ಕೃಷಿ ಮಹಿಳೆಯರ ಬದುಕಿನ ಪಲ್ಲಟಗಳು: ಜೀವದ ವಿರುದ್ಧ ಕೈಗಾರಿಕಾ ಕೃಷಿ ಸಾರಿದ ಸಮರ

08.03.2020ರಂದು ಮಂಡ್ಯದಲ್ಲಿ ನಡೆದ ’ಮಹಿಳಾ ಬದುಕು- ಪಲ್ಲಟಗಳ” ವಿಚಾರ ಸಂಕಿರಣದಲ್ಲಿ ವಿ ಗಾಯಿತ್ರಿ ಮಾಡಿದ ಭಾಷಣದ ಸಂಗ್ರಹ

ಎರಡು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ದೂಪದಹಳ್ಳಿ ಗ್ರಾಮದ ಭದ್ರಮ್ಮ ಎನ್ನುವ ಮಹಿಳೆಯನ್ನು ನಮ್ಮ ‘ಸಹಜ ಸಾಗುವಳಿ’ ಪತ್ರಿಕೆಗೆ ರೆಕಾರ್ಡ್ ಮಾಡಲು ಹೋಗಿದ್ದೆವು. ಅಂದು ಅವರು ಎಂಟು ಜನರ ಟೀಂ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡುತ್ತಿದ್ದರು. ಮುಂದೆ ಎರಡು ಎತ್ತು, ಅದರ ಹಿಂದೆ ಕೂರಿಗೆ ಸಾಲು ಹೊಡೆಯವ ಒಬ್ಬ ರೈತ, ಅದರ ಹಿಂದೆ ಸೆಡ್ಡೆಯಲ್ಲಿ ಬೀಜ ಬಿತ್ತುವ ಮೂರು ಜನ ಮಹಿಳೆಯರು, ಅವರ ಹಿಂದೆ ಮತ್ತೆ ಸೆಡ್ಡೆಯಲ್ಲಿ ಗೊಬ್ಬರ ಹಾಕುವ ಮೂರು ಜನ ಮಹಿಳೆಯರು, ಇವರಿಗೆ ನೀರು ಮತ್ತು ಬೀಜ ಕೊಡಲು ಒಬ್ಬ ಹುಡುಗ. ಅವರು ಬಿತ್ತನೆ ಮುಗಿಸುವವರೆಗೂ ಕಾದು ನಂತರ ಅವರೊಂದಿಗೆ ಮಾತು ಪ್ರಾರಂಭಿಸಿದೆವು.

ಅಂದು ಭದ್ರಮ್ಮನವರು ಹೇಳಿದ ಎರಡು ಮಾತು ಎಲ್ಲವನ್ನೂ ವಿವರಿಸುವಂತಿತ್ತು. ‘ನನಗೀಗ 70-75 ವರ್ಷ ಇರಬಹುದು. ನನಗೆ ಬಿತ್ತನೆಯಲ್ಲಿ ಅರವತ್ತು ವರ್ಷ ಅನುಭವ ಇದೆ. ಇವತ್ತಿಗೂ ಬಿತ್ತನೆ ಮಾಡುತ್ತಲೇ ಇದ್ದೇನೆ. ಈ ಅರವತ್ತು ವರ್ಷದಲ್ಲಿ ನಾನು ನನ್ನ ಜಮೀನಿಗೆ ಯಾವತ್ತೂ ಒಂದೇ ಬೀಜವನ್ನು ಬಿತ್ತಿಲ್ಲ; ಇದುವರೆಗೂ ನಾನು ನನ್ನ ಮನೆಗೆ ಯಾವುದೇ ದಿನಸಿಗಳನ್ನು ಅಂಗಡಿಯಿಂದ ಕೊಂಡು ತಂದು ಊಟ ಮಾಡಿಲ್ಲ’. ಹಾಗಾದರೆ ಅವರು ಎಷ್ಟು ಬೀಜ ಬಿತ್ತುತ್ತಿದ್ದರು? ಅವತ್ತು ಅವರು ಆ ಹೊಲಕ್ಕೆ ಹನ್ನೆರಡು ತರಹದ ಬೀಜಗಳನ್ನು ಬಿತ್ತುತ್ತಿದ್ದರು. ಮುಖ್ಯ ಬೆಳೆ ಸಾಲು, ಅಕ್ಕಡಿ ಬೆಳೆ ಸಾಲುಗಳು, ಅಂಚಿನ ಸಾಲುಗಳು, ಮಿಶ್ರ ಬೆಳೆ ಸಾಲುಗಳಲ್ಲಿ ಏಕದಳ, ದ್ವಿದಳ, ಎಣ್ಣೆ ಕಾಳುಗಳು, ಸಾಂಬಾರು ಪದಾರ್ಥಗಳು ಎಲ್ಲಾ ಸೇರಿ ಹನ್ನೆರಡು ಥರದ ಬೀಜಗಳು. ಮಾರುಕಟ್ಟೆಗೆ ಹೋಗುವ ಮುಖ್ಯ ಬೆಳೆಯ ಜೊತೆಗೆ ಮನೆ ಬಳಕೆಗೆ ಬೇಕಾದ ಪ್ರತಿಯೊಂದು ಪದಾರ್ಥಗಳು ಅಲ್ಲಿದ್ದವು. ಒಬ್ಬೊಬ್ಬ ಮಹಿಳೆ ಮೂರು, ಮೂರು ಮಡಿಲು ಕಟ್ಟಿಕೊಂಡಿದ್ದರು. ಮತ್ತೊಂದು ಗೌಪ್ಯವಾದ ಒಳಸೆರಗು! ಅದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಪ್ರಾಯಶಃ ಮನೆಯ ಗಂಡಸರಿಗೆ ಅಲ್ಲಿ ಇನ್ನೊಂದು ಬೀಜ ಇಟ್ಟುಕೊಂಡಿರುವುದು ಗೊತ್ತಾಗದಿರಲಿ ಎಂದು ಗೌಪ್ಯವಾಗಿ ಕಟ್ಟಿಕೊಂಡಿದ್ದಿರಬೇಕು!

‘ನಾವು ಯಾವಾಗಲೂ ಮೂರು ತಾಳಿನ ಕೂರಿಗೆಯನ್ನೇ ಉಪಯೋಗ ಮಾಡುವುದು’ ಅಂದರು ಭದ್ರಮ್ಮ. ‘ಯಾಕೆಂದರೆ ಮೂರು ತಾಳು ಬಿತ್ತನೆ ಮಾಡಿದರೂ ಅದರಲ್ಲಿ ರೈತರಿಗೆ ಸಿಗುವುದು ಒಂದೇ ತಾಳಿನ ಬೆಳೆ. ಉಳಿದ ಎರಡು ತಾಳಿನಲ್ಲಿ ಒಂದು ತಾಳಿನದು ಪ್ರಾಣಿ-ಪಕ್ಷಿಗಳಿಗೆ ಹೋಗುತ್ತದೆ, ಇನ್ನೊಂದು ನಮ್ಮ ಸುತ್ತಮುತ್ತಲಿನವರಿಗೆ ಹೋಗುತ್ತದೆ, ಒಂದು ತಾಳಿನದು ಮಾತ್ರ ರೈತನಿಗೆ ಉಳಿಯುತ್ತದೆ’. ಕೃಷಿ ಸಂಸ್ಕೃತಿಯ ತಿರುಳು ಅವರ ಈ ಮಾತಿನಲ್ಲಿ ಅಡಕವಾಗಿತ್ತು. ‘ಎಲ್ಲಾ ಕೆಲಸಕ್ಕಿಂತ ಬಿತ್ತನೆ ಕೆಲಸ ನಮಗೆ ಗೌರವ ಕೊಡುತ್ತದೆ. ನಮ್ಮನ್ನು ಬೇರೆಯವರು ಬಿತ್ತನೆಗೆ ಕರೆದಿದ್ದಾರೆ ಎಂದರೆ ನಮಗೆ ಅದು ಒಂದು ಹೆಮ್ಮೆ’. ಹೀಗೆಂದವರು ಭದ್ರಮ್ಮನ ಟೀಂನಲ್ಲಿದ್ದ ಯುವ ಮಹಿಳೆ ಅನುಸೂಯ.

ಇನ್ನೊಬ್ಬರು ಪುಟ್ಟೀರಮ್ಮ. ಚಾಮರಾಜನಗರದ ಪಣ್ಯದಹುಂಡಿ ಗ್ರಾಮದ ರೈತ ಮಹಿಳೆ. ಅನೇಕ ದಿನ ಅವರೊಟ್ಟಿಗೆ ಇದ್ದು ಅವರ ಮಿಶ್ರ ಬೆಳೆ ಪದ್ಧತಿ ಮತ್ತು ಬೆರೆಸೊಪ್ಪಿನ (ಪುರಾಣ)ವನ್ನು ದಾಖಲಿಸುತ್ತಿದ್ದೆವು. ಭದ್ರಮ್ಮ ಕೂರಿಗೆ ಬಿತ್ತನೆ ನಿಪುಣೆಯಾದರೆ ಪುಟ್ಟೀರಮ್ಮ ಕೈಬಿತ್ತನೆ ಪ್ರವೀಣೆ. ಇವರು ಬಿತ್ತನೆ ಮಾಡಿದ ಹೊಲ ವಿವಿಧ ಬಣ್ಣಗಳನ್ನು ಹಾಸುಹೊಕ್ಕಾಗಿ ಬೆಸೆದ ಕಲಾಕೃತಿಯಂತೆ ಕಾಣುತ್ತದೆ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. ‘ಒಂದೇ ಬೆಳೆ ಹಾಕಿದರೆ ನಮ್ಮ ಭೂಮಿಗೆ ರೂಪು ಬರೋದಿಲ್ಲ’ ಅನ್ನುವುದು ಪುಟ್ಟೀರಮ್ಮನ ತರ್ಕ. ಅವರ ‘ರೂಪು’ ಅನ್ನುವ ಈ ಕಲ್ಪನೆಯನ್ನು ಗೆಳತಿಯರು ಇಲ್ಲಿ ಹೊಸೆದಿರುವ ಕೌದಿಗೆ ಹೋಲಿಸಬಹುದು. ವಿವಿಧ ಬಣ್ಣಗಳು, ವಿವಿಧ ವಿನ್ಯಾಸಗಳು, ವಿವಿಧ ಉದ್ದೇಶಗಳು ಇರುವ ಕೌದಿಯ ಹಾಗೆಯೇ ಮಿಶ್ರ ಬೆಳೆ ಹೊಲ ಕೂಡ. ಭೂಮಿಗೆ ರೂಪು ಬರುವುದು ಎಂದರೆ ಕಣ್ಣೋಟಕ್ಕೆ ಸುಂದರವಾಗಿರುವುದು ಎಂಬರ್ಥ ಮಾತ್ರವಲ್ಲ. ನಾವು ಬಿತ್ತುವ ಬೆಳೆಗಳಿಂದ ಮಣ್ಣು ಫಲವತ್ತಾಗಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಂಡು, ವಿವಿಧ ಬೆಳೆಗಳನ್ನು ಬೆಳೆದಾಗ ಮಾತ್ರ ನಮ್ಮ ಕುಟುಂಬಗಳನ್ನು ಕಾಪಾಡಬಹುದು ಎನ್ನುವುದು ಇವರ ಲೆಕ್ಕಾಚಾರ.

ಹೀಗೆ ಪುಟ್ಟೀರಮ್ಮನಂಥ ಮಹಿಳೆಯರು ಕಾಪಾಡಿಕೊಂಡು ಬಂದದ್ದು ಬೀಜ ಮತ್ತು ಕಳೆ. ಈ ಬೀಜ ಮತ್ತು ಕಳೆಗಳಿಂದ ಜನಾಂಗಗಳನ್ನೇ ಕಾಪಾಡಿದ ಧೀಮಂತರಿವರು. ‘ಕಳೆ’ಯೆಂದರೆ ಹೊಲ ಮತ್ತು ಸುತ್ತಮುತ್ತಲೂ ಸಿಗುವಂತಹ ವನಸ್ಪತಿಗಳು. ಬೆರೆಕೆ ಸೊಪ್ಪು. ಬೆರೆಕೆ ಸೊಪ್ಪು ಎಂದರೆ ಕುಟುಂಬದ ಪೌಷ್ಟಿಕತೆ ಭದ್ರತೆ. ಹೊಲದಲ್ಲಿ ಕಳೆ ಕೀಳುವುದೆಂದರೆ ಮಹಿಳೆಯರಿಗೆ ಮನೆಗೆ ಪೌಷ್ಟಿಕ ವನಸ್ಪತಿಗಳನ್ನು ಸಂಗ್ರಹಿಸುವುದೂ ಹೌದು. ಸೊಪ್ಪಿನ ಬಗ್ಗೆ ಕೇಳಿದರೆ ಸಾಕು, ಮಹಾಭಾರತದ ಕಾಲಕ್ಕೆ ಹೋಗಿಬಿಡುವ, ಕಾಡಿನಲ್ಲಿದ್ದಾಗ ಕುಂತಿ ದೇವಿ ಕೊಯ್ಯುತ್ತಿದ್ದ ಸೊಪ್ಪುಗಳು, ಬಿತ್ತುತ್ತಿದ್ದ ಬೆಳೆಗಳನ್ನು ಹಾಡಿನ ಮೂಲಕ ವಿವರಿಸುವ ಪುಟ್ಟೀರಮ್ಮನಂಥ ಮಹಿಳೆಯರು ಅದೆಷ್ಟು ಸಾವಿರ ವರ್ಷಗಳಿಂದ ಈ ಬಗೆಯ ಸಮಗ್ರ ಪದ್ಧತಿಗಳನ್ನು ಪಾಲಿಸಿಕೊಂಡು ಬಂದಿದ್ದಾರೋ ಬಲ್ಲವರಾರು. ಅವರು ‘ಭೂಮಿ’ ಅನ್ನುವುದನ್ನೇ ನಾನು ಕೇಳಿಲ್ಲ. ಯಾವಾಗಲೂ ‘ಭೂಮ್ತಾಯಿ’ ಅಂತಲೇ ಅನ್ನುತ್ತಾರೆ. ಅವರ ಹಾಡುಗಳಲ್ಲಿ ಆ ಭೂಮ್ತಾಯಿಯ ಸಿಂಗಾರ, ಬಸಿರು, ಬಯಕೆಗಳು, ಸೀಮಂತ, ಬಾಣಂತನ, ಮುಟ್ಟು ಎಲ್ಲವೂ ಸುತ್ತಿ ಸುತ್ತಿ ಬರುತ್ತವೆ.

ಮೂಲೆಗೆ ಸರಿದ ಮಹಿಳೆಯರ ಲೋಕಜ್ಞಾನ

ಮಹಿಳೆಯರ ಇಂತಹ ಸರಿಗಟ್ಟಲಾಗದ ಲೋಕಜ್ಞಾನ, ಪರಿಸರ ಮತ್ತು ಕುಟುಂಬದ ಕಾಪಾಡುವಿಕೆಯಲ್ಲಿ ಬೆಳೆಸಿಕೊಂಡು ಬಂದ ವಿವೇಕ ಕಳೆದ 50-60 ವರ್ಷದಲ್ಲಿ ಸಂಪೂರ್ಣ ಪಲ್ಲಟಗೊಂಡಿತು. ಸಾವಿರಾರು ವರ್ಷಗಳಿಂದ ನಮ್ಮ ಮಹಿಳೆಯರು ತಮ್ಮದಾಗಿಸಿಕೊಂಡಿದ್ದ ಜ್ಞಾನ- ವಿವೇಕಗಳು ಕೇವಲ 50-60 ವರ್ಷದಲ್ಲಿ ಮೂಲೆಗುಂಪಾದದ್ದು ಹೇಗೆ?

ನಾವಿಂದು ಮಂಡ್ಯದಲ್ಲಿ ಸೇರಿದ್ದೇವೆ. ಮಂಡ್ಯದ ಬಹುಭಾಗದಲ್ಲಿ ಜಲಾಶಯದ ನೀರಾವರಿಯಿಂದ ಕಬ್ಬು, ಭತ್ತಗಳನ್ನು ಬೆಳೆಯಲಾಗುತ್ತಿದೆ. ಸ್ವಲ್ಪ ರಾಗಿ, ತೆಂಗು ಮತ್ತಿತರ ಬೆಳೆಗಳೂ ಇವೆ. ಕಣ್ಣು ಹಾಯಿಸಿದಷ್ಟೂ ಕಬ್ಬಿನ ಗದ್ದೆಗಳು, ಭತ್ತದ ಗದ್ದೆಗಳು. ಎಲ್ಲೆಲ್ಲೂ ಏಕಬೆಳೆ. ವಂದನಾಶಿವ ಇದನ್ನು ‘ಮಾನೋ ಕಲ್ಚರ್ ಆಫ್ ಮೈಂಡ್’ ಅನ್ನುತ್ತಾರೆ. ಭೂಮಿಗೆ ‘ರೂಪು’ ಕೊಡುತ್ತಿದ್ದಂಥ ಬೆಳೆ ಪದ್ಧತಿಗಳು ಹೋಗಿ ಈ ಏಕತ್ರ ಸಂಸ್ಕøತಿ, ಏಕ ಬೆಳೆ ಪದ್ಧತಿ ಬಂದಿದ್ದಾದರೂ ಹೇಗೆ?

ಅಧಿಕ ಇಳುವರಿ ಬೀಜಗಳು :  ಸ್ವಾತಂತ್ರ್ಯ ನಂತರದಲ್ಲಿ ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯನ್ನು ಪರಿಗಣಿಸಿಯೇ ಇರಲಿಲ್ಲ. ನಂತರದ – ವಿಜಯಶ್ರೀ ಹಾಲಾಡಿ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯಲ್ಲಿ ‘ಉತ್ಪಾದನೆ ಹೆಚ್ಚಿಸುವುದು ಹೇಗೆ?’ ಎಂಬ ವಿಚಾರ ಬಂತು. ನಮ್ಮ ದೇಶದ ಜನ ಬಡತನದಿಂದ, ಹಸಿವಿನಿಂದ ನರಳುತ್ತಿದ್ದಾರೆ. ಇವರಿಗೆಲ್ಲಾ ಪೂರೈಸುವಷ್ಟು ಆಹಾರ ನಮ್ಮಲ್ಲಿಲ್ಲ, ನಮ್ಮ ಆಹಾರ ಉತ್ಪಾದನೆಯನ್ನು ಹೆಚ್ಚು ಮಾಡಬೇಕು ಎನ್ನುವ ವಿಚಾರ ಬಂತು. ನಮ್ಮ ಮಹಿಳೆಯರು ಕಾಪಾಡಿಕೊಂಡು ಬಳಸುತ್ತಿರುವ ಏಕದಳ, ದ್ವಿದಳ, ಎಣ್ಣೆಕಾಳು, ಸಾಂಬಾರು ಪದಾರ್ಥಗಳ ಬೀಜಗಳು ಇಳುವರಿ ಕೊಡುವುದಿಲ್ಲ; ನಾವು ಅಧಿಕ ಇಳುವರಿ ಕೊಡುವ ಬೀಜಗಳನ್ನು ಅಭಿವೃದ್ಧಿ ಪಡಿಸಬೇಕು; ಹೆಚ್ಚು ನೀರು, ರಸಗೊಬ್ಬರ ಬಳಸಿ ಅಧಿಕ ಉತ್ಪಾದನೆ ಮಾಡಬೇಕು ಎಂದು ತೀರ್ಮಾನಿಸಲಾಯಿತು. ಆದರೆ ಅಂತಹ ಬೀಜಗಳನ್ನು ಅಭಿವೃದ್ಧಿ ಪಡಿಸುವ ತಂತ್ರಜ್ಞಾನ ನಮ್ಮ ವಿಜ್ಞಾನಿಗಳಲ್ಲಿ ಇರಲಿಲ್ಲ. ಆಗ ಅಮೇರಿಕಾದ ‘ರಾಕ್ ಫೆಲ್ಲರ್ ಫೌಂಡೇಷನ್’ನಿಂದ ವಿಜ್ಞಾನಿಗಳನ್ನು ಕರೆಸಿಕೊಂಡು 60ರ ದಶಕದಲ್ಲಿ ನಮ್ಮ ಸರ್ಕಾರ ಅಧಿಕ ಉತ್ಪಾದನೆ ಮಾಡುವ ಬೀಜಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಬಿಸಿತು. ಹೀಗೆ ಕೃಷಿ ಪರಂಪರೆ ಪಲ್ಲಟದ ಮೂಲದಲ್ಲೇ ಅಮೆರಿಕದ ಪ್ರವೇಶವಾಯಿತು. ಇನ್ನು ಇಡೀ ದೇಶದ ರೈತರಿಗೆ ಈ ಬೀಜಗಳ ಹಂಚಿಕೆಯಾಗಬೇಕು. ಅದಕ್ಕಾಗಿ ಸಾರ್ವಜನಿಕ ವಲಯದ ಬೀಜ ನಿಗಮಗಳನ್ನು ಸ್ಥಾಪನೆ ಮಾಡಬೇಕು. ಇದಕ್ಕೂ ನಮ್ಮಲ್ಲಿ ಹಣವಿಲ್ಲ. ಕೊನೆಗೆ ವಿಶ್ವ ಬ್ಯಾಂಕಿನ ಹಣ ಸಹಾಯದಿಂದ ರಾಷ್ಟ್ರೀಯ ಬೀಜ ನಿಗಮ ಸ್ಥಾಪಿಸಲಾಯಿತು.

ಹೀಗೆ ಪ್ರಾರಂಭಗೊಂಡ ‘ಹಸಿರು ಕ್ರಾಂತಿ’ ನಮ್ಮ ಹೊಲಗಳನ್ನು ಪ್ರವೇಶಿಸಿತು. ಹತ್ತಾರು ಬೀಜಗಳನ್ನು ಹಾಕುತ್ತಿದ್ದ ಹೊಲಕ್ಕೆ ಒಂದೇ ಬೀಜ ಹಾಕಬೇಕು ಅಂದಾಗ ಮಹಿಳೆಯರು ತಲ್ಲಣಗೊಂಡರು. ಅವರು ಬಿತ್ತುತ್ತಿದ್ದ ಬೀಜ, ಅವರ ತಿಳಿವಳಿಕೆ ಎಲ್ಲಾ ತತ್ತರಿಸಿಹೋಗಿತ್ತು. ಅದಾದರೂ ಎಂತಹ ತಿಳಿವಳಿಕೆ ಇವತ್ತು ಮಳೆ ಬಿದ್ದಿದೆ, ಬಿತ್ತನೆ ಪ್ರಾರಂಭಿಸಬೇಕು ಅಂದಾಗ, ಬೀಜ ಹಾಕುವಷ್ಟು ಆಳ ಮಣ್ಣು ತೊಯ್ದಿದೆಯಾ ನೋಡಬೇಕು. ಯಾವ ಬೀಜ ಎಷ್ಟು ಆಳದಲ್ಲಿ ಹಾಕಬೇಕು, ಕೂರಿಗೆ ಬಿತ್ತನೆಯಲ್ಲಿ ¸ ಸೆಡ್ಡೆಯಲ್ಲಿ ಬೀಜ ಹಾಕುವಾಗ ಪಕ್ಕದಲ್ಲಿ ಇರುವವಳಿಗೆ ಏನಾದರೂ ಸೋರುಗೈ ಆಯ್ತಾ ಎಂದು ನೋಡುತ್ತಿರಬೇಕು. ಮುಂದೆ ಸಾಲು ಹೊಡೆಯುತ್ತಾ ಇರುವವನಿಗೆ ಮನಸ್ಸು ತಪ್ಪಿತಾ ಗಮನವಿಡಬೇಕು. ಬಿತ್ತನೆ ಮಾಡುತ್ತಿರುವಾಗಲೇ ಮೋಡ ಹಾಕಿಕೊಂಡರೆ ನಾಳೆಗೆ ಕಪ್ಪು ಭೂಮಿಯಲ್ಲಿ ಬಿತ್ತನೆ ಮಾಡಲು ಆಗುವುದಿಲ್ಲ, ಬೀಸುಗಾಲು ಹಾಕಿ ಇವತ್ತೇ ಬಿತ್ತನೆ ಮುಗಿಸಬೇಕು. ಇನ್ನು, ಯಾವ ಬೀಜವನ್ನು ಯಾವ ಸಾಲಿನಲ್ಲಿ ಹಾಕಬೇಕು, ಬೀಜದಿಂದ ಬೀಜಕ್ಕೆ ಎಷ್ಟು ಅಂತರ ಬರಬೇಕು ಅನ್ನುವುದಕ್ಕೆಲ್ಲಾ ಗಮನ ಕೊಡಬೇಕು. ಇಲ್ಲಿ ನಮ್ಮ ಮಹಿಳೆಯರ ತಂತ್ರಗಾರಿಕೆ ಎಷ್ಟು ಅದ್ಭುತ ಎಂದರೆ, ಒಂದು ಹೆಜ್ಜೆ ಇಟ್ಟು ಕೈ ಚಿಮ್ಮಿದರೆ ಆ ಬೀಜಗಳು ಚಾಚೂತಪ್ಪದೆ ಚೋಟಿಗೊಂದು, ಗೇಣಿಗೊಂದೇ ಬೀಳಬೇಕು. ಅಂತಹ ನಿಖರತೆ!

ಹೀಗೆ ನಮ್ಮ ಮಹಿಳೆಯರು ಕರಗತ ಮಾಡಿಕೊಂಡಿದ್ದ ನೂರಾರು ತಂತ್ರಗಾರಿಕೆಗಳನ್ನು ಹಸಿರು ಕ್ರಾಂತಿ ಒಂದೇ ಬೀಸಿಗೆ ಮೂಲೆಗುಂಪು ಮಾಡಿತು. ಆದರೂ ಆ ಸಂದರ್ಭದಲ್ಲಿ ಹೈಬ್ರಿಡ್ ಬೀಜಗಳ ಹಾವಳಿಯಾಗಲಿಲ್ಲ. ಆಗ ಬಂದದ್ದೆಲ್ಲಾ ಬಹುಪಾಲು ಅಧಿಕ ಇಳುವರಿ ಬೀಜಗಳೇ. ಅದನ್ನು ‘ಓಪಿ’ ಅಥವಾ ‘ಮುಕ್ತ ಪರಾಗಸ್ಪರ್ಶಿ’ ಬೀಜ ಅನ್ನುತ್ತಾರೆ. ಈ ಬೀಜಗಳನ್ನು ರೈತರು ತಾವೇ ಎತ್ತಿಟ್ಟುಕೊಂಡು ಮತ್ತೆ ಹಾಕಬಹುದಾಗಿತ್ತು. ಮಂಡ್ಯದಲ್ಲಿ ಬೆಳೆಯುತ್ತಿರುವ ಭತ್ತ, ರಾಗಿ ಎಲ್ಲಾ ಬಹುತೇಕ ಅಧಿಕ ಇಳುವರಿ ಬೀಜಗಳೇ. ಅರವತ್ತರ ದಶಕದಲ್ಲಿ ಪ್ರಾರಂಭವಾದ ಈ ಅಧಿಕ ಇಳುವರಿ ಬೀಜಗಳನ್ನು ಮುಂದೆ ನಮ್ಮ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿ ರೈತರಿಗೆ ಕೊಡುತ್ತಿದ್ದವು. ಬೀಜನಿಗಮದಿಂದಲೇ ಬೀಜ ತೆಗೆದುಕೊಳ್ಳಬೇಕು ಎಂದು ಶರತ್ತು ಹಾಕಿದರೂ ರೈತರು ತಾವೇ ಎತ್ತಿಟ್ಟುಕೊಂಡು ಹಾಕುತ್ತಿದ್ದರು. ಹೈಬ್ರಿಡ್ ಬೀಜಗಳ ಹಾವಳಿ ಆಗಿನ್ನೂ ಪ್ರಾರಂಭವಾಗಿರಲಿಲ್ಲ.

ಜಾಗತೀಕರಣ- ಕಾರ್ಪೊರೇಟ್ ಪ್ರವೇಶ

ಆದರೆ ಯಾವಾಗ ನಮ್ಮ ದೇಶ ಜಾಗತೀಕರಣಕ್ಕೆ ತೆರೆದುಕೊಂಡಿತೋ ಆಗ ಹೈಬ್ರಿಡ್ ಬೀಜಗಳು ನಮ್ಮ ಕೃಷಿಯನ್ನು ಆಕ್ರಮಿಸಿಕೊಳ್ಳತೊಡಗಿದವು. ಕ್ರಾಸ್ ಮಾಡಿದ ಹೈಬ್ರಿಡ್ ಬೀಜಗಳಲ್ಲಿ ತಂದೆ ತಾಯಿ(ಪೇರೆಂಟಲ್ ಲೈನ್) ಬೀಜಗಳನ್ನು ಬ್ರೀಡರ್ ತಾನೇ ಇಟ್ಟುಕೊಂಡಿರುತ್ತಾನೆ. ರೈತರೇನಾದರೂ ತಾವು ತಂದು ಹಾಕಿದ ಬೀಜವನ್ನು ಮುಂದಿನ ಬಿತ್ತನೆಗೆ ಹಾಕಿಬಿಟ್ಟರೆ ಆ ಹೊಲ ತಂದೆ ತಾಯಿ ಇಲ್ಲದ ಅನಾಥನಂತೆ ಕಾಣುತ್ತದೆ. ಗಿಡಗಳಲ್ಲಿ ಒಂದು ಎತ್ತರ, ಒಂದು ಕುಳ್ಳು, ಒಂದು ಚೀಕು, ಒಂದು ದಪ್ಪ ಹೀಗೆ.. ಪುಟ್ಟೀರಮ್ಮ ಹೇಳುವ ಹೊಲದ ‘ರೂಪು’ ಎನ್ನುವುದಕ್ಕೆ ತದ್ವಿರುದ್ಧವಾಗಿ ನಮ್ಮ ಹೊಲಗಳು ಕಾಣಿಸುತ್ತವೆ. ನಾವು ಯಾವಾಗ ಜಿಎಟಿಟಿ(ಗ್ಯಾಟ್) ಒಪ್ಪಂದಕ್ಕೆ ಸಹಿ ಹಾಕಿದೆವೋ, ನಂತರ ವಿಶ್ವ ಮಾರಾಟ ಸಂಸ್ಥೆ (ಡಬ್ಲ್ಯುಟಿಒ)ಯನ್ನು ಪ್ರವೇಶ ಮಾಡಿದೆವೋ ಆಗ ನಮ್ಮ ಕೃಷಿ ಸಂಪೂರ್ಣ ಮೊಗಚಿ ಹಾಕಿಕೊಂಡಿತು. ಕೃಷಿ ರಂಗಕ್ಕೆ ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾದದ್ದು ಆಗಲೇ. 1990ರ ದಶಕದಲ್ಲಿ ನಮ್ಮ ದೇಶ ಜಾಗತೀಕರಣಕ್ಕೆ ತೆರೆದುಕೊಂಡಿತಾದರೂ ಇದಕ್ಕೆ ಮೊದಲೇ 1984ರಿಂದಲೇ ‘ಉರುಗ್ವೆ ರೌಂಡ್’ ಎಂಬ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ದೇಶಗಳ ನಡುವೆ ಮಾಡಿಕೊಳ್ಳಬಹುದಾದ ಆಮದು – ರಫ್ತು ಕುರಿತು ಮಾತುಕತೆಗಳು ನಡೆÉಯುತ್ತಿದ್ದವು. 1994ರಲ್ಲಿ ಜಿಎಟಿಟಿ(ಗ್ಯಾಟ್) ಒಪ್ಪಂದಕ್ಕೆ ನಮ್ಮ ದೇಶ ಸಹಿ ಮಾಡಿತು. ‘ಗ್ಯಾಟ್’ ಅನ್ನುವುದು ಮಾರಾಟ ಮತ್ತು ತೆರಿಗೆ ಮೇಲಿನ ಸಾಮಾನ್ಯ ಒಪ್ಪಂದಗಳಿಗೆ ಸಂಬಂಧಿಸಿದ್ದು. ಪ್ರಪಂಚದ ವಿವಿಧ ದೇಶಗಳು ತಾವು ಹೆಚ್ಚಾಗಿ ಉತ್ಪಾದಿಸುವ ಪದಾರ್ಥಗಳನ್ನು ಇತರ ದೇಶಗಳಿಗೆ ರಫ್ತು ಮಾಡುವುದು ಮತ್ತು ತಮಗೆ ಅಗತ್ಯವಾದ ಪದಾರ್ಥಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಸದುದ್ದೇಶ ಇಲ್ಲಿದೆ ಎನ್ನಲಾಯಿತು. 1995ರಲ್ಲಿ ನಮ್ಮ ದೇಶ ಡಬ್ಲುಟಿಒ ಪ್ರವೇಶ ಮಾಡಿತು. ಆಗಲೇ ಕೃಷಿಯ ಮೇಲಿನ ಒಪ್ಪಂದಗಳ(ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್) ಅಡಿಯಲ್ಲಿ ಭಾರತ ದೇಶವು ಅನೇಕ ದೇಶಗಳ ಜೊತೆ ಏಕಪಕ್ಷೀಯ, ದ್ವಿಪಕ್ಷೀಯ, ಬಹುಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲು ಪ್ರಾರಂಭಿಸಿತು.

ಒಪ್ಪಂದ, ಕಾನೂನುಗಳನ್ನು ಪ್ರಭಾವಿಸುವ ಕಂಪನಿಗಳು : ಪ್ರಪಂಚದ ಎಲ್ಲ ದೇಶಗಳು ಇವತ್ತು ನಡೆಯುತ್ತಿರುವುದೇ ದೈತ್ಯ ಕಂಪನಿಗಳ ಮರ್ಜಿಯಲ್ಲಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಕಂಪನಿಗಳ ಅಗಾಧತೆ ಹೇಗಿದೆಯೆಂದರೆ, ಪ್ರಪಂಚದ ಇಡೀ ಕೃಷಿ ಉದ್ಯಮವನ್ನು ಕೇವಲ ಹತ್ತು ಕಂಪನಿಗಳು ಆಳುತ್ತಿವೆ. ಕಾರ್ಗಿಲ್, ಮೊನ್ಸಾಂಟೊ(ಈಗ ಬಾಯರ್ ಜೊತೆ ವಿಲೀನ ಆಗಿದೆ), ಡ್ಯುಪ್ಯಾಂಟ್, ಸಿಂಜೆಂಟಾ, ಡೌ ಇಂತಹ ಕಂಪನಿಗಳ ಬಂಡವಾಳ ನೂರು ಶತಕೋಟಿ(ಬಿಲಿಯನ್) ಡಾಲರ್ ಲೆಕ್ಕದಲ್ಲಿ ಬರುತ್ತದೆ. ನಮ್ಮ ಮಹಿಳೆಯರ ಬಂಡವಾಳ 5-10 ಸಾವಿರದಲ್ಲಿ ಮುಗಿದು ಹೋಗುವಾಗ ಇಂತಹ ತಿಮಿಂಗಿಲಗಳ ಮುಂದೆ ನಮ್ಮ ರೈತರು, ಅದರಲ್ಲೂ ಮಹಿಳೆಯರು ನಿಲ್ಲುವುದಾದರೂ ಸಾಧ್ಯವೇ? ಡಬ್ಲ್ಯುಟಿಒ ಸದಸ್ಯ ದೇಶಗಳು ಮಾಡಿಕೊಳ್ಳುವ ಎಲ್ಲಾ ಒಪ್ಪಂದಗಳನ್ನು ಈ ದೈತ್ಯ ಕಂಪನಿಗಳು ಪ್ರಭಾವಿಸುತ್ತವೆ. ಅಷ್ಟೇ ಅಲ್ಲ, ಆಯಾ ದೇಶಗಳ ಕಾಯಿದೆ, ಕಾನೂನುಗಳನ್ನು ಅವು ಪ್ರಭಾವಿಸುತ್ತವೆ. ಅಮೆರಿಕದ ದೈತ್ಯ ಅಗ್ರಿಬ್ಯುಸಿನೆಸ್ ಕಂಪನಿ ‘ಮೊನ್ಸಂಟೋ’ ನಮ್ಮ ದೇಶದ ಮೇಲೆ ಹೀಗೊಂದು ಶರತ್ತು ಹಾಕಿತು. ‘ನೋಡಿ, ನಿಮ್ಮ ದೇಶದ ಮಹಿಳೆಯರಿಗೆ ಬೀಜಗಳನ್ನು ಹಿಡಿಯುವ, ಸಂರಕ್ಷಿಸಿಟ್ಟುಕೊಳ್ಳುವ, ವಿನಿಮಯ ಮಾಡಿಕೊಳ್ಳುವ, ಮಾರಾಟ ಮಾಡುವ ಒಂದು ಚಾಳಿ ಇದೆ. ನೀವು ಅವರಿಗೆ ಆ ಚಾಳಿ ಬಿಡಿಸಬೇಕು. ಯಾರೂ ನಿಮ್ಮ ದೇಶದಲ್ಲಿ ಬೀಜಗಳನ್ನು ಹಿಡಿಬಾರದು, ಸಂರಕ್ಷಣೆ, ವಿನಿಮಯ ಮಾಡಬಾರದು. ಇದಕ್ಕೆ ತಕ್ಕ ಒಂದು ಕಾನೂನು ತೆಗೆದುಕೊಂಡು ಬನ್ನಿ’ ಎಂದು ಭಾರತಕ್ಕೆ ಆಜ್ಞಾಪಿಸಿತು. ಯಾರೂ ಊಹಿಸಲಾರದ ಇಂತಹ ಎಷ್ಟೋ ಶರತ್ತುಗಳನ್ನು ಬಲಾಢ್ಯ ದೇಶಗಳು, ಕಂಪನಿಗಳು ನಮ್ಮಂತಹ ಬಡ ದೇಶಗಳ ಮೇಲೆ ಹೇರುತ್ತಾ ಬಂದವು. ಇವರ ಮುಷ್ಟಿಯಲ್ಲಿ ಸಿಕ್ಕಿಕೊಂಡ ನಮ್ಮ ಸರ್ಕಾರ 2004ರಲ್ಲಿ ಒಂದು ಹೊಸ ಬೀಜ ಕಾಯಿದೆಯನ್ನು ತಂದಿತು. ಆ ಕಾಯಿದೆಯಲ್ಲಿ ರೈತರು ಬೀಜಗಳನ್ನು ಸಂರಕ್ಷಿಸುವ, ವಿನಿಮಯ ಮಾಡುವ, ಮಾರಾಟ ಮಾಡುವ, ಮರುಬಿತ್ತನೆ ಮಾಡುವ ಹಾಗಿಲ್ಲ’ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಜನರ ಉಗ್ರ ಹೋರಾಟದಿಂದ ಆಕಾಯಿದೆಯನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು. ಅದು ಮತ್ತೆ 2011ರಲ್ಲಿ ತಲೆಯೆತ್ತಿತು. ಆಗಲೂ ಹೀಗೆಯೇ ನಿಂತಿತು. ಮತ್ತೆ 2019ರಲ್ಲಿ ಮತ್ತಷ್ಟು ಹೊಸ ರೂಪ ಪಡೆದು ಬಂದದ್ದು ಇನ್ನೂ ತೂಗುಗತ್ತಿಯಾಗಿ ತೂಗುತ್ತಲೇ ಇದೆ.

ಹೊಸ ಬೀಜ ಕಾಯಿದೆ ಜಾರಿಗೆ ಬರದಿದ್ದರೂ ಕಾಲಕಾಲಕ್ಕೆ ಮಾಡಿಕೊಂಡ ಒಪ್ಪಂದಗಳು ಮತ್ತು ಜಾರಿಗೆ ತಂದ ಕಾನೂನುಗಳಿಂದಾಗಿ ಕಂಪನಿಗಳಿಗೆ ಬೀಜ ಕ್ಷೇತ್ರದ ಮೇಲೆ ಆಕ್ರಮಣ ಮಾಡಲು ಅವಕಾಶವಾಯಿತು. ಹೀಗಾಗಿ ಹಸಿರು ಕ್ರಾಂತಿಯ ನಂತರವೂ ನಮ್ಮ ಮಹಿಳೆಯರ ಕೈಯಲ್ಲೇ ಇದ್ದ 80%ರಷ್ಟು ಬೀಜ ಜಾಗತೀಕರಣಕ್ಕೆ ತೆರೆದುಕೊಂಡ ಮೇಲೆ ಸರ್ವನಾಶವಾದವು. ಮೊನ್ಸಾಂಟೊ ಕಂಪನಿ ಕುಲಾಂತರಿ ಬಿಟಿ ಹತ್ತಿ ಬೀಜ ಬಿಡುಗಡೆ ಮಾಡಿ ಪ್ರಪಂಚದಲ್ಲಿ ಬಹುತೇಕ ನೂರಕ್ಕೆ ನೂರು ಭಾಗ ಹತ್ತಿ ಬೀಜದಲ್ಲಿ ಏಕಸ್ವಾಮ್ಯ ಸ್ಥಾಪಿಸಿತು. ಅದರಿಂದ ನಮ್ಮಲ್ಲಿದ್ದ ಹತ್ತಾರು ಹತ್ತಿ ತಳಿಗಳು ಹೇಳ ಹೆಸರಿಲ್ಲದಂತೆ ಹೋಗಿಬಿಟ್ಟವು. ಹತ್ತಿಯನ್ನು ಸರ್ವನಾಶ ಮಾಡಿದ ಮೇಲೆ ಬದನೆಯನ್ನು ನಾಶಮಾಡಲು ಬಂದರು. ಯಾವ ದೇಶಕ್ಕೆ ಯಾವ ಬೆಳೆ ಮೂಲ ಬೆಳೆಯಾಗಿರುತ್ತೋ ಅದನ್ನು ಕುಲಾಂತರಿಗೊಳಿಸುವ ಹುನ್ನಾರ ಈ ಕಂಪನಿಗಳದ್ದು. ಬದನೆ ನಮ್ಮ ದೇಶದ ಬೆಳೆ. ಅದನ್ನು ಕುಲಾಂತರಿಗೊಳಿಸಿ ನಮ್ಮ ದೇಶದ ಬದನೆ ತಳಿ ವೈವಿಧ್ಯತೆಯನ್ನು ನಾಶಮಾಡುವುದು ಮೊನ್ಸಂಟೋ ಕಂಪನಿಯ ಹುನ್ನಾರವಾಗಿತ್ತು. ಅದನ್ನು ಕೂಡ ಹೋರಾಟದ ಮೂಲಕ ನಿಲ್ಲಿಸಲಾಯಿತು.

ಜೀವದ ವಿರುದ್ಧ ಸಮರ : ನಮ್ಮ ಮಹಿಳೆಯರು ಯಾವ ಪರಿಸರವನ್ನು, ಜೀವವನ್ನು ಕಾಪಾಡುತ್ತಾ ಬಂದಿದ್ದಾರೋ ಅದರ ವಿರುದ್ಧ ಸಮರ ಸಾರುತ್ತದೆ ಈ ಕಾರ್ಪೊರೆಟ್ ಕೈಗಾರಿಕಾ ಕೃಷಿ. ‘ಸಮರ’ ಅನ್ನುವುದನ್ನು ನಾನು ಇಲ್ಲಿ ನೇರ ಅರ್ಥದಲ್ಲೇ ಹೇಳುತ್ತಿದ್ದೇನೆ. ಏಕೆಂದರೆ ಕೈಗಾರಿಕಾ ರಾಸಾಯನಿಕ ಕೃಷಿಯಲ್ಲಿ ಬಳಸುವಂತಹ ರಸಗೊಬ್ಬರಗಳು ಎರಡನೇ ಮಹಾಯುದ್ಧದ ಸಿಡಿಮದ್ದು ಕಾರ್ಖಾನೆಯಿಂದ ನಂತರ ಬಂದಂತಹದ್ದು. ನಾವು ಬಳಸುವ ವಿಷಕಾರೀ ಕೀಟ ನಾಶಕಗಳು ಹಿಟ್ಲರನ ಕಾಲದಲ್ಲಿ ವಿಷಾನಿಲ ಕೋಣೆಗಳಲ್ಲಿ ಜನರನ್ನ ತಳ್ಳಿ ಸಾಯಿಸುತ್ತಿದ್ದರಲ್ಲ, ಆ ವಿಷದಿಂದ ಬಂದಂಥವು. ಇನ್ನು ಇಡೀ ಕರ್ನಾಟಕದ ಕಳೆ ವೈವಿಧ್ಯತೆಯನ್ನು ಸರ್ವನಾಶ ಮಾಡುತ್ತಿರುವಂತಹ ಕಳೆ ನಾಶಕ ‘ರೌಂಡಪ್’ ಅನ್ನುವುದು ವಿಯಟ್ನಾಮ್ ಯುದ್ಧದ ಕೂಸು. ವಿಯಟ್ನಾಂ ಯುದ್ಧದ ಸಮಯದಲ್ಲಿ ಆ ಯೋಧರು ಕಾಡಿನಲ್ಲಿ ಅಡಗಿಕೊಂಡು ಯುದ್ಧ ತಂತ್ರ ರೂಪಿಸುತ್ತಿದ್ದರು. ಅವರನ್ನು ಅನಾವರಣ ಮಾಡಲು ಆ ಕಾಡಿನ ಹಸಿರನ್ನು ನಾಶ ಮಾಡಲು ಅಮೆರಿಕದ ಸೈನಿಕರು ‘ಏಜೆಂಟ್ ಆರೆಂಜ್’ ಎನ್ನುವ ಕಾರ್ಕೋಟಕ ವಿಷ ಬಳಸುತ್ತಿದ್ದರು. ಆ ಏಜೆಂಟ್ ಆರೆಂಜ್‍ನ ಮೊಮ್ಮೊಗುವೇ ಈ ರೌಂಡಪ್. ಈ ದೃಷ್ಟಿಯಿಂದ ಕೈಗಾರಿಕಾ ಕೃಷಿ ನಮ್ಮ ಜೀವ ಮತ್ತು ಪರಿಸರದ ಮೇಲೆ, ನಮ್ಮ ಮಹಿಳೆಯರ ಮೇಲೆ ಸಾರಿರುವ ಸಮರವೇ ಆಗಿದೆ.

ಹೀಗೆ ಕೃಷಿಯನ್ನು ನಂಬಿ ಅದರ ಮೇಲೆ ಹಿಡಿತ ಇಟ್ಟುಕೊಂಡಿದ್ದಂಥ ಮಹಿಳೆಯರನ್ನ ಕಳೆದ 50-60 ವರ್ಷಗಳಲ್ಲಿ ಸಂಪೂರ್ಣ ಹೊರ ತಳ್ಳಿದ್ದಾಯಿತು. ಈ ಕಂಪನಿಗಳ ಹಾವಳಿ ನಮ್ಮ ಕೃಷಿಯನ್ನು ಕೃಷಿಯಾಗಿ ಉಳಿಯಲು ಬಿಡುತ್ತಿಲ್ಲ. ಮಂಡ್ಯ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಹೈಬ್ರಿಡ್ ಬೀಜಗಳ ಹಾವಳಿ ಸ್ವಲ್ಪ ಕಡಿಮೆ ಇರಬಹುದು(ತರಕಾರಿಗಳನ್ನು ಹೊರತುಪಡಿಸಿ). ಉತ್ತರ ಕರ್ನಾಟಕದ ರೈತರು ಬಿತ್ತುವ ಪ್ರತಿ ಬೀಜ ಮೊನ್ಸಾಂಟೋ(ಬಾಯರ್), ಸಿಜೆಂಟಾ, ಅಡ್ವಾಂಟ, ಪಯೋನಿಯರ್, ಪಿನಾಕಲ್ ಇಂತಹ ಕಂಪನಿಗಳ ಬೀಜಗಳೇ. ಹೇಳಬೇಕೆಂದರೆ, ನಮ್ಮಲ್ಲಿ ಮೊದಲು ರೈತರ ಆತ್ಮಹತ್ಯೆ ಎನ್ನುವುದು ಇರಲಿಲ್ಲ. ಅಲ್ಲೊಂದು-ಇಲ್ಲೊಂದು ಆತ್ಮಹತ್ಯೆ ಆಗುತ್ತಿತ್ತು, ಆದರೆ ಬೆಳಕಿಗೆ ಬರತ್ತಿರಲಿಲ್ಲ. ರೈತರ ಆತ್ಮಹತ್ಯೆ ಎನ್ನುವ ಪರಿಕಲ್ಪನೆ ಬಂದಿದ್ದೇ 90ರ ದಶಕದ ನಂತರದಲ್ಲಿ. ಯಾವಾಗ ಕಂಪನಿಗಳ ಹಿಡಿತಕ್ಕೆ ನಮ್ಮ ಕೃಷಿ ಸಿಕ್ಕಿಕೊಂಡಿತೋ ಆಗಲೇ ಆತ್ಮಹತ್ಯೆಗಳು ಪ್ರಾರಂಭವಾದವು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡವರು ಬಿಟಿ ಹತ್ತಿ ಬೆಳೆದ ರೈತರೇ. ಬೆಂಗಳೂರಿನಲ್ಲಿ ಕಾರ್ಗಿಲ್ ಕಂಪನಿ ಮೇಲೆ ಪ್ರೊ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ರೈತ ಸಂಘಟನೆ ದಾಳಿ ಮಾಡಿದಾಗ ಬಹಳ ದೊಡ್ಡ ಸುದ್ದಿಯಾಯಿತು. ಆದರೆ ನಮ್ಮ ಇಂತಹ ಹೋರಾಟಗಳು ಸಾಂಕೇತಿಕ ಹಂತಕ್ಕೇ ಸೀಮಿತಗೊಂಡವು. ಕೆಲವೇ ವರ್ಷದಲ್ಲಿ ಕಂಪನಿ ಬೀಜಗಳು ನಮ್ಮ ಕೃಷಿಯನ್ನು ಇಡಿಯಾಗಿ ಆಕ್ರಮಿಸುವ ಸ್ಥಿತಿ ಬಂದಿತು. ಇಲ್ಲೆಲ್ಲಾ ಅತೀ ಉತ್ಪಾದನೆಯದೇ ಜಾದೂ. ಉತ್ಪಾದನೆ ಬೇಕು. ಆದರೆ ಅದಕ್ಕೆ ತಕ್ಕ ಲಾಭ ಸಿಕ್ಕಾಗ ಮಾತ್ರ ಅದಕ್ಕೆ ಕಿಮ್ಮತ್ತು. ತೋಟಗಾರಿಕೆ ಸಂಶೋಧನಾ ಕೇಂದ್ರದವರು ‘ಆರ್ಕ’ ಅನ್ನುವ ಟೊಮಾಟೊ ಬೀಜ ಬಿಡುಗಡೆ ಮಾಡಿದರು. ಅದು ಎಕರೆಗೆ 40 ಟನ್ ಇಳುವರಿ ಕೊಟ್ಟಿತು. ರೈತರಿಗೆ ಸಿಕ್ಕಿದ್ದು ಕೆಜಿಗೆ 4 ಪೈಸೆ! ಇಡೀ ದೇಶಕ್ಕೆ ಭತ್ತ, ಗೋಧಿ ಬೆಳೆದು ಉಣಿಸುವ ಹಸಿರು ಕ್ರಾಂತಿಯ ತೊಟ್ಟಿಲು ಪಂಜಾಬ್ ರಾಜ್ಯದ ಸ್ಥಿತಿ ಏನಾಗಿದೆ? ಪಂಚನದಿಗಳ ಸ್ವರ್ಗವಾಗಿದ್ದ ಪಂಜಾಬಿನಿಂದ ಈಗ ಪ್ರತಿನಿತ್ಯ ಕ್ಯಾನ್ಸರ್ ರೈಲು ದೆಹಲಿಗೆ ಹೋಗುತ್ತಿದೆ. ಮನೆಮನೆಗೂ ಟ್ರಾಕ್ಟರ್. ಪ್ರತಿ ರೈತರು ಸಾಲದಲ್ಲಿ ಮುಳುಗಿದ್ದಾರೆ. ಆತ್ಮಹತ್ಯೆ ನಿತ್ಯದ ಆಗುಹೋಗಿನ ಭಾಗವಾಗಿದೆ. ಅತಿ ಉತ್ಪಾದನೆ ಎನ್ನುವುದು ವರಕ್ಕಿಂತ ಶಾಪವೇ ಸರಿ. ಒಂದೇ ಬೆಳೆಯನ್ನು ಏಕಬೆಳೆಯಾಗಿ ಕೈಗಾರಿಕಾ ಕೃಷಿಯಲ್ಲಿ ಬೆಳೆದ ದೇಶಗಳ ಪರಿಸ್ಥಿತಿ ಇದೇ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಬಂದಾಗ ಅವರು ಸ್ಪಷ್ಟವಾಗಿ ಇಟ್ಟುಕೊಂಡಿದ್ದ ಅಜೆಂಡಾ ಎಂದರೆ, ತಮ್ಮ ದೇಶದಲ್ಲಿ ಏಕಬೆಳೆಯಾಗಿ ಬೆಳೆದು ಪರ್ವತೋಪಾದಿಯಲ್ಲಿ ರಾಶಿ ಬಿದ್ದಿರುವ ಮೆಕ್ಕೆ ಜೋಳ, ಸೋಯಾ ಅವರೆಗಳನ್ನು ಭಾರತಕ್ಕೆ ರಫ್ತು ಮಾಡಲು ಅಗತ್ಯವಾದ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳುವುದು.

ಹೀಗಿದ್ದೂ ನಮ್ಮ ಮಹಿಳೆಯರು ನಮ್ಮ ಕೃಷಿಯನ್ನು ಕಂಪನಿಗಳ ಹಿಡಿತಕ್ಕೆ ಬಿಟ್ಟುಕೊಡದೆ ಸ್ವತಂತ್ರವಾಗಿ ಉಳಿಸಿಕೊಂಡು ಹೋಗಲು ಹೆಣಗಾಟ ನಡೆಸಿದ್ದಾರೆ. ಬೀಜ ಕಾಪಾಡುವುದನ್ನು, ಬಹು ಬೆಳೆ ಪದ್ಧತಿಯನ್ನು ಜೀವಂತವಾಗಿ ಉಳಿಸಿಕೊಂಡಿರುವ ಮಹಿಳೆಯರಲ್ಲಿ ಇವತ್ತಿಗೂ ಪ್ರತಿಯೊಂದು ಬೀಜಗಳೂ ಭದ್ರವಾಗಿವೆ. ಭದ್ರಮ್ಮನಂಥವರ, ಪುಟ್ಟೀರಮ್ಮನಂಥವರ ಸಂತತಿಗಳು ಅದನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನೀರಾವರಿ ಬೇಸಾಯದಲ್ಲಿ ಏಕಬೆಳೆ, ಹೈಬ್ರಿಡ್ ಬೀಜಗಳು ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದರೂ ಮಳೆಯಾಶ್ರಿತ ಬೇಸಾಯದಲ್ಲಿ ಮಾತ್ರ ಆಹಾರ ಬೆಳೆಗಳ, ಬಹುಬೆಳೆಗಳ ಬೇಸಾಯ ಇಂದಿಗೂ ವ್ಯಾಪಕವಾಗಿ ನಡೆದಿದೆ. ಇದರ ವಾರಸುದಾರರು ಮಹಿಳೆಯರೇ. ಇದನ್ನು ಪೋಷಿಸಿ ಬೆಳೆಸುವ ಕೆಲಸದಲ್ಲಿ ಸರ್ಕಾರಗಳು, ಜನಾಂದೋಲನಗಳು ಕಾರ್ಯೋನ್ಮುಖರಾಗುವುದು ಇಂದಿನ ಅಗತ್ಯವಾಗಿದೆ.

ಆಸ್ತಿ ಹಕ್ಕು, ಸಮಾನ ಕೂಲಿ : ಇನ್ನು ಮಹಿಳೆಯರ ಆಸ್ತಿಯ ವಿಷಯಕ್ಕೆ ಬಂದರೆ, 1956ರಲ್ಲಿ ಬಂದ ಆಸ್ತಿ ಹಕ್ಕಿನ ಕಾಯ್ದೆಗೆ 2004ರಲ್ಲಿ ತಿದ್ದುಪಡಿ ತಂದ ನಂತರ 17, 18 ಕೋಟಿ ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಸಿಕ್ಕಿತು. ಆದರೆ ಇವತ್ತಿಗೂ ಒಟ್ಟು ಕುಟುಂಬಗಳಲ್ಲಿ ಆಸ್ತಿ ಪಾಲಾಗಿ ಗಂಡನ ಹೆಸರಿಗೆ ಬಂದಿದ್ದರೆ ಮಾತ್ರ ಆ ಹೆಣ್ಣು ಮಕ್ಕಳಿಗೆ ಅವನ ನಂತರ ಆಸ್ತಿ ಹಕ್ಕು ಸಿಗುತ್ತದೆ. ಆದರೆ ಒಂಟಿಯಾಗಿ ಕುಟುಂಬಗಳನ್ನು ನಡೆಸಿಕೊಂಡು ಹೋಗುತ್ತಿರುವ ವಿಧವೆಯರಿಗೆ ( ಅವರು ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರು ಮಾತ್ರವಲ್ಲ, ಅವರು 2% ಇದ್ದರೆ, ಉಳಿದವರು 30% ಇದ್ದಾರೆ) ಆಸ್ತಿ ಹಕ್ಕು ಅನ್ನುವುದು ಕನಸಾಗಿದೆ.

ನಮ್ಮಲ್ಲಿ ಉದ್ಯೋಗ ಖಾತ್ರಿ ಬಿಟ್ಟರೆ ಬೇರೆ ಎಲ್ಲೂ ಮಹಿಳೆಯರಿಗೆ ಸಮಾನ ಕೂಲಿ ಅನ್ನುವುದಿಲ್ಲ. ವಿಪರ್ಯಾಸವೆಂದರೆ, ಉದ್ಯೋಗ ಖಾತ್ರಿ ಕಾಯಿದೆಯಡಿಯಲ್ಲಿ ನಮ್ಮ ಕೆಲಸದ ಹಕ್ಕನ್ನು ನಾವು ಹೋರಾಟ ಮಾಡಿ ಪಡೆಯಬೇಕಾಗಿದೆ.

ಮಹಿಳೆಯರಿಗೆ ಭೂಮಿ ಗುತ್ತಿಗೆ? : ಕೃಷಿ ಭೂಮಿಗಳು ಛಿದ್ರವಾಗುತ್ತಿವೆ, ತುಂಡು ಭೂಮಿಗಳು ಉತ್ಪಾದನಾಶೀಲವಾಗಿಲ್ಲ, ನೀವು ಭೂಮಿ ಬಿಟ್ಟು ಹೋಗಿ ಎಂದು ನಮ್ಮ ಸರ್ಕಾರಗಳು ಸಣ್ಣ ರೈತರಿಗೆ ಹೇಳುತ್ತಿವೆ. ಕೃಷಿ ಬಿಟ್ಟು ಮಹಿಳೆಯರು ಎಲ್ಲಿಗೆ ಹೋಗಬೇಕು? ಗಾರ್ಮೆಂಟ್ಸ್‍ಗಳಿಗೆ, ನಗರಗಳಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಿಗೆ ಅಗ್ಗದ ಕೂಲಿಗೆ ತಮ್ಮ ಶ್ರಮವನ್ನು ಮಾರಿಕೊಳ್ಳಬೇಕಷ್ಟೆ. ಇಲ್ಲಿ ಇನ್ನೊಂದು ವಿಚಾರವೂ ಇದೆ. ಕರ್ನಾಟಕದಲ್ಲಿ 40 ಲಕ್ಷ ಎಕರೆ ಕೃಷಿ ಭೂಮಿಯನ್ನು ರೈತರು ಭೂಮಿ ಪಾಳು ಬಿಟ್ಟಿದ್ದಾರೆ ಎಂದು ಕೃಷಿ ಬೆಲೆ ಆಯೋಗದ ಒಂದು ಅಧ್ಯಯನ ಹೇಳುತ್ತದೆ. ಕೇವಲ ನೂರು ರೂಪಾಯಿಗೆ ದಿನವಿಡೀ ದುಡಿಯುವ ನಮ್ಮ ಮಹಿಳೆಯರಿಗೆ ಈ ಭೂಮಿಗಳನ್ನು ದೀರ್ಘ ಕಾಲಿಕ ಗುತ್ತಿಗೆಗೆ ಕೊಡುವಂತಹ ತೀರ್ಮಾನವನ್ನು ಸರ್ಕಾರ ಏಕೆ ತೆಗೆದುಕೊಳ್ಳಬಾರದು? ಅದನ್ನು ಮಹಿಳೆಯರು ವೈಯಕ್ತಿಕವಾಗಿಯೂ, ಗುಂಪು ಕೃಷಿಯಾಗಿಯೂ ಮಾಡುವ ಅವಕಾಶವನ್ನು ಏಕೆ ಒದಗಿಸಬಾರದು? ಇಂದು ರೈತರು ತಮ್ಮ ತಮ್ಮಲ್ಲೇ ಗುತ್ತಿಗೆಗೆ ಭೂಮಿ ಕೊಟ್ಟುಕೊಳ್ಳುತ್ತಾರೆಯೇ ಹೊರತು ಭೂ ರಹಿತರಿಗೆ, ಮಹಿಳೆಯರಿಗೆ ಕೊಡಲು ಒಪ್ಪುವುದಿಲ್ಲ. ಹೀಗಿರುವಾಗ ‘ಕರ್ನಾಟಕ ಭೂ ಸುಧಾರಣಾ ಕಾಯಿದೆ’ಗೆ ಒಂದು ತಿದ್ದುಪಡಿ ತಂದು ಇದನ್ನು ಭೂ ರಹಿತ ಮಹಿಳೆಯರಿಗೆ, ತುಂಡು ಭೂಮಿ ಹೊಂದಿದ ಮಹಿಳೆಯರಿಗೆ ಗುತ್ತಿಗೆಗೆ ಕೊಡಲು ಕಾನೂನಿನ ಚೌಕಟ್ಟು ತರಬೇಕೆಂದು ನಾವು ಸರ್ಕಾರವನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಸರ್ಕಾರ ಮಾತ್ರ ರೈತರ ಭೂಮಿಯನ್ನು ಬಂಡವಾಳಿಗರಿಗೆ ಸುಲಭವಾಗಿ ಸಿಗುವಂತೆ ಮಾಡುವ ತಿದ್ದುಪಡಿ ತಂದಿದೆ. ಕೇಂದ್ರ ಸರ್ಕಾರ ನೀತಿ ಆಯೋಗದ ಮೂಲಕ ‘ಹೊಸ ಗುತ್ತಿಗೆ ಕಾಯಿದೆ-2016’ ತಂದಿತಾದರೂ ಕಾರ್ಪೊರೆಟ್ ಕಂಪನಿಗಳಿಗೆ ಭೂಮಿ ಗುತ್ತಿಗೆ ಪಡೆಯುವ ಅವಕಾಶಕ್ಕೆ ಇದನ್ನು ಬಳಸಲಾಯಿತು.

ಇಂತಹ ವಿಷಮ ಸನ್ನಿವೇಶದಲ್ಲೇ ಕೆಲಸ ಮಾಡುತ್ತಾ, ನಾವು ನಮ್ಮ ಬೀಜವನ್ನು, ಕಳೆಯನ್ನು ನಮ್ಮ ಆಸ್ತಿಯಾಗಿ ಉಳಿಸಿಕೊಳ್ಳಬೇಕಾಗಿದೆ. ನೀವು ಒಕ್ಕೂಟದಿಂದ ಪ್ರತಿ ವರ್ಷ ಮಹಿಳೆಯರಿಗೆ ಬೀಜ ಕೊಡುವುದು ಉತ್ತಮ ಕಲ್ಪನೆ. ಒಂದು ಬೀಜ ನಮ್ಮ ಕೈಯಲ್ಲಿ ಇತ್ತೆಂದರೆ, ನಮ್ಮ ಚರಿತ್ರೆಯನ್ನು ಉಳಿಸಿಕೊಳ್ಳಲು ಸಾಧ್ಯ, ನಮ್ಮ ಸ್ವತಂತವನ್ನು ಉಳಿಸಿಕೊಳ್ಳಲು ಸಾಧ್ಯ , ನಮ್ಮ ಕಲ್ಪನಾ ಶಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಬೀಜ ಪಡೆದು ಪ್ರತಿ ಮನೆಯಲ್ಲಿ ಬಿತ್ತೋಣ. ಈ ಒಂದು ಬೀಜವೇ ನಮ್ಮನ್ನು ಸರ್ವನಾಶ ಮಾಡಲು ಹೊರಟಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಸಾರುವ ಸಮರವಾದೀತು. ನಮ್ಮ ಬೀಜವನ್ನು ಉಳಿಸಿಕೊಳ್ಳೋಣ. ಕಳೆಯನ್ನು ಉಳಿಸಿಕೊಳ್ಳೋಣ.

 

Donate Janashakthi Media

Leave a Reply

Your email address will not be published. Required fields are marked *