ಕೋಲ್ಕತ್ತಾ: ಮೊಬೈಲ್ ಗ್ಯಾಂಬ್ಲಿಂಗ್ ಆ್ಯಪ್‌ಗಳ ಕಮಿಷನ್ ಹಗರಣ ಬೆಳಕಿಗೆ ಬಂದಿದ್ದು, ನಗದು ಹಣದ ವ್ಯವಹಾರ ಮೂಲಕ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅಕ್ರಮದ ಜಾಡು ಹಿಡಿದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಹಲವು ದಾಖಲೆಪತ್ರಗಳನ್ನು ಜಪ್ತಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಲ್ಕತ್ತಾ ಮೂಲದ ಮೊಬೈಲ್ ಗ್ಯಾಂಬ್ಲಿಂಗ್ ಆ್ಯಪ್ ಕಂಪನಿಯೊಂದರ ಪ್ರವರ್ತಕರ ಉದ್ಯಮಿ ಅಮೀರ್ ಖಾನ್ ನಿವಾಸದ ಮೇಲೆ ಈ ದಾಳಿ ನಡೆದಿದೆ. ಇಲ್ಲಿಯವರೆಗೆ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಎಂದು ವರದಿಯಾಗಿದೆ. ತನಿಖೆ ಮುಂದುವರೆದಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ‘ಇ-ನಗ್ಗೆಟ್ಸ್’ ಗ್ಯಾಂಬ್ಲಿಂಗ್ ಆ್ಯಪ್ ಹಾಗೂ ಅದರ ಪ್ರವರ್ತಕ ಉದ್ಯಮಿ ಆಮೀರ್ ಖಾನ್ ಅವರಿಗೆ ಸೇರಿದ 6 ಸ್ಥಳಗಳ ದಾಳಿ ನಡೆಸಿ ಶೋಧ ನಡೆಸುತ್ತಿದೆ. ಅಲ್ಲದೇ, ಆ್ಯಪ್‌ಗೆ ಚೀನಾ ಮೂಲದ ನಂಟಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೆರೆಯಾದ ಚೀನಾ ಮೂಲದ ‘ಸಾಲದ ಆ್ಯಪ್’ ಆರೋಪಿಗಳಿಗೂ ಹಾಗೂ ಗ್ಯಾಂಬ್ಲಿಂಗ್ ಆ್ಯಪ್‌ಗೂ ಇರುವ ಸಂಬಂಧದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಆರಂಭದಲ್ಲಿ ಆ್ಯಪ್ ಬಳಕೆದಾರರರಿಗೆ ಠೇವಣಿ ಮೇಲೆ ಭಾರಿ ಕಮಿಷನ್ ನೀಡುವ ಆಮಿಷವೊಡ್ಡಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ, ವಾಪಸ್ ನೀಡದೇ ವಂಚಿಸಲಾಗಿದೆ. ಪೊಲೀಸರು ಅದೆಷ್ಟೆ ನಿಗಾವಹಿಸಿದರೂ ಆನ್‌ಲೈನ್ ಜೂಜು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಅನೇಕರಿಂದ ದೂರುಗಳು ಬಂದಿದ್ದು ಇಡಿ ತನಿಖೆಗೆ ಮುಂದಾಗಿದೆ.
ಫೆಡರಲ್ ಬ್ಯಾಂಕ್ ಅಧಿಕಾರಿಗಳು ಕೂಡಾ ಕೋಲ್ಕತಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಗ್ಯಾಂಬ್ಲಿಂಗ್ ಆ್ಯಪ್‌ಗಳ ಖಾತೆಯಲ್ಲಿನ ವ್ಯವಹಾರದಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆದಿದೆ ಎಂದಿದ್ದರು. ಇವೆಲ್ಲವುಗಳನ್ನು ಆಧರಿಸಿ ಕೋಲ್ಕತಾ ಪೊಲೀಸರು 2021ರ ಫೆಬ್ರವರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿದ್ದರು.
ಉದ್ಯಮಿಯ ನಿವಾಸದ ಮೇಲೆ ಇಡಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.