ಕೆಪಿಟಿಸಿಎಲ್ ನೇರ ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ: ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ನಿಯಮಿತದಲ್ಲಿನ  ಜೂನಿಯರ್ ಪವರ್ ಆಪರೇಟರ್ ಹಾಗೂ ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ನೇರ ನೇಮಕಾತಿ ವಿಧಾನದ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಗೆ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಹಕ್ಕುಗಳಿಗೆ ಹೋರಾಟ ಮಾಡುವ ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್‌ ಅಸೋಸಿಯೇಷನ್ (ರಿ) (ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ (ರಿ)) ಸಂಸ್ಥೆಯ ಅಧ್ಯಕ್ಷ ಆರ್ ಕಾಂತಾ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನೇಮಕಾತಿ ಪ್ರಕ್ರಿಯೆಯು ಸರ್ಕಾರ ಅಥವಾ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರದ ನೀತಿ ನಿರ್ಧಾರಕ ವಿಚಾರವಾಗಿದ್ದು, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠ ಹೇಳಿತು. ಅದಾಗ್ಯೂ, ಕೆಪಿಟಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿದ ಪೀಠವು ನೇಮಕ ಮಾಡಿಕೊಳ್ಳುವ ಯಾವ ಪ್ರಕ್ರಿಯೆ ಅಥವಾ ವಿಧಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ಇದನ್ನೂ ಓದಿ : ಯುಜಿಸಿಯ ಕುಲಪತಿಗಳ ನೇಮಕಾತಿ ನಿಬಂಧನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕರ್ನಾಟಕ ಸರ್ಕಾರ ವಿರೋಧ

ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಎಸ್ ಸುಶೀಲಾ ವಾದ ಮಂಡಿಸಿದರು. ವಕೀಲ ಜಿ ಸುಹಾಸ್ ವಕಾಲತ್ತು ವಹಿಸಿದ್ದರು. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ 411 ಜೂನಿಯರ್ ಸ್ಟೇಷನ್ ಆಪರೇಟರ್ ಹಾಗೂ 2,268 ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು 2024ರ ಅಕ್ಟೋಬರ್‌ 14ರಂದು ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಅನುಸರಿಸಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಪರೀಕ್ಷೆ ಇಲ್ಲದೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ. ಈ ಅವಧಿಯ ಗರಿಷ್ಠ ಅಂಕ ಗಳಿಕೆ ಸರಾಸರಿ ಹಿಂದಿನ ವರ್ಷಗಳಿಗಿಂತ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ.

ಕೋವಿಡ್ ಅವಧಿಯಲ್ಲಿ ಶೇ.95ರಿಂದ 100 ಅಂಕಗಳ ಗಳಿಸಿದ 1.18 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಒಂದು ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿನ ಗರಿಷ್ಠ ಅಂಕಗಳ ಮಾನದಂಡ ಅನುಸರಿಸಿದರೆ ಕೋವಿಡ್ ಕಾಲದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ಅದರ ಹಿಂದಿನ ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವಿಧಾನ ಅನುಸರಿಸಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಆದ್ದರಿಂದ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದಲ್ಲಿ ನೇರ ನೇಮಕ ಮಾಡಿಕೊಳ್ಳುವ ಅಧಿಸೂಚನೆಯನ್ನು ರದ್ದುಪಡಿಸಬೇಕು. ನೇಮಕ ಪ್ರಕ್ರಿಯೆ ಮರುಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು. ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಸುವ ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ ವಿದ್ಯುತ್ ನಿಗಮಗಳ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ನೋಡಿ : ‘ದಲಿತ’ ಪದ ಅಸ್ಮಿತೆಯೋ? ಅವಮಾನವೋ? Janashakthi Media

Donate Janashakthi Media

Leave a Reply

Your email address will not be published. Required fields are marked *