ನಸ್ರೀನ್ ಮಿಠಾಯಿ
ಹಿಜಾಬ್ ಕುರಿತ ಚರ್ಚೆಗಳು ಹೆಣ್ಣು ಮಕ್ಕಳ ಬದುಕಿನ ಆಯ್ಕೆಯ ಸ್ವಾತಂತ್ರ್ಯ ಕುರಿತು ಪ್ರಸ್ತಾಪವಾದಾಗಲೆಲ್ಲ ಮತ್ತು ಮುಸ್ಲಿಂ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಎಳೆಯುವ ಸಂದರ್ಭಗಳು ಬಂದಾಗಲೆಲ್ಲ ಮತ್ತೆ ಮತ್ತೆ ಮುನ್ನಲೆಗೆ ಬಂದಿವೆ. ಈಗ ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಯುವತಿಯರು ಹಿಜಾಬ್ ಧರಿಸುವುದು ತಮ್ಮ ಹಕ್ಕು-ಇದರ ಜೊತೆಗೆ ತರಗತಿಗೆ ಅವಕಾಶ ಕೊಡಿ ಎಂದು ಧರಣಿಗೆ ಕೂತಿರುವುದು ಮತ್ತು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಉದ್ದೇಶಪೂರ್ವಕವಾಗಿ ಹಿಜಾಬ್ ಕಾರಣವಿಟ್ಟು ಕಾಲೇಜಿನಿಂದ ಆಚೆ ಇಟ್ಟಿದ್ದುದರ ಹಿನ್ನೆಲೆ ಹಿಜಾಬ್ ಪರ ಮತ್ತು ವಿರೋಧಗಳ ಚರ್ಚೆ ಪ್ರಾರಂಭ ಆಗಿದೆ. ಎರಡೂ ಆಯಾಮಗಳಿಂದ ಬುರ್ಖಾ ಕುರಿತು ನನ್ನ ಅನುಭವವನ್ನು ನಾನು ಇಲ್ಲಿ ವ್ಯಕ್ತಪಡಿಸ್ತಾ ಇದೇನೆ.
ಮೊದಲು ನನ್ನ ಬಗ್ಗೆ ಹೇಳೋದಾದರೆ ನಾನು ಮುಸ್ಲಿಂ ಸಮುದಾಯದಿಂದ ಬಂದವಳು. ಆದರೆ ಇಲ್ಲಿವರೆಗೂ ಹಿಜಾಬ್ ಆಗಲಿ, ಬುರ್ಖಾ ಆಗಲಿ ಹಾಕಿಲ್ಲ. ಮುಂದೆಯೂ ಹಾಕುವುದಿಲ್ಲ. ಕಳೆದ 30 ವರ್ಷಗಳ ಹಿಂದೆ ಹೋಗಿ ನನ್ನ ಬಾಲ್ಯವನ್ನು ನಾನು ಇಣುಕಿದರೆ ನಾನು ನೆಲೆನಿಂತಿರುವ ನಗರದ ಮುಸ್ಲಿಂ ಮಹಿಳೆಯರು ಬುರ್ಖಾ ಮತ್ತು ಹಿಜಾಬ್ ಹಾಕಿದ್ದು ನೋಡಿಲ್ಲ. ಎಲ್ಲೋ ಕೆಲವರು ವಹಾಬಿಸಂನ ವಕ್ತಾರರ ಕುಟುಂಬಗಳ ಮುಸ್ಲಿಂ ಮಹಿಳೆಯರು ಮಾತ್ರ ಹಾಕಿರೋದು ಹೆಚ್ಚು, ಅದೂ ಸಹ ತುಂಬಾ ಕಡಿಮೆ ಸಂಖ್ಯೆಯಲ್ಲಿ.
ನಮ್ಮ ಕುಟುಂಬದಲ್ಲಿ ನನ್ನ ತಾಯಿ ಮತ್ತು ಅಕ್ಕಂದಿರು ಬುರ್ಖಾ ಹಾಕುತ್ತಿರಲಿಲ್ಲ. ನನ್ನ ತಂದೆಗೂ ಸಹ ಪರ್ದಾ ಮಾಡುವುದು ಇಷ್ಟ ಇರಲಿಲ್ಲ. ನಮ್ಮ ಅಜ್ಜಿ ಮಾತ್ರ ಬಿಳಿ ಚಾದರವನ್ನು ಹೊರಗಡೆ ಹೋದಾಗ ಮಾತ್ರ ಹಾಕಿಕೊಂಡು ಹೋಗ್ತಾ ಇದ್ರು ಅಷ್ಟೆ. ನನ್ನ ಹಿರಿ ಅಕ್ಕನ ಮದುವೆ ಮಾತುಕತೆ ಆದಾಗ ನನ್ನ ಸೋದರ ಅತ್ತೆ ‘ಈಗ ಮಗಳಿಗೆ ಬುರ್ಖಾ ಹಾಕಿಸಬೇಕು’ ಎಂದು ಹೇಳಿದಾಗ ನಮ್ಮ ಅಪ್ಪ ತನ್ನ ಅಕ್ಕನಿಗೆ ಕೊಟ್ಟ ಉತ್ತರ ’ನನ್ನ ಮಗಳಿಗೆ ನನ್ನ ಮನೆಯಲ್ಲಿ ಇರೋವರೆಗೂ ಬುರ್ಖಾ ಎಲ್ಲಾ ಹಾಕಿಸಲ್ಲ ಅಷ್ಟೆ’ ಎಂದು ನೇರವಾಗಿ ಹೇಳಿದ್ದು ನನಗೆ ಈಗಲೂ ನೆನಪಿದೆ. ಆಗ ನನ್ನ ಅಪ್ಪನಿಗೆ ಫೆಮಿನಿಸಂ ಅಂತ ಎಲ್ಲ ಗೊತ್ತಿರಲಿಲ್ಲ ಆಯ್ತ. ನನ್ನ ಅಪ್ಪ ಶಾಲೆ ಮೆಟ್ಟಿಲು ಹತ್ತಿದವನೇ ಅಲ್ಲ. ನನ್ನ ಕುಟುಂಬದಲ್ಲಿ ಶಿಕ್ಷಣಕ್ಕೆ ತೆರೆದುಕೊಂಡವಳು ನಾನೇ ಮೊದಲಿಗಳು. ನಮ್ಮ ಮೊಹಮ್ಮದ್ ಪೈಗಂಬರರು ಸಹ ಫೆಮಿನಿಸ್ಟ್ ಹೌದು, ಅದನ್ನು ಕಂಡುಕೊಳ್ಳುವ ಮಾತೃ ಮನಸ್ಸು ಎಲ್ಲರಿಗೆ ಇದ್ದರೆ ಮಾತ್ರ ಸಾಧ್ಯ ಆಗುತ್ತೆ.
ನಾನು ಪದವಿ ಓದುವ ಸಂದರ್ಭದಲ್ಲಿ ನನ್ನ ಜೊತೆ ಇದ್ದ ನನ್ನ ಗೆಳೆತಿಯರು ಎಲ್ಲಾ ಧರ್ಮದವರು ಇದ್ದರು. ಪದವಿ ಕೊನೆಯ ವರ್ಷದಲ್ಲಿದ್ದಾಗ ನನ್ನ ಒಬ್ಬ ಗೆಳತಿ ಬುರ್ಖಾ ಹಾಕೋಕೆ ಶುರು ಮಾಡಿದ್ದಳು. ಆದರೆ ನನ್ನ ಇತರೆ ಗೆಳತಿಯರು ಅವಳ ಅಸ್ಮಿತೆಯೊಂದಿಗೆ ಬರುವ ಸವಾಲುಗಳನ್ನು ಅರ್ಥಮಾಡಿಸುತ್ತಲೇ ಅವಳ ಬುರ್ಖಾವನ್ನು ಒಪ್ಪಿಕೊಂಡಿದ್ದರು. ಆಗಾಗ ಅದನ್ನು ಹಾಕಿಕೊಂಡು ಟ್ರಯಲ್ ಮಾಡಿ ಉಸ್ಸಪ್ಪ ಅಂತ ನಕ್ಕು ಅವಳಿಗೆನೆ ತಗೋ ತಾಯಿ ನಿನ್ನ ಸುರಕ್ಷಾಚತ್ರಿ ಅಂತ ಮರಳಿ ಕೊಡೋರು. ಈ ಎಲ್ಲಾ ನನ್ನ ಹಿಂದು, ಕ್ರಿಶ್ಚಿಯನ್ ಧರ್ಮದ ಗೆಳೆತಿಯರು ಅವಳ ಕಲಿಕೆಗೆ ಸಹಕಾರಿಯಾಗಿ ಯಾವಾಗಲೂ ಮುಂದೆ ನಿಂತು ಅವಳಿಗೆ ದೈರ್ಯ ತುಂಬುತ್ತಿದ್ದುದು ನನಗೆ ಖುಷಿ ಕೊಡುವ ನೆನಪು. ನನ್ನ ಕಾಲೇಜಿನ ನನ್ನ ಎಲ್ಲಾ ಉಪನ್ಯಾಸಕ ವರ್ಗ ಹಿಜಾಬ್ ಹಾಕಿ ಪಾಠ ಕೇಳಲು ಕುಳಿತ ವಿದ್ಯಾರ್ಥಿನಿಯರಿಗೆ ಎಂದೂ ಭೇದಭಾವ ಮಾಡದೇ ಅವರಿಗೆ ಓದಿಗೆ ಪ್ರೇರಣೆಯನ್ನು ಕೊಡೋರು. ನಾನು ಓದಿದ ನಮ್ಮ ಭಾಗದ ಕಾಲೇಜು ಶಿಕ್ಷಣದ ವ್ಯವಸ್ಥೆಯಲ್ಲಿ ಕಂಡಿದ್ದು ಪ್ರತಿಯೊಬ್ಬರ ನಂಬಿಕೆಗಳನ್ನು ಗೌರವಿಸುತ್ತಲೇ ಒಪ್ಪಿಕೊಳ್ಳುವ, ಕೂಡಿ ಬಾಳುವ ಸಂಸ್ಕೃತಿಯನ್ನು. ಆದರೆ ಈಗ ಕಾಲೇಜು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮು ದೃವೀಕರಣವನ್ನು ಮಾಡಿ ಕೊನೆಗೆ ಅದು ಹೆಣ್ಣುಮಕ್ಕಳ ಮೇಲೆ ಪರಿಣಾಮವನ್ನು ಉಂಟು ಮಾಡಿ ಹಿಂಸೆಯನ್ನು ವಿಜೃಂಭಿಸಲಾಗುತ್ತಿದೆ.
ನನ್ನ ಶಿಕ್ಷಣದ ಜೊತೆಗೆ ದುಡಿಯುವ ವರ್ಗಗಳ ಜೊತೆ ನಾನು ದುಡಿಯಲು ನಿಂತಾಗ ಇಸ್ಲಾಂನ್ನು ಹೆಚ್ಚು ಅರ್ಥಮಾಡಿಕೊಂಡಿದ್ದೇನೆ. ಮುಸ್ಲಿಂ ಸಮುದಾಯದ ಹೆಚ್ಚು ಜನಸಂಖ್ಯೆ ತೊಡಗಿಸಿಕೊಂಡಿರುವುದು ದಿನಗೂಲಿ ಕೆಲಸಗಳಲ್ಲಿ. ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ವರ್ಗದಲ್ಲಿ ಇದ್ದಾರೆ. ದಿನಗೂಲಿಗಳಾಗಿದ್ದಾರೆ, ಸಣ್ಣಪುಟ್ಟ ವ್ಯಾಪಾರಗಳನ್ನು ಬೀದಿಬದಿಯಲ್ಲಿ ಮಾಡುತ್ತಿದ್ದಾರೆ. ಈ ಮಹಿಳೆಯರು ಬುರ್ಖಾ, ಹಿಜಾಬ್ ಹಾಕಿ ದುಡಿಮೆಗೆ ನಿಂತದ್ದು ನಾನು ಕಂಡಿಲ್ಲ. ಅವರ ಶ್ರಮದಲ್ಲೇ ಅವರು ಧರ್ಮವನ್ನು ಕಂಡಿದ್ದಾರೆ. ಆದರೆ ನಿಧಾನವಾಗಿ ದುಡಿಯುವ ವರ್ಗದ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಅನ್ನುವುದು ಶ್ರೇಷ್ಠ ಮುಸಲ್ಮಾನರ ಪದ್ದತಿ ಎಂದು ತುರುಕಲಾಗಿದೆ.
ಹಿಜಾಬ್ ಇಸ್ಲಾಂನ ಮುಖ್ಯ ಭಾಗ ಅಲ್ಲ. ಖುರಾನ್ ನಲ್ಲಿ ಪರ್ದ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಕೆಟ್ಟ ಉದ್ದೇಶದ ನಿಮ್ಮ ನೋಟಕ್ಕೆ ಪರ್ದವನ್ನು ಹಾಕಿ ಎನ್ನಲಾಗಿದೆ. ಅದು ಗಂಡಿಗೂ ಮತ್ತು ಹೆಣ್ಣಿಗೂ ಇಬ್ಬರಿಗೂ ಹೇಳಲಾಗಿದೆ. ಹಿಜಾಬ್ ಮುಸ್ಲಿಂ ಮಹಿಳೆಯ ಹಕ್ಕು ಅಲ್ಲ. ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾಗಿ ಮಹಿಳೆಯರು ಹಿಜಾಬನ್ನು ಒಪ್ಪಲೇಬೇಕೆಂಬ ನಿಬಂಧನೆ ಇಲ್ಲ. ಆಯಾ ಪ್ರಾದೇಶಿಕತೆಗೆ ಅನುಗುಣವಾವಿ, ಆಯಾ ಪ್ರದೇಶದ ಸಂಸ್ಕ್ರತಿಗೆ ಅನುಗುಣವಾಗಿ ಹಿಜಾಬ್ ಎಲ್ಲಾ ಧರ್ಮಗಳಲ್ಲಿ ಅನುಕರಿಸಲಾಗುತ್ತಿದೆ. ಪುರುಷಾಧಿಪತ್ಯದ ದಬ್ಬಾಳಿಕೆ ಎಲ್ಲಾ ಧರ್ಮಗಳ ಮಹಿಳೆಯರ ಮೇಲೆ ಹೇಗೆ ಹಿಡಿತವನ್ನು ಸಾಧಿಸಿದೆ ಅನ್ನೋದು ಸಹ ನಮಗೆಲ್ಲರಿಗೂ ಗೊತ್ತಿರುವುವಂತದ್ದೆ.
ಹಿಜಾಬ್ ಕಳೆದ ಮೂರು ನಾಲ್ಕು ದಶಕಗಳ ಹಿಂದೆ ಹೋದರೆ ಕಡ್ಡಾಯವಾಗಿರಲಿಲ್ಲ. ಹೆಚ್ಚು ಬಳಕೆಯಲ್ಲಿರಲಿಲ್ಲ ಸಹ. ಏಕಾಏಕಿ ಇತ್ತೀಚೆಗೆ ಹಿಜಾಬ್ ಕಡ್ಡಾಯವಾಗಿ ಹೇರಲಾಗುತ್ತಿದೆ. ಜೊತೆಗೆ ಹೆಣ್ಣುಮಕ್ಕಳಿಗೆ ಹಿಜಾಬ್ ಇದ್ದರೆ ಮಾತ್ರ ಕಂಫರ್ಟ್ ಆಗಿ ಇರ್ತೇವೆ ಅನ್ನೋ ಮನಸ್ಥಿತಿ ಹೇಗೆ ಬಂತು ಅನ್ನೋದು ಮುಖ್ಯ ಆಗುತ್ತೆ. ಇತ್ತೀಚೆಗೆ ಹಿಜಾಬ್ ಸಣ್ಣ ಮಕ್ಕಳಿಗೂ ಸಹಾ ತೊಡಿಸಲಾಗುತ್ತಿದೆ. ತುಂಬಾ ದುಃಖ ಆಗುತ್ತೆ, ಈ ಮಕ್ಕಳ ಬಾಲ್ಯವನ್ನೂ ಸಹ ಮುಕ್ತವಾಗಿ ಅನುಭವಿಸಲು ಅವರಿಗೆ ಬಿಡುತ್ತಿಲ್ಲ.
ಭಾರತಕ್ಕೆ ವಾಹಬಿಸಂ ಕಾಲಿಟ್ಟ ಮೇಲೆ ಹಿಜಾಬ್ ಬಳಕೆಯನ್ನು ಶ್ರೇಷ್ಠ ಮುಸ್ಲಿಂ ಪರಿಧಿಯಲ್ಲಿ ತಂದು ಕೂಡಿಸಲಾಗಿದೆ. ವಾಹಬಿಸಂನಿಂದ ಕೇವಲ ಹಿಜಾಬ್ ಅಷ್ಟೇ ಅಲ್ಲ ಇತರೆ ನಂಬಿಕೆಗಳಲ್ಲು ಶ್ರೇಷ್ಠತೆ ಮತ್ತು ಕನಿಷ್ಠತೆ ತಂದು ಇಡಲಾಯಿತು, ಈ ವಿಷಯ ನಾನು ಇಲ್ಲಿ ಹೇಳಲ್ಲ. ಜೊತೆಗೆ ಈ ಮಾರ್ಕೆಟೀಕರಣ ಹಿಜಾಬ್ ನ್ನು ಭಿನ್ನ ಭಿನ್ನ ಡಿಸೈನ್ಗಳಲ್ಲಿ, ಬಣ್ಣಗಳಲ್ಲಿ ಆಕರ್ಷಕವಾಗಿ ಬಿಂಬಿಸಿ ಇಷ್ಟಪಟ್ಟು ಹೆಣ್ಣುಮಕ್ಕಳು ಧರಿಸಿ ಕಂಫರ್ಟ್ ಜೋನನ್ನು ಸೃಷ್ಟಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಧರ್ಮ ಮತ್ತು ಮಾರುಕಟ್ಟೆ ಎರಡಕ್ಕೂ ತುಂಬಾ ನಂಟು ಇದೆ. ಧರ್ಮದ ಸುತ್ತು ವ್ಯಾಪಾರ-ಅಧಿಕಾರ-ಕೋಮುವಾದ ಹೇಗೆ ಜಾಲ ಬೆಸೆದುಕೊಂಡಿದೆ ಅಂತ ನಾವು ದೃಷ್ಟಿ ಹರಿಸಬೇಕಿದೆ. ಈಗಾಗಲೇ ಎಲ್ಲರಿಗೂ ಈ ಒಳಹುಗಳು ತಿಳಿಯದೇ ಇರುವಂಥದ್ದೇನಲ್ಲ. ಇದರ ಜಾಲ ಕೊನೆಗೆ ಹೋಗಿ ತಲುಪೋದು ಎಲ್ಲಾ ಸಮುದಾಯಗಳ ಮಹಿಳೆಯರ ಮೇಲೆ ಪರಿಣಾಮವನ್ನುಂಟು ಮಾಡುವುದರ ಮೂಲಕ. ಭಾರತದಲ್ಲಿ ಕೋಮು ಸಂಘರ್ಷಗಳಿಗೆ ಸಮುದಾಯದ ಬಲಿ ಹೆಚ್ಚಾಗಿದಾಗಲಿಂದಲೂ ಈ ಹಿಜಾಬ್ ಬಳಕೆ ಇನ್ನೂ ಹೆಚ್ಚಾಗಿದೆ. ಮುಸ್ಲಿಂ ಸಮುದಾಯದ ಅಭದ್ರತೆ ಹೀಗೆ ಹಿಜಾಬ್ ಮೂಲಕವೂ ಸಹ ವ್ಯಕ್ತವಾಗುತ್ತಿದೆ.
ಮುಸ್ಲಿಂ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇಲ್ಲಿ ಬಡತನ ಇದೆ, ಅಭದ್ರತೆ ಇದೆ, ಕೋಮುವಾದಕ್ಕೆ ಬಲಿಯಾಗ್ತಿದೆ. ಈಗತಾನೆ ಈ ಸಮುದಾಯದ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ತೆರೆದುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮ ಆದ್ಯತೆ ಯಾವುದಾಗಬೇಕು ಅಂದಾಗ ನಾನು ಸಹ ಹೇಳೋದು ಹಿಜಾಬ್ ಹಾಕಲಿ ಬಿಡಲಿ ಒಟ್ಟಾರೆ ಶಿಕ್ಷಣಕ್ಕೆ ಬರಲಿ. ಬಡತನದಿಂದ ಹೊರಬರಲಿ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲಿ. ನಮ್ಮ ಮುಂದೆ ಬೇರೆ ದಾರಿಗಳು ಇಲ್ಲ.
ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಭಾಗವಾಗಿ ಹೊಸಪೇಟೆಯಲ್ಲಿ ನಾವು ನಡೆಸುತ್ತಿರುವ ಕಾರ್ವಾನ್ ಸಮುದಾಯ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರು ಸ್ವಾವಲಂಬಿಗಳಾಗಲು, ನಾಯಕತ್ವವನ್ನು ಬೆಳೆಸಿಕೊಳ್ಳಲು, ಅರಿವನ್ನು ಪಡೆದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಜಾಬ್ ಹಾಕಿಕೊಂಡೇ ಭಾಗವಹಿಸುತ್ತಿದ್ದಾರೆ. ನಾನು ಬುರ್ಖಾ, ಹಿಜಾಬ್ ಹಾಕಲ್ಲ ಅನ್ನುವ ಕಾರಣಕ್ಕಾಗಿ ಈ ಮಹಿಳೆಯರಿಗೆ ನಿರಾಕರಿಸಿದರೆ ಇವರು ಈ ಅವಕಾಶಗಳಿಂದಲೂ ದೂರ ಉಳಿದುಬಿಡುತ್ತಾರೆ. ಅಂತಿಮವಾಗಿ ಹಿಜಾಬ್ ಹಾಕುವುದು ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಎಲ್ಲರ ಉದ್ದೇಶ ಈಗ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗೆ ಅವಕಾಶವನ್ನು ಸೃಷ್ಟಿಸಬೇಕೆ ಹೊರತು ಇರುವ ಅವಕಾಶಗಳನ್ನು ಕಿತ್ತುಕೊಳ್ಳುವುದಲ್ಲ. ಈಗಿನ ಸರಕಾರ ಮುಸ್ಲಿಂ ಮಹಿಳೆಯರಿಗೆ ಇರುವ ಅವಕಾಶವನ್ನು ಸಹ ಕಿತ್ತುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಸಂದರ್ಭದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಹೆಣ್ಣುಮಕ್ಕಳ ಹಿಜಾಬ್ ನ್ನು ಮುಂದೆ ನೆಪವಾಗಿಟ್ಟುಕೊಂಡು ಕೋಮುರಾಜಕಾರಣ ಮಾಡುತ್ತಿದೆ. ಈ ಪಕ್ಷಕ್ಕೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆಯಾಗಲಿ ಅಥವ ಇತರೆ ಧರ್ಮದ ಹೆಣ್ಣುಮಕ್ಕಳ ಬಗ್ಗೆಯಾಗಲಿ ಯಾವುದೇ ಕಾಳಜಿ, ಸೂಕ್ಷ್ಮತೆಗಳಿಲ್ಲ. ಮುಸ್ಲಿಂ ಹೆಣ್ಣುಮಕ್ಕಳ ಹಿಂದೆ ನಿಂತಿರುವ ಕೋಮುಶಕ್ತಿಗಳು ಸಹ ಇದಕ್ಕೆ ಪ್ರೇರಣೆಯನ್ನು ಕೊಡ್ತಾ ಇವೆ. ಎರಡೂ ಧರ್ಮಗಳ ಕೋಮುವಾದಿ ಶಕ್ತಿಗಳು ಹೆಣ್ಣುಮಕ್ಕಳು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಅಡ್ಡಗಾಲನ್ನು ಹಾಕಿವೆ. ಮುಸ್ಲಿಂ ಸಮುದಾಯಕ್ಕೆ ತಮ್ಮದೇ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಸಮುದಾಯದ ಈ ದೌರ್ಬಲ್ಯಗಳನ್ನು ಕೋಮುವಾದಿ ಸರಕಾರಗಳು ಬಳಸಿಕೊಂಡು ಮುಸ್ಲಿಂ ಸಮುದಾಯವನ್ನು ಇನ್ನಷ್ಟು ಹಿಂದಕ್ಕೆ ತಳ್ಳುತ್ತಿವೆ. ಹಾಗಾಗಿ ಇದರ ಆಚೆ ಹೆಣ್ಣುಮಕ್ಕಳು ಈ ನೆಲದ ಸಂವಿಧಾನದ ಮೂಲಕ ಮಾತ್ರ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಹೊರತು ಯಾವುದೇ ಧರ್ಮದ ಕೋಮುವಾದಿಗಳಿಂದ ಅಲ್ಲ ಅನ್ನೋ ಅರಿವನ್ನು ಪಡೆಯುವ ಕಡೆ ನಮ್ಮ ಹೆಜ್ಜೆಗಳು ಇಡಬೇಕಾಗಿದೆ.