ಬೆಂಗಳೂರು: ಏಪ್ರಿಲ್ 20ರ ರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು ಇಡೀ ದೇಶದ ಜನತೆಯಲ್ಲಿ ತೀವ್ರ ನಿರಾಸೆಗೊಳಿಸಿದ್ದಾರೆ. ಕಳೆದ ವರ್ಷ ಆರಂಭವಾದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರಧಾನಿ ಏನೂ ಪಾಠ ಕಲಿಯಲಿಲ್ಲ ಎಂಬುದು ಸಾಬೀತಾಗಿದೆ.
ಈಗಾಗಲೇ ಕೋವಿಡ್ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಕೃಷಿ ಕೂಲಿಕಾರರು ಏಪ್ರಿಲ್ 30 ರಂದು ದೇಶಾದ್ಯಂತ ಪ್ರತಿಭಟನಾ ದಿನ ಆಚರಿಸಲು ಕರೆ ನೀಡಿವೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘವು ಸರಕಾರವು ಜನತೆ ಮೂಲಭೂತ ಸಮಸ್ಯೆಗಳ ಪರಿಹಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ
ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಷ್ಟ್ರೀಯ ಪದಾಧಿಕಾರಿ ಸಭೆಯು ಏಪ್ರಿಲ್ 21ರಂದು ಸೇರಲಾಗಿತ್ತು. ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ನಿರುಪಯುಕ್ತವಾಗಿವೆ ಎಂದು ಠೀಕಿಸಿದೆ. ಉಚಿತ ಲಸಿಕೆ, ಉಚಿತ ಪಡಿತರ, ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕೆಲಸ, ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ತೆರಿಗೆ ವ್ಯಾಪ್ತಿ ಹೊರಗಿನ ಕುಟುಂಬಗಳಿಗೆ ತಿಂಗಳಿಗೆ ರೂ. 7,500 ನೆರವು ಕೊಡಲು ಒತ್ತಾಯಿಸಿ ಏಪ್ರಿಲ್ 30ರಂದು ದೇಶಾದ್ಯಂತ ಪ್ರತಿಭಟನಾ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಸೋಂಕನ್ನು ನಿವಾರಿಸಲು ಗುಣಮಟ್ಟದ ವೆಂಟಿಲೇಟರ್‌ಗಳನ್ನು ಸ್ಥಾಪಿಸಲಿಲ್ಲ. ಅಗತ್ಯವಿರುವಷ್ಟು ಆಕ್ಸಿಜನ್ ಉತ್ಪಾದನೆಗೆ ಗಂಭೀರ ಪ್ರಯತ್ನ ಮಾಡಲಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯವಿರುವಷ್ಟು ಹಾಸಿಗೆಗಳನ್ನು ಒದಗಿಸಲಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಇದನ್ನು ಓದಿ: ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು
ಇಂತಹ ಗಂಭೀರ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಉಚಿತ ಮತ್ತು ಸಾರ್ವತ್ರಿಕ ಲಸಿಕಾ ವಿತರಣೆಗೆ ಮುಂದಾಗುವ ಬದಲು ತನ್ನ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್ ದರ ರೂ. 400/- ಮತ್ತು ಖಾಸಗಿ ಅಸ್ಪತ್ರೆಗಳಲ್ಲಿ ಅದು ರೂ. 600/- ಆಗಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಕೊರತೆಯನ್ನು ಸೃಷ್ಟಿಮಾಡಿ ಬಡವರ ಕೈಗೆಟುಕದಂತೆ ಮಾಡಲಾಗಿದೆ.
ಆಕ್ಸಿಜನ್ ಮತ್ತು ಅಗತ್ಯ ಔಷದಿಗಳ ಕೊರತೆ, ಪರೀಕ್ಷೆ ಮಾಡಿ ವರದಿ ಕೊಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ಲಾಕ್‌ಡೌನ್, ಕರ್ಪ್ಯೂದಂತಹ ಕ್ರಮಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಸಂದರ್ಭದಲ್ಲಿ ಪ್ರಧಾನಮಂತ್ರಿ ದೇಶದ ಜನತೆಗೆ ಅಗತ್ಯ ಪರಿಹಾರ ಒದಗಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಪ್ರಧಾನಿಯವರ ಇಡೀ ಭಾಷಣ ನಿರುಸ್ಸಾಹ ಉಂಟು ಮಾಡಿತ್ತು.
ಬಡವರಿಗೆ, ಕೃಷಿ ಕೂಲಿಕಾರರಿಗೆ ದುಬಾರಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದು. ಸರ್ಕಾರಿ ಆಸ್ಪತ್ರೆಗಳು ಮತ್ತು ಪರೀಕ್ಷಾ ಕೇಂದ್ರಗಳಿಗೆ ಕೊರೊನಾ ಪತ್ತೆ ಹಚ್ಚುವ ಜನರ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಇದರಿಂದಾಗಿ ಕಾಯಿಲೆಯ ಲಕ್ಷಣಗಳಿದ್ದರೂ ಪರೀಕ್ಷೆಗೆ ಒಳಪಡಲು ಆಗುತ್ತಿಲ್ಲ ಎಂದು ಸಂಘಟನೆ ಆರೋಪ ಮಾಡಿದೆ.
ಇದನ್ನು ಓದಿ: ‘ವಿಚಾರವಂತರು ಯೋಚಿಸಬೇಕಾದ್ದು’..
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡವರು ಸಾಮಾನ್ಯವಾಗಿ ಒಂದೇ ಕೋಣೆಯನ್ನು ಹೊಂದಿರುವ ಸಣ್ಣ ಮನೆಗಳಲ್ಲಿ ವಾಸ ಇರುತ್ತಾರೆ. ಅವರಲ್ಲಿ ಕಾಯಿಲೆ ಪೀಡಿತರಿಗೆ ಕ್ವಾರೆಂಟೈನ್ ಮಾಡಿಕೊಂಡಿರಲು ಸಾಧ್ಯವಾಗುವುದಿಲ್ಲ. ಅಂತವರಿಗೆ ಸರ್ಕಾರ ಒಳ್ಳೆಯ ಗುಣಮಟ್ಟದ ಕ್ವಾರೆಂಟೈನ್ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು.
ಸಂಘಟನೆ ಮೂಲಕ ಪ್ರಮುಖವಾದ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಿದ್ದು ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿವೆ.
- ಎಲ್ಲರಿಗೂ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ವಿತರಣೆ.
- ಗುಣಮಟ್ಟದ ಸೌಕರ್ಯಗಳನ್ನು ಹೊಂದಿನ ಕ್ವಾರೆಂಟೈನ್ ಕೇಂದ್ರಗಳು.
- ರಾಜ್ಯ ಹಾಗೂ ಹೊರ ರಾಜ್ಯಗಳ ಎಲ್ಲರಿಗೂ ಉಚಿತ ಆರ್‌ಟಿ-ಪಿಸಿಟಿ ಪರೀಕ್ಷೆಗಳು ಮತ್ತು ಉಚಿತ ಔಷಧಿಗಳು.
- ಎಲ್ಲಾ ಕುಟುಂಬಗಳ ಪ್ರತಿಯೊಬ್ಬ ಸದಸ್ಯ / ಸದಸ್ಯಳಿಗೆ / ತಿಂಗಳಿಗೊಮ್ಮೆ ತಲಾ 10 ಕೆ.ಜಿ. ಆಹಾರ ದಾನ್ಯ (ಅಕ್ಕಿ / ಗೋಧಿ) ಮತ್ತು ಎಣ್ಣೆ ಹಾಗೂ ಬೇಳೆ ಇತ್ಯಾದಿ.
- ತೆರಿಗೆ ವ್ಯಾಪ್ತಿ ಹೊರಗೆ ಇರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ. 7500/- ಆರ್ಥಿಕ ನೆರವು.
- ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ಮಾಡುವವರಿಗೆ ವರ್ಷಕ್ಕೆ 200 ದಿನಗಳ ಕೆಲಸ ಮತ್ತು ರೂ. 600/- ದಿನಗೂಲಿ.
- ವಲಸೆ ಕಾರ್ಮಿಕರರಿಗೆ ಸರಿಯಾದ ಸಾರಿಗೆ ವ್ಯವಸ್ಥೆ.
ಸಂಘಟನೆಯ ಪರವಾಗಿ ಅಖಿಲ ಭಾರತ ಅಧ್ಯಕ್ಷರಾದ ಎ. ವಿಜಯರಾಘವನ್, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ್, ಕರ್ನಾಟಕ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಅವರು ಹೇಳಿಕೆಯನ್ನು ನೀಡಿದ್ದಾರೆ.