ಕೊಳೆತ ವ್ಯವಸ್ಥೆ ಮತ್ತು ನೆಚ್ಚಿನ ರಂಜನಾ ಸಾವು

ಪರೀಕ್ಷೆಯು ತಪ್ಪಾಗಿ ಇಲ್ಲದಿದ್ದರೆ ಏನಾಗುತ್ತಿತ್ತು? ರಂಜನಾರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸದಿದ್ದರೆ ಏನಾಗುತ್ತಿತ್ತು? ದಾಖಲಿಸಿಕೊಳ್ಳಲು ತೋರಿಸಿದ  ವಿಳಂಬದಿಂದ ಅವರ ದೇಹದ ಸ್ಥಿತಿಯು ಮತ್ತೆ ಗುಣಪಡಿಸಲಾಗದ ರೀತಿಯಲ್ಲಿ ಹೆಚ್ಚು ಹದಗೆಡುವಂತೆ ಮಾಡಿತೆ?
ಭಾರತದಾದ್ಯಂತ ಸಾಮೂಹಿಕ ಶೋಕವು ಹರಡಿದೆ. ವೈಯಕ್ತಿಕ ದುರಂತದ ಭೀಕರ ಅನುಭವವನ್ನು ಮತ್ತು ಅದರ ಜೊತೆಗೆ ಹೆಣೆದುಕೊಂಡಿರುವ ಸರಕಾರದ ನೀತಿಗಳ ಬಗ್ಗೆ ತಮ್ಮ ವಿಚಾರಗಳನ್ನು, ಅನೇಕರು ಹಂಚಿಕೊಂಡಿದ್ದಾರೆರಂಜನ ಅವರೊಂದಿಗೂ ಸಹ ಅನೇಕ ಅನುಭವಗಳು ಮತ್ತು ಪ್ರಶ್ನೆಗಳು ಇವೆಇತರ ಪೀಡಿತರ ದುಃಖವನ್ನು ಕಡಿಮೆ ಮಾಡಲು, ಪ್ರಶ್ನೆಗಳಿಗೆ ಉತ್ತರಗಳನ್ನು ಮತ್ತು ಪರಿಹಾರಗಳನ್ನು ಹುಡುಕಲೇ ಬೇಕಿದೆ ಎಂದು ಬೃಂದಾ ಕಾರಟ್ ಬರೆಯುತ್ತಾರೆ.

1980 ರ ಮೇ ತಿಂಗಳ ಕಡು ಬಿಸಿಲಿನ ದಿನದಲ್ಲಿ, ಮಹಿಳೆಯರ ಗುಂಪೊಂದು ಫರೀದಾಬಾದ್ ನ ಕಾರ್ಮಿಕರ ಧೂಳುಭರಿತ ಬಡಾವಣೆಯ ಕಿರಿದಾದ ದಾರಿಯಲ್ಲಿ, ವರದಕ್ಷಿಣೆ ವಿರುದ್ಧದ ಅಭಿಯಾನದ ಭಾಗವಾಗಿ ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡುತ್ತಿದ್ದರು.  ಬಿಸಿಲಿನ ಶಾಖ ತಪ್ಪಿಸಲು ಮುಚ್ಚಿದ ಎಲ್ಲ ಕಿಟಕಿಗಳ ಮಧ್ಯೆ, ಆಗೊಮ್ಮೆ ಈಗೊಮ್ಮೆ ಏನದು ಗಲಾಟೆ ಎಂದು ಕಿಟಕಿಯಿಂದ ಇಣುಕಿದ್ದು ಬಿಟ್ಟರೆ ಒಂದು ನರಪಿಳ್ಳೆಯೂ ಕಾಣಿಸದಿದ್ದರೂ, ಅವರು ಧೃತಿಗೆಡಲಿಲ್ಲ, ರಂಜನ ಮತ್ತು ನಾನು ಇದೆಲ್ಲದರ ಮಧ್ಯೆ ಸ್ವಲ್ಪ ನಿಂತು, ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಇಬ್ಬರ ಮನಸ್ಸಿನಲ್ಲಿ ಬಂದ ಒಂದೇ ಯೋಚನೆಯನ್ನು ನೆನೆದು ಜೋರಾಗಿ ನಕ್ಕಿದ್ದೆವು. ಅದನ್ನು ರಂಜನಾ ಹೀಗೆ ಹೇಳಿಬಿಟ್ಟಿದ್ದರು, “ಈ ನಡುಮಧ್ಯಾಹ್ನದ ಸುಡುಬಿಸಿಲಲ್ಲಿ ರಸ್ತೆಗೆ ಇಳಿಯುವವರು ಹುಚ್ಚರು ಮತ್ತು ಕಮ್ಯುನಿಸ್ಟರು ಮಾತ್ರ”

ರಂಜನ ನಿರುಲಾ. ವಯಸ್ಸು 75. ಮಾರ್ಕ್ಸ್‌ವಾದಿ. ಟ್ರೇಡ್ ಯೂನಿಯನ್ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ. ಭಾರತ ಆಶಾ ಕಾರ್ಯಕರ್ತೆಯರ  ಸಂಘಟನೆಯ ಸಂಚಾಲಕಿ.  “ವಾಯ್ಸ್ ಆಫ್ ದಿ ವರ್ಕಿಂಗ್ ವುಮನ್” ಪತ್ರಿಕೆಯ ಸಂಪಾದಕಿ. ನೂರಾರು ಯುವಜನರಿಗೆ ಸಲಹೆಗಾರ್ತಿ, ಸಂಗಾತಿ. ನ್ಯಾಯಕ್ಕಾಗಿ ಸತತ 50 ವರ್ಷಗಳು ಹೋರಾಡಿದ ಗಟ್ಟಿಗಿತ್ತಿ. ಎಂತಹ ಕಠಿಣ ಸಂಕಷ್ಟಗಳ ಸಮಯದಲ್ಲೂ ಆಶಾವಾದಿ, ಸದಾ ನಗುಮುಖ ಹೊಂದಿದ ಎಲ್ಲರನ್ನೂ ನಗಿಸುವ ಹೃದಯವಂತ ಮಹಿಳೆ. ಇಂತಹ ಹೃದಯವಂತಿಕೆ ಇರುವ ರಂಜನಾಳನ್ನು ಮೇ ಹತ್ತರ ರಾತ್ರಿ  ಕೊರೊನಾದಿಂದ ಕಳೆದುಕೊಂಡೆವು. ವಿಶ್ವದಲ್ಲಿ ಕೊವಿಡ್‌ಗೆ ಅತಿ ಹೆಚ್ಚು ಬಲಿಯಾಗುತ್ತಿರುವ ಭಾರತದ ಪ್ರತಿದಿನದ ಸರಾಸರಿ 4000 ಜನರಲ್ಲಿ ಅಂದು ಅವಳೂ ಒಬ್ಬಳು.

ಇದನ್ನು ಓದಿ:  ದೇಶದಲ್ಲಿ ಈಗ ಎದ್ದಿದೆ ವ್ಯಾಕ್ಸಿನ್‌ಗಾಗಿ ಹಾಹಾಕಾರ

ಭಾರತದ ಲಕ್ಷಾಂತರ ಕುಟುಂಬಗಳ ಮೇಲೆ ಕೋವಿಡ್ ನ ಕ್ರೂರ ನೆರಳು ಬಿದ್ದಿದೆ. ಮಗ, ಮಗಳು, ಪಾಲಕರು, ಸಹೋದರ, ಸಹೋದರಿ, ಗೆಳೆಯ, ಗೆಳತಿಯರು, ಸಂಗಾತಿ, ಸಹೋದ್ಯೋಗಿ, ಪಕ್ಕದ ಊರಿನ ಪರಿಚಯದವರು, ಸಂಬಂಧಿಕರು – ಹೀಗೆ ಅನೇಕರನ್ನು ಕೆಲವೇ ದಿನಗಳಲ್ಲಿ ಕಳೆದುಕೊಂಡರು ಮತ್ತು ಕಳೆದುಕೊಳ್ಳುತ್ತಿದ್ದಾರೆ.  ಇದು ಭಾರತದಾದ್ಯಂತ ಸಾಮೂಹಿಕ ಶೋಕವನ್ನು ಹರಡಿದೆ.  ವೈಯಕ್ತಿಕ ದುರಂತದ ಭೀಕರ ಅನುಭವವನ್ನು ಮತ್ತು ಅದರ ಜೊತೆಗೆ ಹೆಣೆದುಕೊಂಡಿರುವ ಸರಕಾರದ ನೀತಿಗಳ ಬಗ್ಗೆ ತಮ್ಮ ವಿಚಾರಗಳನ್ನು, ಅನೇಕರು ಹಂಚಿಕೊಂಡಿದ್ದಾರೆ.  ರಂಜನ ಅವರೊಂದಿಗೂ ಸಹ ಅನೇಕ ಅನುಭವಗಳಿವೆ ಮತ್ತು ಪ್ರಶ್ನೆಗಳು ಸಹ ಇವೆ.  ಇತರ ಪೀಡಿತರ ದುಃಖವನ್ನು ಕಡಿಮೆ ಮಾಡಲು, ಈ ಪ್ರಶ್ನೆಗಳಿಗೆ ಉತ್ತರಗಳನ್ನು ಮತ್ತು ಪರಿಹಾರಗಳನ್ನು ಹುಡುಕಲೇ ಬೇಕಿದೆ.

ಒಬ್ಬ ರೋಗಿಗೆ ಕೋವಿಡ್ ನ ಸಾಮಾನ್ಯ ಲಕ್ಷಣಗಳಿದ್ದು ಆದರೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಋಣಾತ್ಮಕ(ನೆಗೆಟಿವ್) ಬಂದರೆ ಏನು? ಈ ಪ್ರಶ್ನೆಯನ್ನು ನಾವು ಅನೇಕ ಬಾರಿ ಎದುರಿಸಿದ್ದೇವೆ. ಕೋವಿಡ್ ನ  ರೋಗಲಕ್ಷಣಗಳ ಹೆಚ್ಚಾದಾಗ ರಂಜನಾ ಅವರು ಶ್ವಾಸಕೋಶದ ಸಿಟಿ ಸ್ಕ್ಯಾನ್ ಮಾಡಿದಾಗ ಪರಿಣಾಮ 12/25 ಸ್ಕೋರ್ ತೋರಿಸುತ್ತದೆ. ಇತರ ಗಂಭೀರ (ಕೊ-ಮೋರ್ಬಿಡಿಟಿ) ಗಳಿಂದಾಗಿ ವೈದ್ಯರು ರಂಜನಾ ಅವರನ್ನು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡುತ್ತಾರೆ. ಆದರೆ ಅವರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ನಿರ್ಣಯ ನಕಾರಾತ್ಮಕ ವಾಗಿರುವುದರಿಂದ ಯಾವುದೇ ಕೋವಿಡ್ ಗಾಗಿ ಗೊತ್ತುಪಡಿಸಿದ ಆಸ್ಪತ್ರೆಯು ಅವರನ್ನು ದಾಖಲಿಸಿಕೊಳ್ಳಲಿಲ್ಲ. ಈ ಹಿಂದೆ ಅವರು ಇತರ ಕಾಯಿಲೆಗಳಿಗಾಗಿ ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆ ಆಗಿರಲಿಲ್ಲ. ಪರೀಕ್ಷೆ ಋಣಾತ್ಮಕ ಇದ್ದರೂ ಸಿಟಿ ಸ್ಕ್ಯಾನ್ ನಲ್ಲಿ ತೋರಿಸಿದ ಪ್ರಕಾರ ಅವರ ಶ್ವಾಸಕೋಶವು ಕೋವಿಡ್ ನಿಂದ ಆಗುವ ರೀತಿಯಲ್ಲಿ 30% ಹಾನಿಗೊಂಡಿರುವ ಕಾರಣ ಅವರು ರಂಜನಾಳನ್ನು ತಮ್ಮ ಆಸ್ಪತ್ರೆಯಲ್ಲಿಯೂ ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ಯಾವುದೇ – ಕೋವಿಡ್ ಅಥವಾ ಕೋವಿಡೇತರ ಆಸ್ಪತ್ರೆಗಳು – ಅವರನ್ನು ದಾಖಲಿಸಿಕೊಳ್ಳಲಿಲ್ಲ. ಪರೀಕ್ಷೆಯ ಅಸಮರ್ಪಕ ಫಲಿತಾಂಶಗಳಿಂದ ಅನೇಕ ರೋಗಿಗಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದಾರೆ ಮತ್ತು ಎದುರಿಸುತ್ತಿದ್ದಾರೆ. ಇವೆಲ್ಲವುಗಳ ಮಧ್ಯ ರೋಗಿಗಳು ಮಾತ್ರ ಹೈರಾಣಾಗುತ್ತಿದ್ದಾರೆ. ಟೆಲಿ-ಸಮಾಲೋಚನೆ ಮತ್ತು ಆಮ್ಲಜನಕದ ಪೂರೈಕೆಯ ಮೂಲಕ ಅನೇಕ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡಬಹುದು. ರಾಷ್ಟ್ರೀಯ ದೂರದರ್ಶನದಲ್ಲಿ ಅನೇಕ ತಜ್ಞರು ಅದನ್ನೇ ನಿರಂತರವಾಗಿ ಹೇಳುತ್ತಿದ್ದಾರೆ. ಹೆದರಿಕೊಳ್ಳುವುದು ಬೇಡ. ನಿಜ. ಆದರೆ ರಂಜನಾರಂತಹ ಅನೇಕ ರೋಗಿಗಳಿಗೆ ತುರ್ತು ಆಸ್ಪತ್ರೆಯ ಅಗತ್ಯವಿರುವ ಬಗ್ಗೆ ಏನು? ಎರಡನೆಯದು ರಂಜನಾರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತದೆ ಆದರೆ ಅದರ ಪರಿಣಾಮ ಬರುವುದು ತಡವಾಗುತ್ತದೆ. ಇದೆಲ್ಲದರ ನಡುವೆ ಅವರಿಗೆ ಕೋವಿಡ್ ಲಕ್ಷಣಗಳು ಉಲ್ಬಣಗೊಂಡು, ಆಮ್ಲಜನಕದ ಮಟ್ಟ ಕುಸಿಯಿತು.

ಇದನ್ನು ಓದಿ: ಉದ್ಧಟ ವ್ಯಾಕ್ಸೀನ್ ಅಫಾಡವಿಟ್

ಕಾಕತಾಳಿಯವಾಗಿ, ಆಸ್ಪತ್ರೆಗಾಗಿ ನಮ್ಮ ಹುಡುಕಾಟದ ಅದೇ ಸಮಯದಲ್ಲಿ ದೆಹಲಿ ಹೈಕೋರ್ಟ್ ಇದೇ ವಿಷಯದ ಬಗೆಗಿನ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿತ್ತು. ರೋಗಿಗೆ ಕೋವಿಡ್ ಲಕ್ಷಣಗಳಿದ್ದರೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ಪರಿಣಾಮ ಇಲ್ಲದೆಯೂ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಬೇಕು ಎಂದು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಈ ನಿರ್ದೇಶನ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮೂಲ ನಿಯಮಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎನ್ನುವುದು ನಮ್ಮ ನಿರಾಶೆ. ಹೈಕೋರ್ಟ್‌ನ ಆದೇಶದ ನಂತರ ಏಮ್ಸ್ ನ ಹಿರಿಯ ವೈದ್ಯರೊಬ್ಬರು  “ಸಹಾಯಕ್ಕಾಗಿ ರೋಗಿಯನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತನ್ನಿ. ಆದರೆ ಪ್ರವೇಶಕ್ಕಾಗಿ ಪ್ರತಿಜನಕ(ಆಂಟಿಜನ) ಪರೀಕ್ಷೆಯು ಅಗತ್ಯ” ಎಂದು ಸಂದೇಶ ಕಳುಹಿಸಿದ್ದರು. ಹಾಗಿದ್ದರೆ ಪ್ರತಿಜನಕ ಪರೀಕ್ಷೆಯ ನಿರ್ಣಯ ತಪ್ಪು ಅಥವಾ ನಕಾರಾತ್ಮಕ ಬಂದರೆ, ಕೋವಿಡ್ ಇಲ್ಲ ಎಂದಾದರೆ, ಇಲ್ಲಿಯೂ ಅವರನ್ನು ದಾಖಲಿಸಿಕೊಳ್ಳಲಾಗುವುದಿಲ್ಲ ಎಂದರ್ಥವೇ!?  ಒಂದು ವಾರದ ನಂತರ ಆರೋಗ್ಯ ಸಚಿವಾಲಯದ ತಜ್ಞರ ಸಮಿತಿಯು ಹೈಕೋರ್ಟ್‌ನ ಆದೇಶವನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಲು ಪರೀಕ್ಷೆಯ ಧನಾತ್ಮಕ ಪರಿಣಾಮದ ಕೊರತೆ ಅಡ್ಡಿಯಾಗಬಾರದು, ಎಂದು ಅವರು ಮಾರ್ಗಸೂಚಿಗಳನ್ನು ನೀಡಿದರು. ಆದರೆ ಅದು ಕೆಳಮಟ್ಟದ ಆಡಳಿತದಲ್ಲಿ ಬದಲಾವಣೆ ತಂದಿದೆಯೇ ಎಂಬುದು ಅನುಮಾನವಿದೆ.

ಪರೀಕ್ಷೆಯು ತಪ್ಪಾಗಿ ಇಲ್ಲದಿದ್ದರೆ ಏನಾಗುತ್ತಿತ್ತು? ರಂಜನಾರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸದಿದ್ದರೆ ಏನಾಗುತ್ತಿತ್ತು?  ದಾಖಲಿಸಿಕೊಳ್ಳಲು ತೋರಿಸಿದ  ವಿಳಂಬದಿಂದ ಅವರ ದೇಹದ ಸ್ಥಿತಿಯು ಮತ್ತೆ ಗುಣಪಡಿಸಲಾಗದ ರೀತಿಯಲ್ಲಿ ಹೆಚ್ಚು ಹದಗೆಡುವಂತೆ ಮಾಡಿತೆ?

ಇದೆಲ್ಲದರ ನಡುವೆ ಸರಕಾರ ನಡೆಸುತ್ತಿರುವ ‘ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ’ ನಮ್ಮ ಜೀವ ಸೆಲೆಯಾಯಿತು. ಇಲ್ಲಿ ಅತ್ಯಂತ ಮಾನವೀಯ ಮತ್ತು ಸಹಾಯ ಮನೋವೃತ್ತಿಯ ಹಿರಿಯ ವೈದ್ಯರೊಬ್ಬರು ಆಸ್ಪತ್ರೆಯಲ್ಲಿನ ‘ಸಾರಿ’ (SARI – Severe Acute Respiratory Illness) ವಿಭಾಗ ದ ಬಗ್ಗೆ ಮಾಹಿತಿ ನೀಡಿದರು.  ‘ಸಾರಿ’ ತೀವ್ರವಾದ ಉಸಿರಾಟದ ಕಾಯಿಲೆ ಇರುವವರಿಗಾಗಿ ಇರುವ ವಿಭಾಗ.  ಇಲ್ಲಿ ಕೋವಿಡ್ ಲಕ್ಷಣಗಳನ್ನು ಹೊಂದಿದ್ದು ಮತ್ತು ಕೋವಿಡ್ ಪರೀಕ್ಷೆಯ ಪೊಸಿಟಿವ್ ಇಲ್ಲದ ರೋಗಿಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತದೆ.  ಇಲ್ಲಿ ಸೀಮಿತ ಹಾಸಿಗೆಗಳು ಇವೆ. ಇಲ್ಲಿ ನಮಗೆ ಹಾಸಿಗೆ ಸಿಕ್ಕಿದ್ದು ನಮ್ಮ ಅದೃಷ್ಟ. ಇಲ್ಲಿ ಕೆಲವೇ ಆಸ್ಪತ್ರೆಗಳಲ್ಲಿ ಇಂತಹ ವಾರ್ಡ್‌ಗಳು ಇವೆ. ಇಂತಹ ವಾರ್ಡ್‌ಗಳನ್ನು ಇನ್ನೂ ಅನೇಕ ಆಸ್ಪತ್ರೆಗಳಲ್ಲಿ ಪ್ರಾರಂಭಿಸಬೇಕು. ಇದು ಕೋವಿಡ್ ಶಂಕಿತ ರೋಗಿಗಳಿಗೆ, ಕೋವಿಡ್ ಪರೀಕ್ಷೆಯ ಧನಾತ್ಮಕ ಪರಿಣಾಮವಿಲ್ಲದವರಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ.

ದಾಖಲಾದ 2 ರಿಂದ 3 ದಿನಗಳಲ್ಲಿ ಆಸ್ಪತ್ರೆ ಮತ್ತೊಮ್ಮೆ ರಂಜನಾರವರ ಕೋವಿಡ್ ಪರೀಕ್ಷೆ ಮಾಡಿತು. ಆಗ ಪರಿಣಾಮ ಧನಾತ್ಮಕ ಬಂದಿತು.  ಇದಾದ ನಂತರ ರಂಜನಾರನ್ನು ‘ಸಾರಿ’ ವಿಭಾಗದಿಂದ ಕೋವಿಡ್ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಕೋವಿಡ್ ರೋಗಿ  ಆಸ್ಪತ್ರೆಗೆ ದಾಖಲಾದ ಮೇಲೆ ಮತ್ತು  ಅವರ ಕುಟುಂಬದವರು ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ನಾವು ಎದುರಿಸಿದವು. ಕೋವಿಡ್ ವಾರ್ಡ್ ಅಥವಾ ಐಸಿಯುನ ಗೋಡೆಗಳ ಆಚೆ ನಮ್ಮ ಪ್ರೀತಿಪಾತ್ರರ ಜೊತೆ ಏನಾಗುತ್ತಿದೆ ಎಂಬುದು ಹಗಲು-ರಾತ್ರಿ ಕಾಡುತ್ತಿರುತ್ತದೆ. ವೈದ್ಯಕೀಯ ಸಿಬ್ಬಂದಿಯ ಮೇಲಿನ ಅತಿಯಾದ ಹೊರೆ ಮತ್ತು ಅವರ ಕೆಲಸದ ಅವಧಿಯ ವಿಸ್ತರಣೆಯಿಂದ ರೋಗಿಯ ಅತ್ಯುತ್ತಮವಾದ ಸಿಬ್ಬಂದಿಯ ಆರೈಕೆಯಲ್ಲಿದ್ದಾಗಲೂ, ವೈಯಕ್ತಿಕವಾದ ಆರೈಕೆಯಿಂದ ವಂಚಿತರಾಗುತ್ತಿರುವುದು ಮತ್ತು ಅವರೊಂದು ಭಯಾನಕ ಒಂಟಿತನದಲ್ಲಿ ತಮ್ಮ ಸಮಯ ಕಳೆಯುತ್ತಿರುವುದು ನೆನೆದರೆ ಎದೆ ನಡುಗುತ್ತದೆ. ರೋಗಿ ತನ್ನ ಕುಟುಂಬದೊಂದಿಗೆ ಫೋನಿನಲ್ಲಿ ಮಾತಾಡುತ್ತಿದ್ದರೆ ಮಾತ್ರ ಪ್ರೀತಿಪಾತ್ರರಿಗೆ ಸ್ವಲ್ಪ ನಿರಮ್ಮಳತೆ ಇರುತ್ತದೆ. ಆದರೆ ಒಮ್ಮೆ ಆಕ್ಸಿಜನ್ ಮುಖ ಕವಚ ಹಾಕಿಕೊಂಡರೆ, ಉಸಿರಾಡಲು ಕಷ್ಟ ಪಡುವಾಗ, ನಮ್ಮವರ ಜೊತೆ ಮಾತಾಡುವ ಫೋನ್ ಎಂಬ ಕೊನೆಯ ಕೊಂಡಿಯೂ ಕಳಚಿಕೊಳ್ಳುತ್ತದೆ.

‘ಸಾರಿ’ವಾರ್ಡ್‌ನಲ್ಲಿ ರೋಗಿಗೆ ನೋಡಿಕೊಳ್ಳುವವರನ್ನು ಪಿಪಿಇ ಕಿಟ್‌ಗಳನ್ನು ಧರಿಸಿ ಒಳಗೆ ಬಿಡಲಾಗುತ್ತಿತ್ತು. ಕೋವಿಡ್ ವಾರ್ಡ್‌ನಲ್ಲಿ ಸಂಪೂರ್ಣ ಬೇರೆ ರೀತಿಯೇ ಇದೆ. ರೋಗಿಗೆ ವೈಯಕ್ತಿಕ ಆರೈಕೆಯ ಅಗತ್ಯವಿದೆ ಎಂಬುದು ವೈದ್ಯರಿಗೆ ಗೊತ್ತಾಗುತ್ತಿದ್ದರೂ, ಅದು ನಿಯಮಕ್ಕೆ ವಿರುದ್ಧವಾದದ್ದು ಎಂದು ಅವರೂ ಅಸಹಾಯಕರಾಗಿದ್ದರು. ರೋಗಿಗಳನ್ನು ಪ್ರತ್ಯೇಕಿಸುವ ಕಟ್ಟುನಿಟ್ಟಿನ ನೀತಿ ಅವಶ್ಯಕವಾದದ್ದು ಮತ್ತು ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ  ಪಿಪಿಇ ಕಿಟ್‌ಗಳನ್ನು ಹಾಕಿಕೊಂಡ ನರ್ಸ್‌ಗಳು ಮತ್ತು ಸಿಬ್ಬಂದಿ ವರ್ಗದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುವಂತೆಯೇ, ರೋಗಿಯ ಪರಿವಾರದವರು ತಯಾರಿದ್ದರೆ ಅವರಿಗೂ ಸಹ ಪಿಪಿಇ ಕಿಟ್‌ಗಳನ್ನು ಕೊಟ್ಟು ರೋಗಿಯು ವೇಗವಾಗಿ ಗುಣಮುಖವಾಗಲು ದಿನಕ್ಕೊಂದು ಬಾರಿಯಾದರೂ ಅವಕಾಶ ನೀಡಬಹುದಲ್ಲವೇ? ರಂಜನಾ ಅವರಿಗೆ ವೈಯಕ್ತಿಕ ಆರೈಕೆ ಸಿಕ್ಕಿತು. ಅದು ಅವರಿಗೆ ಹಾಗೂ ಕುಟುಂಬದವರಿಗೆ ಅಗಾಧ ಸಹಾಯ ಮಾಡಿತು. ಆದರೆ ಬೇರೆ ರೋಗಿಗಳ ಬಗ್ಗೆ ಏನು? ಹೇಗೆ?

ಮಗನನ್ನು ಕಳೆದುಕೊಂಡ ದುಖಿತ ತಾಯಿ “ನನ್ನನ್ನು ನಾನೇ ಶಪಿಸಿಕೊಳ್ಳುತ್ತೇನೆ. ಅವನು ಒಬ್ಬಂಟಿಯಾಗಿ ಅನಾರೋಗ್ಯದಿಂದ ಒದ್ದಾಡುವಾಗ ನನಗೆ ಅವನೊಂದಿಗೆ ಇರಲು ಆಗಲಿಲ್ಲ. ಅದಕ್ಕಾಗಿ ನನ್ನನ್ನು ನಾನು ಕ್ಷಮಿಸಲು ಸಾಧ್ಯವಿಲ್ಲ” ಎಂದು ರೋಧಿಸುತ್ತಿದ್ದಳು. ರಂಜನಾರನ್ನು ದಾಖಲಿಸಿದ ವಾರ್ಡಿನ ಹೊರಗೆ ಯುವತಿಯೊಬ್ಬಳು, ನೋವಿನಿಂದ ಬಳಲುತ್ತಿದ್ದ ತನ್ನ ತಂದೆಯ ಬಗೆಗಿನ ಸುದ್ದಿಗಾಗಿ ಕಾಯುತ್ತಿದ್ದಳು. ಅವಳು ಬೆಳಿಗ್ಗೆಯಿಂದಲೇ ತಂದೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರಿಗೆ ಬೇಕಾದ ಕೆಲವೊಂದು ವೈಯಕ್ತಿಕ ವಸ್ತುಗಳನ್ನು ಕೊಡಲು ಕಾಯುತ್ತಿದ್ದಳು. ಅವರಿಗೆ ಶೌಚಾಲಯಕ್ಕೆ ಹೋಗಬೇಕಿದೆ, ಆದರೆ ಅಲ್ಲಿ ಅವರಿಗೆ ಸಹಾಯ ಮಾಡಲು ಯಾರು ಇಲ್ಲ, ಎಂದು ಅವರು ಕಳಿಸಿದ ಸಂದೇಶ ನೋಡಿದಾಗಿನಿಂದ ಅವಳು ತುಂಬಾ ಕಳವಳಗೊಂಡಿದ್ದು ಮತ್ತು ಗಾಬರಿಯಾಗಿದ್ದಳು. ಸಹಾಯಕ್ಕಾಗಿ ಇರುವವರಿಗೆ ಅವಳ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಅನೇಕ ಸಂದೇಶಗಳು ಅವರಲ್ಲಿ ಇದ್ದವು. ಅವಳಂತೆ ಅಲ್ಲಿ ಅನೇಕರು ತಮ್ಮವರ ಬಗ್ಗೆ ತಿಳಿದುಕೊಳ್ಳಲು ಮತ್ತೆ ಅವರಿಗೆ ಸಂದೇಶ ಕಳುಹಿಸಲು ಕಾದುಕುಳಿತಿದ್ದರು. ಅಲ್ಲಿ ನಿಯಮಿತವಾಗಿ ರೋಗಿಗಳ ಕುಟುಂಬಗಳಿಗೆ ಅವರ ಸ್ಥಿತಿ ತಿಳಿಸಲು ಯಾವುದೇ ರೀತಿಯ ವ್ಯವಸ್ಥೆಯೂ ಇರಲಿಲ್ಲ.

ತಮ್ಮ ಆತ್ಮೀಯರಿಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಸುದ್ದಿಯೇ ಅವರ ಕುಟುಂಬಗಳಿಗೆ  ನಿರಮ್ಮಳತೆ ನೀಡುವಂತಹ ಸ್ಥಿತಿ ಇಂದು ಬಂದಿದೆ. ಆದರೆ ಅವರು ಒಮ್ಮೆ ಒಳಗೆ ಹೋದರೆ ನಂತರ ಅವರ ಮಾಹಿತಿಗಾಗಿ ಹತಾಶೆಯಿಂದ ಕಾಯುವುದು ಅವರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸುತ್ತದೆ. ಇವೆಲ್ಲವುಗಳಿಗೆ ವೈದ್ಯಕೀಯ ಸಿಬ್ಬಂದಿಯದೇ ತಪ್ಪು ಎಂದು ಆರೋಪಿಸಲಾಗದು. ಆದರೆ ಇದಕ್ಕೆ ಪರಿಹಾರವನ್ನು ನಾವು ಹುಡುಕಬಹುದು. ಇಂತಹ ವಿಷಯಗಳನ್ನು ನಾವು ಚರ್ಚಿಸಿ ಅವುಗಳ ಬಗ್ಗೆ ಪರಿಹಾರ ಹುಡುಕಬೇಕು. ಕೋವಿಡ್‌ನ ಎರಡನೇ ಅಲೆಯಲ್ಲಿ ಯುವಸಮುದಾಯ ಹೆಚ್ಚಿನ ಕಷ್ಟ ಅನುಭವಿಸುತ್ತಿದೆ ಮತ್ತು ಅವರಿಗೆ ಹೆಚ್ಚಿನ ಆರೈಕೆಯೊಂದಿಗೆ ಕುಟುಂಬದ ಬೆಂಬಲವೂ ಬೇಕಾಗಿದೆ.  ಹಾಗಾಗಿ ಈ ಕಷ್ಟಗಳಿಗೆ ಪರಿಹಾರ ಆದಷ್ಟು ಬೇಗ ಹುಡುಕಲೇಬೇಕಿದೆ.

ಅಂತ್ಯ ಸಂಸ್ಕಾರಕ್ಕಾಗಿ ಆಸ್ಪತ್ರೆಯು ಕುಟುಂಬದವರಿಗೆ ಅನುವು ಮಾಡಿ ಕೊಟ್ಟಿರುವುದಕ್ಕೆ ಜನ ಅವರಿಗೆ ಕೃತಜ್ಞರಾಗಿರುತ್ತಾರೆ. ಸ್ಮಶಾನದಲ್ಲಿನ ಭಯಾನಕ ಕಥೆಗಳು ನಮಗೆ  ನೇರವಾಗಿ ತಟ್ಟಲಿಲ್ಲ, ಏಕೆಂದರೆ ಅಲ್ಲಿ ಕಟ್ಟುನಿಟ್ಟಿನ ಸಮಯವನ್ನು ಪಾಲಿಸಲಾಗುತ್ತಿದ್ದು ಒಂದು ಅವಧಿಯಲ್ಲಿ ಸಂಬಂಧಿಸಿದವರು ಮಾತ್ರ ಇರುತ್ತಿದ್ದರು. ನಮ್ಮ ಪ್ರೀತಿಯ ಸಂಗಾತಿಗೆ ಗೌರವಾನ್ವಿತ ವಿದಾಯ ನೀಡಲಾಯಿತು.

ಆಸ್ಪತ್ರೆಗೆ ದಾಖಲಾದ ನಂತರ ರಂಜನಾ ಯಾವುದೇ ರೀತಿಯ ಚಿಕಿತ್ಸೆಯಿಂದ ವಂಚಿತರಾಗಲಿಲ್ಲ. ಅವರನ್ನು ನೋಡಿಕೊಂಡ ಎಲ್ಲಾ ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ನಾವು ಧನ್ಯವಾದ ಹೇಳಲೇಬೇಕು. ಅದೇನೇ ಇದ್ದರೂ ಒಂದು ಪ್ರಶ್ನೆ ಹಾಗೆಯೇ ಉಳಿದು ಬಿಟ್ಟಿತು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ, ವೈಯಕ್ತಿಕ ಆರೈಕೆ ಇಲ್ಲದೆ ಸತ್ತ ಸಾವಿರಾರು ಜನರ ಕಥೆಯೇನು? ಅವರಿಗೆ ಚಿಕಿತ್ಸೆಯೊಂದಿಗೆ ವೈಯಕ್ತಿಕ ಆರೈಕೆ, ಪ್ರೀತಿ, ಪ್ರೋತ್ಸಾಹ ಸಿಕ್ಕಿದ್ದರೆ ಅವರೆಲ್ಲರ ಕತೆ ಬೆರೇಯೇ ಇರುತ್ತಿತ್ತು. ಇದು ಆಡಳಿತ ಮತ್ತು ಆರೋಗ್ಯ ಆರೈಕೆ ವ್ಯವಸ್ಥೆಯ ಅದ್ಭುತ ಕುಸಿತ.

ಆತ್ಮೀಯ ಒಡನಾಡಿ, ಪ್ರೀತಿಯ ಸಂಗಾತಿಗೆ ಕೆಂಪು ವಂದನೆಗಳು. ನೀವು ಸದಾ ನಮ್ಮೆಲ್ಲರ ಹೃದಯದಲ್ಲಿ ಅಮರ.

Donate Janashakthi Media

Leave a Reply

Your email address will not be published. Required fields are marked *