ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದು ಭಾರೀ ಶಬ್ದ ಕೇಳಿಬಂದಿದೆ. ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹಲವು ಮಂದಿ ಬೆಚ್ಚಿಬಿದ್ದಾರೆ.
‘ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ ಸುತ್ತಲಿನ ಹಲವು ಕಡೆಗಳಲ್ಲಿ 11.50 ರಿಂದ 12.15ವರೆಗೆ ಭೂಮಿ ಕಂಪಿಸಿದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಅಲ್ಲದೆ, ಭಾರೀ ಶಬ್ಧವೂ ಸಹ ಕೇಳಿಬಂದಿದೆ. ನಗರದ ಪಶ್ಚಿಮ ಭಾಗದಲ್ಲಿನ ಜನರಿಗೆ ಕಂಪನದ ಅನುಭವಾಗಿದ್ದು, ಸ್ಥಳೀಯರು ದೊಡ್ಡ ಶಬ್ದ ಕೇಳಿ ಬಂದಿದೆ ಎಂದಿದ್ದಾರೆ.
ಭೂಕಂಪನ ಮಾಪನ ಇಲಾಖೆ ಮಾಹಿತಿ
ಭೂಕಂಪನ ವಿಚಾರ ಭಾರೀ ಸುದ್ದಿ ಹರಡುತ್ತಿದ್ದಂತೆಯೇ ಈ ಸಂಬಂಧ ರಾಜ್ಯ ಭೂಕಂಪನ ಮಾಪನ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ ಯಾವುದೇ ರೀತಿಯ ಭೂಕಂಪನ ದಾಖಲಾಗಿಲ್ಲ. ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳಿಂದ ಸೌಮ್ಯವಾದ ಕಂಪನಗಳಿಗೆ ಸಂಬಂಧಿಸಿದ ಧ್ವನಿಯ ವರದಿಗಳನ್ನು ಸ್ವೀಕರಿಸಲಾಗಿದೆ. ತಿಳಿಸಲಾದ ನಿಗದಿತ ಸಮಯದಲ್ಲಿ ಯಾವುದೇ ಭೂಕಂಪನ ಅಥವಾ ಸಂಭವನೀಯ ಭೂಕಂಪದ ಸಂಕೇತಗಳು ಮಾಪನದಲ್ಲಿ ದಾಖಲಾಗಿಲ್ಲ. ಆದರೂ ನಮ್ಮ ಭೂಕಂಪನ ವೀಕ್ಷಣಾಲಯಗಳಿಂದ ಡೇಟಾವನ್ನು ವಿಶ್ಲೇಷಿಸಲಾಗಿದೆ. ಆದರೆ ಕಂಪನದ ಸೀಸ್ಮೋಗ್ರಾಫ್‌ಗಳು ಇಲ್ಲ ಎಂದು ಮಾಹಿತಿ ನೀಡಿದೆ.
ಆದರೆ ಶಬ್ದ ಹೇಗೆ ಬಂತು ಎಂಬ ಬಗ್ಗೆ ಅಧಿಕಾರಿಗಳಿಗಳು, ತಜ್ಞರಿಗೂ ಸದ್ಯಕ್ಕೆ ಮಾಹಿತಿ ಇಲ್ಲ ಎನ್ನಲಾಗಿದೆ. ಈ ಕುರಿತು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ. ಈ ಹಿಂದೆ ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಏರಿಯಾದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿತ್ತು. ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಮೊದಲ ಸಲ ಲಘುವಾಗಿ, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು.