ಕೃಷಿ ಕಾಯಕ ಮತ್ತು ಅದರ ಕಾರ್ಪೊರೇಟೀಕರಣ

ಸ್ವಾತಂತ್ರ್ಯೋತ್ತರ ಭಾರತವು ಕಂಡು-ಕೇಳರಿಯದ ರೀತಿಯಲ್ಲಿ-ಪ್ರಮಾಣದಲ್ಲಿ ರೈತರು ಸರ್ಕಾರದ ವಿರುದ್ಧ ಮತ್ತು ಕೃಷಿಗೆ ಸಂಬಂಧಿಸಿದ ಹೊಸ ಶಾಸನಗಳ ವಿರುದ್ಧ ಸಿಡಿದೆದ್ದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರಕಾರವಿದ್ದರೂ ಅದು ಸತ್ತಂತಿದೆ. ಜನರ ಬದುಕು-ಬವಣೆಗಳಿಗೆ ಅದು ಸ್ಪಂದಿಸುತ್ತಿಲ್ಲ. ಇಂದು ನಮ್ಮ ಮುಂದಿರುವ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು.

  1. ಒಕ್ಕೂಟ ವ್ಯವಸ್ಥೆಗೆ ಕೃಷಿ ಕಾನೂನುಗಳ ಮೂಲಕ ಸರ್ಕಾರವು ತಿಲಾಂಜಲಿ ನೀಡುತ್ತಿದೆ. ರಾಜ್ಯಗಳ ಅಧಿಕಾರಗಳನ್ನೆಲ್ಲ ಮೊಟಕುಗೊಳಿಸುತ್ತಿರುವುದರಿಂದ (ಜಿಎಸ್‌ಟಿ ಮೂಲಕ ತೆರಿಗೆ ವಿಧಿಸುವ ಅಧಿಕಾರದಿಂದ ವಂಚನೆ, ಕೃಷಿಯನ್ನು ಸಂವಿಧಾನದ ರಾಜ್ಯಪಟ್ಟಿಯಿಂದ ತೆಗೆದು ಸಂಯುಕ್ತಪಟ್ಟಿಗೆ ಸೇರಿಸುವ ಹುನ್ನಾರ, ಶಿಕ್ಷಣವನ್ನು ಕೇಂದ್ರವೇ ನಿರ್ವಹಿಸಲು ಪ್ರಯತ್ನಿಸುತ್ತಿರುವುದರಿಂದ ದೇಶೀ ಭಾಷೆಗಳಿಗೆ ಕುತ್ತು ಮುಂತಾದವು) ಜನರ ಸಮಸ್ಯೆಗಳನ್ನು ನಿರ್ವಹಿಸುವ ಸ್ಥಿತಿಯಲ್ಲಿ ರಾಜ್ಯಗಳಿಲ್ಲ. ಏಕೆಂದರೆ ರಾಜ್ಯಗಳ ಬಳಿಯಲ್ಲಿ ಸಂಪನ್ಮೂಲವಿಲ್ಲ (ಎಲ್ಲವನ್ನು ಕೇಂದ್ರವು ಲಪಟಾಯಿಸುತ್ತಿದೆ), ಅಧಿಕಾರವಿಲ್ಲ(ಸಂವಿಧಾನವು ನೀಡಿರುವ ಹಕ್ಕುಗಳನ್ನೆಲ್ಲ ಕೇಂದ್ರವು ಪರೋಕ್ಷವಾಗಿ ಕಸಿದುಕೊಳ್ಳುತ್ತಿದೆ) ಮತ್ತು ರಾಜಕೀಯ ಇಚ್ಚಾಶಕ್ತಿ ಕೊರತೆ(ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರದಿಂದ ರಾಜ್ಯಮಟ್ಟದಲ್ಲಿನ ರಾಜಕೀಯ ಧುರೀಣರು ಕೇಂದ್ರವನ್ನು ಪ್ರಶ್ನೆ ಮಾಡುವ ನೈತಿಕೆಯನ್ನೇ ಕಳೆದುಕೊಂಡಿದ್ದಾರೆ)ಕಾರಣದಿಂದ ರಾಜ್ಯಗಳು ಕೇಂದ್ರದ ಗುಲಾಮಸ್ಥಿತಿಗೆ ಬಂದಿರುವಂತೆ ಕಾಣುತ್ತಿದೆ. ನಮ್ಮ ಸಂವಿಧಾನ ನಮಗೆ ನೀಡಿರುವ ಒಕ್ಕೂಟ ತತ್ವಕ್ಕೆ ಇಂದು ತೀವ್ರ ಧಕ್ಕೆಯುಂಟಾಗಿದೆ.
  2. ನಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆಲ್ಲ ಪರಿಹಾರ ಖಾಸಗೀಕರಣ-ಕಾರ್ಪೋರೇಟೀಕರಣ-ಮಾರ್ಕೆಟೀಕರಣ ಎಂದು ಒಕ್ಕೂಟ(ಕೇಂದ)ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಒಪ್ಪಿಕೊಂಡು ಅಂತಹ ನೀತಿಗಳನ್ನು ಅಳವಡಿಸಿಕೊಳ್ಳುತ್ತಿವೆ. ಅಸಮಾನತೆಯನ್ನು, ಬಡತನವನ್ನು, ನಿರುದ್ಯೋಗವನ್ನು, ಹಸಿವನ್ನು ಇವು ಹೆಚ್ಚಿಸುತ್ತವೆ ಎಂಬುದನ್ನು ಥಾಮಸ್ ಪಿಕೆಟ್ಟಿ, ಪಾಲ್ ಕೃಗ್‌ಮನ್, ಜೊಸೆಪ್ ಸ್ಟಿಗ್‌ಲಿಟ್ಜ, ಅಭಿಜಿತ್ ಬ್ಯಾನರ್ಜಿ, ಅಮರ್ತ್ಯ ಸೆನ್ ಮುಂತಾದ ಅರ್ಥವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾರುತ್ತಿದ್ದಾರೆ.
  3. ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅನುಮತಿ ನೀಡಿ ಎಪಿಎಮ್‌ಸಿ ನಿರ್ನಾಮ ಮಾಡುತ್ತಿರುವಂತೆ ಕನಿಷ್ಠ ಬೆಂಬಲ ಬೆಲೆ(ಎಮ್‌ಎಸ್‌ಪಿ) ವ್ಯವಸ್ಥೆಯನ್ನು ಆ ಮೂಲಕ ಪಡಿತರ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸಲಾಗುತ್ತಿದೆ.
  4. ಭೂಸುಧಾರಣಾ ಕಾಯಿದೆಗೆ (1961 ಮತ್ತು 1974ರ ತಿದ್ದುಪಡಿ)2020ರಲ್ಲಿ ತಿದ್ದುಪಡಿ ತಂದು ಬಂಡವಾಳಶಾಹಿಗಳಿಗೆ ಎಲ್ಲ ಅವಕಾಶ, ಸವಲತ್ತು ಮತ್ತು ರಕ್ಷಣೆ ನೀಡಿ ‘ಕೃಷಿ ಕೃಷಿಕರಿಗೆ ಮಾತ್ರವಲ್ಲ’ ಎಂಬ ಹೊಸ ನಾಣ್ಣುಡಿಯನ್ನು ಘೋಷಿಸಿ ಕೃಷಿಕರನ್ನು ಬೀದಿಗೆ ಬೀಳುವಂತೆ ಮಾಡಲಾಗುತ್ತಿದೆ.
  5. ಪರಿಸರ ಮತ್ತು ಹವಾಮಾನ ಬದಲಾವಣೆ ಬಗ್ಗೆ ಒಕ್ಕೂಟ-ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕೃಷಿ ಭೂಮಿ, ನೀರು, ಗಾಳಿ ಮಾಲಿನ್ಯದಿಂದ ಕೃಷಿಕರ ಬದುಕು ಅಪಾಯಕ್ಕೆ ಸಿಲುಕಿದೆ.
  6. ಎಪಿಎಮ್‌ಸಿಗಳನ್ನು ಅಪ್ರಸ್ತುತಗೊಳಿಸಿ ರೈತರಿಗೆ ‘ಸ್ವಾತಂತ್ರ್ಯ’ ನೀಡಲಾಗಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯದ ಅರ್ಥವೇ ಇವರಿಗೆ ಗೊತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಉಳ್ಳವರು ಮತ್ತು ಉಳಿದವರ ನಡುವೆ ಯಾರಿಗೆ ಸ್ವಾತಂತ್ರ್ಯವನ್ನು ಚಲಾಯಿಸಲು ಸಾಧ್ಯ? ಬಂಡವಾಳಶಾಹಿಗಳಿಗೆ, ವ್ಯಾಪಾರಿ-ವಾಣಿಜ್ಯೋದ್ಯಮಿಗಳಿಗೆ, ಕಾರ್ಪೋರೇಟು ಕುಳಗಳಿಗೆ ಮಾತ್ರ ಈ ಕೃಷಿ ಕಾನೂನುಗಳು ಸ್ವಾತಂತ್ರ್ಯ ನೀಡುತ್ತವೇ ವಿನಾ ಅತಿಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ರೈತರಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೆ ಇದೊಂದು ಭ್ರಮಾತ್ಮಕ ಸ್ವಾತಂತ್ರ್ಯವನ್ನು ನೀಡಬಲ್ಲದು.
  7. ರಾಜ್ಯ ವಿಧಾನಸಭೆಯಲ್ಲಿ ಸಕಾರವು ರಾಜಾರೋಷವಾಗಿ ‘ಯಾರು ಬೇಕಾದರೂ ಕೃಷಿ ಮಾಡಬಹುದು’ ಎಂದು ಘೋಷಿಸಿದೆ. ಇದಕ್ಕಾಗಿ ಕರ್ನಾಟಕ ಭೂಸುಧಾರಣಾ ಕಾಯಿದೆಯ ಸೆಕ್ಷನ್ 79(ಎ) ಮತ್ತು (ಬಿ)ಗಳನ್ನು ನಿರಸನಗೊಳಿಸಿ ರಿಯಲ್ ಎಸ್ಟೇಟ್‌ನವರು, ವಾಣಿಜ್ಯೋದ್ಯಮಿಗಳು, ಕಪ್ಪುಹಣದ ದಳ್ಳಾಳಿಗಳು, ಮಠಗಳು-ಸ್ವಾಮಿಗಳು ಮುಂತಾದವರಿಗೆ ಕೃಷಿ ಭೂಮಿಯನ್ನು ವರಮಾನದ ಮಿತಿಯಲ್ಲದೆ ಕೊಳ್ಳಲು ಅವಕಾಶ ನೀಡಲಾಗಿದೆ.
  8. ನಮ್ಮ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಸಾಗುವಳಿಗಾರರ ಸಂಖ್ಯೆ 65.80 ಲಕ್ಷವಾದರೆ ಭೂರಹಿತ ಕೃಷಿ ಕಾರ್ಮಿಕರ ಸಂಖ್ಯೆ 71.52 ಲಕ್ಷ. ಸರ್ಕಾರವು ರೂಪಿಸಿರುವ ಕೃಷಿ ಕಾಯಿದೆಗಳಲ್ಲಿ 71.52 ಲಕ್ಷ ಭೂರಹಿತ ಕೃಷಿ ಕಾರ್ಮಿಕರ ಬಗ್ಗೆ ಚಕಾರವೆತ್ತಿಲ್ಲ. ಅತಿಸಣ್ಣ ಮತ್ತು ಸಣ್ಣ ಹಿಡುವಳಿಗಾರರು ಈಗ ಭೂರಹಿತ ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಉದಾ: ಒಟ್ಟು ದುಡಿಮೆಗಾರರಲ್ಲಿ ಸಾಗುವಳಿಗಾರರ ಪ್ರಮಾಣ 2001 ರಲ್ಲಿ ಶೇ. 29.25 ರಷ್ಟಿದ್ದುದು 2011ರಲ್ಲಿ ಇದು ಶೇ. 23.61ಕ್ಕಿಳಿದಿದೆ. ಇದು ಏನನ್ನು ಸೂಚಿಸುತ್ತಿದೆ? ರೈತರು ದಿವಾಳಿಯಾಗುತ್ತಿರುವುದನ್ನು ಎತ್ತಿ ತೋರಿಸುತ್ತಿದೆ. ಇವರ ಬಗ್ಗೆ ಸರ್ಕಾರದ ಯಾವುದೇ ಕಾರ್ಯಕ್ರಮವಿಲ್ಲ.
  9. ಕಾರ್ಮಿಕರ ಬಗ್ಗೆ ಇಂದು ಸರ್ಕಾರಗಳಿಗೆ ಅಪಾರ ದ್ವೇಷವಿದೆ. ಅವರ ವಿರುದ್ಧ ಕ್ರೌರ್ಯವನ್ನು ಸರ್ಕಾರಗಳು ಮೆರೆಯುತ್ತಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರ ಬಗ್ಗೆ, ವಲಸೆ ಕಾರ್ಮಿಕರ ಬಗ್ಗೆ ಸರ್ಕಾರ ತೋರಿದ ರಾಕ್ಷಸೀ ಪ್ರತಿಕ್ರಿಯೆ ಇನ್ನೂ ನಮ್ಮ ಮುಂದೆ ಹಸಿರಾಗಿದೆ. ಕೈಗಾರಿಕೆಗಳು ಯಾವ ಎಗ್ಗೂ ಇಲ್ಲದೆ ಕಾರ್ಮಿಕ ಕಾಯಿದೆ ಉಲ್ಲಂಘಿಸಿ 10 ರಿಂದ 12 ಗಂಟೆ ದುಡಿಸಿಕೊಳ್ಳುತ್ತಿವೆ. ಇದಕ್ಕೆ ಸರ್ಕಾರ ಈಗ ಕಾಯಿದೆ ರೂಪ ಮತ್ತು ರಕ್ಷಣೆ ನೀಡಲು ಹೊರಟಿದೆ. ಕಾರ್ಮಿಕ ಸಂಘಗಳ ವಿರುದ್ಧ ಸರ್ಕಾರಗಳು ಕೆಂಡ ಕಾರುತ್ತಿವೆ. ಕಾರ್ಮಿಕರು ಆರ್ಥಿಕತೆಯ ಮೂಲದ್ರವ್ಯ ಎಂಬುದನ್ನು ಮರೆತು ಕೈಗಾರಿಕೋದ್ಯಮಿಗಳನ್ನು ‘ವೆಲ್ಥ್ ಕ್ರಿಯೇರ‍್ಸ್’ ಎಂದು ಅವರನ್ನು ವೈಭವೀಕರಿಸಲಾಗುತ್ತಿದೆ. ವಾಣಿಜ್ಯಪತಿಗಳನ್ನು ಓಲೈಸುವುದೇ ಸರ್ಕಾರದ ಮೂಲ ನೀತಿಯಾಗಿರುವಂತೆ ಕಾಣುತ್ತಿದೆ. ‘ಅವರನ್ನು ಅನುಮಾನದಿಂದ ನೋಡಬಾರದು, ಅವರನ್ನು ಅವಮಾನಿಸಬಾರದು, ಅವರಿಲ್ಲದಿದ್ದರೆ ಬಡತನವನ್ನು ನಿವಾರಿಸುವವರಾರು’ ಎಂಬ ಅಪದ್ದ ಪ್ರತಿಕ್ರಿಯೆಯನ್ನು ಸರ್ಕಾರ ನೀಡುತ್ತಿದೆ.
  10. ಗುತ್ತಿಗೆ ಕೃಷಿಯನ್ನು ಕಾನೂನುಬದ್ಧಗೊಳಿಸಲಾಗಿದೆ. ಗುತ್ತಿಗೆ ಪದ್ದತಿಯಲ್ಲಿ ರೈತರು ಭೂಮಿಯನ್ನು ಕಳೆದುಕೊಳ್ಳುವ ಅಪಾಯದ ಬಗ್ಗೆ ಕೇಳಿದಾಗ ಸರ್ಕಾರವು ಬೆಳೆಯನ್ನು ಗುತ್ತಿಗೆ ನೀಡಲಾಗುತ್ತದೆಯೇ ವಿನಾ ಭೂಮಿಯನ್ನಲ್ಲ ಎಂಬ ಉಡಾಫೆ ಉತ್ತರ ನೀಡಿದೆ. ಗುತ್ತಿಗೆ ವ್ಯವಸ್ಥೆಯಲ್ಲಿ ಯಾರು ಬಂಡವಾಳ, ಅಧಿಕಾರ ಮತ್ತು ರಾಜಕೀಯ ಶಕ್ತಿ ಪಡೆದಿರುತ್ತಾರೋ ಅವರಿಗೆ ಅನುಕೂಲವಾಗುತ್ತದೆ ಎಂಬದು ಸಾಬೀತಾಗಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ.
  11. ನಮ್ಮ ರಾಜ್ಯದಲ್ಲಿ 2015-16 ರಿಂದ 2019-2020ರ ಅವಧಿಯಲ್ಲಿ ಹಸಿವಿನ ಹಾಹಾಕಾರದಲ್ಲಿ ಏರಿಕೆಯಾಗಿದೆ. ಅಪೌಷ್ಟಿಕತೆಯನ್ನು ಮುಚ್ಚಿಟ್ಟ ಹಸಿವು ಎನ್ನಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ರ ಪ್ರಕಾರ ನಮ್ಮ ರಾಜ್ಯದಲ್ಲಿ 6 ರಿಂದ 59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿ ರಕ್ತಹೀನತೆ ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ. 60.9 ರಷ್ಟಿದ್ದುದು 2019-2020ರಲ್ಲಿ ಶೇ.65.5 ರಷ್ಟಾಗಿದೆ. ಇದೇ ರೀತಿಯಲ್ಲಿ 15 ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ರಕ್ತಹೀನತೆಯು ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ಇದೇ ಅವಧಿಯಲ್ಲಿ ಶೇ. 44.8 ರಿಂದ ಶೇ. 47.8 ಕ್ಕೇರಿಕೆಯಾಗಿದೆ. ಇದು ಕೋವಿಡ್ ಪೂರ್ವದಲ್ಲಿ ನಡೆದ ಸಮೀಕ್ಷೆಯಾಗಿದೆ. ಕೋವಿಡ್ ಅವಧಿಯಲ್ಲಿ ಇದು ಮತ್ತಷ್ಟು ಉಲ್ಬಣಗೊಂಡಿಲಿಕ್ಕೆ ಸಾಕು. ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಇದು ಆತಂಕಕಾರಿಯಾಗಿ ಏರಿಕೆಯಾಗಿದೆ.
  12. ಅಸಮಾನತೆ, ಬಡತನ, ಹಸಿವು, ಅಪೌಷ್ಟಿಕತೆ, ಹಿಂದುಳಿದ ಜಿಲ್ಲೆಗಳ ಸ್ಥಿತಿಗತಿ ಮುಂತಾದ ಸಂಗತಿಗಳ ಬಗ್ಗೆ ಸರ್ಕಾರಗಳು ಚರ್ಚೆ ಮಾಡುವುದಿರಲಿ, ಅವುಗಳನ್ನು ಉಚ್ಚರಿಸಲಿಕ್ಕೂ ಹಿಂಜರಿಯುತ್ತಿವೆ. ಉದಾ; ಯಾದಗಿರ್, ರಾಯಚೂರು, ಕೊಪ್ಪಳ ಮುಂತಾದ ಹಿಂದುಳಿದ ಜಿಲ್ಲೆಗಳಲ್ಲಿ ಒಟ್ಟು ಮಕ್ಕಳಲ್ಲಿ ಅನೀಮಿಯದಿಂದ ನರಳುತ್ತಿರುವ ಮಕ್ಕಳ ಪ್ರಮಾಣವು ಶೇ. 70 ಕ್ಕಿಂತ ಅಧಿಕವಾಗಿದೆ. ಎಮ್‌ಎಸ್‌ಪಿ ಅಪ್ರಸ್ತುತವಾದರೆ ಪಡಿತರ ವ್ಯವಸ್ಥೆಯು ನಾಶವಾಗುತ್ತದೆ. ಈಗಾಗಲೆ ಕೋವಿಡ್‌ನಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟವಿಲ್ಲ. ಅದಕ್ಕೆ ಪರ್ಯಾಯವಾಗಿ ಆಹಾರ ಪದಾರ್ಥ ನೀಡುವ ಕ್ರಮವೂ ಕಳೆದ ಜೂನ್‌ನಿಂದ ನಿಂತು ಹೋಗಿದೆ. ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಮತ್ತು ಪೋಲಿಕ್ ಗುಳಿಗೆಗಳ ವಿತರಣೆಯೂ ಇಲ್ಲ.

ಕೊನೆಯದಾಗಿ ಕೃಷಿ ಕಾನೂನುಗಳ ವಿರುದ್ಧದ ಬೃಹತ್ ಚಳುವಳಿಯು ಕೇವಲ ರೈತರಿಗೆ, ಕೃಷಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಇಡೀ ದೇಶ, ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇವರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ರಾಮಮಂದಿರ, ಹೊಸ ಸಂಸತ್ ಭವನ, ಪೌರತ್ವ ಕಾಯಿದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವು ಆದ್ಯತೆಯ ಸಂಗತಿಗಳಾಗಿವೆ. ರೈತರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಅವರು ಕೃಷಿ ಕಾನೂನುಗಳ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದಾರೆ.

ಆದರೆ ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು 2019ರಲ್ಲಿ 94 ರಲ್ಲಿದ್ದುದು 2020ರಲ್ಲಿ 111ಕ್ಕೆ ಕುಸಿದಿದೆ. ಒಟ್ಟು 107 ದೇಶಗಳ ಪೈಕಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ 94. ನೇಪಾಳ ಮತ್ತು ಬಾಂಗ್ಲಾದೇಶಗಳಿಗಿಂತ ಇದರ ಸ್ಥಾನ ಕೆಳಮಟ್ಟದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನವು 2019ರಲ್ಲಿ 129ರಲ್ಲಿದ್ದುದು 2020ರಲ್ಲಿ 131ಕ್ಕೆ ಕುಸಿದಿದೆ. ‘ಅಚ್ಚೆ ದಿನ’ ಬರುವುದಿರಲಿ, 2013-14ರಲ್ಲಿನ ಸ್ಥಿತಿಯನ್ನು ಕಾಯ್ದುಕೊಳ್ಳುವುದು ನಮಗೆ ಸಾಧ್ಯವಾಗಿಲ್ಲ. ಕೃಷಿ ಕಾನೂನುಗಳನ್ನು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ರದ್ದುಪಡಿಸದಿದ್ದರೆ ನಮ್ಮ ಆರ್ಥಿಕ ಸ್ಥಿತಿಯು ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *