ಮಂಗಳೂರು :ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆದಿವಾಸಿ ಆಕ್ರೋಶ ರ‍್ಯಾಲಿಯನ್ನು ದಿನಾಂಕ ೨೩ ರಂದು ಮಂಗಳೂರು ನಗರದಲ್ಲಿ ಸಂಘಟಿಸಲಾಗುತ್ತಿದ್ದು ಇದರ ಅಂಗವಾಗಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ಇದರ ಅಖಿಲ ಭಾರತ ಉಪಾಧ್ಯಕ್ಷರೂ ಮಾಜೀ ಸಂಸತ್ ಸದಸ್ಯರೂ ಆಗಿರುವ ಜನ ನಾಯಕಿ ಬೃಂದಾ ಕಾರಟ್ ರವರು ಭಾಗವಹಿಸಲಿದ್ದಾರೆ.
ಆದಿವಾಸಿ ಸಮುದಾಯದ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಿರುವ ಬೃಂದಾ ಕಾರಟ್‌ರವರು ಅರಣ್ಯ ಹಕ್ಕು ಕಾಯಿದೆಯನ್ನು ರೂಪಿಸುವ ಸಂದರ್ಭದಲ್ಲಿ ಸಂಸತ್ ಸದಸ್ಯರಾಗಿ ನಿರ್ಣಾಯಕ ಪಾತ್ರ ವಹಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಆದಿವಾಸಿ ಆಕ್ರೋಶ ರ‍್ಯಾಲಿಯ ಮೂಲಕ ಅವಿಭಜಿತ ಜಿಲ್ಲೆಯ ಆದಿವಾಸಿ ಕೊರಗ ಸಮುದಾಯದ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿಯನ್ನು ಗುರಿಯಾಗಿಸಿ ನಡೆಯುವ ಹೋರಾಟದ ಉದ್ಘಾಟನೆಯು ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರ‍್ಯಾಲಿ ಸಮಿತಿ ಸದಸ್ಯರಾದ ಶೇಖರ್ ವಾಮಂಜೂರು ಮತ್ತು ಕೃಷ್ಣ ಇನ್ನಾ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಅಂಬೇಡ್ಕರ್ ಸರ್ಕಲ್‌ನಿಂದ (ಜ್ಯೋತಿ ವೃತ್ತ) ಪ್ರಾರಂಭವಾಗುವ ಆದಿವಾಸಿ ಆಕ್ರೋಶ್ ರ‍್ಯಾಲಿಯು ಕೊರಗ ಸಮುದಾಯದ ಚಾರಿತ್ರಿಕ ಅಸ್ಮಿತೆಯ ಪ್ರತಿನಿಧಿಸುವ ಪರಿಕರಗಳು, ಪೋಟೋಗಳೊಂದಿಗೆ ನಡೆಯಲಿದೆ.
ಕ್ಲಾಕ್ ಟವರ್‌ನ ಮುಂಭಾಗದಲ್ಲಿ ನಡೆಯುವ ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಕರಿಯ ಕೆ. ಮಂಗಳ ಜ್ಯೋತಿ ಇವರು ವಹಿಸಲಿದ್ದರೆ. ಮುಖ್ಯ ಅತಿಥಿಗಳಾಗಿ ಕೊರಗ ಸಮುದಾಯದ ಮುಂದಾಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಹ ಸಂಚಾಲಕರಾದ ಶ್ರೀಧರ್ ನಾಡಾ, ಡಾ.ಎಸ್.ವೈ.ಗುರುಶಾಂತ್, ಡಾ.ಕೃಷ್ಣಪ್ಪ ಕೊಂಚಾಡಿ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಇವರು ವಹಿಸಿಲಿದ್ದಾರೆ.
ಮಹಮ್ಮದ್ ಫೀರ್ ವರದಿ ಅಂಗೀಕರಿಸಿ ೩೦ ವರ್ಷ ಕಳೆದರೂ ಅದರಂತೆ ಕೃಷಿ ಯೋಗ್ಯ ಭೂಮಿ ವಿತರಣೆ, ಉದ್ಯೋಗಾವಕಾಶ, ಶಿಕ್ಷಣ ಮತ್ತು ಆರೋಗ್ಯದ ಸಲಹೆಗಳು ಜ್ಯಾರಿಯಾಗಿಲ್ಲ. ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ವ್ಯಾಪಕ ನಿರುದ್ಯೋಗ, ಬಡತನ, ಹಸಿವು ಮತ್ತು ವಸತಿಯ ಪ್ರಶ್ನೆ ಗಂಭೀರವಾಗಿ ಕಾಡುತ್ತಿದೆ. ಆದುದರಿಂದ ಕೊರಗ ಸಮುದಾಯದ ನಿರುದ್ಯೋಗಿ ಯುವಕರಿಗೆ ವಿಶೇಷ ನೇಮಕಾತಿ ಆಂದೋಲನ, ಕಂದಾಯ ಅದಾಲತ್, ಜಿಲ್ಲೆಯ ಕೈಗಾರಿಕೆ ಮತ್ತು ಸಹಕಾರಿ ರಂಗದಲ್ಲಿ ಕೊರಗ ಯುವಕರ ಉದ್ಯೋಗದ ಬಗ್ಗೆ ಶ್ವೇತಪತ್ರ ಇವೇ ಮೊದಲಾದ ಬೇಡಿಕೆಗಳಿಗೆ ಸಂಬಂಧಿಸಿ ಹೋರಾಟದ ಕಹಳೆ ಮೊಳಗಿಸಲಾಗುವುದು ಎಂದು ಶೇಖರ್ ವಾಮಂಜೂರು ತಿಳಿಸಿದ್ದಾರೆ.
“ಕೊರಗರು – ತುಳುನಾಡಿನ ಮಾತೃ ಸಮುದಾಯ” ಪುಸ್ತಕ ಬಿಡುಗಡೆ
ಇದೇ ಸಂದರ್ಭ, ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಬರೆದಿರುವ “ಕೊರಗರು – ತುಳುನಾಡಿನ ಮಾತೃ ಸಮುದಾಯ” ಪುಸ್ತಕವು ಆದಿವಾಸಿ ಆಕ್ರೋಶ ರ‌್ಯಾಲಿಯ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಕೊರಗ ಸಮುದಾಯ ಅನುಭವಿಸಿರುವ ದೌರ್ಜನ್ಯ, ತಾರತಮ್ಯ, ಶೋಷಣೆಗಳ ಚಾರಿತ್ರಿಕ ವಿಶ್ಲೇಷಣೆಯನ್ನು ಈ ಪುಸ್ತಕ ಹೊಂದಿದೆ. ಆಧುನಿಕ ಸಂದರ್ಭದಲ್ಲಿ ಸರಕಾರ ಕೊರಗರನ್ನು ನಡೆಸಿಕೊಂಡಿರುವ ರೀತಿ, ವಿಧಾನ ಸಭೆಯಲ್ಲಿ ನಡೆದಿರುವ ಚರ್ಚೆಗಳ ಸಹಿತ ಮಹತ್ವದ ವಿವರಗಳನ್ನು ಆಧಾರ ಸಹಿತವಾಗಿ ಈ ಕೃತಿಯಲ್ಲಿ ಲೇಖಕ ವಿವರಿಸಿದ್ದಾರೆ.