ಮಡಿಕೇರಿ: ಪ್ರಕೃತಿಯನ್ನು ಆರಾಧಸುವ ಹಬ್ಬಗಳಲ್ಲಿ ಕೊಡಗಿನ ಹುತ್ತರಿ ಹಬ್ಬವು ಒಂದು. ಧಾನ್ಯ ಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವ ವಿಶೇಷ ಹಬ್ಬ ಹುತ್ತರಿ ಹಬ್ಬ. ಕೊಡವರ ಜನಪದ ಕಲೆಗಳ ಅನಾವರಣವೂ ಈ ಹಬ್ಬದಲ್ಲಿ ಮೇಳೈಸಲಿದೆ.
ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಕೊಡಗಿನಲ್ಲಿ ಇದು ಪುತ್ತರಿ ಹಬ್ಬ ಎಂದೇ ಖ್ಯಾತಿ ಗಳಿಸಿದೆ. ಕೇರಳದ ಓಣಂ ಹಬ್ಬ ಕಳೆದು ಸರಿಯಾಗಿ ಮೂರು ತಿಂಗಳು ನಂತರ ಈ ಹಬ್ಬ ಇಲ್ಲಿ ನಡೆಯುತ್ತದೆ. ಈ ಹಬ್ಬವನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ಇನ್ನೂ ಮನೆಗಳನ್ನು ಸುಣ್ಣ ಬಣ್ಣದಿಂದ ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿರುತ್ತದೆ.
ಹಬ್ಬದ ದಿನ ಮೊದಲ ದಿನ ಮನೆಯಲ್ಲಿ ನೆರೆಕಟ್ಟಿ, ದೇವರನ್ನು ಪೂಜಿಸಿ ಹಿರಿಯರ ಮೂಲಕ ಮೆರವಣಿಗೆ ಬರುವ ಜನರು ಭತ್ತದ ಗದ್ದೆಗೆ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿ, ಭತ್ತದ ಕದಿರನ್ನು ಮನೆಗಳಿಗೆ ತರುತ್ತಾರೆ. ತಮ್ಮ ಗದ್ದೆಗಳಲ್ಲಿರುವ ಕದಿರು ತೆಗೆದು ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡಿದ್ದ ಕೊಡವರು ಇಂದು ಊರಿನ ಮಧ್ಯಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಕೊಡವ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಮಹಿಳೆಯರು ಕಾವೇರಮ್ಮನಿಗೆ ನಮಿಸಿ ಉಮ್ಮತ್ತಾಟ್ ನೃತ್ಯ ಮಾಡಿದರೆ, ಪುರುಷರು ಬೊಳಕ್ ಆಟ್ ಪ್ರದರ್ಶಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದಲ್ಲಿ ಪುತ್ತರಿ ಹಬ್ಬದ ಅಂಗವಾಗಿ ಕೋಟೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ಪುರುಷರ ಕೊಡವ ಸಾಂಪ್ರದಾಯಿಕ ಉಡುಗೆ ಕುಪ್ಪಿಚಾಲೆ ತೊಟ್ಟು ಕೋಲಾಟ್ ಪ್ರದರ್ಶಿಸಿದರು. ಮಧ್ಯದಲ್ಲಿ ನಿಂತ ತಂಡವು ದುಡಿಕೊಟ್ಟು ಪಾಟ್ ನುಡಿಸುತ್ತಿದ್ದರೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕೋಲಾಟ್ ಪ್ರದರ್ಶಿಸಿದರು. ಅಲ್ಲದೆ ಶೌರ್ಯದ ನೃತ್ಯವಾಗಿರುವ ಪರಿಯಕಳಿಯನ್ನ ನಡೆಸಿದರು. ಮಹಿಳೆಯರು ಉಮ್ಮತ್ತಾಟ್ ಮತ್ತು ಬೊಳಕ್ಕಾಟ್ ಪ್ರದರ್ಶಿದರು. ಕೊನೆಯಲ್ಲಿ ಕೊಡವ ವಾಲಗಕ್ಕೆ ಮಕ್ಕಳು, ಮಹಿಳೆಯರು ಪುರುಷರೆನ್ನದೆ ಎಲ್ಲರೂ ಸಾಮೂಹಿಕವಾಗಿ ಕೊಡವ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಕೃಷಿ ಪ್ರಧಾನ ಕೊಡಗಿನ ಹುತ್ತರಿ ಹಬ್ಬ ನಿಜಕ್ಕೂ ವಿಶೇಷ. ಮುಂಗಾರು ಆರಂಭದಲ್ಲಿ ಗದ್ದೆಯನ್ನು ಉತ್ತು-ಬಿತ್ತಿ ಕಟಾವಿನ ಹಂತಕ್ಕೆ ತಂದ ಕೊಡಗಿನವರು ಪೊಲಿ ಪೊಲಿಯೇ ದೇವಾ ಎಂದು ಸ್ಮರಿಸುತ್ತಾ ಭೂ ದೇವಿಗೆ ಕೃತಜ್ಞತೆ ಸಲ್ಲಿಸುತ್ತಾ ಹಬ್ಬವನ್ನು ಆಚರಿಸಿ ಸಂಭ್ರಮಪಡುತ್ತಾರೆ.