ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿಂದು ನಡೆದ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೈತ ಹೋರಾಟಗಾರರು ವಾಗ್ವಾದಕ್ಕೆ ಇಳಿದ ಪ್ರಸಂಗ ಜರುಗಿದೆ.
ಕಬ್ಬು ಬೆಲೆ, ಬಾಕಿ ಪಾವತಿ, ಬೆಳೆಗಾರರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಚಿವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆಯನ್ನು ನಿಗದಿಪಡಿಸಿದ್ದರು. ಈ ಸಂದರ್ಭದಲ್ಲಿ ರೈತ ಹೋರಾಟಗಾರರು ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದನ್ನು ಆಕ್ಷೇಪಿಸಿ, ಒಂದೋ ಅವರಿರಬೇಕು ಇಲ್ಲವೇ ನಾವಿರಬೇಕು ಎಂದು ಪಟ್ಟು ಹಿಡಿದು ಸಕ್ಕರೆ ಸಚಿವರಿಗೆ ಸ್ಪಷ್ಟಪಡಿಸಲು ಒತ್ತಾಯಿಸಿದರು. ಗುರುತರ ಆರೋಪ ಹೊತ್ತು ಕಳಂಕಿತರಾದ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂಬ ಮಾತನ್ನೂ ಸೇರಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ರೈತ ಮುಖಂಡ ವಿಜಯ ಕುಮಾರ್ ಮಾತನಾಡಿ, ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೆಸರು ನಮೂದು ಆಗಿಲ್ಲ. ಆಹ್ವಾನ ಇಲ್ಲದಿದ್ದರೂ ಕೋಡಿಹಳ್ಳಿ ಚಂದ್ರಶೇಖರ್ ಸಭೆಗೆ ಬಂದಿದ್ದಾರೆ. ಅವರ ವಿರುದ್ಧ ಆಪಾದನೆಗಳಿವೆ. ಈ ನಿಟ್ಟಿನಲ್ಲಿ, ಅವರು ಸಭೆಯಲ್ಲಿ ಭಾಗಿಯಾಗುವುದು ಗೌರವ ತರಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಚಿವರಿಗೆ ಆಗ್ರಹಿಸಿದರು.
ಮಧ್ಯೆ ಪ್ರವೇಶಿಸಿದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಆರೋಪದ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವೆ. ಯಾವುದೇ ತನಿಖೆ ನಡೆಸಿ, ನಾನು ಅಪರಾಧಿ ಎಂದು ಸರ್ಕಾರ ಘೋಷಣೆ ಮಾಡಿದರೆ ಶಿಕ್ಷೆಗೆ ಸಿದ್ದ. ಅದರ ಬದಲಾಗಿ, ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಸಭೆಯಲ್ಲಿ ತರುವುದು ಸೂಕ್ತ ಅಲ್ಲ. ವಿಷಯದ ಕಡೆ ಗಮನ ನೀಡೋಣ ಎಂದು ಕೋರಿದರು.
ಈ ವಿಚಾರವಾಗಿ ರೈತರ ಎರಡು ಬಣಗಳ ಮಧ್ಯೆ ವಾಗ್ವಾದ ನಡೆಯಿತು. ರೈತ ಮುಖಂಡರಾದ ಸುನಂದಾ ಜಯರಾಂ ಇನ್ನಿತರರು ಮಧ್ಯೆ ಪ್ರವೇಶಿಸಿ, ಸಭೆಯ ಮಹತ್ವ ಅರಿತು ವಿಷಯಗಳ ಚರ್ಚೆ, ಪರಿಹಾರ ಕಂಡುಕೊಳ್ಳೋಣ ಎಂದರು. ಸಚಿವ ಶಂಕರ್ ಪಾಟೀಲ್ ಸಹ ಸಭೆಯಲ್ಲಿ ಗೊಂದಲ ಆಗುವುದು ಬೇಡ. ನಾವು ನಿಗದಿಪಡಿಸಿದ ವಿಚಾರದ ಬಗ್ಗೆ ಚರ್ಚೆ ಮಾಡೋಣವೆಂದು ವಿನಂತಿಸಿಕೊಂಡರು.
ಕಬ್ಬು ಬೆಲೆ ನಿಗದಿ ಕುರಿತು ಸಭೆ
ರಾಜ್ಯದ ಕಬ್ಬು ಬೆಳೆಗಾರರ ಕಬ್ಬು ದರ ಪುನರ್ ಪರಿಶೀಲನೆಗೆ ಹಾಗೂ ಕೃಷಿ ಪಂಪ್ ಸೆಟ್ ಖಾಸಗಿಕರಣ ವಿರೋಧಿಸಿ ಸೆಪ್ಟೆಂಬರ್ 26ರಂದು ಸಹಸ್ರಾರು ರೈತರು ವಿಧಾನಸೌಧ ಚಲೋ ನಡೆಸಲು ಯತ್ನಿಸಿದಾಗ ರೈತರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಆದರೆ 5ರ ಒಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಮತ್ತೆ ರೈತರು ಕೃಷ್ಣಾ ಗೃಹ ಕಚೇರಿಗೆ ಭೇಟಿ ನೀಡಿ ಸಭೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದ್ದರು. ಅದರಂತೆ ಇಂದು ಸಭೆ ನಿಗದಿಪಡಿಸಲಾಗಿತ್ತು.
ಕಬ್ಬಿಗೆ ಉತ್ತರ ಪ್ರದೇಶದಲ್ಲಿ 3500, ಪಂಜಾಬ್ ನಲ್ಲಿ 3800 ಗುಜರಾತ್ ನಲ್ಲಿ 4400 ದರ ನಿಡುತ್ತಿದ್ದಾರೆ. ಕರ್ನಾಟಕದಲ್ಲಿ ನ್ಯಾಯಯುತ ದರ ನಿಗದಿಪಡಿಸಿ ರೈತರಿಗೆ ನ್ಯಾಯ ಕೊಡಿಸಬೇಕು, ಉತ್ಪಾದನಾ ವೆಚ್ಚ ಕೂಡಾ ಏರಿಕೆಯಾಗಿದೆ. ಹೀಗಾಗಿ ಪ್ರಸಕ್ತ ಹಂಗಾಮಿಗೆ ಕಬ್ಬಿನ ದರ ಪರಿಷ್ಕರಣೆ ಮಾಡುವಂತೆ ರೈತರ ಬೇಡಿಕೆ ಆಗಿದೆ.