ಬೆಂಗಳೂರು ವಿವಿ| ಯುವತಲೆಮಾರಿಗಾಗಿ ಕುವೆಂಪು ಅಭಿಯಾನ – ಓದು ಕಾರ್ಯಾಗಾರಕ್ಕೆ ಬಂಜಗೆರೆ ಚಾಲನೆ

ಬೆಂಗಳೂರು: ಯುವ ಜನತೆಗೆ ಕವಿ ಕುವೆಂಪು ಅವರ ಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ “ಯುವ ಜನರಿಗಾಗಿ ಕುವೆಂಪು ಅಭಿಯಾನ” ಅಂಗವಾಗಿ ಓದು ಕಾರ್ಯಾಗಾರವನ್ನು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಜನಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಯಿತು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಸಾಹಿತ್ಯ ಹಾಗೂ ಚಿಂತನೆಗಳ ಆಳವನ್ನು ಪರಿಚಯಿಸುವ ಉದ್ದೇಶದಿಂದ ಆಯ್ದ ವಿದ್ಯಾರ್ಥಿಗಳನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುವೆಂಪು ಅವರ ಪ್ರಬಂಧ “ಆತ್ಮಶ್ರೀಗಾಗಿ ನಿರುಂಕುಶಮತಿಗಳಾಗಿ ಹಾಗೂ ವಿಚಾರ ಕ್ರಾಂತಿಗೆ ಆಹ್ವಾನ” ಎಂಬ ಬರಹದ ಆಯ್ದ ಭಾಗಗಳನ್ನು ಓದಿ ಅದರ ಅರ್ಥ ಮತ್ತು ಸಂದೇಶಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: AI ಕೃತಕ-ಬುದ್ದಿಮತ್ತೆ : ಡೇಟಾ ಯಾರದ್ದು? ಲಾಭ ಯಾರಿಗೆ?

ಕಾರ್ಯಾಗಾರದಲ್ಲಿ ಓದುವಿಕೆಯ ಮಹತ್ವ ಮತ್ತು ಅದರ ವೈಚಾರಿಕ ಅರ್ಥೈಸುವಿಕೆಯ ಕುರಿತು ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ ಅವರು ವಿಶೇಷ ಉಪನ್ಯಾಸ ನೀಡಿದರು.

ಸಾಹಿತ್ಯವನ್ನು ಕೇವಲ ಓದುವುದಷ್ಟೇ ಸಾಕಾಗುವುದಿಲ್ಲ; ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಅದರೊಳಗಿನ ಸಾಮಾಜಿಕ-ಮಾನವೀಯ ಮೌಲ್ಯಗಳನ್ನು ಹೇಗೆ ಗುರುತಿಸಬೇಕು ಮತ್ತು ವಿಮರ್ಶಾತ್ಮಕವಾಗಿ ವಿಚಾರಿಸುವ ಮನೋಭಾವವನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ಕುವೆಂಪು ಅವರ ಬರಹಗಳು ಯುವಜನತೆಗೆ ವಿಚಾರಸ್ವಾತಂತ್ರ್ಯ, ಮಾನವೀಯತೆ ಮತ್ತು ಬೌದ್ಧಿಕ ಧೈರ್ಯದ ದಿಕ್ಕನ್ನು ತೋರಿಸುತ್ತವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ. ಡೊಮಿನಿಕ್ ಮಾತನಾಡಿ, ವಿದ್ಯಾರ್ಥಿಗಳು ಓದುವಿಕೆಯನ್ನು ಕೇವಲ ಪರೀಕ್ಷಾ ಉದ್ದೇಶಕ್ಕೆ ಸೀಮಿತಗೊಳಿಸದೇ ಚಿಂತನೆಗೆ ದಾರಿ ಮಾಡಿಕೊಡುವ ಸಾಧನವಾಗಿ ಬಳಸಬೇಕು ಎಂದು ಸಲಹೆ ನೀಡಿದರು. ಜನಶಿಕ್ಷಣ ಟ್ರಸ್ಟ್‌ನ ಎನ್.ಕೆ. ವಸಂತರಾಜ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕುವೆಂಪು ಅವರ ಚಿಂತನೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಓದುವಿಕೆಯ ಮೂಲಕ ವಿಚಾರಮೂಲಕ ಚರ್ಚೆಗೆ ಅವಕಾಶ ಕಲ್ಪಿಸಿದ ಈ ಕಾರ್ಯಾಗಾರ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗೆ ಪ್ರೇರಣೆ ನೀಡಿತು.

ಇದನ್ನೂ ನೋಡಿ: “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media

Donate Janashakthi Media

Leave a Reply

Your email address will not be published. Required fields are marked *