ರಸಗೊಬ್ಬರ, ಬಿತ್ತನೆ ಬೀಜಗಳ ದರ ಏರಿಕೆ ವಿರೋಧಿಸಿ ರೈತರ ಪ್ರತಿಭಟನೆ

ಹಾಸನ: ರಸಗೊಬ್ಬರ, ಬಿತ್ತನೆ ಬೀಜಗಳು, ಪೈಪುಗಳು ಸೇರಿದಂತೆ ಕೃಷಿ ಉಪಕರಣಗಳು ಹಾಗೂ ಡೀಸೆಲ್, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ರೈತರ ಸ್ಥಳೀಯ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತರೈತ ಸಂಘದ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.

ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ಇಡೀ ಜಗತ್ತು ಸಂಕಷ್ಟದಲ್ಲಿರುವಾಗಲೇ ದೇಶಕ್ಕೆ ಅನ್ನ ನೀಡುವ ರೈತ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾನೆ. ಒಂದೆಡೆ ಕೊರೋನಾ ಸೋಂಕಿನಿಂದ ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಸರಿಯಾದ ಆರೋಗ್ಯ ವ್ಯವಸ್ಥೆ ಸಿಗದೆ ಪರದಾಡುವು ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಜೀವನಕ್ಕಾಗಿ ನಂಬಿದ್ದ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಪರದಾಡುವಂತಾಗಿದೆ ಎಂದು ರೈತರು ಆರೋಪಿಸಿದರು.

ಸರಿಯಾದ ಆರೋಗ್ಯ ವ್ಯವಸ್ಥೆ ಸಿಗದೆ ಪರಿತಪಿಸುತ್ತಿರುವ ರೈತರಿಗೆ ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರಗಳು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಗಳು ರೈತರಿಗೆ ಬೇಕಾದ ಅಗತ್ಯ ನೆರವನ್ನು ನೀಡದೇ ನಮಗೂ ರೈತರಿಗೂ ಯಾವ ಸಂಭAದವೂ ಇಲ್ಲವೆಂಬಂತೆ ವರ್ತಿಸುತ್ತಿವೆ. ಮಾತ್ರವಲ್ಲದೆ ರೈತರಿಗೆ ತಲುಪಿಸಬೇಕಾದ ಯೋಜನೆಗಳನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸದೇ ರೈತರಿಗೆ ದೊಡ್ಡ ಮಟ್ಟದ ಮೋಸ ಮಾಡಲಾಗುತ್ತಿದೆ. ಲಾಕ್ ಡೌನ್‌ನ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿಗಳಿಗೆ ಜಿಲ್ಲಾಡಳಿತ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸದೇ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ಸಿಗದಂತಾಯಿತು. ಮುಂಗಾರು ಪ್ರಾರಂಭವಾಗಿ ಬೆಳೆ ಬೆಳೆಯಲು ರೈತರು ಮುಂದಾದರೆ ಜಿಲ್ಲೆಯ ಎಲ್ಲೆಡೆಗಳಲ್ಲಿ ಆನೆ, ಹಂದಿ, ನವಿಲು, ಮಂಗ ಮುಂತಾದ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟಕ್ಕೊಳಗಾಗಿತ್ತಿದೆ ಎಂದು ರೈತರು ದೂರಿದರು.

ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರುವಾಗ ನಮ್ಮನ್ನಾಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನ್ನದಾತನ ಕೈಹಿಡಿಯುವ ಬದಲಾಗಿ ರೈತ ಸಮುದಾಯಕ್ಕೆ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡಿವೆ. ಒಂದು ಕಡೆ ಕೊರೊನಾ ಲಾಕ್‌ಡೌನ್ ಹೆಸರಲ್ಲಿ ಜನರನ್ನು ಮನೆಗಳಲ್ಲಿ ಕೂರಿಸಿ ರೈತರು ಕೃಷಿಗೆ ಉಪಯೋಗಿಸುವ ಬಿತ್ತನೆ ಬೀಜ, ರಸಗೊಬ್ಬರ, ಪ್ಲಾಸ್ಟಿಕ್ ಪೈಪುಗಳು, ಯಂತ್ರೋಪಕರಣಗಳು. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ (ಗ್ಯಾಸ್) ಇವುಗಳ ಜೊತೆಗೆ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದ್ದಾರೆ. ಇದರಿಂದ ರೈತರು ಬೆಳೆವ ಬೆಳೆಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ದುಬಾರಿ ವೆಚ್ಚಗಳನ್ನು ಪೂರೈಸಲು ರೈತರು ಸಾಲಗಳ ಮೊರೆಹೋಗಬೇಕಾಗಿದೆ. ಎಲ್ಲರೀತಿಯ ಸಂಕಷ್ಟಗಳನ್ನೂ ಎದುರಿಸಿ, ಪ್ರಕೃತಿಯ ಸವಾಲುಗಳನ್ನು ಎದುರಿಸಿ ಕಷ್ಟಪಟ್ಟು ಬೆಳೆಯನ್ನು ಬೆಳೆದರೆ ಅದಕ್ಕೂ ಬೆಲೆ ಸಿಗದಂತಾಗಿದೆ.


ಸಂಕಷ್ಟದಲ್ಲಿರುವ ರೈತರ ಕೈಹಿಡಿದು ಲಾಕ್‌ಡೌನ್ ಅವಧಿಯಲ್ಲಿ ಜೀವನ ನಡೆಸಲು ಅಗತ್ಯವಿರುವ ರೇಷನ್ ಮತ್ತು ತಿಂಗಳಿಗೆ ಕನಿಷ್ಠ ೧೦ ಸಾವಿರ ರೂ ನೇರ ನಗದು ವರ್ಗಾವಣೆ ಮಾಡಬೇಕಾಗಿದ್ದ ಮೋದಿ ಸರ್ಕಾರ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಕೆ ತರುವ ಮೂಲಕ ಭಾರತದ ರೈತಾಪಿ ಕೃಷಿಯನ್ನ ಕಾರ್ಪೋರೇಟ್ ಕಂಪನಿಗಳಿಗೆ ವರ್ಗಾಯಿಸುವ ಹುನ್ನಾರವನ್ನು ಮಾಡಲಾಗಿದೆ. ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಬಡ, ಮದ್ಯಮ ರೈತರು ಕೃಷಿ ಮಾಡಲಾಗದೆ ಕೃಷಿಯನ್ನು ಬಿಟ್ಟು ನಗರಗಳಿಗೆ ಹೊಲಸೆ ಹೋಗಬೇಕಾಗುತ್ತದೆ. ಇಂತಹ ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಕಳೆದ ೬ ತಿಂಗಳುಗಳಿಂದ ದೆಹಲಿಯ ಗಡಿಭಾಗಗಳಲ್ಲಿ ನಿತಂತರವಾಗಿ ಐತಿಹಾಸಿಕ ಹೋರಾಟವನ್ನು ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಇದುವರೆಗೂ ಗೌರವಯುತವಾಗಿ ನಡೆಸಿಕೊಂಡು ಮಾತುಕತೆ ಮಾಡಲಿಲ್ಲ ಎಂದು ಆರೋಪಿಸಿದರು.

ಇವುಗಳ ಜೊತೆಗೆ ರೈತರಿಂದ ಬೆಳೆ ವಿಮೆಯ ಹಣವನ್ನು ಕಟ್ಟಿಸಿಕೊಂಡಿದ್ದರೂ ಇದುವರೆಗೂ ರೈತರಿಗೆ ಬೆಳೆವಿಮೆಯ ಹಣ ವಾಪಸ್ ಬಂದಿಲ್ಲ. ಸ್ಥಳೀಯವಾಗಿ ಕೃಷಿ ಕೇಂದ್ರಗಳ ಮೂಲಕ ರೈತರಿಗೆ ನೀಡಬೇಕಾದ ಸೌಲತ್ತುಗಳನ್ನು ಸರಿಯಾದ ಫಲಾನುಭವಿಗಳನ್ನು ಗುರುತಿಸಿ ನೀಡದೇ ದೊಡ್ಡಮಟ್ಟದಲ್ಲಿ ಅವ್ಯವಹಾರಗಳನ್ನು ನಡೆಸಲಾಗುತ್ತಿದೆ.
ಈ ಎಲ್ಲಾ ಪ್ರಶ್ನೆಗಳ ಆಧಾರದ ಮೇಲೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಕೂಡಲೇ ಗಮನಹರಿಸಬೇಕು ಮತ್ತು ಹಾಸನ ಜಿಲ್ಲೆಯ ಸ್ಥಳೀಯ ಬೇಡಿಕೆಗಳ ಕುರಿತು ಚರ್ಚಿಸಲು ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೈತ ಸಂಘದ ಮುಖಂಡರುಗಳನ್ನು ಮತ್ತು ಸಂಬAಧಿಸಿದ ಅಧಿಕಾರಿಗಳನ್ನು ಒಳಗೊಂಡ ಸಭೆಯೊಂದನ್ನು ಕರೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಮುಖಂಡರಾದ ದೇವರಾಜ್, ಎಚ್.ಎಸ್. ಮಂಜುನಾಥ್, ಶ್ರೀಧರ, ರುದ್ರೇಶ್ ಸೇರಿದಂತೆ ನೂರಾರು ರೈತರು ಇದ್ದರು.

ಬೇಡಿಕೆಗಳು ಈ ರೀತಿ ಇವೆ
೧. ರೈತರ ಬೆಳೆಗಳನ್ನು ಹಾನಿಮಾಡುತ್ತಿರುವ ಕಾಡುಪ್ರಾಣಿಗಳನ್ನು ನಿಯಂತ್ರಿಸಬೇಕು
೨. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು
೩. ರೈತರಿಂದ ಬೆಳೆ ವಿಮೆ ಕಂತು ಕಟ್ಟಿಸಿಕೊಂಡು ಪರಿಹಾರ ನೀಡದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು
೪. ಕೃಷಿ ಉಪಯೋಗಿ ಯಂತ್ರೋಪಕರಣಗಳು, ರಸಗೊಬ್ಬರ, ಕೀಟನಾಶಕ, ಪೈಪುಗಳು ಮತ್ತು ಡೀಸೆಲ್, ಪೆಟ್ರೋಲ್ ಬೆಲೆಗಳನ್ನು ನಿಯಂತ್ರಿಸಬೇಕು.
೫. ಪ್ರತೀ ತಾಲ್ಲೂಕಿನಲ್ಲೂ ಶಾಸಕರಧ್ಯಕ್ಷತೆಯಲ್ಲಿ ಕೂಡಲೇ ಬಗರ್‌ಹುಕುಂ ಸಕ್ರಮೀಕರಣ ಸಮಿತಿಗಳನ್ನು ರಚಿಸಿ, ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು.
೬. ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ರೈತ ಮುಖಂಡರು ಮತ್ತು ಕೃಷಿಗೆ ಸಂಬಂಧಿಸಿದ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಎಪಿಎಂಸಿ, ನೀರಾವರಿ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆಯಬೇಕು.

Donate Janashakthi Media

Leave a Reply

Your email address will not be published. Required fields are marked *