ಟಿ.ಸುರೇಂದ್ರ ರಾವ್
- ದಿವಾಳಿ ಹಂತ ತಲುಪಿದ್ದ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯ ಪುನರುಜ್ಜೀವನ!
- ಇಡೀ ದೇಶಕ್ಕೇ ಎಡ ಪ್ರಜಾಸತ್ತಾತ್ಮಕ ರಂಗದ ಪರ್ಯಾಯ ಅಭಿವೃದ್ಧಿ ಮಾದರಿ!
ಹಿಂದೂಸ್ತಾನ್ ನ್ಯೂಸ್ ಪ್ರಿಂಟ್ಸ್ ಲಿ. ಒಂದು ಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಾರ್ವಜನಿಕ ಕಾರ್ಖಾನೆ. ಅದು ಕೇರಳದ ಮುವ್ವುತ್ತಫುಳದ ತೀರದಲ್ಲಿರುವ ಕಾಗದ ತಯಾರಿಸುವ ಕಾರ್ಖಾನೆ. ಅದಕ್ಷ ಆಡಳಿತದ ಕಾರಣ ದಿವಾಳಿಯ ಹಂತ ತಲುಪಿದ್ದ ಅದನ್ನು ಹರಾಜಿಗೆ ಇಡಲಾಗಿತ್ತು.
ಕೇರಳ ಎಡರಂಗ ಸರ್ಕಾರವು ರೂ.146 ಕೋಟಿಗೆ ಅದನ್ನು ವಹಿಸಿಕೊಂಡಿತ್ತು. ಎಡ ಪ್ರಜಾಸತ್ತಾತ್ಮಕ ರಂಗದ ಅಭಿವೃದ್ಧಿ ಮಾದರಿ ಅಡಿಯಲ್ಲಿ ಅದನ್ನು ನಾಲ್ಕು ಹಂತಗಳಲ್ಲಿ ಪುನರುಜ್ಜೀವಗೊಳಿಸುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿತು. ಈ ಜನವರಿಯಲ್ಲಿ ಅದು ಕೇರಳ ಪೇಪರ್ ಪ್ರಾಡಕ್ಟ್ಸ್ ಲಿ. ಆಗಿ ಕಾರ್ಯಾರಂಭ ಮಾಡಿತು.
ಪುನರುಜ್ಜೀವನದ ಮೊದಲ ಎರಡು ಹಂತಗಳಿಗಾಗಿ ರೂ.154.39 ಕೋಟಿಗಳನ್ನು ಮತ್ತು ಮೂರನೇ ಹಂತದಲ್ಲಿ ಸಾಮರ್ಥ್ಯ ವಿಸ್ತರಣೆ ಮತ್ತು ಬಂಡವಾಳ ವೈವಿಧ್ಯೀಕರಣಕ್ಕಾಗಿ ರೂ.650/- ಕೋಟಿಯನ್ನು ಹೂಡಲಾಗುತ್ತಿದೆ.
ನವೆಂಬರ್ 1 ರಂದು ಕೇರಳವು ಒಂದು ರಾಜ್ಯವಾಗಿ ರೂಪುಗೊಂಡ 66ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವಾಗ ಆ ಕಾರ್ಖಾನೆಯು ಕಾಗದದ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿತು. ಕಾಗದದ ಮೊದಲ ಉತ್ಪನ್ನದ ಸುರುಳಿಯನ್ನು ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಬಿಡುಗಡೆ ಮಾಡಿದರು.
ನಿಷ್ಕ್ರಿಯಗೊಂಡಿದ್ದ ಕೇಂದ್ರ ಸಾರ್ವಜನಿಕ ವಲಯದ ಕಾರ್ಖಾನೆಯೊಂದನ್ನು ಹರಾಜಿನಲ್ಲಿ ಪಡೆದ ಕೇರಳದ ಸರ್ಕಾರವು ಈಗ ಅದನ್ನು ಪುನರುಜ್ಜೀವಗೊಂಡ ಘಟಕವಾಗಿ ಪರಿವರ್ತಿಸಿ ಉತ್ಪಾದನೆ ಆರಂಭಿಸಿ ಒಂದು ಹೊಸ ಇತಿಹಾಸವನ್ನೇ ಬರೆದಿದೆ ಎಂದು ಕೇರಳ ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್ ಅವರು ಹೇಳಿದರು.
2023 ರ ಮಾರ್ಚ್ ತಿಂಗಳಿನಿಂದ ಲಾಭ ಗಳಿಸುವ ನಿರೀಕ್ಷೆಯಿದ್ದು, ಅಗ ಪೂರ್ಣಕಾಲದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ವಾರ್ಷಿಕ ರೂ.3000 ಕೋಟಿಗಳ ವಹಿವಾಟನ್ನು ತಲುಪುವ ಗುರಿ ಹೊಂದಿದ್ದು, 5 ಲಕ್ಷ ಟನ್ನುಗಳ ಕಾಗದ ಉತ್ಪಾದನೆ ಮಾಡಲಾಗುತ್ತದೆ ಎಂದೂ ತಿಳಿಸಿದರು. ಅಷ್ಟೇ ಅಲ್ಲ, ಅದು 3000 ಉದ್ಯೋಗಗಳನ್ನು ಸೃಷ್ಟಿಸಲಿದೆ. 45 ಜಿ.ಎಸ್.ಎಂ.ನ ಉತ್ತಮ ಗುಣಮಟ್ಟದ ನ್ಯೂಸ್ ಪ್ರಿಂಟ್ ಕಾಗದವನ್ನು ಉತ್ಪಾದಿಸುತ್ತಿದೆ ಎಂದೂ ತಿಳಿಸಿದರು.
ಈ ಕಾರ್ಖಾನೆಗೆ ಅಗತ್ಯವಿದ್ದ ಬಂಡವಾಳವನ್ನು ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಫಂಡ್ ಬೋರ್ಡ್) ಯಿಂದ ಪಡೆಯಲಾಗುತ್ತಿದೆ.