ಬೆಂಗಳೂರು : ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 22 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರಕಾರದ ಜೊತೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲಗೊಂಡ ಹಿನ್ನಲೆಯಲ್ಲಿ ರೈತರು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇಂದು ದೇಶವ್ಯಾಪಿ ನಿರಂತರ ಪ್ರತಿಭನಟೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಇಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ (ಎಐಕೆಎಸ್ಸಿಸಿ) ನೇತೃತ್ವದಲ್ಲಿ ನಿರಂತರ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಮೌರ್ಯ ವೃತ್ತದ ಬಳಿ ನಡೆದ ಪ್ರತಿಭಟನೆಗೆ ನಗಾರಿ ಬಾರಿಸುವ ಮೂಲಕ ಚಾಲನೆಯನ್ನು ನೀಡಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, ಕೃಷಿ ಮಸೂದೆಗಳ ರದ್ದತಿಗಾಗಿ ನವೆಂಬರ್ 26 ರಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಕೊರೆಯುವ ಚಳಿಯಲ್ಲೂ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಇದೊಂದು ಐತಿಹಾಸಿಕ ಹೋರಾಟವಾಗಿದೆ. ದೆಹಲಿ ರೈತರ ಮಹಾ ಹೋರಾಟವನ್ನು ಬೆಂಬಲಿಸಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಇಂದಿನಿಂದ ಡೆಸೆಂಬರ್ 30 ರವರೆಗೆ ಅನಿರ್ದಿಷ್ಟ ರೈತ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅನ್ನದಾತನನ್ನು ಬೀದಿಪಾಲು ಮಾಡವು ಕೆಲಸ ನಡೆಯುತ್ತಿದೆ. ಮೋದಿಯವರಿಗೆ ಕ್ರಿಕೆಟಿಗರಿಗೆ, ಪ್ರಾಣಿಗಳಿಗೆ, ಆದಾನಿ, ಅಂಬಾನಿವಯರಿಗೆ ಸಮಯ ನೀಡಲು ಬರುತ್ತದೆ. ಆದರೆ ರೈತರಿಗೆ ಸಮಯ ನೀಡಿ ಮಾತುಕತೆಗೆ ಕರೆಯಲು, ಕೃಷಿ ಮಸೂದೆ ರದ್ದು ಮಾಡುವ ನಿರ್ಧಾರ ಪಡೆಯುವ ಸಮಯವಿಲ್ಲ. ಅನ್ನದಾತ ಬೆಳದ ಅನ್ನವನ್ನು ಊಟ ಮಾಡುವ ಕಲಾವಿದರು ರೈತರು ಹೋರಾಟಕ್ಕೆ ಯಾಕೆ ಬೆಂಬಲ ನೀಡುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(AIKSCC) ಕರ್ನಾಟಕ, ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ,ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ಹಾಗೂ ಎಡ ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನಾ ಉದ್ಘಾಟನಾ ಧರಣಿಯಲ್ಲಿ ಇಂದು ಕರ್ನಾಟಕ ಪ್ರಾಂತ ರೈತ ಸಂಘ ದ ಕಾರ್ಯಕರ್ತರು ಭಾಗವಹಿಸಿದ್ದರು.
ಈ ದಿನದ ಪ್ರತಿಭಟನೆಯಲ್ಲಿ ಐಕ್ಯ ಹೋರಾಟ ಸಂಯೋಜಕ ಡಾ.ಪ್ರಕಾಶ್ ಕಮ್ಮರಡಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ , ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಸಮತಳ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ,ಜೆಸಿಟಿಯು ನಾಯಕ ಎಲ್ ಕಾಳಪ್ಪ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ರಾಜ್ಯ ಕಾರ್ಯದರ್ಶಿ ಗೌರಮ್ಮ ಸೇರಿದಂತೆ ಅನೇಕರಿದ್ದರು.
ಕಾರ್ಪೋರೇಟ್ ಕೃಷಿ ಜಾರಿಗಾಗಿ ತಂದಿರುವ ಕೇಂದ್ರ ಸರಕಾರದ ಕೃಷಿ ಕಾಯ್ದೆಗಳು ವಾಪಾಸು ಪಡೆಯ ಬೇಕು. ದೇಶದ ಗ್ರಾಹಕರನ್ನು ಕಾರ್ಪೋರೇಟ್ ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ವಾಪಾಸು ಪಡೆಯ ಬೇಕು. ವಿದ್ಯುತ್ ರಂಗದ ಖಾಸಗೀಕರಣವನ್ನು ಗುರಿಯಾಗಿಟ್ಟುಕೊಂಡು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ – 2020 ವಾಪಾಸು ಪಡೆಯ ಬೇಕು. ಕಾರ್ಪೋರೇಟ್ ಕೃಷಿಗೆ ನೆರವು ನೀಡುವ ಕರ್ಅಟಕ ಸರಕಾರದ ಭೂ ಸುದಾರಣಾ ತಿದ್ದುಪಡಿ ಮಸೂದೆ – 2020, ಏಪಿಎಂಸಿ ತಿದ್ದುಪಡಿ ಕಾಯ್ದೆ – 2020 ಹಾಗೂ ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಮಸೂದೆ- 2020 ವಾಪಾಸು ಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರನ್ನು ಸಂರಕ್ಷಿಸುವ ಕನಿಷ್ಟ ಬೆಂಬಲ ಖಾತರಿ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಉಂಟಾಗುವ ನಷ್ಠದ ಹಿನ್ನೆಲೆಯಲ್ಲಿ ಎಲ್ಲ ಕೃಷಿಕರ ಸಾಲ ಮನ್ನಾ ಮಾಡುವ ಮತ್ತು ಬಡ್ಡಿ ರಹಿತ ಅಗತ್ಯ ಸಾಲ ಒದಗಿಸುವ ಸಾರ್ವಜನಿಕ ರಂಗದ ಮೂಲಕ ಒದಗಿಸುವ ಹಾಗೂ ಋಣ ಮುಕ್ತ ಕಾಯ್ದೆ ರೂಪಿಸಬೇಕು. ಎಂಬುದು ರೈತರ ಬೇಡಿಕೆಯಾಗಿದೆ.