ದಿನೇಶ್ ಅಮಿನಮಟ್ಟು
ಕೋಮುವಾದ ಹುಟ್ಟಿರುವುದು ಧರ್ಮಗಳಲ್ಲಿ ಅಲ್ಲ, ಸಮಾಜದಲ್ಲಿ. ದೇವರುಗಳ ನಡುವೆ ಅಲ್ಲ, ದೇವರ ಅನುಯಾಯಿಗಳ ನಡುವೆ. ಈ ಕೋಮುವಾದದ ಕೊಚ್ಚೆ ತೊಳೆಯಲು ಸರ್ವಧರ್ಮ ಸಮ್ಮೇಳನಗಳು ಬೇಕು, ಸಾಮರಸ್ಯದ ಸಮಾವೇಶಗಳೂ ಬೇಕು. ಆದರೆ ಇವೆರಡೂ ಒಂದೇ ಅಲ್ಲ, ಎರಡರ ಉದ್ದೇಶ ಕೂಡಾ ಒಂದೇ ಅಲ್ಲ.
ಧರ್ಮದ ಹೆಸರಲ್ಲಿ ಬೀದಿಗಳಲ್ಲಿ ನಿಂತು ಕಾದಾಡುತ್ತಿರುವವರಿಗೆ ತಮ್ಮ ಧರ್ಮದ ಆಳವಾದ ತಿಳುವಳಿಕೆ ಇಲ್ಲದೆ ಇದ್ದರೂ ಧರ್ಮಗಳು ಸಾರುವ ಪ್ರೀತಿ,ಸಹನೆ,ತ್ಯಾಗ, ಸೌಹಾರ್ದತೆಯ ಸಂದೇಶದ ಅರಿವು ಖಂಡಿತ ಇದೆ. ಹೀಗಿದ್ದರೂ ಅವರು ಕಾದಾಡಲು ಧರ್ಮಗಳ ಹೊರತಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣಗಳಿರುತ್ತವೆ. ಇವುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳದೆ ಇದ್ದರೆ ನಾವು ಬಯಸುವ ಸೌಹಾರ್ದತೆ ಸ್ಥಾಪನೆಯಾಗಲಾರದು.
ಸರ್ವಧರ್ಮ ಸಮ್ಮೇಳನಗಳು ಬಹಳ ಸುರಕ್ಷಿತವಾದುದು, ಹಿಂದುತ್ವದ ಯಾವ ಸಂಘಟನೆಗಳೂ ಇದನ್ನು ವಿರೋಧಿಸುವುದಿಲ್ಲ, ಎಲ್ಲ ಧಾರ್ಮಿಕ ಗುರುಗಳು ಸಂತೋಷದಿಂದ ಬಂದು ಭಾಗವಹಿಸುತ್ತಾರೆ. ಇದರ ಹೆಸರನ್ನೇ ಸ್ವಲ್ಪ ಬದಲಾಯಿಸಿ ಸರ್ವ ಜಾತಿಗಳ ಸಮ್ಮೇಳನ ಮಾಡಿಬಿಡಿ, ಆಗ ಯಾವ ಜಾತಿಯ ಸ್ವಾಮಿಗಳು ಭಾಗವಹಿಸುತ್ತಾರೆ, ಯಾರು ಭಾಗವಹಿಸುವುದಿಲ್ಲ ಎಂದು ಗೊತ್ತಾಗಿಬಿಡುತ್ತದೆ. ರಾಜಕೀಯ ಹಿಂದುತ್ವದ ಪ್ರತಿಪಾದಕ ಸ್ವಾಮಿಗಳೊಬ್ಬರೂ ಭಾಗವಹಿಸವುದಿಲ್ಲ. ಬೇಕಿದ್ದರೆ ಸಹಬಾಳ್ವೆಯ ಸಂಘಟನೆ ನಾಳೆ ಅಂಬೇಡ್ಕರ್ ಜಯಂತಿ ಆಚರಿಸಿ ಪೇಜಾವರ ಮಠದ ಸ್ವಾಮಿಗಳನ್ನು ಕರೆಯಿರಿ, ಖಂಡಿತ ಬರುವುದಿಲ್ಲ.
ಉಡುಪಿಯಲ್ಲಿ ನಡೆಯಲಿರುವ ಸೌಮರಸ್ಯದ ನಡಿಗೆಗೆ ಆ ಕಡೆಯಿಂದ ಯಾವ ವಿರೋಧವೂ ಬರುವುದಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ಈ ಕಾರ್ಯಕ್ರಮಕ್ಕೆ ಪೇಜಾವರ ಸ್ವಾಮಿಗಳೂ ಬರುತ್ತಾರೆ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೂ ಬರುತ್ತಾರೆ. ಇದು ಬಹಳ ಸುರಕ್ಷಿತವಾದ ಕಾರಣ ಹಿಂದುತ್ವದ ನಾಯಕರು ಇವರ ಭಾಗವಹಿಸುವಿಕೆಯನ್ನು ವಿರೋಧಿಸುವುದೂ ಇಲ್ಲ. ಇಂತಹ ಕಾರ್ಯಕ್ರಮಗಳಿಂದ ಹಿಂದುತ್ವದ (ಹಿಂದೂ ಧರ್ಮದ ಅಲ್ಲ) ರಾಜಕಾರಣದ ಮೂಲ ಅಜೆಂಡಾಕ್ಕೆ ಯಾವ ಹಾನಿಯೂ ಇಲ್ಲ ಎಂದು ಅವರಿಗೆ ಗೊತ್ತು.
ಧಾರ್ಮಿಕ ಗುರುಗಳ ಆಶೀರ್ವಚನ, ಉಪದೇಶ ,ಪ್ರವಚನ ಯಾವುದೂ ಕೋಮುವಾದದ ಮೂಲಕ್ಕೆ ಹೋಗಿ ಕಿತ್ತುಹಾಕುವ ಕೆಲಸ ಮಾಡುವುದಿಲ್ಲ. ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನವನ್ನಷ್ಟೇ ಅವರು ಮಾಡುತ್ತಾರೆ. ಉಡುಪಿಯಲ್ಲಿ ನಡೆಯುತ್ತಿರುವ ಸಾಮರಸ್ಯದ ನಡಿಗೆ ಸಾಂಗವಾಗಿ ನಡೆಯಲಿ, ಯಶಸ್ವಿಯಾಗಿ ನಡೆಯಲಿ. ಆದರೆ ಅದರಿಂದ ಹೆಚ್ಚಿನ ನಿರೀಕ್ಷೆ ಬೇಡ.
ಹಾಗಿದ್ದರೆ ನಾವು ಮಾಡಬೇಕಾಗಿರುವುದೇನು? ಇಂತಹ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಳೀಯರ ಭಾಗವಹಿಸುವಿಕೆ ಬೇಕು, ಅದು ಇಲ್ಲದೆ ಹೋದರೂ ಹೊರಗಿನಿಂದ ಬಂದವರಿಂದ ಕಾರ್ಯಕ್ರಮ ಯಶಸ್ವಿಯಾಗ ಬಹುದು, ಉದ್ದೇಶ ಈಡೇರುವುದಿಲ್ಲ. ನಾವು ಹಿಂದೆ ಉಡುಪಿ ಚಲೋ ಮಾಡಿದಾಗ ಸ್ಥಳೀಯರನ್ನು ಸಾಕಷ್ಟು ಸಂಖ್ಯೆಯಲ್ಲಿ ಸೇರಿಸಿಕೊಂಡಿದ್ದರೂ ‘’ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಲು ಬರುವ ಶಿಕ್ಷಕರಂತೆ ನೀವು ಬಂದು ಉಪದೇಶ ನೀಡುವುದು ನಮಗೆ ಇಷ್ಟವಾಗುವುದಿಲ್ಲ’ ಎಂದು ಒಬ್ಬ ಹಿರಿಯ ನಾಗರಿಕರು ಹೇಳಿದ್ದರು. ಅವರ ಅಭಿಪ್ರಾಯ ಸರಿ ಎಂದು ನನಗನಿಸಿತ್ತು. ಸಾಮರಸ್ಯದ ನಡಿಗೆ ಕಾರ್ಯಕ್ರಮದ ಬಗ್ಗೆಯೂ ನನ್ನೊಡನೆ ಉಡುಪಿಯ ಸ್ನೇಹಿತರು ಇದೇ ಮಾತನ್ನು ಹೇಳಿದ್ದರು.
ಕರಾವಳಿಯಲ್ಲಿ ಕೋಮುವಾದದ ಸಮಸ್ಯೆ ಇರುವುದು ಹಿಂದು ಮತ್ತು ಮುಸ್ಲಿಮರ ನಡುವೆ ಅಲ್ಲ, ಅದು ಇರುವುದು ಬಿಲ್ಲವ, ಮೊಗವೀರ, ಬಂಟ ಮತ್ತಿತರ ಹಿಂದೂ ಜಾತಿಗಳು ಮತ್ತು ಮುಸ್ಲಿಮರ ನಡುವೆ. ಈ ಎರಡು ಸಮುದಾಯಗಳ ಸಂಘಟನೆಗಳು, ಮುಖಂಡರು ಮತ್ತು ಅದರಲ್ಲಿರುವ ಚಿಂತಕರ ನಡುವೆ ಒಂದು ಮುಕ್ತ ವಾತಾವರಣದಲ್ಲಿ ಚರ್ಚೆ-ಸಂವಾದಗಳು ನಡೆಯಬೇಕು. ಆಗ ಬಹಳಷ್ಟು ತಪ್ಪು ತಿಳುವಳಿಕೆಗಳು, ಅನುಮಾನಗಳು ದೂರವಾಗಿ ಸಂಬಂಧ ತಿಳಿಯಾಗಬಹುದು, ಖಂಡಿತ ಆಗುತ್ತದೆ.
ಇದೇ ಉಡುಪಿಯಲ್ಲಿ ಮುಸ್ಲಿಮ್ ಒಕ್ಕೂಟ ಮೂರು ವರ್ಷಗಳ ಹಿಂದೆ ಒಂದು ವಿಶಿಷ್ಟವಾದ ಪ್ರಯತ್ನಕ್ಕೆ ಕೈಹಾಕಿತ್ತು. ಅದು ಮುಸ್ಲಿಮರ ಜೊತೆ ಸ್ಥಳೀಯವಾದ ಬೇರೆ ಬೇರೆ ಜಾತಿಗಳ ಸೌಹಾರ್ದತಾ ಸಮಾವೇಶ. ಮುಸ್ಲಿಮ್-ಬಿಲ್ಲವ, ಮುಸ್ಲಿಮ್-ಮೊಗವೀರ, ಮುಸ್ಲಿಮ್-ಬಂಟ ಸಮಾವೇಶಗಳು. ಮುಸ್ಲಿಮ್-ಬಿಲ್ಲವ ಸಮಾವೇಶದಲ್ಲಿ ಭಾಗವಹಿಸಬೇಕಾಗಿದ್ದ ನನಗೆ ಅಪರಾಧ ಜಗತ್ತಿನ ಪಾತಕಿಯೊಬ್ಬನಿಂದ ಪ್ರಾಣ ಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಈ ಸಮಾವೇಶಕ್ಕೆ ಕೆಲವು ಹಿಂದೂ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಯಿತು. ಆ ಕಾಲದಲ್ಲಿ ಮನವಿ ಮಾಡುವ, ಬುದ್ದಿ ಹೇಳುವ, ಬೆದರಿಸುವ ನೂರಾರು ಕರೆಗಳು ನನಗೆ ಬಂದಿತ್ತು. ಅವರಲ್ಲಿ ಬಹಳಷ್ಟು ತಥಾಕಥಿತ ಹಿಂದೂ ನಾಯಕರು ‘ ಅಣ್ಣ ನೀವು ಬೇಕಿದ್ದರೆ ಹಿಂದೂ-ಮುಸ್ಲಿಮ್ ಸಮಾವೇಶಗಳನ್ನು ನಡೆಸಿ ಜಾತಿಗಳ ಸಮಾವೇಶ ಯಾಕೆ ನಡೆಸುತ್ತೀರಿ ಎಂಬ ಪ್ರಶ್ನೆ ಕೇಳಿದ್ದರು. ಯೋಚಿಸಬೇಕಾದ ಪ್ರಶ್ನೆ. ಜಾತಿವಾದಕ್ಕೆ ಕೋಮುವಾದ ಹೆದರುತ್ತದೆ (ಇದಕ್ಕೆ ವಿವರಣೆ ಅಗತ್ಯ ಇದೆ).
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಬಿಲ್ಲವರೇ ಕಟ್ಟಿಕೊಂಡ ಸಂಘಗಳಿವೆ. ಪ್ರತಿಯೊಂದರಲ್ಲಿಯೂ ನಾರಾಯಣ ಗುರು ಮಂದಿರ ಇದೆ. ಒಂದು ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪೂರ್ಣಪ್ರಮಾಣದ ಕಟ್ಟಡವನ್ನು ಹೊಂದಿರುವ ಸಂಘಟನೆಗಳು ಜಗತ್ತಿನ ಬೇರೆ ಯಾವ ಪ್ರದೇಶದಲ್ಲಿಯೂ ಇಲ್ಲ ಎಂದು ನಾನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇತ್ತೀಚೆಗೆ ಗಣರಾಜ್ಯೋತ್ಸವದ ಟ್ಯಾಬ್ಲೋದಲ್ಲಿ ನಾರಾಯಣ ಗುರುಗಳ ಪ್ರತಿಕೃತಿ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದಾಗ ವಾರದ ಅವಧಿಯಲ್ಲಿ ಎರಡು ಜಿಲ್ಲೆಗಳಾದ್ಯಂತ ಹಳದಿ ಶಾಲುಗಳ ಪ್ರದರ್ಶನ ನಡೆಯಿತು. ಕೋಮುವಾದವನ್ನು ಎದುರಿಸಲು ನಾರಾಯಣ ಗುರುಗಳ ಚಿಂತನೆಗಳಿಗಿಂತ ಬೇರೆ ಆಯುಧಗಳೇಕೆ ಬೇಕು. ನೆರೆಯ ಕೇರಳದ ರಾಜಕೀಯವನ್ನೊಮ್ಮೆ ಅವಲೋಕಿಸಿದರೆ ಇದು ಗೊತ್ತಾಗುತ್ತದೆ.
ಇದೇ ರೀತಿ ಭಾತೃತ್ವಕ್ಕೆ ಹೆಸರಾದ ಮೊಗವೀರ ಸಮುದಾಯದ ಸಂಘಟನೆಗಳಿವೆ. ಇತ್ತೀಚೆಗೆ ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನದ ನವೀಕರಣ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯಿತು. ವಾರಗಟ್ಟಳೆ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಜನ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ. ಈ ಸಮುದಾಯದ ರಾಜಕೀಯ ಒಲವು-ನಿಲುವು ಏನೇ ಆಗಿರಬಹುದು, ಅದು ಅವರ ವೈಯಕ್ತಿಕ ವಿಚಾರ. ಆದರೆ ಮೊಗವೀರ ಸಮುದಾಯದ ಯುವಕರು ಇತ್ತೀಚೆಗೆ ಕೋಮುಪ್ರಚೋದಿತ ಗಲಾಟೆ-ಹೊಡೆದಾಟಗಳಲ್ಲಿ ಪಾಲ್ಗೊಳ್ಳುವುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆ ಸಮುದಾಯದ ಯಾವ ನಾಯಕರು ಸಾಮರಸ್ಯದ ನಡಿಗೆ ಕಾರ್ಯಕ್ರಮದಲ್ಲಿದ್ದಾರೆ?
ಬಂಟ, ಬಿಲ್ಲವ,ಮೊಗವೀರ ಜಾತಿಗಳ ಜೊತೆಗೆ ಮುಸ್ಲಿಮ್ ಸಮುದಾಯದ ಸಂಬಂಧಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಸಂಬಂಧದಲ್ಲಿ ಬಿರುಕುಕಾಣಿಸಿಕೊಂಡ ನಂತರವೇ ಇಲ್ಲಿ ಕೋಮುವಾದದ ಪ್ರವೇಶವಾಗಿರುವುದು. ಇದನ್ನು ನೇರವಾಗಿ ಹೇಳುವುದಾದರೆ ಕೋಮುವಾದದ ಪ್ರವೇಶಕ್ಕಾಗಿಯೇ ಈ ಸಂಬಂಧದಲ್ಲಿ ಬಿರುಕು ಮೂಡಿಸಲಾಯಿತು. ಕರಾವಳಿಯಲ್ಲಿ ಕೋಮುವಾದ ಶುರುವಾಗಿದ್ದು ಉಳಿದೆಲ್ಲೆಡೆಯಂತೆ ಬಾಬರಿ ಮಸೀದಿ ಧ್ವಂಸದ ನಂತರ ಅಲ್ಲ. ಅದಕ್ಕಿಂತ ಒಂದು ದಶಕದ ಹಿಂದೆಯೇ ಕೋಮುವಾದಿ ರಾಜಕಾರಣ ಪ್ರಾರಂಭವಾಗಿತ್ತು. 1983ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ 18 ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಅವರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಲು ಏಳು. ಇದರ ಕಾರಣ ಹುಡುಕಲು ಸಂಶೋಧನೆ ಅಗತ್ಯ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಬೇರು ಮೊದಲಿನಿಂದಲೂ ಗಟ್ಟಿಯಾಗಿದೆ. ಇದಕ್ಕೆ ಮೂಲತ: ವ್ಯಾಪಾರಿಗಳಾದ ಗೌಡ ಸಾರಸ್ವತ ಬ್ರಾಹ್ಮಣರ ತನುಮನಧನದ ಬೆಂಬಲವೂ ಕಾರಣ.
ಮೊದಲು ಮುಸ್ಲಿಮ್ ಮತ್ತು ಇತರ ಹಿಂದೂ ಜಾತಿಗಳ ನಡುವಿನ ಸಾಮರಸ್ಯ ಬಿರುಕನ್ನು ಸರಿಪಡಿಸಬೇಕು. ‘ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಲು ಬರುವ ಮೇಸ್ಟ್ರುಗಳ’ರೀತಿ ಬರುವ ಹೊರಗಿನವರಿಗಿಂತ ಪ್ರತಿದಿನ ಮುಖಾಮುಖಿಯಾಗುವ ಸ್ಥಳೀಯರೇ ಕೂಡಿ ಇದನ್ನು ಮಾಡಬೇಕು. ಸಾಮರಸ್ಯ ನಡಿಗೆಯ ಕಾರ್ಯಕ್ರಮದ ಆಯೋಜನೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿದರೆ ಅಲ್ಲಿನ ಉಳಿದ ಸಮುದಾಯಗಳ ಪ್ರತಿನಿಧಿಗಳ ಸಕ್ರಿಯ ಪಾಲುದಾರಿಕೆಯೇ ಇಲ್ಲ.
ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದರೆ ಉಡುಪಿಯಲ್ಲಿಯೇ ಯಾಕೆ ಆಯೋಜಿಸಬೇಕು? ಬೆಂಗಳೂರು, ದಾವಣಗೆರೆ ಎಲ್ಲಾದರೂ ಮಾಡಬಹುದಲ್ಲಾ? ಒಂದು ಕಡೆ ಉಡುಪಿಯನ್ನು ಕೋಮುವಾದದ ಪ್ರಯೋಗಶಾಲೆ ಎಂದು ಬಿಂಬಿಸುವುದು, ಇನ್ನೊಂದೆಡೆ ಸ್ಥಳೀಯ ಸಮುದಾಯಗಳನ್ನು ದೂರ ಇಟ್ಟು ಹೊರಗಿನವರನ್ನು ಆಹ್ಹಾನಿಸಿ ಕಾರ್ಯಕ್ರಮ ನಡೆಸಿ ಬುದ್ದಿ ಹೇಳಿಸುವುದು ಸರಿಯಾದ ಕ್ರಮ ಅಲ್ಲ.
ಎರಡೂ ಜಿಲ್ಲೆಗಳಲ್ಲಿ ಬಿಲ್ಲವ, ಬಂಟ, ಮೊಗವೀರ ಮತ್ತಿತರ ಹಿಂದುಳಿದ ಜಾತಿಗಳ ಚಿಂತಕರು,ಲೇಖಕರ ಕೊರತೆ ಇಲ್ಲ.ಅವರಲ್ಲಿ ಯಾರನ್ನು ಒಳಗೊಳ್ಳುವ ಪ್ರಯತ್ನವನ್ನೇ ಸಂಘಟಕರು ಮಾಡಿಲ್ಲ. ಬಿಲ್ಲವ-ಈಡಿಗ ಸಂಸ್ಥಾನಕ್ಕೆ ಇತ್ತೀಚೆಗೆ ವಿಖ್ಯಾತನಂದ ಸ್ವಾಮೀಜಿಯನ್ನು ನೇಮಕ ಮಾಡಲಾಗಿದೆ. ಇವರು ನಾರಾಯಣ ಗುರುಗಳ ಶಿವಗಿರಿ ಮಠದಲ್ಲಿ ತರಬೇತಿ ಪಡೆದು ಬಂದವರು. ಅವರನ್ನು ಬಿಟ್ಟು ಯಾರೋ ಪ್ರಣವಾನಂದ ಸ್ವಾಮಿಯನ್ನು ಆಹ್ಹಾನಿಸಲಾಯಿತು. ಈ ಕಾರ್ಯಕ್ರಮದ ತಯಾರಿಯನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಯಿತು. ವಾಟ್ಸಪ್ ಗ್ರೂಪ್ ಗಳಲ್ಲಿ ಪೋಸ್ಟರ್ ಕ್ಯಾಂಪೇನ್ ಮಾಡುವುದು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇಲ್ಲ. ಆ ಗ್ರೂಪ್ ಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ. ಪರಿಚಯವಿದ್ದ ಸಂಚಾಲಕರನ್ನು ಕೇಳಿದರೆ ‘ ಏನೋ ವ್ಯತ್ಯಾಸ ಆಗಿದೆ, ಈ ಬಾರಿ ಅಡ್ಜೆಸ್ಟ್ ಮಾಡ್ಕೊಳ್ಳಿ’ ಎನ್ನುವ ಉತ್ತರ. ಇವರೆಲ್ಲ ಕಾರ್ಯಕ್ರಮ ಕೆಡಿಸಲು ಹೊರಟಿದ್ದಾರೆ ಎಂದು ಬೆನ್ನ ಹಿಂದೆ ಪಿಸುಮಾತಿನ ಅಪಪ್ರಚಾರ.
ಕೊನೆಯದಾಗಿ ಉಡುಪಿಯನ್ನು ಕೋಮುವಾದದ ಹೊಸ ಪ್ರಯೋಗ ಶಾಲೆ ಎಂಬ ಉತ್ಪಾದಿತ ಅಪಪ್ರಚಾರವನ್ನು ಕಡಿಮೆ ಮಾಡಬೇಕು. ಹೊರಗಿನವರಿಗೆ ಈ ಅಭಿಪ್ರಾಯ ಇದ್ದಿರಲೂ ಬಹುದು.. ಭೌಗೋಳಿಕವಾಗಿ ಮಂಗಳೂರಿನಿಂದ 60 ಕಿ.ಮೀ ದೂರದಲ್ಲಿದ್ದರೂ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಉಡುಪಿಗೆ ಬೇರೆಯೇ ಲಕ್ಷಣಗಳಿವೆ. ದನದ ವ್ಯಾಪಾರಿಗಳ ಮೇಲಿನ ಹಲ್ಲೆ ಪ್ರಕರಣ ಹೊರತುಪಡಿಸಿದರೆ ಇತ್ತೀಚಿನ ವರೆಗೆ ದೊಡ್ಡ ಮಟ್ಟದ ಕೋಮುಗಲಭೆಗಳು ಇಲ್ಲಿ ನಡೆದಿಲ್ಲ. ಹಿಜಾಬ್ ವಿವಾದ ಇದ್ದಕ್ಕಿದ್ದ ಹಾಗೆ ಇದನ್ನು ಕುಖ್ಯಾತಗೊಳಿಸಿಬಿಟ್ಟಿತು. ಇದರಿಂದಾಗಿ ಇಲ್ಲಿನ ಸಾಮರಸ್ಯ ಮನೆ ಬಿಟ್ಟು ಓಡಿಹೋಗಿದೆ, ಮನೆಮನೆಗಳಲ್ಲಿ ಕೋಮುವಾದಿಗಳು ತುಂಬಿಹೋಗಿದ್ದಾರೆ ಎನ್ನುವ ಅಭಿಪ್ರಾಯ ಮೂಡಿದೆ. ಆ ಕಾಲದಲ್ಲಿ ಇಲ್ಲಿಗೆ ದಾಳಿ ಮಾಡಿದ ರಾಜ್ಯ-ರಾಷ್ಟ್ರ,ವಿದೇಶದ ಮಾಧ್ಯಮ ಮಂದಿ ಕೂಡಾ ಪ್ರತ್ಯಕ್ಷ-ಪರೋಕ್ಷವಾಗಿ ತೇಲಿಬಿಟ್ಟಿತು.’
ಕಾಂಗ್ರೆಸ್ ಸೋಲು ಇಲ್ಲವೇ ಬಿಜೆಪಿ ಗೆಲುವಿನಿಂದಲೇ ಉಡುಪಿ ಕೇಸರಿಮಯವಾಗಿದೆ ಎಂದು ಬಣ್ಣಹಚ್ಚುವುದು ಅವಸರದ ತೀರ್ಮಾನ. ಹೌದು ಕೋಮುವಾದದ ವಿರುದ್ದ ಸಾಮಾಜಿಕ ಹೋರಾಟಗಳನ್ನೆಷ್ಟೇ ನಡೆಸಿದರೂ ಅಂತಿಮವಾಗಿ ಅದನ್ನು ಸೋಲಿಸಲು ಸಾಧ್ಯವಾಗುವುದು ರಾಜಕೀಯ ಬದಲಾವಣೆಯಿಂದ ಮಾತ್ರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳೆರಡರಲ್ಲಿಯೂ ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಭದ್ರವಾದ ನೆಲೆ ಇದೆ. ಹೀಗಿದ್ದರೂ ಬಿಜೆಪಿ ಗೆಲ್ಲುವುದು ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ ಮತ್ತು ಸೈದ್ಧಾಂತಿಕ ಸ್ಪಷ್ಟತೆಯ ಕೊರತೆಯಿಂದಾಗಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 12,044 ಮತಗಳಿಂದ, ಅದಕ್ಕಿಂತ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು 39,524 ಮತಗಳಿಂದ. ನಿನ್ನೆಯಷ್ಟೇ ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲಲು ಮುಖ್ಯ ಕಾರಣ ಅವರ ಮೆದುಹಿಂದುತ್ವ ರಾಜಕಾರಣ. ಟಿಪ್ಪು ಜಯಂತಿಯಲ್ಲಿ ಎಂದೂ ಭಾಗವಹಿಸದ, ಚುನಾವಣಾ ಪ್ರಚಾರದಲ್ಲಿ ತನ್ನೊಡನೆ ಎಂದೂ ಮುಸ್ಲಿಮ್ ನಾಯಕರನ್ನು ಕರೆದೊಯ್ಯದ ಪ್ರಮೋದ್ ಗೆ ಕಳೆದ ಚುನಾವಣೆಯಲ್ಲಿ ಮುಸ್ಲಿಮತದಾರರು ನಿರೀಕ್ಷಿತ ಪ್ರಮಾಣದಲ್ಲಿ ಮತಹಾಕಿಲ್ಲ ಎನ್ನವುದು ವಾಸ್ತವ.
ಇದೇ ಉಡುಪಿ ಲೋಕಸಭಾ ಕ್ಷೇತ್ರದಿಂದ 1980ರಿಂದ 1996ರ ವರೆಗಿನ ಐದು ಚುನಾವಣೆಗಳಲ್ಲಿ ಆಸ್ಕರ್ ಫರ್ನಾಂಡಿಸ್ ಎಂಬ ಒಬ್ಬ ಕ್ರಿಶ್ಚಿಯನ್ ಗೆದ್ದಿದ್ದರು. ಇಂತಹ ಸೌಹಾರ್ದ ಇತಿಹಾಸ ಉಡುಪಿಗೆ ಇದೆ.
ಸಾಮರಸ್ಯ ನಡಿಗೆ ಯಶಸ್ಸು ಕಾಣಲಿ, ಇದರಿಂದ ಕಲಿತ ಪಾಠ ಮುಂದಿನ ದಿನಗಳಲ್ಲಿ ತಪ್ಪು ಮಾಡದಂತೆ ನಮ್ಮನ್ನು ರಕ್ಷಿಸಲಿ.