ಪಶ್ಚಿಮ ಬಂಗಾಳದಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಹೋರಾಟದಲ್ಲಿ ‘ಕುವೆಂಪು’

ಕೊಲ್ಕತ್ತ: ಕೋಲ್ಕತ್ತದಲ್ಲಿ ಬಂಗಾಳಿ ಭಾಷಿಕರು ಹಿಂದಿ ಹೇರಿಕೆ ವಿರುದ್ಧ ಇತ್ತೀಚೆಗೆ ನಡೆಸಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕುವೆಂಪು ಅವರ ಚಿತ್ರ, ಅವರ ಘೋಷಣೆಗಳನ್ನು ಪ್ರದರ್ಶಿಸಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂಗ್ಲಿಷ್‌ನ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಮೂಲಕ ಭಾರತದ ಹಿಂದಿಯೇತರ ನಾಗರಿಕರ ಮೇಲೆ ಹಿಂದಿಯನ್ನು ‘ಆಕ್ರಮಣಕಾರಿಯಾಗಿ‘ ಹೇರಲಾಗುತ್ತಿದೆ ಎಂದು ಆರೋಪಿಸಿ ನೂರಾರು ಜನರು ಬುಧವಾರ ಕೋಲ್ಕತ್ತದಲ್ಲಿ ಮೆರವಣಿಗೆ ನಡೆಸಿದರು. ಹಿಂದಿ ಹೇರಿಕೆಯು ದೇಶವನ್ನು ಮತ್ತು ವೈವಿಧ್ಯತೆಯಲ್ಲಿ ಏಕತೆಯ ತತ್ವವನ್ನು ನಾಶ ಮಾಡುವ ಪಿತೂರಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾಳಿ ಸಂಘಟನೆ ‘ಬಾಂಗ್ಲಾ ಪೊಕ್ಕೋ’ ಕೋಲ್ಕತ್ತದ ಸಾಂಸ್ಕೃತಿಕ ಕೇಂದ್ರವಾದ ‘ರವೀಂದ್ರ ಸದನ್’ ನಿಂದ ದಕ್ಷಿಣ ಕೋಲ್ಕತ್ತದ ಹಜ್ರಾ ಕ್ರಾಸಿಂಗ್‌ವರೆಗೆ ಮೆರವಣಿಗೆ ನಡೆಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿತು.

ಹಿಂದಿ ಹೇರಿಕೆ ಖಂಡಿಸುವ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ಇದರಲ್ಲಿ ರಾಷ್ಟ್ರಕವಿ ಕುವೆಂಪು, ಪೆರಿಯಾರ್‌, ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾದೊರೈ, ಕರುಣಾನಿಧಿ ಅವರ ಚಿತ್ರ, ಕೆಲ ಘೋಷಣೆಗಳನ್ನು ಪ್ರದರ್ಶಿಸಲಾಯಿತು. ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೊ, ಫೋಟೊಗಳನ್ನು ‘ಬಾಂಗ್ಲಾ ಪೊಕ್ಕೋ’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗರಗ್‌ ಚಟರ್ಜಿ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಗರಗ್‌ ಚಟರ್ಜಿ ಅವರ ಟ್ವೀಟ್‌ ಅನ್ನು ಕನ್ನಡ ಮತ್ತು ತಮಿಳು ಹೋರಾಟಗಾರರು ಭಾರಿ ಸಂಖ್ಯೆಯಲ್ಲಿ ರೀಟ್ವೀಟ್‌ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *