ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ – ಭಾಗ-4
ಕೋವಿಡ್-19 ಕುರಿತು ಮೊದಲಿನಿಂದಲೂ ವಾಸ್ತವಕ್ಕೆ ದೂರವಾದ ಅತಿರಂಜಿತ ನಿಲುವುಗಳನ್ನು ತಾಳಿರುವ ಸರಕಾರ ಮತ್ತು ಮಾಧ್ಯಮಗಳು ಲಸಿಕೆ ಕುರಿತು ಸಹ ಎಲ್ಲ ಸಮಸ್ಯೆಗಳು ಪರಿಹಾರವಾದವು ಎಂಬಂತೆ ವರ್ತಿಸುತ್ತಿವೆ. ಆದರೆ ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತವೇ ಇದೆ. ಈ ಕುರಿತು ವಾಸ್ತವವನ್ನು ವಿಶ್ಲೇಷಿಸುವ ಲೇಖನ ಸರಣಿ ಇದು. ಈ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಉತ್ತರ ಕೊಡುವ ಪ್ರಯತ್ನವಿದು. ಹಿಂದಿನ ಹಲವಾರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವಿರುವ, ಆ ದೃಷ್ಟಿಯಿಂದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ -ಡಾ| ಕೆ. ಸುಶೀಲಾ ಅವರು ಇದನ್ನು ಬರೆದಿದ್ದಾರೆ.
ಭಾಗ-1 ರಲ್ಲಿ ದೇಹ ರಕ್ಷಣಾ ವ್ಯವಸ್ಥೆಯ ಕುರಿತು ತಿಳಿಸಿ, ಅದರ ಆಧಾರದ ಮೇಲೆ ಲಸಿಕೆಯ ವಿಜ್ಞಾನವನ್ನು ಈಗಾಗಲೇ ವಿವರಿಸಿದ್ದಾರೆ. ಈ ಭಾಗ 2 ರಲ್ಲಿ ಲಸಿಕೆಯ ಅಭಿವೃದ್ಧಿಯ ಪ್ರಸಕ್ತ ಸ್ಥಿತಿ, ಲಸಿಕೆಯ ಒಟ್ಟು ಅಗತ್ಯ ಎಷ್ಟು? ಸದ್ಯಕ್ಕೆ ಲಭ್ಯವಾಗಬಹುದಾದ ಲಸಿಕೆ ಎಷ್ಟು – ಎಂಬುದರ ಬಗ್ಗೆ ವಿವರಿಸಿದ್ದಾರೆ. ಭಾಗ -3 ರಲ್ಲಿ ಲಸಿಕೆಯ ವೆಚ್ಚ, ಸಾಗಾಣಿಕೆ ಹಾಗೂ ಲಸಿಕೆ ಯಾರಿಗೆ, ಯಾವಾಗ, ಹೇಗೆ ? ಎಂಬ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.ಈ ಕೊನೆಯ ಭಾಗದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿದ್ದಾರೆ.
-ಡಾ| ಕೆ. ಸುಶೀಲಾ
ಈಗಿರುವ ಮಾಹಿತಿಯಂತೆ ಎರಡನೇ ಲಸಿಕೆ ಪಡೆದ 14 ದಿನಗಳ ನಂತರ, ಫಲಾನುಭವಿಗಳಲ್ಲಿ ರೋಗನಿರೋಧಕ ಶಕ್ತಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ರೋಗಲಕ್ಷಣ ಸಹಿತ ಮತ್ತು ರೋಗ ಲಕ್ಷಣ ರಹಿತ ಜನರಿಂದ ಅತ್ಯಂತ ಕ್ಷಿಪ್ರವಾಗಿ, ಸುಲಭದಲ್ಲಿ ಇತರರಿಗೆ ಹರಡುತ್ತದೆ. ಹಾಗಾಗಿ ಈ ಲಸಿಕೆಯನ್ನು ಇತರ ಲಸಿಕೆಗಳನ್ನು ನೀಡುವಂತೆ, ಅಂಗನವಾಡಿ, ಶಾಲೆ ಹಾಗೂ ನಿರ್ದಿಷ್ಟ `ಬೂತ್’ಗಳಲ್ಲಿ ಫಲಾನುಭವಿಗಳನ್ನು ಗುಂಪುಸೇರಿಸಿ ನೀಡುವುದು ಅಪಾಯ. ಈಗಾಗಲೇ ಸಮಯಾಭಾವ ಮತ್ತು ಕಾರ್ಯಕರ್ತರ ಕೊರತೆ ಇರುವಾಗ, ಮನೆ ಮನೆಗೆ ತೆರಳಿ ನೀಡುವುದು ಸಾಧ್ಯವೇ? ಹಾಗೂ ಒಂದೇ ಮನೆಯಲ್ಲಿ ಬೇರೆ ಬೇರೆ ಆದ್ಯತೆ ಇರುವ ಸದಸ್ಯರಿರುವಾಗ ಇವರೆಲ್ಲರಿಗೆ ಒಂದೇ ಬಾರಿ ನೀಡುವುದು ಅಸಾಧ್ಯ. ಹೀಗಾಗಿ ಒಂದೇ ಮನೆಗೆ ಹಲವು ಬಾರಿಯ ಭೇಟಿಯ ಅವಶ್ಯಕತೆ ಇದೆ.
ಅದಾಗಲೇ ಕೊವಿಡ್ ಬಂದವರಿಗೆ ಲಸಿಕೆ ನೀಡಬೇಕೆ? ಬೇಡವಾದರೆ ಎಷ್ಟು ಕಾಲ? ಇಷ್ಟೊಂದು ಸಂಖ್ಯೆಯ ಲಸಿಕೆ ನೀಡಲು ಬೇಕಾದ ಸಿರಿಂಜ್ ಹಾಗೂ ಸೂಜಿಗಳನ್ನು ಪೂರೈಸಲು ಸಾಧ್ಯವೆ?
ಬಿಲಿಯಗಟ್ಟಲೆ ಜನರಿಗೆ ಲಸಿಕೆ ನೀಡುವಾಗ ಹಲವಾರು ಹೊಸ ತೊಂದರೆ ಫಲಾನುಭಾವಿಗಳಲ್ಲಿ ಕಾಣಿಸಿಕೊಳ್ಳಬಹುದು. ಅತ್ಯಂತ ಕನಿಷ್ಟ ಪ್ರಮಾಣದಲ್ಲಿ ಗಂಭೀರ ತೊಂದರೆಯೂ ಕಾಣಿಸಿಕೊಳ್ಳಬಹುದು. ಈಗ ಅದನ್ನು ತತ್‍ಕ್ಷಣ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮಿಂಚಿನ ವೇಗದಲ್ಲಿ ಸತ್ಯ, ಮತ್ತು ಸುಳ್ಳುಗಳನ್ನು ಪ್ರಪಂಚದಲ್ಲೆಡೆ ಹರಡಲು ಸಾಧ್ಯವಿರುವ ಈ ಕಾಲದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಹಿನ್ನಡೆಯಾಗುವ ಸಂಭವ ಹೆಚ್ಚು.
ಇದನ್ನು ಓದಿ : ಕೊವೀಡ್ ಲಸಿಕೆ ಉಚಿತ – ಡಾ.ಹರ್ಷವರ್ಧನ್
ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ವಿಜ್ಞಾನ ವಿರೋಧಿ ಹಲವು ಸಂಘಟನೆಗಳು ಈಗಾಗಲೇ ಕೊವಿಡ್-19 ಕಾಯಿಲೆಯೇ ಸುಳ್ಳು. ಇದಕ್ಕೆ ಲಸಿಕೆ ಬೇಕಾಗಿಲ್ಲ ಎನ್ನುವ ಪ್ರಚಾರ ಭರದಿಂದ ಸಾಗಿಸುತ್ತಿದ್ದಾರೆ. ಹೀಗಾಗಿ ಲಸಿಕೆಗೆ ಅರ್ಹ ಫಲಾನುಭವಿಗಳೂ ದೊಡ್ಡ ಪ್ರಮಾಣದಲ್ಲಿ ಈ ಲಸಿಕೆಯ ಪ್ರಯೋಜನ ಪಡೆಯಲು ಹಿಂಜರಿಯುವುದು ಸಾಧ್ಯ.
ಲಸಿಕಾ ಕಾರ್ಯಕ್ರಮಕ್ಕೆ ಸಿಬ್ಬಂದಿ
ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಬೃಹತ್ ಪ್ರಮಾಣದ ಲಸಿಕೆಯನ್ನು ಶೀತಲ ಸರಪಳಿಯ ಮೂಲಕ ಕಾಪಾಡುತ್ತ ವಿವಿಧೆಡೆಗೆ ಸಾಗಿಸಲು, ಸಂಗ್ರಹಿಸಲು ಮುಂದೆ ಫಲಾನುಭವಿಗಳಿಗೆ ಇಂಜಕ್ಸ್‍ನ್ ಮೂಲಕ ನೀಡಲು, ಲಸಿಕೆಯಿಂದ ಬರಬಹುದಾದ ಚಿಕ್ಕಪುಟ್ಟ ತೊಂದರೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು, ಅಪ್ಪಿತಪ್ಪಿ ಗಂಭೀರ ತೊಂದರೆ ಬಂದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳ ಅರಿವಿನ ಬಗ್ಗೆ ಸೂಕ್ತ ತರಬೇತಿ ಪಡೆದ ಅಪಾರ ಸಂಖ್ಯೆಯ ಕಾರ್ಯಕರ್ತರ ಪಡೆ ಈ ಲಸಿಕಾ ಕಾರ್ಯಕ್ರಮ ಸಫಲವಾಗಿ ನೆರವೇರಲು ಅವಶ್ಯಕ. ಈಗಾಗಲೇ ಕೊವಿಡ್-19ರ ಹೋರಾಟದಿಂದ ಬಳಲಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸೇವೆಯ ಕಾರ್ಯಕರ್ತರು ಈ ಹೊರೆಯನ್ನು ಎಷ್ಟು ಸಮರ್ಥವಾಗಿ ನೆರವೇರಿಸಲು ಸಾಧ್ಯವೆಂದು ಕಾಲವೇ ತಿಳಿಸಬೇಕು. ಇವರೆಲ್ಲರಿಗೆ ತರಬೇತಿಗೆ ಕಾಲಾವಕಾಶ ಬೇಕು.
ಲಸಿಕೆಯ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯದೇ?
ಲಸಿಕೆ ಎಲ್ಲರಿಗೂ ಲಭ್ಯವಾಗಲೂ 2-3 ವರ್ಷವಾದರೂ ಬೇಕು. ಅಲ್ಲಿಯ ತನಕ ಕೊವಿಡ್ ಭಯದಿಂದ ಕಾಯಲು ಸಾಧ್ಯವಾಗದ ಉಳ್ಳವರನೇತರು ಈ ಲಸಿಕೆಯ ಲಭ್ಯತೆಗಾಗಿ ಅಡ್ಡದಾರಿ ಹಿಡಿಯಬಹುದು. ಎಲ್ಲವೂ ವ್ಯಾಪಾರೀಕರಣವಾಗಿರುವ, ಭ್ರಷ್ಟಾಚಾರ, ಕಾಳಸಂತೆ ಕಾಳಧನಗಳ ವ್ಯವಹಾರಗಳನ್ನು ಗೌರವಪೂರ್ಣವಾಗಿ ಸ್ವೀಕರಿಸುವ ನಮ್ಮ ಸಮಾಜದಲ್ಲಿ ಈ ಭ್ರಷ್ಟಾಚಾರ ತಡೆಗಟ್ಟುವುದು ಕಷ್ಟ.
ಎಲ್ಲಾ ಆರೋಗ್ಯ ಕಾರ್ಯಕರ್ತರು ಈ ಲಸಿಕಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಉಳಿದ ರಾಷ್ಟ್ರೀಯ ಯೋಜನೆಗಳ ಅನುಷ್ಟಾನದ ಪಾಡೇನು? ಇತರ ವೈದ್ಯಕೀಯ ಸೇವೆಯ ಗತಿ ಏನು? ಹೀಗಾಗಿ ಇತರ ಕಾಯಿಲೆಗಳಿಂದಾಗುವ ಸಾವು ನೋವಿನ ಪ್ರಮಾಣ ಅಧಿಕವಾಗುವುದು ಸಹಜ.
ಈ ಲಸಿಕಾ ಕಾರ್ಯಕ್ರಮ ಅತ್ಯಂತ ದುಬಾರಿ ಕಾರ್ಯಕ್ರಮ. ಈಗಾಗಲೇ ಆರ್ಥಿಕವಾಗಿ ಬಹಳಷ್ಟು ಬಳಲಿರುವ ಸರ್ಕಾರ ಇದಕ್ಕಾಗಿ ಸಾವಿರ, ಸಾವಿರ ಕೋಟಿ ರೂ. ಹಣ ವ್ಯಯಿಸಿ ಬಲ್ಲುದೆ?
ಇದನ್ನು ಓದಿ :ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ?
ಈಗಾಗಲೇ ಕೊವಿಡ್-19 ರ ಹೋರಾಟದಲ್ಲಿ ಉಪಯೋಗಿಸಿದ ಪಿಪಿಇ ಮುಂತಾದ ವಿಲೇವಾರಿ ಮಾಡಲು ಸಾಧ್ಯವಾಗದ ತ್ಯಾಜ್ಯದಿಂದ ಪೃಥ್ವಿ ತುಂಬಿದೆ. ಈ ಲಸಿಕಾ ಕಾರ್ಯಕ್ರಮದಿಂದ ಉಂಟಾಗುವ ಇನ್ನಷ್ಟು ತ್ಯಾಜ್ಯಗಳ ಸೂಕ್ತ ವಿಲೇವಾರಿಯ ಬಗ್ಗೆ ಸಂಬಂಧಪಟ್ಟವರು ಯೋಚಿಸುತ್ತಿದ್ದಾರೆಯೆ?
ಪೃಥ್ವಿ ಕೇಳುತಿಹಳು_
ನನ್ನ ನೆಲ ಜಲ ವಾಯುಮಂಡಲವೆಲ್ಲಾ,
ತ್ಯಾಜದಿಂದ ತುಂಬಿರುವೆ,
ನಿನ್ನ ವಾಸಕ್ಕಿಲ್ಲಿ ಸ್ಥಳವಿನ್ನು ಉಳಿದಿಲ್ಲಾ,
ಎಲ್ಲಿ ಹೋಗುವೆ ನೀ ಓ ಮಾನವಾ |
ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? : ಭಾಗ-2 ಲಸಿಕೆಯ ಲಭ್ಯತೆ, ಅಗತ್ಯ
ಕೊನೆಯ ಮಾತು:
ಹೇಳಿದ ಹತ್ತು ಹಲವು ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿ ಈ ಮಹಾನ್ ಲಸಿಕಾ ಕಾರ್ಯಕ್ರಮದ ಅನುಷ್ಟಾನದಲ್ಲಿ ನಮ್ಮ ಸರ್ಕಾರಗಳು ಸಹಲತೆಯನ್ನು ಪಡೆಯಲಿ ಎಂದು ಹಾರೈಸೋಣ. ಹಾಗೂ ಈ ಕಾರ್ಯದಲ್ಲಿ ಸಫಲತೆಗೆ ಎಲ್ಲಾ ನಾಗರಿಕರೂ ತಮ್ಮಿಂದಾಗುವ ಎಲ್ಲಾ ಸಹಕಾರ ನೀಡೋಣ.
ಇಂದು ನಮ್ಮ ದೇಶವೂ ಸೇರಿ ಪ್ರಪಂಚದ ಹತ್ತು ಹಲವು ದೇಶಗಳ ಹಲವು ಔಷಧೀಯ ಕಂಪೆನಿಗಳಲ್ಲಿ ಈಗ ಬಂದಿರುವ ಲಸಿಕೆಗಿಂತಲೂ ಉತ್ತಮವಾದ ಲಸಿಕೆಯ ಲಭ್ಯತೆಗೆ ಪ್ರಯೋಗಗಳೂ ನಡೆಯುತ್ತಿದೆ. ಇವುಗಳಲ್ಲಿ ಲಸಿಕೆಯನ್ನು ಫಲಾನುಭವಿಗಳ ಮೂಗು, ಬಾಯಿಗಳ ಮೂಲಕ ಸ್ಪ್ರೇ (ಚಿಮುಕಿಸು) ಮೂಡುವುದೂ ಒಂದು ವಿಧಾನ. ಇದರಲ್ಲಿ ಸಫಲತೆ ಪಡೆದರೆ ಲಸಿಕಾ ಕಾರ್ಯಕ್ರಮದ ಅನುಷ್ಟಾನ ಬಹಳಷ್ಟು ಸುಲಭವಾಗುವುದು.
ಯಾವುದೇ ಉಷ್ಣತೆಯಲ್ಲಿ ತನ್ನ ಸಾಮಥ್ರ್ಯ ಕಾಪಾಡಿಕೊಂಡು ಬರುವ, ಸುಲಭದಲ್ಲಿ ಫಲಾನುಭವಿಗಳಿಗೆ ನೀಡಲು ಸಾಧ್ಯವಾಗುವಂತಹ, ಪ್ರಥಮ ಲಸಿಕಾ ಪ್ರಯೋಗದಲ್ಲೇ ದೇಹಕ್ಕೆ ಶೀಘ್ರ, ಸಮರ್ಥ ಹಾಗೂ ಧೀರ್ಫಕಾಲ ದೇಹದಲ್ಲೇ ಉಳಿಯುವಂತಹ ರೋಗ ನಿರೋಧಕ ಶಕ್ತಿ ನೀಡುವ, ಪಡೆದವರ ದೇಹದಲ್ಲಿ ಯಾವುದೇ ಅಹಿತಕರ ಸಮಸ್ಯೆ ಉಂಟು ಮಾಡದ, ಅಗ್ಗದ ಬೆಲೆಯ, ಸಾಗಣೆ, ಸಂಗ್ರಹಣೆ ವಿತರಣೆ ಸುಲಭದಲ್ಲಿ ಸಾಧ್ಯವಾಗುವಂತಹ ಒಂದು ಪರಿಪೂರ್ಣತೆಗೆ ಸನಿಹ ಬರುವ ಲಸಿಕೆ ಈ ಕೋವಿಡ್-19 ಮಹಾಸೋಂಕನ್ನು ತಡೆಗಟ್ಟಲು ಅವಿಷ್ಕಾರಗೊಳ್ಳಲಿ ಎಂದು ಆಶಿಸೋಣ.
ಲಸಿಕೆಯ ಸುತ್ತ – ಪ್ರಶ್ನೆಗಳ ಹುತ್ತ “ಲಸಿಕೆ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?