ಸಂಸದ ಸ್ಥಾನಕ್ಕೆ ಸಂಗಣ್ಣ ಕರಡಿ ರಾಜೀನಾಮೆ – ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ?

ಕೊಪ್ಪಳ : ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆ ಸಂಸತ್ ಸದಸ್ಯ ಸ್ಥಾನ ಹಾಗೂ ಬಿಜೆಪಿಗೂ ರಾಜೀನಾಮೆ ನೀಡಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್ ಮೂಲಕ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರ ಕಳುಹಿಸಿದ್ದೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ಅವರು ವಿವರಿಸಿದರು.

ಕಳೆದ 10 ವರ್ಷದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದ ದಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ. ನಾನು ಸಂಸದನಾಗುವ ಮೊದಲು ರೈಲ್ವೆ, ಹೆದ್ದಾರಿ ಹಾಗೂ ಕೇಂದ್ರ ಸರಕಾರ ಯೋಜನೆಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪಿರಲಿಲ್ಲ. ನಾನು ಸಂಬಂಧಿಸಿದ ಕೇಂದ್ರ ಸಚಿವರುಗಳಿಗೆ ಪತ್ರದ ಮೂಲಕ ಹಾಗೂ ಮೂಖತಃ ಭೇಟಿಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕಾಮಗಾರಿ ತಂದಿರುವ ಹೆಮ್ಮೆ ನನಗಿದೆ. ಆದರೆ, ಇತ್ತೀಚಿನ ರಾಜಕಾರಣ ನನಗೆ ಬೇಸರ ತರಿಸಿದ್ದು, ನನ್ನ ಸಾರ್ವಜನಿಕರ ಸೇವೆ ಗುರುತಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದರು.

ಕೊಪ್ಪಳದಲ್ಲಿ ಬಿಜೆಪಿ ನೆಲೆಯೂರಲು ನಾನು ಕೂಡ ಕಾರಣಿಕರ್ತ. ಪಕ್ಷದ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದೇನೆ. ಹಾಲಿ, ಮಾಜಿ ಶಾಸಕರು, ಹಿರಿಯ ಹಾಗೂ ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಜತೆಗಿದ್ದೇ ಬೆನ್ನಿಗೆ ಚೂರಿ ಹಾಕಿದ ಮಹಾ ನಾಯಕರಿಗೆ ಕೊಪ್ಪಳದ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ಬಿಜೆಪಿಯಲ್ಲಿ ನನ್ನ ಸೇವೆಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಜನರು ಗುರುತಿಸಿದರು. ಆದರೆ, ಪಕ್ಷದ ನಾಯಕರು ಗುರುತಿಸಲಿಲ್ಲ ಏಕೆ ಎಂಬುದೇ ನನ್ನ ಪ್ರಶ್ನೆಯಾಗಿದೆ. ನಾನು ರಾಜಕೀಯವಾಗಿ ಮುಖಂಡರನ್ನು ಬೆಳೆಸಲು ಮುಂದಾಗಿದ್ದೇ ಹೊರತು ಮಟ್ಟ ಹಾಕುವ ಚಿಂತನೆಯನ್ನೇ ಮಾಡಿರಲಿಲ್ಲ. ಆದರೆ, ನನ್ನನ್ನು ಮಟ್ಟ ಹಾಕಲು ಪ್ರಯತ್ನಗಳು ನಡೆದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುವ ಸಮಯವನ್ನು ಕ್ಷೇತ್ರದ ಜನತೆಗೆ ಮೀಸಲಿಟ್ಟಿದ್ದರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ. ಅವರ ಸೋಲಿಗೆ ನಾನೇ ಹೊಣೆ ಎಂದು ಹಗೆ ಸಾಧಿಸಿ ಟಿಕೆಟ್ ತಪ್ಪಿಸಿದ್ದಾರೆ. ಅವರ ಕಾರ್ಯವೈಖರಿ, ಮುಖಂಡರ ಹಾಗೂ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವುದನ್ನು ನನ್ನ ಮೇಲೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.

ಸಂಗಣ್ಣ ಕರಡಿ ಜೊತೆ ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕದಲ್ಲಿ ಇದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *