ಇಂತಹ ಕ್ರಮಗಳು ತೀವ್ರ ನಿರಾಶದಾಯಕವಾಗಿದ್ದು, ಸರ್ಕಾರ ಮೊದಲು ಈ ಗೊಂದಲವನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತೇವೆʼ ಎಂದು ತಿಳಿಸಿದರು.

ಅಸೋಸಿಯೇಷನ್ನಿನ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ ʻಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದಲ್ಲಿ ಸರ್ಕಾರದ ನಿರ್ಧಾರಗಳಿಂದಾಗಿ ಅರಾಜಕತೆ ಸೃಷ್ಠಿಯಾಗಿದೆ, ಇಲ್ಲಿ ಪಾರದರ್ಶಕ ಕಾನೂನುಗಳು, ಸೂಕ್ತ ನಿಯಮಗಳಿಲ್ಲ. ಕಳೆದ 07 ವರ್ಷಗಳಿಂದ ಅಸಮರ್ಪಕವಾಗಿ ಲೆಕ್ಕ ಪರಿಶೋಧನೆ ಮಾಡಲಗುತ್ತಿದೆ. ಕಾನೂನುಬದ್ಧ ಗಣಿಗಾರಿಕೆ ನಡೆಸಲು ತೊಡಕಾಗಿರುತ್ತದೆ.

ನಿಯಮಗಳಲ್ಲಿ ತಿದ್ದುಪಡಿ ಆಗಬೇಕು ಕಟ್ಟಡಕಲ್ಲು ಗಣಿ ಪ್ರದೇಶದ ವಾರ್ಷಿಕ ಲೆಕ್ಕ ಪರಿಶೋಧನೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು, ಕಾನೂನುಬದ್ಧವಾಗಿ ಗಣಿ ಗುತ್ತಿಗೆ ಪಡೆಯಲು ನೀಡಿರುವ ಅರ್ಜಿಗಳಲ್ಲಿ ಅಂದಾಜು 30% ರಷ್ಟು ವಿಲೇವಾರಿಗೆ ಬಾಕಿ ಇದೆ ಇದಕ್ಕೆ ತುರ್ತು ಮಂಜೂರಾತಿ ನೀಡಬೇಕು, ಮರಳು, ಕಟ್ಟಡಕಲ್ಲು, ಕಬ್ಬಿಣ, ಚಿನ್ನ ಮುಂತಾದ ಖನಿಜಗಳ ಪ್ರತ್ಯೇಕವಾದ 03 ಅಧ್ಯಾಯಗಳನ್ನು ರೂಪಿಸಬೇಕು, ಹೊರರಾಜ್ಯಗಳಿಂದ ಖನಿಜ ಉತ್ಪನ್ನಗಳು ನಮ್ಮ ರಾಜ್ಯಕ್ಕೆ ಬರುತ್ತಿರುವುದರಿಂದ ನಮ್ಮ ಉದ್ಯಮಕ್ಕೆ ಹಾಗೂ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೀಡಬೇಕು. ನಮಗೆ ಅಕ್ರಮ ಗಣಿಗಾರಿಕೆ ಬೇಡ. ಕಾನೂನುಬದ್ಧವಾಗಿ ಉದ್ಯಮದಲ್ಲಿ ತೊಡಗಿಕೊಂಡಿದ್ದರೂ ಸಹ ನಮಗೆ ಅನಗತ್ಯವಾಗಿ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಕಾನೂನುಬದ್ಧ ಚಟುವಟಿಕೆಗಳನ್ನು ಅಕ್ರಮ ಗಣಿಗಾರಿಕೆ ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಕಾನೂನಿನ ತೊಡಕಿನಿಂದಾಗಿ ಕೆಲವೊಂದು ಗಣಿ ಪ್ರದೇಶಗಳ ಮಂಜೂರಾತಿ ವಿಳಂಬವಾಗಿದ್ದು, ಅದಕ್ಕೆ ಕೂಡಲೇ ಮಂಜೂರಾತಿ ನೀಡುವ ಅಗತ್ಯವಿರುತ್ತದೆ. ಈ ರೀತಿ ಅಸಮರ್ಪಕ ನಿಯಮಗಳ ತೊಡಕಿನಿಂದಾಗಿ ಉದ್ಯಮ ಅಕ್ರಮವೆಂದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲು ಸಮಗ್ರ ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಗೌರವಾಧ್ಯಕ್ಷರಾದ ಡಿ.ಸಿದ್ಧರಾಜುರವರು ಮಾತನಾಡಿ, ಸರ್ಕಾರದ ಹಾಲಿ ಉಪ ಖನಿಜ ನಿಯಮಗಳು ಅಸ್ಪಷ್ಟವಾಗಿವೆ. ಅವೈಜ್ಞಾನಿಕ ಮತ್ತು ಲೋಪಗಳಿಂದ ಕೂಡಿದ್ದು, ನಿಯಮಾನುಸಾರ ಗಣಿಗುತ್ತಿಗೆ ಪಡೆದು ಸಕ್ರಮ ಗಣಿ ಕಾರ್ಯ ನಡೆಸುತ್ತಿರುವ ಗಣಿಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ 05 ಪಟ್ಟು ದಂಡ ವಿಧಿಸಲಾಗುತ್ತಿದೆ ಎಂದರು.

ಸರ್ಕಾರ ಎರಡು ಕಡೆಗಳಲ್ಲಿ ರಾಜಧನ ಪಡೆಯುತ್ತಿದೆ. ಒಂದು ಕಡೆ ರಾಜಧನವನ್ನು ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರ ಒಂದು ಕಡೆ ಪರಿಸರ ಸಂರಕ್ಷಣೆ ಮಾಡಿ ಎಂದು ಹೇಳುತ್ತಿದೆ, ಮತ್ತೊಂದೆಡೆ ಮರಳು ಗಣಿಗಾರಿಕೆಗೆ ಆದ್ಯತೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಮರಳು ಮಾರಾಟದಿಂದ ಅಂತರ್ಜಲ ಬರಿದಾಗುತ್ತದೆ ಎಂದರು.

ಈ ಉದ್ಯಮದಲ್ಲಿ ಪ್ರತ್ಯಕ್ಷವಾಗಿ 25-30 ಸಾವಿರ ಜನ ನೇರವಾಗಿ ತೊಡಗಿಕೊಂಡಿದ್ದು, ಪರೋಕ್ಷವಾಗಿ 04-05 ಪಟ್ಟು ಹೆಚ್ಚು ಜನ ತೊಡಗಿಸಿಕೊಂಡಿರುತ್ತಾರೆ. ಕೊರೊನ ಸಂದರ್ಭದಲ್ಲಿ ಕಾರ್ಮಿಕರ ನೆರವಿಗೆ ಸರಕಾರ ಧಾವಿಸಲಿಲ್ಲ. ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷರುಗಳಾದ ಕಿರಣ್ ಜೈನ್, ಸಿ.ಎಸ್ ಭಾಸ್ಕರ್, ವಾಗೀಶ್, ಶ್ರೀನಿವಾಸ್, ಖಜಾಂಚಿ ಎನ್ ಮಂಜುನಾಥ್ ಮತ್ತು ಕಾರ್ಯದರ್ಶಿಗಳಾದ ಯು.ಎಂ.ಖಾಜಿ, ವೆಂಕಟೇಶ್ ರೆಡ್ಡಿ, ಮಹೇಶ್ ಹಾಗೂ ಸಂಘಟನಾ ಕಾಯದರ್ಶಿ ನಾರಾಯಣ ಬಾಬು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *