ಬೆಂಗಳೂರು : ಹತ್ತು ಹೆಚ್ ಪಿ ಗಿಂತ ಕಡಿಮೆ ಇರುವ ಎಲ್ಲಾ ಕೃಷಿ ಪಂಪಸೆಟ್ ಗಳಿಗೆ, ಮೀಟರ್ ಅಳವಡಿಸಿ, ಅದರ ಆರ್ ಆರ್ ನಂಬರ್ ಗಳನ್ನು ರೈತರ ಆಧಾರ್ ಕಾರ್ಡ್ ಜೊತೆ ಜೋಡಣೆ ಮಾಡಬೇಕು ಎಂದು ರಾಜ್ಯದ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳಿಗೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ( KERC) ಆದೇಶ ಹೊರಡಿಸಿರುವುದು ಪಂಪಸೆಟ್ ಅವಲಂಬಿಸಿ ಕೃಷಿ ಮಾಡುತ್ತಿರುವ ರೈತರಿಗೆ ಅಘಾತಕಾರಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಜಂಟಿ ಹೇಳಿಕೆ ನೀಡಿದ್ದು, ಇನ್ನು ಆರು ತಿಂಗಳ ಒಳಗೆ ಎಲ್ಲಾ ಕೃಷಿ ಪಂಪಸೆಟ್ ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿದ್ದರೆ ಅಂತಹ ಕೃಷಿ ಪಂಪಸೆಟ್ ಗಳಿಗೆ ಸರ್ಕಾರದ ಸಹಾಯ ಧನ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಸಿರುವ ಕೆಇಆರ್ ಸಿ ಸುತ್ತೋಲೆಯನ್ನು ಈ ತಕ್ಷಣ ವಾಪಸ್ಸು ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸಿ ರೈತರ ಆತಂಕವನ್ನು ನಿವಾರಿಸಬೇಕು ಎಂದು ರಾಜ್ಯ ಸರ್ಕಾರದ ಇಂಧನ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಈಗಾಗಲೇ ನಷ್ಟದಲ್ಲಿ ನಡೆಯುತ್ತಿದೆ. ಕೃಷಿ ಲಾಗುವಾಡುಗಳ ದುಬಾರಿ ವೆಚ್ಚದಿಂದಾಗಿ ,ಪ್ರತಿಯೊಂದು ರೈತ ಕುಟುಂಬವು ಅಪಾರ ಸಾಲ-ಸಂಕಟವನ್ನು ಅನುಭವಿಸುತ್ತಿದೆ. ದೇಶದ ಹಾಗೂ ರಾಜ್ಯದ ಆಹಾರ ಭದ್ರತೆ, ಸ್ವಾವಲಂಬನೆಗೆ ಇಷ್ಟೆಲ್ಲಾ ಸಂಕಟಗಳ ನಡುವೆ ಶ್ರಮಿಸುತ್ತಿರುವ ರೈತರನ್ನು ಮತ್ತಷ್ಟು ಸಂಕಟಕ್ಕೆ ತಳ್ಳುವ ಕ್ರಮಗಳು ರೈತ ಸಮುದಾಯದ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತವೆ. ಭೂಮಿ ಮತ್ತು ನೀರು ರೈತರ ಮೂಲಭೂತ ಅವಶ್ಯಕತೆಯಾಗಿದೆ. ಇಂತಹ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಇರುವ ಸರ್ಕಾರಗಳು ತಮ್ಮ ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತಿಲ್ಲ. ಜೀವನ ವೆಚ್ಚ ಮತ್ತು ಬೇಸಾಯದ ವೆಚ್ಚದ ಅಧಿಕ ಭಾರದಿಂದ ನರಳುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಇಂತಹ ನಿರ್ಧಾರಗಳನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ರಂಗವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಕರಾಳ ವಿದ್ಯುತ್ ತಿದ್ದುಪಡಿ ಕಾಯ್ದೆ 2022 ,ರೈತರ ಪ್ರಬಲ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಮಂಡನೆಯಾಗಿದೆ. ಇದು ಸಂಸತ್ತಿನಲ್ಲಿ ಅಂಗೀಕಾರ ಆಗುವ ಮುನ್ನವೇ ಇಂತಹ ರೈತ ವಿರೋಧಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡುವ ಪ್ರಯತ್ನವು ಕಾನೂನಿನ ಆಳ್ವಿಕೆಯ ಅಣಕವಾಗಿದೆ. ಈ ಕರಾಳ ಕಾಯ್ದೆಯ ಸೆಕ್ಷನ್ 65 ಹಾಗೂ 66 ,ಉಚಿತ ಹಾಗೂ ಸಬ್ಸಿಡಿ ದರದಲ್ಲಿ ವಿದ್ಯುತ್ ವಿತರಣೆ ಯನ್ನು ನಿರ್ಭಂದಿಸಿದೆ. ಎಲ್ಲಾ ಪಂಪಸೆಟ್ ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಸೂಲಿ ಮಾಡಲು ವಿದ್ಯುತ್ ವಿತರಣಾ ಕಂಪನಿಗಳಿಗೆ ಈ ತಿದ್ದುಪಡಿ ಕಾಯ್ದೆ ಅಧಿಕಾರ ನೀಡುತ್ತದೆ. ಇಂತಹ ಕರಾಳ ಕಾಯ್ದೆಯನ್ನು ರಾಜ್ಯ ಸರ್ಕಾರ ,ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ಮಾದರಿಯಲ್ಲಿ ವಿರೋಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಪಂಪಸೆಟ್ ಗಳಿಗೆ ಆಧಾರ್ ಕಾರ್ಡ್ ಜೋಡಣೆಯ ಉದ್ದೇಶವು ,ನೇರ ನಗದು ವರ್ಗಾವಣೆ (DBT) ವ್ಯಾಪ್ತಿಗೆ ಕೃಷಿ ಪಂಪಸೆಟ್ ಗಳನ್ನು ಒಳಪಡಿಸಬೇಕಾದ ಕರಾಳ ಕಾಯ್ದೆಯ ಅಗತ್ಯವನ್ನು ಪೂರೈಸುವ ದುರುದ್ದೇಶವನ್ನು ಹೊಂದಿದೆ. ಈಗಾಗಲೇ ಅಡುಗೆ ಅನಿಲ ಸಬ್ಸಿಡಿ ವಿಷಯದಲ್ಲಿ ಆದಂತೆ ಕೃಷಿ ಪಂಪಸೆಟ್ ಗಳಿಗೂ ಆಗುತ್ತದೆ. ಒಕ್ಕೂಟ ಸರ್ಕಾರದ ತೆರಿಗೆ ನೀತಿಯಿಂದಾಗಿ ಆದಾಯ ನಷ್ಟ ಅನುಭವಿಸುತ್ತಿರುವ ರಾಜ್ಯಗಳ ಮೇಲೆ ನೇರ ನಗದು ವರ್ಗಾವಣೆ ಹೊರೆ ಹಾಕುವುದನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಬಾರದು. ಈಗ ಇರುವಂತೆ ಹತ್ತು ಹೆಚ್ ಪಿ ವರೆಗಿನ ಕೃಷಿ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ಸರಬರಾಜು ಮುಂದುವರೆಸಬೇಕು ಹಾಗೂ ಗುಣಮಟ್ಟದ ವಿದ್ಯುತ್ ಅನ್ನು ಪೂರೈಸಬೇಕು ,ರೈತಾಪಿ ಕೃಷಿ ಯನ್ನು ನಾಶ ಮಾಡುವ KERC ಯ ರೈತ ವಿರೋಧಿ ಸುತ್ತೋಲೆಯನ್ನು ಕೂಡಲೇ ವಾಪಸ್ಸು ಪಡೆಯುವಂತೆ ಮಾಡಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು .ಇಲ್ಲವಾದರೆ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ಎಚ್ಚರಿಸಿದೆ.