ಮಂಡ್ಯ: ರೇಷ್ಮೆ ಇಲಾಖೆಯನ್ನ ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡುವುದನ್ನ ವಿರೋಧಿಸಿ, ರೇಷ್ಮೆ ಇಲಾಖೆಯನ್ನು ಪ್ರತ್ಯೇಕವಾಗಿಯೇ ಮುಂದುವರಿಸಲು ಆಗ್ರಹಿಸಿ ಹಾಗೂ ಹುಳು ಸಾಕಾಣಿಕೆ ಮನೆಗಳಿಗೆ ಅನುದಾನ ಹೆಚ್ಚಿಸಬೇಕೆಂದು ರೇಷ್ಮೆ ಬೆಳೆಗಾರರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಮಂಡ್ಯ ಜಿಲ್ಲಾ ಸಮಿತಿ ಪ್ರತಿಭಟನೆಯನ್ನು ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹಕಾರ್ಯದರ್ಶಿ ಎನ್. ಎಲ್. ಭರತ್‌ರಾಜ್ ಮಾತನಾಡಿ, ಕರ್ನಾಟಕದ ಹಿರಿಮೆಗಳಲ್ಲಿ ಒಂದಾದ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿ ಮೈಸೂರು ಭವ್ಯತೆ ಮತ್ತು ವೈಭವವನ್ನು ಹಾಳು ಮಾಡುವುದಲ್ಲದೆ ರಾಜ್ಯದ 1,38,964 ರೇಷ್ಮೆ ಬೆಳೆಗಾರರ ಕುಟುಂಬಗಳನ್ನು ವಿನಾಶ ಮಾಡಿ, ರೇಷ್ಮೆ ಇಲಾಖೆಯ 2346 ಹುದ್ದೆಗಳನ್ನು ರದ್ದು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಮತ್ತು ರೈತ ವಿರೋಧಿಯಾಗಿದೆಯಾಗಿದೆ ಎಂದು ಹೇಳಿದರು.
ರೇಷ್ಮೆ ಕೃಷಿಯು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಕೃಷಿ ಆಧಾರಿತ ಉದ್ಯಮವಾಗಿದೆ. ಹೆಚ್ಚಿನ ಉದ್ಯೋಗಾವಕಾಶ ನಿಗಧಿತ ಆದಾಯ, ಮಹಿಳಾ ಸ್ನೇಹಿಯೂ ಆಗಿರುವುದರಿಂದ ನಿರುದ್ಯೋಗಿ ವಿದ್ಯಾವಂತ ಯುವಜನರು ಸಹ ಬಹಳ ಸಂಖ್ಯೆಯಲ್ಲಿ ರೇಷ್ಮೆ ಬೆಳೆಯನ್ನು ಅವಲಭಿಸಿ, 2 ಲಕ್ಷ ಕೋಟಿ ಬಂಡವಾಳವನ್ನು ರೇಷ್ಮೆ ಬೆಳೆಗಾರರೇ ಹೂಡಿ 30 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ಮಂಡ್ಯ ಪ್ರಥಮ ಸ್ಥಾನ ಗಳಿಸಿವೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಎನ್. ಲಿಂಗರಾಜಮೂರ್ತಿ ಮಾತನಾಡಿ, ಮಂಡ್ಯ ಜಿಲ್ಲೆಯ ಜೀವಾಳವೇ ಸಿಲ್ಕ್, ಮಿಲ್ಕ್, ಶುಗರ್. ಇವುಗಳಲ್ಲಿ ಹೈನುಗಾರಿಕೆಗೆ ಮತ್ತು ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಅಂತಹದರಲ್ಲಿ ರೇಷ್ಮೆಗೆ ಉತ್ತಮ ಬೆಲೆ ಇರುವುದರಿಂದ ರೈತರು ಜೀವನ ನಡೆಸಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ 32000 ಕುಟುಂಬಗಳು ರೇಷ್ಮೆ ಬೆಳೆಗಾರರಿದ್ದಾರೆ. 16,462 ಹೆಕ್ಟೇರ್ ಭೂಮಿಯಲ್ಲಿ ಹಿಪ್ಪನೇರಳೆ ತೋಟವಿದೆ. ಸುಮಾರು 2 ಲಕ್ಷ ಜನರು ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 10.67 ಲಕ್ಷ ಜನ ಅವಲಂಬಿತರಾಗಿದ್ದಾರೆ. ರೇಷ್ಮೆ ಮೊಟ್ಟೆ ತಯಾರಕರು, ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಹೀಗೆ ಎರಡು-ಮೂರು ಲಕ್ಷ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಜಿಡಿಪಿ ದರವೂ ಹೆಚ್ಚಳವಾಗಿದೆ ಎಂದರು.
ರೇಷ್ಮೆ ವಿದೇಶಕ್ಕೆ ರಪ್ತಾಗುವುದರಿಂದ ದೇಶಕ್ಕೆ ಉತ್ತಮ ರೀತಿಯ ತೆರಿಗೆ ಸಂಗ್ರಹವಾಗುತ್ತಿದೆ. 1914 ರಿಂದ ಪ್ರತ್ಯೇಕ ಇಲಾಖೆಯಾಗಿ, ಉಳಿದ ರಾಜ್ಯಗಳಿಗೆ ಕರ್ನಾಟಕದ ರೇಷ್ಮೆ ಇಲಾಖೆ ಮಾದರಿಯಾಗಿ, ರೇಷ್ಮೆ ಇಲಾಖೆಯನ್ನು ಇತರೆ ರಾಜ್ಯಗಳು ಪ್ರತ್ಯೇಕ ಇಲಾಖೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ವಿಲೀನಗೊಳಿಸುತ್ತಿರುವುದು ಮೂರ್ಖತನ. ಆದ್ದರಿಂದ 70% ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ರೇಷ್ಮೆ ವಿಭಾಗದಲ್ಲಿ ಡಿಪ್ಲೋಮಾ, ಬಿ.ಎಸ್ಸಿ, ಎಂ.ಎಸ್ಸಿ ವ್ಯಾಸಂಗ ಮಾಡಿ ಉದ್ಯೋಗದ ಕನಸನ್ನೊತ್ತಿರುವ ಯುವಜನರಿಗೆ ಉದ್ಯೋಗ ನೀಡಿ ರೇಷ್ಮೆ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ರೇಷ್ಮೆ ಇಲಾಖೆಯನ್ನು ಮತ್ತಷ್ಟು ದೊಡ್ಡ ಉದ್ಯಮವಾಗಿ ಬೆಳೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಚಿವ ಕೆ.ಸಿ. ನಾರಾಯಣಗೌಡರವರು ಮತ್ತು ರಾಜ್ಯ ಸರ್ಕಾರ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ರೈತ ವಿರೋಧಿ ನೀತಿಯನ್ನು ಕೈ ಬಿಡಬೇಕೆಂದು ಹಾಗೂ ರೇಷ್ಮೆ ಬೆಳೆಗಾರರಿಗೆ ಹುಳು ಸಾಕಾಣಿಕೆ ಮನೆಗಳಿಗೆ ಸರ್ಕಾರ ಹಾಲಿ ನೀಡುತ್ತಿರುವ ಅನುದಾನವು ಬಹಳ ಕಡಿಮೆಯಾಗಿದ್ದು, ಹುಳು ಸಾಕಾಣಿಕೆ ಮನೆ ನಿರ್ಮಾಣದ ವೆಚ್ಚ ಅತ್ಯಧಿಕವಾಗಿ ಏರಿಕೆಯಾಗಿರುವುದರಿಂದ ರೇಷ್ಮೆ ಬೆಳೆಗಾರರಿಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ರೇಷ್ಮೆ ಬೆಳೆಗಾರರ ಹೋರಾಟ ಸಮಿತಿ ಒತ್ತಾಯಿಸಿದೆ.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೇಷ್ಮೆ ಬೆಳಗಾರರ ಸಂಘದ ಮುಖಂಡರಾದ ಶಿವಲಿಂಗು, ಬನ್ನಹಳ್ಳಿ ಶಿವು, ನಾರಾಯಣಗೌಡ, ಪ್ರಶಾಂತ್‌ಕುಮಾರ್, ನಿಂಗೇಗೌಡ, ಚಾಕಿ ಸಾಕಾಣಿಕೆದಾರ ತ್ಯಾಗರಾಜು ಕೆಪಿಆರ್‌ಎಸ್ ಮುಖಂಡರಾದ ಸಿದ್ದೇಗೌಡ, ಎ.ಎಲ್. ಶಿವಕುಮಾರ್, ಮರಿಲಿಂಗೇಗೌಡ, ಗುರುಸ್ವಾಮಿ, ಮುಖಂಡರಾದ ಮಹದೇವು, ಚಿಕ್ಕಸ್ವಾಮಿ, ಸಿದ್ದರಾಜು, ನಾಗರಾಜು, ಗಣೇಶ್ ಗೊಲ್ಲರಹಳ್ಳಿ ಮತ್ತಿತರರು ಭಾಗಿಯಾಗಿದ್ದರು.