ಕೋಲಾರ: ಕೃಷಿ, ನೀರಾವರಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಾಂ ಅಧಿಕಾರಿಗಳ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ರೈತರಿಗೆ 10 ಗಂಟೆಗಳ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕೆಪಿಆರ್‌ಎಸ್ ತಾಲೂಕು ಸಮಿತಿ ವತಿಯಿಂದ ಬುಧವಾರ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಜಿಲ್ಲೆಯಾದ್ಯಂತ ರೈತರು ಅಂತರ್ಜಲವನ್ನು ನಂಬಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು ಸಮರ್ಪಕವಾಗಿ ವಿದ್ಯುತ್ ನೀಡದೆ ರೈತರು ಅಪಾರವಾದ ನಷ್ಟವನ್ನು ಅನುಭವಿಸುವಂತೆ ಮಾಡಿದ್ದಾರೆ. ಕೂಡಲೇ ಸರಕಾರ ಮತ್ತು ಅಧಿಕಾರಿಗಳು ರೈತರ ಚಟುವಟಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು, ಮುಂಗಾರು ಮಳೆಯ ಅಭಾವದ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ತೊಂದರೆ ಕೊಡಬಾರದು ಅಗತ್ಯವಿರುವ 10 ತಾಸುಗಳ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಉತ್ಪಾದಕರ ಹಾಲಿನ ಬೆಲೆ ಇಳಿಕೆ ಖಂಡಿಸಿ ಕೆಪಿಆರ್‌ಎಸ್ ಪ್ರತಿಭಟನೆ
ರಾಜ್ಯ ಸರಕಾರ ಗ್ಯಾರಂಟಿಗಳ ಹೆಸರಿನಲ್ಲಿ ಉಚಿತ 200 ಯೂನಿಟ್ ವಿದ್ಯುತ್ ನೀಡಿ ರೈತರಿಗೆ ಕೊಡುವ ಕೃಷಿ ಪಂಪ್‌ಸೆಟ್ ಹಾಗೂ ನಿರಂತರ ಜ್ಯೋತಿ ವಿದ್ಯುತ್‌ನ್ನು ಖಡಿತ ಮಾಡಿದ್ದಾರೆ ಸಮರ್ಪಕವಾದ ವಿದ್ಯುತ್ ನೀಡಬೇಕಾದ ಜವಾಬ್ದಾರಿ ಸರ್ಕಾರದ್ದು, ಅದನ್ನು ಬಿಟ್ಟು ತಮಗೆ ಇಷ್ಟ ಬಂದ ರೀತಿ ವಿದ್ಯುತ್ ಕಡಿತ ಮಾಡಲು ಹೊರಟಿದ್ದಾರೆ. ಬಿಸಿಲು ಮಳೆ ಗಾಳಿ ಎನ್ನದೆ ರಾತ್ರಿ ಹಗಲು ಬೆವರು ಸುರಿಸಿ ದುಡಿದು ಬೆಳೆದ ಬೆಳೆಯನ್ನು ರೈತರೇ ತಿನ್ನುವುದಿಲ್ಲ ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ರೈತರ ಕಷ್ಟ ಎಲ್ಲಿ ಗೊತ್ತಾಗುತ್ತದೆ ಎಂದು ಅಧಿಕಾರಿಗಳ ಕ್ರಮದ ವಿರುದ್ದ ಕಿಡಿಕಾರಿದರು.
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ ಮಾತನಾಡಿ, ಸರಕಾರ ಕೂಡಲೇ ಮನೆ ಮತ್ತು ಕೃಷಿ ಪಂಪ್ ಸೆಟ್ ಗಳಿಗೆ ಡಿಜಿಟಲ್ ಪ್ರಿಪೇಯ್ಡ್ ಮೀಟರ್ ಹಾಕುವ ಪದ್ದತಿ ಕೈಬಿಡಬೇಕು, ಕೃಷಿ ಪಂಪ್ ಸೆಟ್ ನ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆಯನ್ನು ಕೈಬಿಟ್ಟು ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಗೊಳಿಸುವ 2022 ಕಾಯಿದೆ ಅಂಗೀಕರಿಸಿದ ಕೇಂದ್ರ ಸರ್ಕಾರದ ಕಾಯ್ದೆಯನ್ನು ವಾಪಸ್ ಪಡೆಯಬೇಕು. ದಿನದ 10 ಗಂಟೆಗಳ ಕಾಲ 3ಫೇಸ್ ವಿದ್ಯುತ್ ಕಡ್ಡಾಯವಾಗಿ ನೀಡಬೇಕು. ನಿರಂತರ ಜ್ಯೋತಿ ಮತ್ತು ತೋಟದ ಮನೆಗಳಿಗೆ ಸಂಜೆ 6ರಿಂದ ರಾತ್ರಿ 10 ಗಂಟೆ ತನಕ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ನೀಡಬೇಕು ರಾಜ್ಯದಲ್ಲಿ ಕೊರತೆ ಇರುವ 6 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಟ್ರಾನ್ಸ್ ಪಾರ್ಮರ್ ಸುಟ್ಟು ಹೋದರೆ 72 ಗಂಟೆಗಳೊಳಗಾಗಿ ಇಲಾಖೆಯೇ ಖದ್ದು ಜವಾಬ್ದಾರಿ ವಹಿಸಿ ಹೊಸ ಟ್ರಾನ್ಸ್ ಪಾರ್ಮರ್ ನೀಡಬೇಕೆಂಬ ನಿಯಮವಿದ್ದರು ಇಲಾಖೆಯವರು ಪಾಲಿಸುತ್ತಿಲ್ಲ ಕೂಡಲೇ ಈ ನಿಯಮವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕೆಪಿಆರ್‌ಎಸ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷರಾದ ಎನ್.ಎನ್ ಶ್ರೀರಾಮ್, ಟಿ.ಕೃಷ್ಣೇಗೌಡ ಸಹಕಾರ್ಯದರ್ಶಿ ಸುಗಟೂರು ಶ್ರೀಧರ್ ರೆಡ್ಡಿ, ಮುಖಂಡರಾದ ಮುನಿರತ್ನಮ್ಮ, ವೀರೇಗೌಡ, ನಾರಾಯಣಸ್ವಾಮಿ, ನಾರಾಯಣಪ್ಪ, ಸಿಎಲ್.ನಾಗರಾಜ್, ವೆಂಕಟೇಶ್, ಶ್ರೀನಿವಾಸ್,ದಿಂಬ ನಾರಾಯಣಪ್ಪ ಮುಂತಾದವರು ಭಾಗವಹಿಸಿದ್ದರು.