ದುಡಿಯುವವರ ಆದಾಯ ಕಡಿಮೆಯಾಗುತ್ತಿದೆ, ಕುಳಿತು ತಿನ್ನುವವರ ಆದಾಯ ಹೆಚ್ಚುತ್ತಿದೆ – ಯು.ಬಸವರಾಜ

ಹಾಸನ :ದೇಶದಲ್ಲಿ ಭೂಮಿಯನ್ನೇ ನಂಬಿ ದುಡಿಮೆ ಮಾಡುತ್ತಿರುವ ರೈತರು ಮತ್ತು ಕೂಲಿಕಾರರ ಆಧಾಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ ದೇಶದ ಕೇಲವೇ ಕೆಲವು ಶ್ರೀಮಂತರ ಆಧಾಯ ಮತ್ತು ಆಸ್ತಿ ಎಲ್ಲೆ ಮೀರಿ ಬೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಬಿಕ್ಕಟ್ಟಿನಲ್ಲಿರುವ ಕೃಷಿಯನ್ನಾಗಲಿ ಅಥವಾ ಸಂಕಷ್ಟದಲ್ಲಿರುವ ರೈತ ಸಮುದಾಯವನ್ನಾಗಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಯು.ಬಸವರಾಜರವರು ಆತಂಕ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಭವನದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) 3ನೇ ಜಿಲ್ಲಾ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡಿದರು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಆಧಾಯವನ್ನು ದ್ವಿಗುಣ ಗೊಳಿಸುತ್ತೇನೆಂದು ಭರವಸೆ ನೀಡಿ, ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ತಿದ್ದುಪಡಿ ಮಾಡುವ ಮೂಲಕ ರೈತರ ಮತ್ತು ಕೂಲಿಕಾರರ ಆಧಾಯವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲಾಗಿದೆ. ಒಂದು ಕಡೆ ಸರ್ಕಾರಿ ಮತ್ತು ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡದೆ, ಮತ್ತೊಂದುಕಡೆ ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯಿಂದಾಗಿ ಕೃಷಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ದೇಶಕ್ಕೆ ಅನ್ನನೀಡುವ ರೈತಾಪಿ ವರ್ಗ ಸಂಪೂರ್ಣ ನಾಶವಾಗುತ್ತದೆ. ರೈತರು ಜಾಗೃತರಾಗದಂತೆ ಅವರ ಮೇಲೆ ಜಾತಿ, ಧರ್ಮ ಮತ್ತು ದೇವರುಗಳು, ಪಾಪ, ಪುಣ್ಯದಂತಹ ಮೌಡ್ಯದ ವಿಚಾರಗಳನ್ನು ತುಂಬಿ ದಾರಿತಪ್ಪಿಸಲಾಗುತ್ತಿದೆ ಮತ್ತು ಅವರ ನಡುವಿನ ಐಕ್ಯತೆಯನ್ನು ವ್ಯವಸ್ಥಿತವಾಗಿ ಒಡೆಯು ಮೂಲಕ ಆಳುವ ವರ್ಗ ಲಾಭಮಾಡಿಕೊಳ್ಳುತ್ತಿದೆ. ರೈತರು ಮತ್ತು ಕೃಷಿಯನ್ನು ಉಳಿಸಲು ಎಲ್ಲಾ ದುಡಿಯುವ ಜನ ಒಗ್ಗಟ್ಟಾಗಿ ಸಂಘಟಿತ ಹೋರಾಟಗಳನ್ನು ನಡೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಧರ್ಮೇಶ್‌ ಮಾತನಾಡಿ, ಜಿಲ್ಲೆಯಲ್ಲಿ ರೈತರ ಹಲವು ಪ್ರಶ್ನೆಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ನಿರ್ಣಾಯಕ ಮಧ್ಯಪ್ರವೇಶವನ್ನು ಮಾಡುತ್ತಿದೆ. ಅದೇ ಸಂದರ್ಭದಲ್ಲಿ ನಮ್ಮ ಕೂಗು ಇನ್ನೂ ಪ್ರಭಲವಾಗಿ ಆಳುವವರಿಗೆ ಕೇಳಿಸುವಂತಾಗಬೇಕು. ಆಗ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ ಎಂದರು.

ಹಾಸನ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ ಇಲ್ಲಿ ಹಲವು ರೈತ ಚಳುವಳಿಗಳು ನಡೆದ ಉದಾಹರಣೆಗಳಿವೆ, ಕಾಲಘಟ್ಟ ಬದಲಾಗಿದ್ದು ರೈತರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರವನ್ನು ಕಂಡುಕೊಳ್ಳಲು ತಾವೇ ಹೋರಾಟಗಳನ್ನು ನಡೆಸಬೇಕು, ನಮ್ಮಿಂದ ಆಯ್ಕೆಯಾಗಿ ಹೋದ ಯಾವ ಪಕ್ಷದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳಿಂದಲೂ ರೈತರ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಜಿಲ್ಲೆಯಲ್ಲಿ ಕೆಂಬಾವುಟದ ಅಡಿಯಲ್ಲಿ ರೈತರನ್ನು ಸಂಘಟಿಸಲು ಕಾರ್ಮಿಕ ಸಂಘಟನೆ ಯಾವಾಗಲೂ ಸಹಕಾರಿಯಾಗಿರುತ್ತದೆ ಎಂದು ಸಮ್ಮೇಳನದ ಯಶಸ್ವಿಗೆ ಶುಭಕೋರಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಆರ್.ನವೀನ್‌ಕುಮಾರ್ ಮಾತನಾಡಿ, ರೈತ ಸಮುದಾಯವನ್ನು ಸಂಪೂರ್ಣವಾಗಿ ನಿರ್ಣಾಮ ಮಾಡುವ ರೀತಿಯ ನೀತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಾರಿಯಾಗುತ್ತಿವೆ. ನಾವೇ ಬೆಳೆಯುತ್ತಿರುವ ಬಹುತೇಕ ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಮತ್ತು ಅಮೇರಿಕಾದಿಂದ ತರಿಸಿಕೊಳ್ಳುವ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಂಡು ರೈತರ ಬದುಕಿನ ಮೇಲೆ ಗದಾಪ್ರಹಾರ ಮಾಡುತ್ತಿದೆ. ಈ ನೀತಿಗಳನ್ನು ಹಿಮ್ಮೆಟ್ಟಿಸದ ಹೊರತು ರೈತ ಸಮುದಾಯಕ್ಕೆ ಉಳಿಗಾಲವಿಲ್ಲ. ಹಾಸನ ಜಿಲ್ಲೆಯಲ್ಲಿ, ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿ, ಬಲವಂತದ ಭೂಸ್ವಾಧೀನ, ನೀರಾವರಿ ಮೊದಲಾದ ಸಮಸ್ಯೆಗಳ ವಿರುದ್ಧ ಕೆಪಿಆರ್‌ಎಸ್ ನಿರ್ಣಾಯಕ ಹೋರಾಟವನ್ನು ರೂಪಿಸಿದೆ ಮುಂದಿನ ದಿನಗಳಲ್ಲಿ ಭೂಮಿಯ ಪ್ರಶ್ನೆಯನ್ನು ಇತ್ಯರ್ಥ ಪಡಿಸುವವರೆಗೂ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಹೋರಾಟವನ್ನು ಕೈಗೊಳ್ಳಬೇಕಾದ ಅನಿರ್ವಾತೆ ಇದೆ ಎಂದರು.

ರೈತರ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಗೊಳಿಸಲು ಒತ್ತಾಯಿಸಿ, ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಬಲವಂತದ ಭೂಸ್ವಾಧೀನ ಕೈಬಿಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಪ್ರೀಪೈಡ್ ಡಿಜಿಟಲ್ ಮೀಟರ್ ಅಳವಡಿಸುವ ವಿದ್ಯುತ್ ಖಾಸಗೀಕರಣ ನಿಲ್ಲಲಿ, ರೈತರ ಸ್ವಾವಲಂಬನೆಗೆ ದಕ್ಕೆತರುವ ಬೀಜ ಮಸೂದೆ ವಿರುದ್ಧ, ರೈತಾಪಿ ಕೃಷಿ ಉಳಿಸಲು, ಕೃಷಿ ಕಾರ್ಪೊರೇಟೀಕರಣ ತಡೆಯಲು, ಜಿಲ್ಲೆಯ ಎಲ್ಲಾ ರೈತರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಮ್ಮೇಳವನ್ನು ನಡೆಸಲಾಗುತ್ತಿದೆ.

ವೇದಿಕೆಯಲ್ಲಿ ಜಿಲ್ಲಾ ರೈತ ಮುಖಂಡರಾದ ಹೆಚ್.ಎಸ್.ಮಂಜುನಾಥ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ದಲಿತ ಹಕ್ಕುಗಳ ಸಮಿತಿಯ ಸಂಚಾಲಕರಾದ ಎಂ.ಜಿ.ಪೃಥ್ವಿ, ರೈತ ಮುಖಂಡರುಗಳಾದ ಗಿಡ್ಡೇಗೌಡ, ತೇಜಸ್ ಗೌಡ ಇದ್ದರು ವಾಸುದೇವ ಕಲ್ಕೆರೆ ಸ್ವಾಗತಿಸಿದರೆ ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮ್ಮೇಳನದ ಆರಂಭಕ್ಕೂ ಮುನ್ನ ನೂರಾರು ರೈತರು ಕೆಂಬಾವುಟಗಳನ್ನಿಡಿದು ರೈತ ವಿರೋಧಿ ನೀತಿಗಳನ್ನು ಧಿಕ್ಕರಿಸುವ ಘೋಷಣೆಗಳನ್ನು ಕೂಗುತ್ತಾ ನಗರದ ಹೇಮಾವತಿ ಪ್ರತಿಮೆಯ ಬಳಿಯಿಂದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿ ಸ್ವಾಭಿಮಾನ ಭವನದಲ್ಲಿ ಸಮಾವೇಶಗೊಂಡರು. ಪ್ರತಿನಿಧಿಗಳ ಅಧಿವೇಶನಕ್ಕೂ ಮುನ್ನ ರೈತ ಸಂಘದ ಕೆಂಬಾವುಟವನ್ನು ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರಾದ ಹೆಚ್.ಆರ್.ನವೀನ್‌ಕುಮಾರ್ ಆರೋಹಣ ಮಾಡಿದರು.

ನೂತನ ಜಿಲ್ಲಾ ಸಮಿತಿ ಆಯ್ಕೆ
23 ಜನರನ್ನೊಳಗೊಂಡ ಕರ್ನಾಟಕ ಪ್ರಾಂತ ರೈತ ಸಂಘದ ನೂತನ ಹಾಸನ ಜಿಲ್ಲಾಸಮಿತಿಯನ್ನು ಸಮ್ಮೇಳನ ಸರ್ವಾನುಮತದಿಂದ ಆಯ್ಕೆ ಮಾಡಿತು.

ಅಧ್ಯಕ್ಷರಾಗಿ ಹೆಚ್.ಎಸ್. ಮಂಜುನಾಥ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ತೇಜಸ್ ಗೌಡ, ಸುಜಾತ ಕುಮಾರಸ್ವಾಮಿ, ವಾಸುದೇವ ಕಲ್ಕೆರೆ
ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್. ನವೀನ್‌ಕುಮಾರ್,
ಕಾರ್ಯದರ್ಶಿಗಳಾಗಿ ಗಿಡ್ಡೇಗೌಡ, ಗಂಗಾಧರ್, ಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *