ಮುನೀರ್ ಕಾಟಿಪಳ್ಳ
ಇದು ತುಳುನಾಡಿನಲ್ಲಿ ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಗೊಳಗಾಗಿ ಸಾಮಾಜಿಕ, ಧಾರ್ಮಿಕ ವಾತಾವರಣನ್ನು ಸಾಕಷ್ಟು ಬಿಸಿಯಾಗಿಸಿರುವ ರಾಜಕೀಯ ಪರಿಣಾಮಗಳುಲ್ಲ ಘಟನೆಯ ವೀಡಿಯೋ.
ಇದು ಕರಾವಳಿಯ ಮಸ್ಲಿಂ ಸಮುದಾಯದ ಮದುವೆಯ ಪ್ರಥಮ ದಿನದ ರಾತ್ರಿ ಮದುಮಗಳ ಮನೆಯಲ್ಲಿ ಮದುಮಗ ಹಾಗೂ ಆತನ ಗೆಳೆಯರಿಗೆ ಏರ್ಪಡಿಸುವ ತಾಲ ಎಂದು ಕರೆಯಲ್ಪಡುವ ವಿಶೇಷ ಔತಣ ಕೂಟದ ಸಂದರ್ಭ ನಡೆದ ಘಟನೆ. ಇದರಲ್ಲಿ ಮದುಮಗ ತುಳನಾಡಿನ ಗೇಣಿದಾರ ರೈತರು, ಕೃಷಿಕೂಲಿಕಾರರು ತಲೆಗೆ ಧರಿಸುತ್ತಿದ್ದ ಮುಟ್ಟಾಳೆಯನ್ನು ತಲೆಗೆ ಧರಿಸಿದ್ದಾನೆ. ಮುಖಕ್ಕೆ ಕಪ್ಪು ಪೈಂಟ್ ಬಳಿದು ಕೊಂಡಿದ್ದಾನೆ. ಒಂದಿಷ್ಟು ಹಳೆಯ ಬಟ್ಟೆಗಳನ್ನು ಧರಿಸಿದ್ದಾನೆ. ಗೆಳೆಯರು ಈತನ ಸುತ್ತ ಸೇರಿ ಮಲಬಾರ್ ಮುಸ್ಲಿಮರ ಸಾಂಪ್ರದಾಯಿಕ ಮಾಪಿಳ್ಳೆ ಹಾಡುಗಳನ್ನು ಹಾಡಿದ್ದಾರೆ.
(ತುಳುನಾಡಿನ ಮೂಲನಿವಾಸಿಗಳು, ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾದ ಕೊರಗರ ವೇಶ ಹಾಕುವವರು ದೇಹವಿಡೀ ಕಪ್ಪು ಬಣ್ಣ ಬಳಿದು, ಸೊಂಟಕ್ಕೊಂದು ಬಟ್ಟೆ, ತಲೆಗೆ ಮುಟ್ಡಾಳೆ ಇಟ್ಟು ಕುಣಿಯುವುದು ಇಲ್ಲಿ ರೂಢಿ. ಅರಣ್ಯದ ಅಂಚಿನಲ್ಲಿ ವಾಸಿಸುವ ಶ್ರಮಜೀವಿ ಕೊರಗರೂ ಮುಟ್ಟಾಳೆ ಧರಿಸುವ ಪದ್ದತಿ ಸಹಜವಾಗಿಯೇ ಹೊಂದಿದ್ದರು. ಈ ರೀತಿ ವೇಶ ಧರಿಸುವುದು, ಕೊರಗರನ್ನು ಈ ವೇಶ ಹಾಕಿಸಿ ಕುಣಿಸುವುದು ಕಾನೂನಿನ ಪ್ರಕಾರ ಈಗ ನಿಷೇಧಿಸಲ್ಪಟ್ಟಿದೆ)
ಮದುಮಗ ಈ ರೀತಿ ವೇಷ ಧರಿಸಿ ಮದುಮಗಳ ಮನೆಗೆ ಬಂದಿರುವ ಸಂಭ್ರಮದ ವೀಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ. ಬಿಜೆಪಿ ಪರಿವಾರದ ಸಂಘಟನೆಗಳು ಇದು ಕೊರಗಜ್ಜನ ವೇಷ. ಅನ್ಯ (ಮುಸ್ಲಿಂ) ಧರ್ಮದ ಮದುಮಗ ಈ ರೀತಿ ಪೋಷಾಕು ಧರಿಸಿ ತುಳುನಾಡಿನ ಹಿಂದುಗಳ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನಿಸಿದ್ದಾನೆ. ಇದರಿಂದ ಹಿಂದು ಧಾರ್ಮಿಕ ಭಾವನೆ ಗಳಿಗೆ ಘಾಸಿಯಾಗಿದೆ ಎಂದು ಹುಯಿಲೆಬ್ಬಿಸಿದ್ದಾರೆ. ಕೇರಳದ ಗಡಿಗೆ ತಾಗಿಕೊಂಡಿರುವ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿ (ಮದುಮಗ ಕೇರಳದ ಕಾಸರಗೋಡಿಗೆ ಸೇರಿದವನು) ರುವ ಮದುಮಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ತುಳುನಾಡಿಗೆ ಸಹಜವೆನಿಸುವಂತೆ ಬ್ಯಾರಿ (ಮುಸ್ಲಿಂ) ಗಳ ಸಮುದಾಯ ನಿಂದನೆಯ ಘೋಷಣೆಯನ್ನು ಕೂಗಿದ್ದಾರೆ. ಮುಂದಿನ ವಾರ ಈ ಘಟನೆ ವಿರೋಧಿಸಿ ತುಳುನಾಡಿನ ಎಲ್ಲಾ ದೈವಸ್ಥಾನಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುವಾದಾಗಿ ಘೋಷಿಸಿದ್ದಾರೆ. ಆ ಮೂಲಕ ಮತೀಯ ವಿಭಜನೆಯ ರಾಜಕೀಯಕ್ಕೆ ಹೊಸ ಅಸ್ತ್ರವಾಗಿ ಈ ಘಟನೆ ಬಳಕೆಯಾಗುವುದು ನಿಚ್ಚಳವಾಗಿದೆ.
(ಕೊರಗಜ್ಜ (ಕೊರಗ ತನಿಯ) ತುಳುನಾಡಿನ ಮೂಲನಿವಾಸಿ ಕೊರಗರ ನಾಯಕ. ಈತ ಆತ್ಮಗೌರವದ ಹೋರಾಟದಲ್ಲಿ ಕಾಯ ಮರೆತು ಮಾಯ (ಹುತಾತ್ಮ) ಆದ ಎಂಬುದು ನಂಬಿಕೆ. ತುಳುನಾಡಿನಲ್ಲಿ ಆರಾಧಿಸಲ್ಪಡುವ ಬಹುತೇಕ ದೈವಗಳು ಆತ್ಮಗೌರವದ ಹೋರಾಟದಲ್ಲಿ ಹುತಾತ್ಮರಾದ ಹಿಂದುಳಿದ ಜಾತಿಗಳ ನಾಯಕರು. ಇವರನ್ನೆಲ್ಲ ಹುತಾತ್ಮರಾದ ನಂತರ ಕಾಯ ಮರೆತು ಮಾಯ ಆಗಿ ದೈವ ಆದರು ಎಂದು ಕರೆದು ತುಳುವರು ಆರಾಧಿಸುತ್ತಾರೆ. ಕೊರಗ ತನಿಯನನ್ನೂ ಹಾಗೇಯೆ ಒಳ್ಳೆಯದನ್ನು ಮಾಡುವ, ಕರುಣೆ ತೋರುವ ದೈವ ಎಂದು ನಂಬಿ ಹರಕೆ ಹೊರುತ್ತಾರೆ. ಬೀಡಾ, ಸೇಂದಿ, ಶರಾಬು ಕೊರಗ ತನಿಯನ ನೆಚ್ಚಿನ ಹರಕೆಗಳು. ಈ ಹಿಂದೆ ಕೊರಗರು ಸೇರಿದಂತೆ ದಲಿತರು, ಕೆಳ ಜಾತಿಯವರಿಂದ ಮಾತ್ರ ಆರಾಧಿಸಲ್ಪಡುತ್ತಿದ್ದ ಕೊರಗಜ್ಜ ಇತ್ತೀಚಿನ ವರ್ಷಗಳಲ್ಲಿ ತನ್ನ ಕಾರ್ಣಿಕ, ಪವಾಡಗಳಿಂದ ಖ್ಯಾತಿ ಹೊಂದಿ ಈಗ ಬಹುತೇಕ ಬ್ರಾಹಣೇತರ ತುಳುವ ಜಾತಿಗಳಲ್ಲಿ ಜನಪ್ರಿಯಗೊಂಡು ಆರಾಧಿಸಲ್ಪಡುವ ದೈವವಾಗಿದೆ.)
ಮತ್ತೊಂದೆಡೆ ಮುಸ್ಲಿಂ ಮೌಲ್ವಿಗಳು, ಧಾರ್ಮಿಕ ಮುಖಂಡರು ಈ ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ. ಖಂಡನೆಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿರುವುದು ಒಂದಾದರೆ, ತಾಲ ದಲ್ಲಿ (ಮದುವೆ ಔತಣ ಕೂಟ) ಈ ರೀತಿ ವೇಷ ಧರಿಸಿದುದರಿಂದ ಇಸ್ಲಾಮಿನ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶಿತರಾಗಿದ್ದಾರೆ. ವಾಟ್ಸಪ್ ಗುಂಪುಗಳಲ್ಲಿ ಕೆಲವು ಮುಸ್ಲಿಮರ ವಾದ ಹೇಗಿದೆ ಅಂದರೆ, ತಾಲ ಆಚರಣೆಯನ್ನೇ ನಿಷೇಧಿಸಬೇಕು, ಇಂತಹ ಅನಿಸ್ಲಾಮಿಕ ಆಚರಣೆ ಮೂಲಕ ಇಸ್ಲಾಮಿನ ಪಾವಿತ್ರ್ಯಕ್ಕೆ ಧಕ್ಕೆ ತರುವವರ ಮನೆಗಳನ್ನು ಮಸೀದಿ ಜಮಾತ್ ಗಳಿಂದ ಬಹಿಷ್ಕಾರ ಹಾಕಬೇಕು ಎಂಬಲ್ಲಿಗೆ ತಲುಪಿದೆ.
ಈ ಎಲ್ಲಾ ವಾದ, ಪ್ರತಿವಾದ, ಮತೀಯ ಸಂಘರ್ಷಾವಸ್ತೆ ತಲುಪಿದ, ಮುಂದಿನ ಚುನಾವಣೆಯ ದಿಕ್ಕನ್ನೇ ನಿರ್ಧರಿಸಬಲ್ಲ ಘಟನೆಯ ಕುರಿತು ಈ ಪ್ರಕರಣದ ಕೇಂದ್ರ ಬಿಂದು ಆಗಿರುವ ಕೊರಗ ಸಮುದಾಯ ಇಷ್ಟೆಲ್ಲಾ ಆದಾಗಲು ಒಂದು ಶಬ್ದವನ್ನೂ ಮಾತಾಡಿಲ್ಲ. (ಮಾತಾಡಿಲ್ಲ ಅನ್ನುವುದಕ್ಕಿಂತ ಅವರು ಏನು ಹೇಳುತ್ತಾರೆ ಎಂಬುದು ಯಾರಿಗೂ ಬೇಕಾಗಿಲ್ಲ ಎಂಬುದು ಹೆಚ್ಚು ಸರಿ) ಅವರು ಏನು ಹೇಳುತ್ತಾರೆ ಎಂಬ ಕುತೂಹಲದಿಂದ ನನ್ನ ಆತ್ಮೀರಾಗಿರುವ ಕೊರಗ ಸಮುದಾಯದ ಮುಖಂಡರೊಂದಿಗೆ ಅಭಿಪ್ರಾಯ ಕೇಳಿದೆ. ಅವರು ಹೇಳಿದ್ದು ಇಷ್ಟು.
“ಕಪ್ಪು ಬಣ್ಣ ಮುಖಕ್ಕೆ ಬಳಿದು, ತಲೆಗೆ ಮುಟ್ಟಾಳೆ ಇಟ್ಟ ತಕ್ಷಣ ಆ ಮದುಮಗ ಕೊರಗರದ್ದೇ ವೇಷ ಧರಿಸಿದ್ದು ಅಂತ ಭಾವಿಸುವುದು ಹೇಗೆ ? ಒಂದು ವೇಳೆ ಕೊರಗರದ್ದೇ ವೇಷ ಅಂತ ಇಟ್ಟುಕೊಂಡರೂ, ಅದು ಕೊರಗ ಸಮುದಾಯದ ದೈವ ಕೊರಗ ತನಿಯನದ್ದೇ ವೇಷ ಅಂತ ನಿರ್ಧಾರಕ್ಕೆ ಬರುವುದು ಹೇಗೆ ? ಹಾಗೆ ನಿರ್ಧಾರಕ್ಕೆ ಬರಲು ಇವರಿಗೆ ಅಧಿಕಾರ ಕೊಟ್ಟವರು ಯಾರು ? ಮುಸ್ಲಿಂ ಮದುಮಗನ ವೇಷಕ್ಕೂ, ಕೊರಗರಿಗೂ ಯಾವುದೇ ಹೋಲಿಕೆ ಇಲ್ಲ. ತಲೆಗೆ ಒಂದು ಮುಟ್ಟಾಳೆ, ಮುಖಕ್ಕೆ ಕಪ್ಪು ಬಣ್ಣ ಬಳಿದ ತಕ್ಷಣ ಅದು ಕೊರಗರ ವೇಷ ಆಗುವುದಿಲ್ಲ. ನಾವು ಅಂತಹ ತೀರ್ಮಾನಕ್ಕೆ ಬಂದಿಲ್ಲ. ಅದೂ ಅವರು ಹಾಡುತ್ತಿದ್ದದ್ದು ಮಾಪಿಳ್ಳೆ ಹಾಡು. ಕೊರಗರ ಮ್ಯೂಸಿಕ್ ಅಲ್ಲ. ನಾವು ಪೊಲೀಸರಿಗೆ ದೂರೂ ಕೊಟ್ಟಿಲ್ಲ. ಕಾಸರಗೋಡಿನ ಆ ಯುವಕನಿಗೆ ಕೊರಗರ ಕುರಿತು ಮಾಹಿತಿಯೂ ಇರಲಿಕ್ಕಿಲ್ಲ. ಔತಣ ಕೂಟದಲ್ಲಿ ವಿಶೇಷವಾಗಿ ಕಾಣಲು ಎನೋ ಮಾಡಿರಬೇಕು.
ಇದನ್ನೂ ಓದಿ :ಬಜರಂಗದಳದ ಹಲ್ಲೆಕೋರರ ಮೇಲೆ ಕಠಿಣ ಮೊಕದ್ದಮೆ ಹೂಡಿ ಬಂಧಿಸಿ: ಮುನೀರ್ ಕಾಟಿಪಳ್ಳ
ತಪ್ಪು ಸರಿಗಳು ಗೊತ್ತಿಲ್ಲದೆ ಇದು ನಡೆದಿರಬಹುದು. ಹಾಗಿರುತ್ತಾ, ಈ ಘಟನೆಯನ್ನು ಒಂದು ದರ್ಮೀಯರ ವಿರುದ್ದ ದ್ವೇಷ ಸಾಧನೆಗೆ, ರಾಜಕೀಯ ಉದ್ದೇಶಕ್ಕೆ ಬಳಸುವುದು ಎಷ್ಟು ಸರಿ ? ಕೊರಗರ ಮದುವೆ ಮನೆಗೆ ಪೊಲೀಸರು ನುಗ್ಗಿ ಬಡಿದಾಗ ಬೀದಿಗೆ ಬರದವರು, ಕೊರಗರಿಗೆ ಭೂಮಿ ಉದ್ಯೋಗದ ಬೇಡಿಕೆಯ ಕುರಿತು ಮಾತಾಡದವರು, ಕೊರಗರೊಂದಿಗೆ ಸಮಾನವಾಗಿ ಕೂತು ಮಾತನಾಡಲು ಸಿದ್ದರಿಲ್ಲದವರು ಈಗ ಏಕಾ ಏಕಿ ಕೊರಗರ, ಕೊರಗಜ್ಜನ ವಿಷಯ ಮುಂದಕ್ಕೆ ತಂದು ಬೀದಿಗಿಳಿಯುತ್ತಿರುವುದರ ಹಿಂದಿನ ರಾಜಕೀಯ ನಮಗೆ ಅರ್ಥ ಆಗುತ್ತದೆ, ಇವರಿಗೆ ಕೊರಗರು ಬೇಡ ಕೊರಗ ತನಿಯ ಮಾತ್ರ ಬೇಕು”. ಅಂತ ಮಾತು ಮುಗಿಸಿದರು.
ಕೇರಳ ಕರ್ನಾಟಕ ಗಡಿ ಭಾಗದ ಮುಸ್ಲಿಮರಲ್ಲಿ ಮದುವೆಯಲ್ಲಿ ಆಡಂಭರ ತುಸು ಹೆಚ್ಚು. ತಾಲ ಎಂಬ ಔತಣ ಕೂಟದಲ್ಲಿ ಗಂಡಿನ ಕಡೆಯವರು ಮೇಲುಗೈ ಸಾಧಿಸಲು ಹಲವು ಕಸರತ್ತುಗಳನ್ನು ಮಾಡುತ್ತಾರೆ.ಅದು ಒಮ್ಮೊಮ್ಮೆ ವಿಕೋಪಕ್ಕೆ ತೆರಳಿ ಸಮಸ್ಯೆಗಳಾದದ್ದೂ ಇದೆ. (ಈ ತಾಲ ಆಚರಣೆಯನ್ನೆ ನಿಷೇಧಿಸಬೇಕು ಇದು ಅನಿಸ್ಲಾಮಿಕ ಎಂಬ ವಾದಗಳಿವೆ. ಅದು ಬೇರೆಯೇ ಚರ್ಚೆ) ಈ ಪ್ರಕರಣದಲ್ಲಿ ತಾಲ ಮೆರವಣಿಗೆಯಲ್ಲಿ ಮದುಮಗನನ್ನು ವಿಶೇಷವಾಗಿ ಕಾಣಿಸಲು ಆತನಿಗೆ ಮುಟ್ಟಾಳೆ, ಕಪ್ಪು ಬಣ್ಣದ ವೇಷವನ್ನು ಆತನ ಗೆಳೆಯರು ಹಾಕಿಸಿದ್ದಾರೆ. ಸಾಂಪ್ರದಾಯಿಕ ಮಾಪಿಳ್ಳೆ ಹಾಡುಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ವಧುವಿನ ಮನೆಗೆ ಕರೆತಂದಿದ್ದಾರೆ. ಕಾಸರಗೋಡಿನ ಕಡೆಯವನಾದ ಮದುಮಗನಿಗೆ ದ ಕ ಜಿಲ್ಲೆಯ ಕೊರಗರ, ಕೊರಗಜ್ಜನ ವೇಶಭೂಷಣಗಳ ಕುರಿತು ತಿಳಿದಿರುವ ಸಾಧ್ಯತೆ ಕಡಿಮೆ. ಒಂದು ವೇಳೆ ಮೂಲನಿವಾಸಿಗಳ ಧಿರಿಸು ಅಂತ ಹಾಕಿದ್ದರೂ, ಕೊರಗಜ್ಜನನ್ನಂತೂ ಆತ ಅನುಕರಿಸಿರುವ ಸಾದ್ಯತೆ ತೀರಾ ಇಲ್ಲವೇ ಇಲ್ಲ. ಇದೀಗ ವಿಷಯ ಹೈ ವೋಲ್ಟೇಜ್ ಹಂತಕ್ಕೆ ತಲುಪಿದೆ. ರಾಜಕೀಯ ಉದ್ದೇಶದ ಮತೀಯ ಸಂಘರ್ಷದ ಆಟದ ಭಾಗವಾಗಿದೆ. ಈಗ ಪೊಲೀಸರ ಮುಂದಿರುವುದು ಪ್ರಕರಣದ ಸರಿಯಾದ ತನಿಖೆ ನಡೆಸುವುದು. ಮದುಮಗ ಕೊರಗರನ್ನೇ ಅನುಕರಿಸಿರುವುದು ಅಂತ ಸಾಕ್ಷ್ಯ ಸಿಕ್ಕಿದರೆ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳುವುದು.ಅದರಾಚೆಗೆ ಮತೀಯ ಸಂಘರ್ಷಕ್ಕೆ, ರಾಜಕೀಯಕ್ಕೆ ವಿಷಯ ಬಳಕೆಯಾಗದಂತೆ ಎಚ್ಚರವಹಿಸುವುದು.
ಎಲ್ಲದಕ್ಕಿಂತ ಮುಖ್ಯವಾಗಿ ತುಳುನಾಡಿನ ಜನತೆ ಈ ಪ್ರಕರಣವನ್ನು ಹಿಡಿದು ಎಳೆದಾಡುತ್ತಿರುವ ಶಕ್ತಿಗಳ ಉದ್ದೇಶವನ್ನು ತಮ್ಮ ಅನುಭವದ ಆಧಾರದಿಂದ ಅರ್ಥ ಮಾಡಿಕೊಂಡು ಅದಕ್ಕೆ ಅವಕಾಶ ಮಾಡಿಕೊಡದಿರುವುದು. ಇನ್ಜೂ ಅಗತ್ಯ ವಿದ್ದರೆ ಈ ವಿಷಯದಲ್ಲಿ ಕೊರಗ ಸಮುದಾಯದ ಮಾತುಗಳಿಗೆ ಕಿವಿಗೊಡುವುದು.
ಸರಿಯಾದ ವಿಶ್ಲೇಷಣೆ