ನಿರಂಜನ್ ನೆನಪು : ಇಂಡಿಯನ್ ಪೀಪಲ್ ಥಿಯೇಟರ್ ನ ಉದ್ದೇಶವೇನು?

-ಐಕೆ ಬೋಳುವಾರು

1943 ರಲ್ಲಿಮಂಗಳೂರಿನ ರಾಷ್ಟ್ರ ಬಂಧು ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಕುಳ್ಕುಂದ ಶಿವರಾಯರು (ನಿರಂಜನ) ಆ ವರ್ಷದ ಮೇ ತಿಂಗಳಲ್ಲಿ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಮ್ಮೇಳನ ಮುಂಬೈಯಲ್ಲಿ ಜರಗಿದಾಗ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಮತ್ತು ಇನ್ನೊಂದು ಸಮ್ಮೇಳನದಲ್ಲಿ ಭಾಗವಹಿಸಿ ಇಪ್ಟಾ (IPTA)ಅಸ್ತಿತ್ವಕ್ಕೆ ಬಂದುದನ್ನು ಕಂಡಿದ್ದರು. ಆ ಬಳಿಕ ಇಂಡಿಯನ್ ಪೀಪಲ್ ಥಿಯೇಟರ್ ನ ಉದ್ದೇಶವೇನು? ಪ್ರಗತಿಶೀಲ ಸಾಹಿತಿಗಳಿಗೂ IPTA ಸಂಘಟನೆಗೂ ಏನು ಸಂಬಂಧ? ಎಂಬುದಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಬರಹವೊಂದನ್ನು ಬರೆಯುತ್ತಾರೆ. 

1944ರ ನವಂಬರ್ 7ರಂದು ಮಂಗಳೂರು ಮೈದಾನದಲ್ಲಿ (ಈಗಿನ ನೆಹರು ಮೈದಾನ) ಮೇಜುಗಳ ಮೇಲೆ ಮೇಜುಗಳನ್ನು ಇರಿಸಿ ನಿರ್ಮಿಸಿದ ರಂಗಸ್ಥಳದಲ್ಲಿ ಬಿದಿರು ಊರಿ ಮಾಡಿದ ಚೌಕಟ್ಟು ಮತ್ತು ಬಿಳಿ ಬಟ್ಟೆಯ ಹಿನ್ನೆಲೆಯಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳ ಬೆಳಕಿನಲ್ಲಿ ‘ ನಾವು ಮನುಷ್ಯರು’ ನಾಟಕದ ಮೊದಲ ಪ್ರದರ್ಶನವನ್ನು ಪ್ರದರ್ಶಿಸುತ್ತಾರೆ. ಹೊಸ ರಂಗಾನುಭವಕ್ಕಾಗಿ ಮಂಗಳೂರು ಮೈದಾನದಲ್ಲಿ ಸೇರಿದ್ದ ಪ್ರೇಕ್ಷಕರ ಸಂಖ್ಯೆ 5000ಕ್ಕೂ ಹೆಚ್ಚು.

ಹಲವು ಕಾರ್ಮಿಕ ಸಂಘಟನೆಗಳು ಮತ್ತು ಕಮ್ಯುನಿಸ್ಟ್ ಪಕ್ಷ ಒಂದಾಗಿ ಏರ್ಪಡಿಸಿದ ಕಾರ್ಯಕ್ರಮವಾಗಿತ್ತು ಅದು. ಇದಕ್ಕೂ ಹಿಂದಣ ವರ್ಷ ಅಂದರೆ 1943ರ ಅಗಸ್ಟ್ ತಿಂಗಳಲ್ಲಿ ಕೋಟ ಶಿವರಾಮ ಕಾರಂತರು ಜನತಾರಂಗಭೂಮಿಯ ಮಂಗಳೂರು ಸಮಿತಿಯ ಉದ್ಘಾಟನೆಯನ್ನು ನೆರವೇರಿಸಿದ್ದರು. 1944ರಲ್ಲಿ ಅ.ನ.ಕೃಷ್ಣರಾಯರು ಪ್ರಕಟಿಸಿದ “ಪ್ರಗತಿಶೀಲ ಸಾಹಿತ್ಯ ಲೇಖನ” ಸಂಗ್ರಹದಲ್ಲಿ ಜನತಾ ರಂಗಭೂಮಿ ಮಂಗಳೂರು ಸಮಿತಿಯ ಕಾರ್ಯದರ್ಶಿ, ಕುಳ್ಕುಂದ ಶಿವರಾಯರು ಬರೆದ ಬರೆಹವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: ವೈದ್ಯಕೀಯ ತುರ್ತು ಸ್ಥಿತಿ ಘೋಷಿಸಲು ಸಂಸದ ಡಾ. ಸಿಎನ್ ಮಂಜುನಾಥ್‌ ಆಗ್ರಹ

(ಪುತ್ತೂರು ಸಂತ ಫಿಲೋಮಿನಾ ಕಾಲೇಜು ಕನ್ನಡ ಸಂಘ 1985 ರಲ್ಲಿ ಪ್ರಕಟಿಸಿದ ನಿರಂಜನ ಅವರ “ನಾವು ಮನುಷ್ಯರು“ ನಾಟಕ ಪುಸ್ತಕದ ಮುನ್ನುಡಿಯಿಂದ ಆಯ್ದ ಭಾಗವಿದು.)

ಭಾರತೀಯ ಜನತಾ ರಂಗಭೂಮಿ’ ಮತ್ತು ಪ್ರಗತಿಶೀಲ ಲೇಖಕರು

ಕುಳುಕುಂದ ಶಿವರಾಯ ಕಾರ್ಯದರ್ಶಿ, ಜನತಾ ರಂಗಭೂಮಿ ಮಂಗಳೂರು ಸಮಿತಿ, ಹೊಸ ವ್ಯವಸ್ಥೆಯ ಪ್ರಸವಕಾಲವಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಹಲವು ಶಕ್ತಿಗಳಲ್ಲಿ ಭಾರತೀಯ ಜನತಾ ರಂಗಭೂಮಿಯ ಆಂದೋಲನವೂ ಒಂದು. ಹತ್ತಾರು ಮಹಾರಾಜರ-ಹತ್ತಾರು ಶ್ರೀಮಂತರ-ಆಸೆ ಲಾಲಸೆಗಳಿಗೆ ಪೋಷಕವಾಗಿರುತ್ತಿದ್ದ ಭಾರತೀಯ ಕಲೆಯಿಂದು ಅಧಃಪತನದ ಗಂಡಾಂತರದಲ್ಲಿದೆ. ಮಿಲಿಯಾಂತರ ಜನ ಆ ಕಲೆಯನ್ನು ಉಳಿಸಲೆತ್ನಿಸುತ್ತಿದ್ದಾರೆ.

ಅವರು ಉಳಿಸುತ್ತಿರುವ ಕಲೆ ಮಾತ್ರ ಹೊಸ ರೂಪವನ್ನು ತಳೆಯುತಿದೆ!

ನಾಲ್ಕಾರು ಗವಿ ಗುಹೆಗಳಲ್ಲಿ, ಶಾಸ್ತ್ರೀಯ ವಿಜ್ಞಾನದ ಬಂಧನದಲ್ಲಿ ಹೇಳುವ-ಕೇಳುವರಿಲ್ಲದೆ, ನಶಿಸಿಹೋಗುತ್ತಿದ್ದ ನೃತ್ಯ ಕಲೆಯನ್ನು ಜನತೆ ತನ್ನದಾಗಿ ಸ್ವೀಕರಿಸಿದೆ. ಬಂಗಾಲದ ಜನಜೀವನದ ದುರಂತ ಚಿತ್ರಪ್ರಸಾದ, ಸುಧೀರ ಕಾಣ್ಗಿರರಂತಹ ಚಿತ್ರಕಾರರನ್ನು ಬೆಳಕಿಗೆ ತಂದಿದೆ. ಪ್ರೇಮ- ಆಲಾಪನೆಗಳ ‘ಸಂಗೀತರತ್ನ ಆಸ್ಥಾನವಿದ್ವಾನ್’ರ ಸಂಗೀತ ಮುಂಬಯಿ ಬಂಗಾಳಗಳ ಮಜೂರರ, ಆಂಧ್ರ-ಕೇರಳಗಳ ಕಿಸಾನರ ದಲಿತಧ್ವನಿಯಲ್ಲಿ ಮಾರ್ದನಿಗೊಳ್ಳುತ್ತಿದೆ. ಆ ಇತಿಹಾಸದ ಚಿತ್ರಗಳು ನಾಟಕಗಳ ವಸ್ತುಗಳಾಗತೊಡಗಿವೆ.

ಚೀನೀಯ ನಾಟಕಗಳ ಅಪೂರ್ವ ಶಕ್ತಿ-ಸಾಮರ್ಥ್ಯ, ರಷ್ಯದ ಸ್ವತಂತ್ರ ಕಲಾವಿದರ ಪ್ರದರ್ಶನ ನೈಪುಣ್ಯ ನಮ್ಮ ಪುರೋಗಾಮಿಗಳ ಮನಸ್ಸಿಗೆ ತಟ್ಟಿದೆ! ವಿಚಾರ ಕ್ರಾಂತಿಗೆ ಎಡೆಗೊಟ್ಟಿದೆ.

ಇನ್ನೂ ನಮ್ಮ ಕಲಾಸಂಪತ್ತು ಶ್ರೀಮಂತರ ಮಹಾರಾಜರ ಕಾಲಕ್ಷೇಪ ದ ಸಾಧನವಾಗಬೇಕೆ?

ಇನ್ನೂ ದೇಶದ ಸ್ವಾತಂತ್ರ್ಯ ಸಂಗ್ರಾಮ-ಅಂತರರಾಷ್ಟ್ರೀಯ ಮಹಾ ಸಮರಗಳಲ್ಲಿ, ಹೊಸ ಜಗತ್ತಿನ ನಿರ್ಮಾಣದ ಬೃಹದ್‌ಯತ್ನದಲ್ಲಿ, ನಮ್ಮ ಕಲಾಸಂಪತ್ತು ಸಹಾಯಕವಾಗದೆ ಹೋಗಬೇಕೆ?

ಭಾರತದ ಮೂಕ ಮಿಲಿಯಗಳಲ್ಲಿ ಅಲ್ಲೊಂದು ಇಲ್ಲೊಂದು ಸ್ವರ- ಹೀಗೆ ನೂರಾರು ಸ್ವರ-ಮುಷ್ಟಿಯೆತ್ತಿ “ಇಲ್ಲ!” ಎನ್ನುತ್ತಿದೆ.

– “ಕಲೆ ಕಲೆಗಾಗಿಯಲ್ಲ! ಜನತೆಗಾಗಿ!” ಎಂಬ ಘೋಷ ಜನತಾ ರಂಗ ಭೂಮಿಯ ಸ್ಥಾಪನೆ-ಬೆಳವಣಿಗೆಗಳಿಗೆ ಕಾರಣವಾಗಿದೆ.

ಆರೆ ಹೊಟ್ಟೆಯ ಕೂಗನ್ನು ಕುರಿತು ಕವಿತೆ ಬರೆಯಬಲ್ಲ ಕವಿ ಜನತಾ ರಂಗಭೂಮಿಯ ಆಂಗಣದಿಂದ ತನ್ನ ಕೃತಿಯನ್ನು ಹಾಡಿಸುತ್ತಾನೆ. ಜನತೆಯ ಜೀವನವನ್ನು ಚಿತ್ರಿಸಿ, ವಿಚಾರ ಕ್ರಾಂತಿಯನ್ನು ಕೆರಳಿಸಿ ಪ್ರಗತಿಶೀಲ ಲೇಖಕನು ಬರೆದ ನಾಟಕವನ್ನು ಜನತಾ ರಂಗಭೂಮಿ ಆಡುತ್ತಿದೆ! ಜನರ ಸಂಕಷ್ಟವನ್ನು ಚಿತ್ರಿಸುತ್ತ ಉಷಾರಾಣಿ ಅನುದಾಸಗುಪ್ತರು ನರ್ತಿಸುತ್ತಿದ್ದಾರೆ.

ಹೀಗೆ ಪ್ರಗತಿಶೀಲ ಲೇಖಕರ ಸಹಾಯ-ಸಹಕಾರಗಳಿಂದ ಭಾರತೀಯ ಜನತಾ ರಂಗಭೂಮಿ ಬೆಳೆಯುತ್ತಿದೆ.

“ಇದೆಲ್ಲ, ಬರಿಯ ಕಲ್ಪನೆ, ಮರುಳು” ಎನ್ನುವ ಕಲಾಶಾಸ್ತ್ರಿಗಳಿಗೆ ನಮ್ಮ ದೇಶದಲ್ಲಿ ಬರಗಾಲವಿಲ್ಲ. ಕೊಚ್ಚಿ ಮಹಾರಾಜರ ಅಡಿಯಾಳಾಗಿ ತಮ್ಮ ಕಲಾಮಂಡಲವನ್ನು ನಡೆಸುತ್ತಿದ್ದು, ಅವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ದೇವದಾಸಿ ಪದ್ಧತಿಯನ್ನು ಎತ್ತಿ ಹಿಡಿದ ಮಹಾಕವಿ ವಲ್ಲತ್ತೊಳರೇ ಈಗ ಜನತೆಯ ಬಳಿಗೆ ಬಂದಿರುವುದು; ಆರದ ಮಹಾ ಶಿಖರದಿಂದಿಳಿದು ಉದಯಶಂಕರರು ಜನನಿವಾಸಕ್ಕೆ ಸಮೀಪದಲ್ಲಿ ಇರತೊಡಗಿರುವುದು – ಈ ಎರಡು ದೃಷ್ಟಾಂತಗಳು ಶಾಸ್ತ್ರಿಗಳ ಬಾಯಿ ಮುಚ್ಚಿಸಬಲ್ಲುವು.

ಇಲ್ಲ: ಯಥಾರ್ಥ-ವಾಸ್ತವ ವಿಷಯವೆಂದರೆ, ಕೆರಳುತ್ತಿರುವ ಜನತೆಯ ವಿಚಾರಶಕ್ತಿಯೊಡನೆ ನಮ್ಮ ಕಲೆಗಳು ಹೊಸರೂಪವನ್ನು ತಾಳುತ್ತಿವೆ.

ಭಾರತೀಯ ಜನತಾ ರಂಗಭೂಮಿ,

೧೯೪೨ರಲ್ಲಿ ಭಾರತೀಯ ಜನತಾ ರಂಗಭೂಮಿ ಸಮಿತಿ ಮುಂಬಯಿ ಯಲ್ಲಿ ರೂಪುಗೊಂಡಿತು. ಜವಾಹರರು ಆಗ ಸಂದೇಶ ಕಳುಹಿಸಿ, ಆ ಹೊಸ ಆಂದೋಲನಕ್ಕೆ ಯಶಸ್ಸನ್ನು ಕೋರಿದರು. ಆದರೆ ಆ ವರ್ಷ ಆಗಸ್ಟಿನ ಬಳಿಕ ದೇಶದಾದ್ಯಂತ ಉಂಟಾದ ಅನಾಹುತ, ಸರಕಾರದ ಅಮಾನುಷ ಮರ್ದನ, ಸಮಿತಿಯನ್ನು ಶಕ್ತಿಗುಂದಿಸಿದುವು. ದೇಶವು ತನ್ನ ಮೇಲೆ ಬಿದ್ದ ಆಘಾತದಿಂದ ಚೇತರಿಸಿದಂತೆಯೇ ಜನತಾ ರಂಗಭೂಮಿ ಸಮಿತಿಯೂ ಬಲ ಗೊಂಡು ೧೯೪೩ ಮೇ ತಿಂಗಳ ೨೫ರಂದು ಪ್ರಥಮ ಸಮ್ಮೇಳನವನ್ನು ಜರಗಿಸಿತು. ಕರ್ಣಾಟಕವನ್ನೂ ಕೂಡಿ ವಿವಿಧ ಪ್ರಾಂತಗಳವರು ಅದರಲ್ಲಿ ಭಾಗವಹಿಸಿದರು. ಮುಂಬಯಿ, ಬಂಗಾಳ, ಪಂಜಾಬ್, ಆಂಧ್ರ ಸಂಯುಕ್ತ ಪ್ರಾಂತ ಮತ್ತು ಮಲಬಾರ್ ಪ್ರತಿನಿಧಿಗಳು ವರದಿಗಳನ್ನೊಪ್ಪಿಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ| ಹಿರೆನ್ ಮುಖರ್ಜಿಯವರು ಜನತಾ ರಂಗಭೂಮಿಯ ಮುಂದಿದ್ದ ಕಷ್ಟದ ಹಾದಿಯನ್ನು ತೋರಿಸಿಕೊಟ್ಟು, ಸುಂದರ ಭವಿಷ್ಯತ್ತನ್ನು ಚಿತ್ರಿಸಿದರು.

ಆಗಲೇ ಭಾರತೀಯ ಪ್ರಗತಿಶೀಲ ಲೇಖಕರ ಸಮ್ಮೇಳನ ಜರಗುತಿದ್ದಾಗ, ಜನತಾ ರಂಗಭೂಮಿಯವರು ಕಾರ್ಮಿಕ ವಸತಿ ಪ್ರದೇಶವಾದ ಪರೇಲಿನಲ್ಲಿ ತಮ್ಮ ನಾಟಕಗಳನ್ನಾಡಿದರು.

ಪ್ರಗತಿಶೀಲ ಲೇಖಕರ ನೆರವಿನಿಂದ ಮುಂದೊತ್ತಬೇಕೆಂಬುದು ಜನತಾ ರಂಗಭೂಮಿ ಸಮಿತಿಯು ತನ್ನ ಸಮ್ಮೇಳನದಲ್ಲಿ ಸ್ವೀಕರಿಸಿದ ಪ್ರಧಾನ ನಿರ್ಣಯಗಳಲ್ಲೊಂದು

ಕರ್ಣಾಟಕದಲ್ಲಿ ಈ ಚಳವಳಿ

ಅ ಭಾ ಜನತಾ ರಂಗಭೂಮಿ ಕಾರ್ಯಕಾರಿ ಸಮಿತಿ ಸದಸ್ಯರಲ್ಲೊಬ್ಬರಾದ ಕುಮಾರ ವೆಂಕಣ್ಣ ಅವರು ಬೆಂಗಳೂರಿನಲ್ಲಿ ಇರುವರು. ಮೈಸೂರಿನ ಸಮಿತಿಗೆ ಶ್ರೀಮತಿ ಕೇಸರಿ ಕೇಶವನ್ ಅವರು ಕಾರ್ಯದಶಿ೯ನಿ ಯಾಗಿದ್ದಾರೆ. ಬೆಂಗಳೂರಿನಲ್ಲಿ ಹಿಂದೊಮ್ಮೆ ತಾವೇ ಆರಂಭಿಸಿನ ಕಾರ್ಯ ವನ್ನು ಅವರೀಗ ಮೈಸೂರಲ್ಲಿ ಮುಂದುವರಿಸುತ್ತಿದ್ದಾರೆ. ಶ್ರೀ ಶಿವರಾಮ ಕಾರಂತರು ಮಂಗಳೂರು ಸಮಿತಿಯ ಉದ್ಘಾಟನೆಯನ್ನು 1943ರಆಗಸ್ಟಿನಲ್ಲಿ ನೆರವೇರಿಸಿದರು. ಅದೀಗ ತನ್ನ ಕಾರ್ಯಕಲಾಪಗಳನ್ನು ಮಾಡುತ್ತಿದೆ.

ಕರ್ಣಾಟಕದಲ್ಲಿ ಪ್ರಗತಿಶೀಲ ಲೇಖಕರ ಚಳವಳವೂ ಹೊಸತು: ಎಳೆಯದು. ಈ ನಾಡಿನಲ್ಲಿ ಇನ್ನೂ ಶಿಶುವಾಗಿರುವ ಜನತಾ ರಂಗಭೂಮಿ ಪ್ರಗತಿಶೀಲ ಲೇಖಕರ-ಕಲಾವಿದರ ಯತ್ನದಿಂದ ಮುಂದೆ ಸಾಗಲಿದೆ.

ಇದನ್ನೂ ನೋಡಿ: ಡೆಂಗ್ಯೂ – ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ | ಡಾ ಪೃಥ್ವಿ ಬಿ ಸಿ Janashakthi Media

Donate Janashakthi Media

Leave a Reply

Your email address will not be published. Required fields are marked *