– ರೈತವಿರೋಧಿ ತಿದ್ದುಪಡಿ ವಾಪಸ್ ಪಡೆಯಲು ಒತ್ತಾಯ
ಬೆಂಗಳೂರು: ಭೂಮಿ ಮತ್ತು ಕೃಷಿ ಸಂಬಂಧಿತ ಕಾಯ್ದೆಗಳಿಗೆ ರೈತವಿರೋಧಿ ತಿದ್ದುಪಡಿ ತಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ಖಂಡಿಸಿ ಸೆ.25ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಅಖಿಲ ಭಾರತ ಬಂದ್ ನಡೆಸಲು ಕರೆ ನೀಡಿದ್ದು, ಬಂದ್ ಕರೆಯನ್ನು ಬೆಂಬಲಿಸಿ ರಾಜ್ಯದಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆಯಲು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕ ನಿರ್ಧರಿಸಿದೆ.
ಒಂದು ವೇಳೆ ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯದಿದ್ದರೆ ರಾಜ್ಯದಲ್ಲಿಯೂ ಬಂದ್ ನಡೆಸಲು ಇದೇ ವೇಳೆ ನಿರ್ಧರಿಸಲಾಗಿದೆ.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮಂಗಳವಾರ ಸಂಜೆ ಆನ್ ಲೈನ್ ಸಭೆ ನಡೆಸಿ ಅಖಿಲ ಭಾರತ ಬಂದ್ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದೆ.
ಬಂದ್ ಬೆಂಬಲಿಸಿ ರಾಜ್ಯದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ನಡೆಸಲು ನಿರ್ಧರಿಸಿದೆ.ರೈತ ವಿರೋಧಿ ತಿದ್ದುಪಡಿಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಈಗಾಗಲೇ ಬೆಂಬಲ ಘೋಷಿಸಿರುವ ಕಾರ್ಮಿಕ, ದಲಿತ, ರೈತ ಸಂಘಟನೆಗಳನ್ನು,ಮತ್ತು ಸ್ಥಳೀಯ ಕನ್ನಡ ಪರ ಹಾಗೂ ಇತರ ಜನಪರ ಸಂಘಟನೆಗಳ ಬೆಂಬಲ ಪಡೆದು ಕೊಂಡು ಈ ರಸ್ತೆ ತಡೆ ಚಳವಳಿ ತೀವ್ರವಾಗಿ ನಡೆಸುವಂತೆ ತೀರ್ಮಾನಿಸಿದೆ.
ಇದೇ ವೇಳೆ ಸೆ.25ರಂದು ರಾಜ್ಯದ ರಾಜಧಾನಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಮಿಕ, ದಲಿತ ಸಂಘಟನೆಗಳ ಜೊತೆಗೂಡಿ ಬೃಹತ್ ರಸ್ತೆ ತಡೆ ನಡೆಸಲು ತೀರ್ಮಾನಿಸಿದೆ.
ಇದೇ ವೇಳೆ ರಾಜ್ಯ ವಿಧಾನ ಸಭೆಯಲ್ಲಿ ಮಂಡನೆಯಾಗಿರುವ ರೈತ ವಿರೋಧಿ ಕರ್ನಾಟಕ ರಾಜ್ಯ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020 ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ 2020 ಅನ್ನು ರಾಜ್ಯದ ರೈತರ ಒಕ್ಕೊರಲ ವಿರೋಧ ಲೆಕ್ಕಿಸದೇ ,ರಾಜ್ಯದ ವಿಧಾನ ಸಭೆ ಅಂಗೀಕರೀಸಿದರೆ ಕರ್ನಾಟಕದಲ್ಲಿಯೂ ಬಂದ್ ಕರೆ ನೀಡಲು ತೀರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ) ಪ್ರತಿನಿಧಿಸಿ ಗೌರವ ಅಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ,ಜೆಎಂ.ವೀರಸಂಗಯ್ಯ ಹಾಗೂ ಗೋಪಾಲ್,ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ) ಪ್ರತಿನಿಧಿಸಿ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, RKS ಪ್ರತಿನಿಧಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ್,ಆಶಾ ಪ್ರತಿನಿಧಿಸಿ ಕವಿತಾ ಕುರುಗುಂಟೆ, ಎಐಕೆಎಸ್ ಪ್ರತಿನಿಧಿಸಿ ಪಿ.ವಿ.ಲೋಕೇಶ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿನಿಧಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ,ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿನಿಧಿಸಿ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹಾಜರಿದ್ದರು.