ನವದೆಹಲಿ ಫೆ 17: ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಆ ಶಿಫಾರಸನ್ನು ಕೇಂದ್ರ ತಿರಸ್ಕರಿಸಿದರೆ, ಆಗ ಹೋರಾಟದ ಅಗತ್ಯ ಬೀಳಲಿದೆ. ಈಗಲೇ ಹೋರಾಟ ನಡೆಸುವುದು ವ್ಯರ್ಥ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುರುಬರ ಎಸ್.ಟಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಈಶ್ವರಪ್ಪ ಬಿಜೆಪಿ ನಾಯಕ. ಮೀಸಲಾತಿಗಾಗಿ ಶಿಫಾರಸ್ಸು ಮಾಡಬೇಕಾದ, ಆ ಶಿಫಾರಸನ್ನು ಅನುಮೋದಿಸಬೇಕಾದ ಸರ್ಕಾರಗಳು ಬಿಜೆಪಿ ಕೈಯಲ್ಲಿದೆ. ಹಾಗಾಗಿ ಇದೊಂದು ರೀತಿ ಈಶ್ವರಪ್ಪನವರ ವಿರುದ್ಧ ಈಶ್ವರಪ್ಪನೇ ಹೋರಾಟ ನಡೆಸಿದಂತೆ.
ಸಂವಿಧಾನದ 15, 16 ಹಾಗೂ 340ನೇ ವಿಧಿಗಳಿಗನುಸಾರ ಅರ್ಹರಾಗಿ ಇರುವವರಿಗೆ ಮೀಸಲಾತಿ ನೀಡಲೇಬೇಕು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ ಎಂದರು.
ಮಂದಿರದ ಲೆಕ್ಕ ನೀಡುತ್ತಾರಾ? : ಸಾರ್ವಜನಿಕರಿಂದ ಹಣ ಸಂಗ್ರಹಿಸುವವವರು ಪಾರದರ್ಶಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಪಿಎಂ ಕೇರ್ಸ್ ನಿಧಿಯ ಲೆಕ್ಕವನ್ನೇ ಕೊಡದಿರುವ ಈಗಿನ ಬಿಜೆಪಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ಹಣದ ಲೆಕ್ಕ ನೀಡುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇದೇ ಬಿಜೆಪಿ ಹಿಂದೊಮ್ಮೆ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆ-ಹಣ ಸಂಗ್ರಹಿಸಿತ್ತಲ್ಲಾ, ಅದು ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಅದರ ಲೆಕ್ಕವನ್ನು ಬಿಜೆಪಿ ಮೊದಲು ಸಾರ್ವಜನಿಕರಿಗೆ ನೀಡಬೇಕಾಗುತ್ತದೆ.
ಬಿಪಿಎಲ್ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ನಡೆಸಿದರೆ ತಪ್ಪಲ್ಲ. ಆದರೆ ಟಿವಿ- ಬೈಕ್ಗಳು ಬಡತನದ ಮಾನದಂಡಗಳಲ್ಲ. ಜನ ಸಾಲ ಮಾಡಿ ಬೈಕ್ – ಟಿವಿ ಇಟ್ಕೊಂಡಿರ್ತಾರೆ, ಅವರೆಲ್ಲ ಶ್ರೀಮಂತರಾ? ಬಡವರ ಸೇವೆ ಮಾಡಲು ಮನಸ್ಸಿಲ್ಲದ ಉಮೇಶ್ ಕತ್ತಿಯಂತಹವರಿಗೆ ಮಾತ್ರ ಇಂತಹ ಅಸಂಬದ್ಧ ಯೋಚನೆಗಳು ಬರುತ್ತೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪಾದನೆ ಮಾಡಿದ್ದ ಹಣವನ್ನು ಮಾರಿಷಸ್ನಲ್ಲಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ. ಈ ಪ್ರಕರಣ ಕುರಿತು ತಕ್ಷಣ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶಿಸಬೇಕು ಎಂದರು.