ಜಗತ್ತಿನಲ್ಲಿ ಎರಡು ಅತೀ ದೊಡ್ಡ ಇಂಡಸ್ಟ್ರಿಗಳಿವೆ. ಒಂದು ಕೋಮುವಾದ, ಇನ್ನೊಂದು ಯುದ್ಧ. ಈ ಎರಡು ಇಂಡಸ್ಟ್ರಿಗಳೇ ಜಗತ್ತನ್ನು ಆಳುತ್ತಿದೆ. ಇದರ ಅರಿವಿಲ್ಲದ ಅಮಾಯಕ ಯುವ ಜನರು ಯುದ್ದ ಸಂಭ್ರಮ, ಕೋಮುಗಲಭೆ, ಸ್ಕಾರ್ಫ್, ಹಿಜಾಬ್, ಕೇಸರಿ ಶಾಲು ಗಲಾಟೆಯಲ್ಲಿ ತೊಡಗಿಕೊಂಡಿದ್ದಾರೆ.
ಸರಳವಾಗಿ ಉದಾಹರಣೆ ಸಹಿತ ಹೇಳುತ್ತೇನೆ. ಕರಾವಳಿಯಲ್ಲಿ ಒಂದು ಕಾಲದಲ್ಲಿ ಅತೀ ಕಡಿಮೆ ಬೆಲೆಗೆ ಸಿಗಡಿ ಮೀನು, ಬೊಂಡಾಸ್ ಸೇರಿದಂತೆ ಮೀನುಗಳು ಸಿಗುತ್ತಿದ್ದವು. ಮೊಗವೀರರು ಮೀನು ಹಿಡಿದರೆ, ಬ್ಯಾರಿ ಮುಸ್ಲೀಮರು ಮೀನು ಹರಾಜಿನಲ್ಲಿ ಭಾಗವಹಿಸಿ ಮೀನನ್ನು ವಲಯವಾರು ಹಂಚುತ್ತಿದ್ದರು. ಮೊಗವೀರ ಮಹಿಳೆಯರು ಮನೆ ಮನೆಗೆ ಬುಟ್ಟಿಲ್ಲಿ ಮೀನು ಹೊತ್ತು ವ್ಯಾಪಾರ ಮಾಡಿದರೆ ಬ್ಯಾರಿ ಮುಸ್ಲೀಮರು ಸೈಕಲ್ನಲ್ಲಿ ಕರಾವಳಿಯ ಹಳ್ಳಿಗೂ, ಟೆಂಪೋಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ಸರಬರಾಜು ಮಾಡುತ್ತಿದ್ದರು. ಯಾವಾಗ ಕರಾವಳಿಯ ಸಿಗಡಿ ಮತ್ತು ಬೊಂಡಾಸ್ಗೆ ವಿದೇಶದಲ್ಲಿ ಬೇಡಿಕೆ ಜಾಸ್ತಿಯಾಯ್ತೋ, ಆಗ ಕೋಮುಗಲಭೆಯೊಂದು ನಡೆಯಿತು. ಸಹೋದರರಂತಿದ್ದ ಮೊಗವೀರರು ಮತ್ತು ಬ್ಯಾರಿ ಮುಸ್ಲೀಮರು ಸುರತ್ಕಲ್ ಕೋಮುಗಲಭೆಯಲ್ಲಿ ಕಚ್ಚಾಡಿಕೊಂಡರು. ಬ್ಯಾರಿ ಮುಸ್ಲೀಮರಿಂದ ಮೀನು ಪಡೆದುಕೊಳ್ಳಬಾರದು ಎಂಬ ಮೊದಲ ತಾಕೀತು ಬಂದಿದ್ದೇ ಅಂದು. ಅಂದಿನಿಂದ ಕರಾವಳಿಗೆ ಮೀನು ದುಬಾರಿಯಾಯ್ತು. ವಿದೇಶಕ್ಕೆ ಮೀನು ಸರಬರಾಜು ಮಾಡುವ ರಫ್ತು ಕಂಪನಿಗಳು ಹೆಚ್ಚಾದವು. ನಮ್ಮೂರಲ್ಲೇ ಸಮುದ್ರ ಇದ್ರೂ, ನಮ್ಮವರೇ ಮೀನು ಹಿಡಿದ್ರೂ ನಮಗ್ಯಾಕೆ ತಾಜಾ ಮತ್ತು ಗುಣಮಟ್ಟದ ಮೀನು ದೊರೆಯತ್ತಿಲ್ಲ ಎಂದು ಯಾವತ್ತಾದರೂ ಯೋಚಿಸಿದ್ದೀರಾ ? ಮಾಲ್, ಮಾರ್ಟ್ ಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ಯಾಕೆಟ್ ನಲ್ಲಿ ಸಿಗುವಂತಹ ತಾಜಾ ಮೀನು ನಮ್ಮದೇ ಸಮುದ್ರ ಬದಿಯ ಮಾರ್ಕೆಟ್ ನಲ್ಲಿ ಯಾಕೆ ಸಿಕ್ತಾ ಇಲ್ಲ?. ಯಾಕೆಂದರೆ ಸ್ಥಳೀಯ ಮೀನು ಉದ್ಯಮವನ್ನು ಧರ್ಮಾಧರಿತವಾಗಿ ಒಡೆದು ಕುಲಗೆಡಿಸಿ ಉದ್ಯಮವನ್ನೀಗ ಬಹುರಾಷ್ಟ್ರೀಯ ಕಂಪನಿಗಳು ಮತ್ತು ರಫ್ತು ಕಂಪನಿಗಳು ಆಳ್ವಿಕೆ ಮಾಡುತ್ತಿದೆ.
ಗೋಮಾಂಸದ ಕತೆ ಎಲ್ಲರಿಗೂ ಗೊತ್ತಿದೆ. ಗೊಡ್ಡು ದನವನ್ನು ಮಾರುವ ರೈತರು ಮತ್ತು ಆ ದನವನ್ನು ಕಸಾಯಿಖಾನೆಗೆ ತಲುಪಿಸುವ ಮುಸ್ಲಿಂ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿ ದನಗಳ ಸಾಗಾಟವನ್ನು ಭಜರಂಗದಳದ ಹುಡುಗರು ತಡೆಯುತ್ತಾರೆ. ಸ್ಥಳೀಯವಾಗಿ ಜನರಿಗೆ ಪೌಷ್ಟಿಕಾಂಶಯುಕ್ತ ದನದ ಮಾಂಸ ದುಬಾರಿಯಾಯ್ತು. ಆದರೆ ಇದೇ ಸಮಯದಲ್ಲಿ ಭಾರತವು ದನದ ಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ನಂಬರ್ 1 ಸ್ಥಾನ ಪಡೆಯಿತು. ಮುಸ್ಲಿಂ ಹೆಸರಿನ ಕಂಪನಿಗಳಾದ ಅಲ್ ಕಬೀರ್ ಎಕ್ಸ್ ಪೋರ್ಟ್, ಅರೇಬಿಯನ್ ಎಕ್ಸ್ ಪೋರ್ಟ್, ಎಂಕೆಆರ್ ಪ್ರೋಜನ್ ಫುಡ್ ಎಕ್ಸ್ ಪೋರ್ಟ್, ಪಿಎಂಎಲ್ ಇಂಡಸ್ಟ್ರೀಗಳ ಮಾಲೀಕರಾದ ಸತೀಶ್, ಅತುಲ್ ಅಗರ್ವಾಲ್, ಸುನೀಲ್ ಕಪೂರ್, ಮದನ್ ಅಬೋಟ್, ಎಎಸ್ ಬಿಂದ್ರಾ ಸೇರಿದಂತೆ ಬಿಜೆಪಿ ಬೆಂಬಲಿತ ರಫ್ತು ಉದ್ಯಮಿಗಳು ಲಕ್ಷಾಂತರ ಕೋಟಿ ರೂಗಳನ್ನು ಸಂಪಾದಿಸಿದರು. ಕೇವಲ ದನದ ಮಾಂಸ ವಿದೇಶಗಳಿಗೆ ರಫ್ತು ಮಾತ್ರವಲ್ಲ, ಮಾಲ್, ಮಾರ್ಟ್ ಗಳಲ್ಲಿ ಪ್ಯಾಕೇಟ್ ನಲ್ಲಿ ದನದ ಮಾಂಸ ಯಥೇಚ್ಚವಾಗಿ ಲಭ್ಯವಿದೆ. ಸ್ಥಳೀಯ ಕಸಾಯಿಖಾನೆಗಳನ್ನು ಬಂದ್ ಮಾಡಿ ದೊಡ್ಡ ಉದ್ಯಮಿಗಳ ಮೂಲಕ ದನದ ಮಾಂಸ ಮಾರಾಟ ಮಾಡಿಸುವುದು ಗೋ ಹತ್ಯೆ ವಿರೋಧಿ ಹೋರಾಟದ ಸೃಷ್ಟಿಗೆ ಕಾರಣವಾಗಿತ್ತು. ಇದು ದನ ಸಾಗಾಟ ವಾಹನ ನಿಲ್ಲಿಸಲು ಊಟ ತಿಂಡಿ ಬಿಟ್ಟು ಹೋರಾಟ ಮಾಡಿ ಜೈಲು ಪಾಲಾಗಿ ಬದುಕು ಹಾಳು ಮಾಡಿಕೊಳ್ಳುವ ಭಜರಂಗದಳದ ಹುಡುಗರಿಗೆ ಗೊತ್ತೇ ಇಲ್ಲ.
ಈಗ ಬುರ್ಕಾ/ ಸ್ಕಾರ್ಫ್/ ಹಿಜಾಬ್ ವಿಷಯಕ್ಕೆ ಬರೋಣ. 2009 ರಲ್ಲಿ ಮೊದಲ ಬಾರಿ ಮಂಗಳೂರಿನಲ್ಲಿ ಬುರ್ಕಾ/ ಸ್ಕಾರ್ಫ್ ವಿವಾದ ಭುಗಿಲೆದ್ದಿತ್ತು. ಎಸ್ ವಿ ಎಸ್ ಕಾಲೇಜಿನಲ್ಲಿ ಬುರ್ಕಾ/ಸ್ಕಾರ್ಫ್ ಬ್ಯಾನ್ ಮಾಡಲಾಗಿದೆ ಎಂದು ನಾವು ಒಂದು ತಂಡವಾಗಿ ವರದಿ ಮಾಡಿದ್ದೆವು. ಅದು ರಾಜ್ಯದ ಮೊದಲ ಬುರ್ಕಾ/ಸ್ಕಾರ್ಫ್ ವಿವಾದವಾಗಿತ್ತು. ಆಗ ಗೆಳೆಯನಾಗಿದ್ದ, ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ “ಬುರ್ಕಾ ಅಂಗಡಿಗಳಿಂದ ಕಮಿಷನ್ ಬಂತಾ ? ನಿಮ್ಮಿಂದಾಗಿ ಬುರ್ಕಾ ಅಂಗಡಿಗಳಿಗೆ ಒಳ್ಳೆ ವ್ಯಾಪಾರ” ಅಂತ ನನ್ನನ್ನು ಮತ್ತು ಸುದೀಪ್ತೋ ಮೊಂಡಲ್ ರನ್ನು ಛೇಡಿಸಿದ್ದರು. ಅದು ಹಾಸ್ಯವಾಗಿತ್ತಾದರೂ ಎಡಪಂಥೀಯರ ಈ ಸಮಾಜೋ ಆರ್ಥಿಕ ಚಿಂತನೆಯೇ ಸರಿಯಾದುದು. ಹೆಚ್ಚಾಗಿ ಫೆಬ್ರವರಿ ಕಾಲದಲ್ಲೇ ಯಾಕೆ ಸ್ಕಾರ್ಫ್ ವಿವಾದ ತಲೆದೋರುತ್ತೆ ? ಮಾರ್ಚ್ ಎಂಬ ಆರ್ಥಿಕ ವರ್ಷಾಂತ್ಯಕ್ಕೆ ಟೆಕ್ಸ್ ಟೈಲ್ ಉದ್ಯಮದ ಕ್ಲೀಯರೆನ್ಸ್ ಸೇಲ್ ಗಾಗಿ ಫೆಬ್ರವರಿಯಲ್ಲಿ ಬುರ್ಕಾ ವಿವಾದ ಎಬ್ಬಿಸಲಾಗುತ್ತಿದೆಯೇ ? ಭಾರತದಲ್ಲಿ ಇರುವಷ್ಟು ಡಿಸೈನ್ ಡಿಸೈನ್ ಬುರ್ಕಾ, ಸ್ಕಾರ್ಫ್ ಗಳು ಜಗತ್ತಿನ ಬೇರೆಲ್ಲೂ ಇಲ್ಲವೇನೋ. ಬುರ್ಕಾ ಮಾದರಿಯ ಡ್ರೆಸ್ ಗಳೋ, ಡ್ರೆಸ್ ಮಾದರಿಯ ಬುರ್ಕಾವೋ ಎಂದು ಗೊಂದಲವಾಗುವಷ್ಟರ ಮಟ್ಟಿಗಿನ ಬುರ್ಕಾ ಡಿಸೈನ್ ಅನ್ನು ಕಂಪನಿಗಳು ರೂಪಿಸಿವೆ.
ಅಂದ ಹಾಗೆ ಭಾರತದ ಟಾಪ್ ಜವಳಿ ಉದ್ಯಮ ನಡೆಸುತ್ತಿರುವವರು ಯಾರು ಗೊತ್ತಾ ? ಅರವಿಂದ್ ಲಿಮಿಟೆಡ್, ವರ್ಧಮಾನ ಟೆಕ್ಸ್ ಟೈಲ್, ವೆಲ್ಸ್ಪಾನ್ ಇಂಡಿಯಾ, ಟ್ರೈಡೆಂಟ್ ಲಿಮಿಟೆಡ್, ಕೆಪಿಆರ್ ಮಿಲ್ ಲಿಮಿಟೆಡ್, ಪೇಜ್ ಇಂಡಸ್ಟ್ರಿ, ರೂಪಾ ಅ್ಯಂಡ್ ಕಂಪನಿ ಇತ್ಯಾದಿಗಳು ಭಾರತದ ಜವಳಿ ಉದ್ಯಮವನ್ನು ಆಳುತ್ತಿದೆ.
ಈಗ ನೀವು ಸಾಮಾಜಿಕ ಜಾಲತಾಣವನ್ನು ತೆರೆದಾಗ ಅಲ್ಲಿ ಈಗ Fancy Burka Suppliers ಅಂತ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಬುರ್ಕಾ ಇಶ್ಯೂ ಅಂತ ಕಳೆದ ಒಂದು ವಾರದಿಂದ ಎಷ್ಟು ಕೋಟಿ ಜನ ಗೂಗಲ್ ಸರ್ಚ್ ಮಾಡಿರಬಹುದು. ಅವರೆಲ್ಲರಿಗೂ ಇಂಡಿಯಾ ಮಾರ್ಟ್ ಡಾಟ್ ಕಾಮ್, ಪ್ಲಿಪ್ ಕಾರ್ಟ್ ನಿಂದ ಕರೆ ಬಂದಿದೆ. ಕಳೆದೊಂದು ವಾರದಲ್ಲಿ ಅವರ ವ್ಯಾಪಾರ ಎಷ್ಟಾಗಿರಬಹುದು. ಊಹಿಸಿ…
ಬುರ್ಕಾ/ಸ್ಕಾರ್ಫ್ ಅನ್ನು ಬ್ಯಾನ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಶಾಲೆ ಸೇರಿದಂತೆ ಕೆಲವು ಕಡೆ ಅದನ್ನು ಧರಿಸದಂತೆ ಸೂಚಿಸಬಹುದಷ್ಟೆ. ಒಂದೇ ಒಂದು ಶಾಲೆಯಲ್ಲಿ ಹಿಜಾಬ್ ಹಾಕಿಕೊಂಡು ಬರುತ್ತಿದ್ದ ನಾಲ್ಕು ಜನ ವಿದ್ಯಾರ್ಥಿನಿಯರ ಸಂಖ್ಯೆ ದಿನಬೆಳಗಾಗುವುದರೊಳಗೆ ಆರಕ್ಕೇರಿತ್ತು. ದೇಶದಾದ್ಯಂತ ಈಗ ಸ್ಕಾರ್ಫ್/ ಬುರ್ಕಾ ಬಳಸುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.
ಆದ್ದರಿಂದ ದೇಶಗಳ ಮಧ್ಯೆ ನಡೆಯುವ ಯುದ್ದ ಮತ್ತು ದೇಶದೊಳಗೆ ನಡೆಯುವ ಕೋಮುವಾದ ಎಂಬುದು ವ್ಯಾಪಾರವಷ್ಟೆ. ಈ ವ್ಯಾಪಾರದಲ್ಲಿ ಯಾವುದೇ ಲಾಭವಿಲ್ಲದೆ ಭಾವನಾತ್ಮಕವಾಗಿ ಕೇಸರಿ ಶಾಲು ಹಾಕಿಕೊಂಡು ಭಾಗವಹಿಸುವ ಅಮಾಯಕ ಹುಡುಗರು ಜೀತದಾಳುಗಳಷ್ಟೆ.