ಬೆಂಗಳೂರು : ಮೂರು ದಿನಗಳ ಅಂತರದಲ್ಲಿ ಕೋಲಾರ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಕೋಲಾರ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಮಾಜಿ ಸ್ಟೀಕರ್ ರಮೇಶ್ ಕುಮಾರ್ ಬೆಂಬಲಿಗ, ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಹಾಗೂ ಮಾಲೂರಿನ ಜಯಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಣಸಂದ್ರ ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಅನಿಲ್ ಕುಮಾರ್ ಎಂಬುವವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.
ಶ್ರೀನಿವಾಸನ್ ಕೊಲೆಯಾಗಿದ್ದು ಹೇಗೆ? : ಸೋಮವಾರ ಆಯುಧ ಪೂಜೆ ಹಬ್ಬ ಮುಗಿಸಿಕೊಂಡು ಶ್ರೀನಿವಾಸಪುರ-ಮುಳಬಾಗಲು ರಸ್ತೆಯ ಹೊಗಳಗೆರೆ ಬಳಿ ನಿರ್ಮಾಣವಾಗುತ್ತಿರುವ ಬಾರ್ ಕಾಮಗಾರಿ ಪರಿಶೀಲನೆಗೆಂದು ಶ್ರೀನಿವಾಸನ್ ಹೋಗಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಅವರನ್ನು ಮಾತನಾಡಿಸುವ ನೆಪದಲ್ಲಿಆರೋಪಿಗಳು ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಲಾಂಗ್ ಹಾಗೂ ಚಾಕುಗಳಿಂದ ಮನಸ್ಸಿಗೆ ಬಂದಂತೆ ತಿವಿದಿದ್ದಾರೆ. ಈ ವೇಳೆ ರಕ್ಷಣೆಗೆ ಮುಂದಾದ ಕಾರು ಚಾಲಕ, ವಾಚ್‌ಮನ್ ಹಾಗೂ ಶ್ರೀನಿವಾಸನ್ ಬಾಮೈದನ ಮೇಲೆಯೂ ಆರೋಪಿಗಳು ಹಲ್ಲೆಗೆ ಮುಂದಾದಾಗ, ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಆರೋಪಿಗಳು ಶ್ರೀನಿವಾಸನ್ ಅವರಿಗೆ 18 ಕ್ಕೂ ಕಡೆ ಚುಚ್ಚಿದ್ದಾರೆ.
ಶ್ರೀನಿವಾಸನ್ ಹಾಗೂ ಕೊಲೆಯ ಪ್ರಮುಖ ರೂವಾರಿ ವೇಣುಗೋಪಾಲ್ ಸಂಬಂಧಿಕರಾಗಿದ್ದು, ಮೊದಲಿನಿಂದಲೂ ಇಬ್ಬರ ನಡುವೆ ವೈಮನಸ್ಸಿದೆ. ನಾಲ್ಕು ವರ್ಷಗಳ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆಯಾದ ಸಂದರ್ಭದಲ್ಲಿ ವೇಣುಗೋಪಾಲ್ ಮೇಲೆ ಶ್ರೀನಿವಾಸನ್ ಹಲ್ಲೆ ನಡೆಸಿದ್ದರು. ಈ ವೇಳೆ ವೇಣುಗೋಪಾಲ್ ಖಾಸಗಿ ಜಾಗಕ್ಕೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದರಿಂದಾಗಿ ಶ್ರೀನಿವಾಸ್ ಮೇಲೆ ಹಗೆ ಸಾಧಿಸುತ್ತಿದ್ದರು. ಇದರೊಂದಿಗೆ ವೇಣುಗೋಪಾಲ್ ಮನೆಗೆ ಶ್ರೀನಿವಾಸನ್ ಬೆಂಕಿ ಹಚ್ಚಿಸಿದ್ದು, ಪ್ರಕರಣವೂ ದಾಖಲಾಗಿದೆ. ಇಬ್ಬರ ನಡುವೆ ಸಾಕಷ್ಟು ಸಂಧಾನ ಪ್ರಕರಣಗಳು ನಡೆದರೂ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪ್ರಮುಖ ಆರೋಪಿಗಳಾದ ಶ್ರೀನಿವಾಸಪುರದ ವೇಣುಗೋಪಾಲ್, ಬಂಗಾರಪೇಟೆ ತಾಲೂಕು ಅಜ್ಜಪ್ಪನಹಳ್ಳಿಯ ಸಂತೋಷ್, ಕೋಲಾರ ನಗರದ ಮುನೇಂದ್ರ, ಮುಳಬಾಗಲಿನ ನಾಗೇಂದ್ರ, ಕೊಳತೂರು ಗ್ರಾಮದ ಹರ್ಷಿತ್ ಹಾಗೂ ವೇಮಗಲ್‌ನ ಅರುಣ್‌ಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಕೋಲಾರ| ದಲಿತ ವ್ಯಕ್ತಿಯ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ; ಅವಾಚ್ಯ ಶಬ್ದಗಳಿಂದ ನಿಂದನೆ
ಅನಿಲ್ ಕೊಲೆಯಾಗಿದ್ದು ಹೇಗೆ?: ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಅನೀಲ್ , ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದ. ವಯಸ್ಸಿನ್ನು ಚಿಕ್ಕದಾದರೂ ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ. ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್, ಗ್ರಾಮದ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುವ ಮೂಲಕ ಬೆಳೆಯುತ್ತಿದ್ದ, ಇದನ್ನು ಸಹಿಸದ ಕೆಲವರು ಅನಿಲ್ ನಡೆಯನ್ನು ವಿರೋಧಿಸುತ್ತಾ ಬಂದಿದ್ದರು.
ಅಕ್ಟೋಬರ್ 21 ರಂದು ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾಲೂರು ಪಟ್ಟಣದ ಕಡೆಗೆ ಅನಿಲ್ ಬರುವಾಗ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಅನಿಲ್ ತಲೆಗೆ ಮಚ್ಚಿನಿಂದ ಹೊಡೆದು ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಕೋಲಾರ-ಹೊಸೂರು ಹೈವೇ ಆಗಿರುವುದರಿಂದ ಎಲ್ಲಿ ಜನ ಸೆರುತ್ತಾರೋ ಎಂದು ಗಾಬರಿಗೊಂಡ ದುಷ್ಕರ್ಮಿಗಳು, ಕೊಲೆಗೆ ಬಳಸಿದ್ದ ಮಚ್ಚನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಿಷಯ ತಿಳಿದ ಕೂಡಲೇ ಕೊಲೆ ನಡೆದ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ನಾರಾಯಣ್ ಹಾಗೂ ಮಾಲೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನುಮಾನಾಸ್ಪದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಎರಡು ಘಟನೆಗಳಿಂದ ಕೋಲಾರದ ಜನ ಬೆಚ್ಚಿ ಬಿದ್ದಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಈ ರೀತಿ ಕೊಲೆ ನಡೆಯುತ್ತಾ ಹೋದರೆ ಕುಟುಂಬಗಳನ್ನು ರಕ್ಷಿಸುವವರು ಯಾರು? ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ವಿಡಿಯೋ ನೋಡಿ : “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು?