ಚನ್ನಪಟ್ಟಣ ಉಪಚುನಾವಣೆ : ಎಚ್‌ಡಿಕೆ ಮತ್ತು ಡಿಕೆ ಸಹೋದರರ ಜಿದ್ದಾಜಿದ್ದಿನ ಕಣ

ರಾಮನಗರ:”ಯಾರು ಏನೇ ಟೀಕೆ ಮಾಡಲಿ. ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿರುವುದು ಪರೋಕ್ಷವಾಗಿ ಸಂಸದ ಹೆಚ್.ಡಿ.ಕುಮಾರಸ್ವಾಮಿಗೆ ತಿರುಗುಬಾಣ ಬಿಟ್ಟಂತಿದೆ.

ಇನ್ನು ಚನ್ನಪಟ್ಟಣ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಸ್ಪರ್ಧಿಸಿ, ಗೆದ್ದಬಳಿಕ ಕನಕಪುರವನ್ನು ಸಹೋದರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಬಿಟ್ಟುಕೊಡುವ ಬಗ್ಗೆಯೂ ಅದರೊಂದಿಗೆ ಚನ್ನಪಟ್ಟಣದಿಂದ ಡಿ.ಕೆ.ಸುರೇಶ್‌ ಕಣಕ್ಕಿಳಿಯುವ ಬಗ್ಗೆಯೂ ಕಾಂಗ್ರೆಸ್‌ ಪಾಳಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೇ‍ಶ್ವರ್‌ನನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆಯೂ ನಡೆದಿದೆ. ಚನ್ನಪಟ್ಟಣ ಶಾಸಕರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಿಂದ ಪುತ್ರ ನಿಖಿಲ್‌ನನ್ನು ಮತ್ತೆ ಕಣಕ್ಕಿಳಿಸಬಹುದಾದರೂ ಇದಕ್ಕೆ ಬಿಜೆಪಿ ಒಪ್ಪಿಗೆ ಬೇಕು. ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸಹ ಸ್ಪರ್ಧಿಸಬಹುದು ಎನ್ನಲಾಗಿದೆ. ಒಕ್ಕಲಿಗ ಪಾರುಪತ್ಯದ ಕ್ಷೇತ್ರದ ಜಿದ್ದಿಗೆ ಬಿದ್ದಿರುವ ಡಿ.ಕೆ.ಶಿವಕುಮಾರ್‌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಹೆಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ ತೆಕ್ಕೆಗೆ ಹೋಗಿರುವುದರಿಂದ ಇದರ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ಸಹೋದರರಿಬ್ಬರಲ್ಲಿ ಯಾರಾದರೂ ಸ್ಪರ್ಧಿಸುವ ಲೆಕ್ಕಾಚಾರವಿದೆ. ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಿರುವ ಡಿ.ಕೆ.ಶಿವಕುಮಾರ್‌ ಸದ್ಯಕ್ಕೆ ಅಳೆದುತೂಗಿ ಸ್ಪರ್ಧಿ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾರಾದರೂ ಸೋಲಿನ ಸೇಡಿನ ರಾಜಕಾರಣಕ್ಕೆ ಈ ಕ್ಷೇತ್ರದ ಕಣ ಸಿದ್ಧವಾಗುವುದಂತೂ ಸತ್ಯ.

ಚನ್ನಪಟ್ಟಣ ವಿಧಾನಸಭಾಕ್ಷೇತ್ರದ ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಸೋಮವಾರ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.

“ಇಲ್ಲಿ ಬಂದಿರುವ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿರುವುದನ್ನು ನೋಡಿದರೆ, ಅವರ ಪರಿಸ್ಥಿತಿ ಅರ್ಥವಾಗುತ್ತದೆ.ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಲಿ, ನನಗೆ ಈ ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ ಎಂದರು. ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನ ಕಟ್ಟಲು ವ್ಯವಸ್ಥೆ ಮಾಡಿಕೊಡಲಾಗುವುದು.ಇಲ್ಲಿ ಅರ್ಜಿಗಳನ್ನು ಸಲ್ಲಿಸಲು ಆಗದವರಿಗೆ ಅನುಕೂಲ ಮಾಡಿಕೊಡಲು ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿ ಕೂಡ ಜನರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳ ಜತೆ ಚರ್ಚೆ ಮಾಡಿ ಆಯಾ ಇಲಾಖೆ ಮೂಲಕ ಪರಿಹಾರ ನೀಡಲಾಗುವುದು. ಯಾವ ವಿಚಾರಗಳಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲವೋ ಅದಕ್ಕೆ ಸೂಕ್ತ ಕಾರಣವನ್ನು ನಾವು ಅರ್ಜಿದಾರರಿಗೆ ತಿಳಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಚನ್ನಪಟ್ಟಣ ಸ್ಪರ್ಧೆ ಬಗ್ಗೆ ಉತ್ತರಿಸಿದ ನಿಖಿಲ್‌ ಕುಮಾರಸ್ವಾಮಿ

ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೆ. ಈಗಲೂ ಅದೇ ಕೆಲಸ ಮುಂದುವರಿಸುತ್ತಿದ್ದೇನೆ.ಈ ಹಿಂದೆ ಇದ್ದ ಜನಪ್ರತಿನಿಧಿಗಳು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಯಾಕೆ ಮಾಡಲಿಲ್ಲ ಎಂದು ನಾನು ಪ್ರಶ್ನೆ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ತಾಲ್ಲೂಕಿನ ಅಧಿಕಾರಿಗಳ ಸಭೆ ಮಾಡಿದೆ. ಆಗ ನನ್ನ ಗಮನಕ್ಕೆ ಒಂದಷ್ಟು ವಿಚಾರಗಳು ಬಂದವು.ಕಳೆದ ಐದು ವರ್ಷಗಳಲ್ಲಿ ತಾಲ್ಲೂಕಿನ ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಯಾರೊಬ್ಬರಿಗೂ ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ. ಆಶ್ರಯ ಸಮಿತಿ ಸಭೆ ಕೂಡ ಮಾಡಿಲ್ಲ ಎಂಬ ವಿಚಾರ ತಿಳಿಯಿತು. ಈ ಹಿಂದೆ ಇದ್ದವರು ಯಾಕೆ ಮಾಡಲಿಲ್ಲ ಎಂದು ಈಗ ನಾನು ಪ್ರಶ್ನೆ ಮಾಡುವುದಿಲ್ಲ.ಬಡವರ ಬದುಕಲ್ಲಿ ಬದಲಾವಣೆ ತರಲಿಲ್ಲ ಎಂದರೆ ನಾವು ಜನಪ್ರತಿನಿಧಿಯಾಗಿ ಯಾಕೆ ಇರಬೇಕು? ಇಂತಹ ಕಾರ್ಯಕ್ರಮ ಮಾಡಿ ಜನರ ಕಷ್ಟ ಆಲಿಸಬೇಡಿ ಎಂದು ಅವರಿಗೆ ನಾವೇನಾದರೂ ಹೇಳಿದ್ದೆವಾ? ನೀವೇನಾದರೂ ಹೇಳಿದ್ದೀರಾ?ಎಂದು ಪರೋಕ್ಷವಾಗಿ ಹೆಚ್‌.ಡಿ.ಕುಮಾರಸ್ವಾಮಿಯನ್ನು ಡಿಕೆಶಿ ಪ್ರಶ್ನಿಸಿದರು.

ಯಾರಿಗೆ ನಿವೇಶನವಿಲ್ಲ ಆಯಾ ಊರುಗಳಲ್ಲಿ ಸರ್ಕಾರ 2-3 ಎಕರೆ ಜಮೀನು ಖರೀದಿಸಿ ಲೇಔಟ್ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಬಿಸಿಲಮ್ಮ ದೇವಾಲಯದ ಆವರಣದಲ್ಲಿ ನಿಂತು ಹೇಳುತ್ತಿದ್ದೇನೆ.ಚನ್ನಪಟ್ಟಣದ ಬಡವರಿಗೆ ನಿವೇಶನ ನೀಡಲು 50 ಕೋಟಿ ಹಣ ತಂದು 50-100 ಎಕರೆ ಜಾಗದಲ್ಲಿ ಲೇಔಟ್ ಮಾಡುತ್ತೇವೆ. ಬಡವರಿಗೆ ಮನೆ ಕಟ್ಟಿಕೊಡಲಾಗುವುದು. ಮುಂದೆ ಇಲ್ಲಿ ನಮ್ಮ ಶಾಸಕರು ಆಯ್ಕೆಯಾಗುತ್ತಾರೆ ಕನಿಷ್ಠ 10 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡುತ್ತೇವೆ.ಈ ತಾಲ್ಲೂಕಿನ 94% ಅಂದರೆ ಸುಮಾರು 64 ಸಾವಿರ ಬಡ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇನ್ನು 7-8 % ಫಲಾನುಭವಿಗಳಿಗೆ ತಲುಪಬೇಕಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪಂಚಾಯ್ತಿಯ 12 ಸಾವಿರ ಕುಟುಂಬಗಳಿಗೆ ಅರ್ಜಿಯನ್ನು ತಲುಪಿಸಿರುವುದಾಗಿ ಒತ್ತಿ ಹೇಳಿದರು.

ನಾನು ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ. ಪೋಡಿ, ಜಮೀನು ಖಾತೆ, ಬಗರ್ ಹುಕುಂ ಸಾಗುವಳಿ ಜಮೀನು, ನಿವೇಶನ, ವಸತಿ ರಹಿತರ ಸಮಸ್ಯೆ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ ಸಮಸ್ಯೆ, ರಸ್ತೆ ದುರಸ್ತಿ, ಬಸ್ ವ್ಯವಸ್ಥೆ, ದೇವಾಲಯ ಜೀರ್ಣೋದ್ಧಾರ, ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಯೋಜನೆಗಳ ಸಮಸ್ಯೆ, ಪೊಲೀಸರಿಂದ ತೊಂದರೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ನಮಗೆ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿಯನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಿದ್ದಾರೆ.
ಇದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ. ಈ ಯೋಜನೆ ಮೂಲಕ ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಇದಾಗಿದೆ.ರೆ ಪಕ್ಷಕ್ಕೆ ಮತಹಾಕಿದ್ದೇನೆ, ಬೇರೆ ಪಕ್ಷದ ಜತೆ ಗುರುತಿಸಿಕೊಂಡಿದ್ದೇನೆ. ಶಿವಕುಮಾರ್ ಬಳಿ ಹೋಗಿ ಹೇಗೆ ಅರ್ಜಿ ನೀಡಲಿ ಎಂಬ ಮುಜುಗರ, ಹಿಂಜರಿಕೆ ಬೇಡ. ನಾವು ಎಲ್ಲರ ಸಮಸ್ಯೆಗಳನ್ನೂ ಆಲಿಸಿ ಸ್ಪಂದಿಸುವುದಾಗಿ ಡಿಕೆಶಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಗ್ರಾಮೀಣ ಭಾಗದ ಜನರು ವಿದ್ಯಾಭ್ಯಾಕ್ಕಾಗಿ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಹೀಗಾಗಿ ಮಾಜಿ ಸಂಸದ ಸುರೇಶ್ ಅವರು ಸಿ ಎಸ್ ಆರ್ ನಿಧಿಯಲ್ಲಿ ರಾಮನಗರದ 20 ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಧ್ಯದಲ್ಲೇ ಈ ಶಾಲೆಗಳ ನಿರ್ಮಾಣ ಆರಂಭವಾಗಲಿದೆ.ಕೆಲವರು ಮಾತಲ್ಲೇ ಮನೆ ಕಟ್ಟುವ ಪ್ರಯತ್ನ ಮಾಡುತ್ತಾರೆ. ನಾನು ಶ್ರಮದಿಂದ ಭದ್ರ ಅಡಿಪಾಯ ಹಾಕಿ ಮನೆ ಕಟ್ಟುವವನು. ನಾವು ಭಾವನೆ ಮೇಲೆ ರಾಜಕೀಯ ಮಾಡಲ್ಲ. ಬದುಕಿನ ಮೇಲೆ ರಾಜಕಾರಣ ಮಾಡಿ ನಿಮ್ಮ ಬದುಕು ಹಾಸನ ಮಾಡುವ ಪ್ರಯತ್ನ ಮಾಡುತ್ತೇವೆ.

ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ 2 ಸಾವಿರ, ಉಚಿತ ವಿದ್ಯುತ್, ಐದು ಕೆ.ಜಿ ಅಕ್ಕಿ, ಐದು ಕೆ.ಜಿ ಅಕ್ಕಿ ಹಣ ನೀಡಲಾಗುತ್ತಿದೆ. ಯಾರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಅವರು ಅರ್ಜಿ ಹಾಕಿ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಬೀದಿ ವ್ಯಾಪಾರಿಗಳಿಗೆ ಹಾಗು ಕೊಳವೆ ಬಾವಿ ಕೊರೆಸಲು, ಹಂದಿ, ಹಸು, ಕುರಿ ಸಾಕುವವರಿಗೆ ನೀಡುವ 1 ಲಕ್ಷ ಸಾಲ ಸೌಲಭ್ಯವನ್ನು ಕನಿಷ್ಠ 10 ಸಾವಿರ ಜನರಿಗೆ ಕೊಡಿಸಲಾಗುವುದು. ಎಲ್ಲಾ ಜಾತಿ, ಧರ್ಮದವರಿಗೆ ಈ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಅವರು ಕೇಂದ್ರದಿಂದ ಹಣ ತಂದು ಮಂಡ್ಯ ಜನರಿಗೆ ಉಚಿತ ಟ್ರಾನ್ಸ್ಫಾರ್ಮರ್ ಹಾಕಿಸಲಿ ನೋಡೋಣ ಎಂದು ಸವಾಲು ಹಾಕಿದ ಡಿಕೆಶಿ, ದೊಡ್ಡ ನಾಯಕರೊಬ್ಬರು ನನಗೆ ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ. ಇಂಧನ ಸಚಿವನಾಗಿದ್ದಾಗ ಈ ತಾಲ್ಲೂಕಿನ 18 ಸಾವಿರ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ನೀಡಿದ್ದೇನೆ.ಕುಮಾರಸ್ವಾಮಿ ಅವರು ಈ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಕೇಂದ್ರದಿಂದ ಹಣ ತಂದು ಅಲ್ಲಿನ ರೈತರಿಗೆ ಟ್ರಾನ್ಸ್ಫಾರ್ಮರ್ ಕೊಡಲಿ ನೋಡೋಣ. ಡಿ.ಕೆ. ಸುರೇಶ್ ಅವರ ಲೋಕಸಭಾ ವ್ಯಾಪ್ತಿಯಲ್ಲಿ ನಾವು ಈ ರೀತಿ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ಅಳವಡಿಸಿದ್ದೇವೆ. 10 ಕಡೆ ದೊಡ್ಡ ಸ್ಟೇಶನ್ ಹಾಕಿಸಿರುವುದಾಗಿ ಡಿ.ಕೆ.ಶಿವಕುಮರ್‌ ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *