ಪ್ರಜಾಪ್ರಭುತ್ವ ಭಾರತದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡಬೇಕಿದೆ- ಶೈಲಜಾ ಟೀಚರ್ ಕಳವಳ‌

ಬೆಂಗಳೂರು : ಪ್ರಜಾಪ್ರಭುತ್ವ ಭಾರತದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಈಗಲೂ ನಾವು ಪರದಾಡಬೇಕಿದೆ. ಎಲ್ಲರಿಗೂ ಶಿಕ್ಷಣ ಉದ್ಯೋಗ, ಆರೋಗ್ಯ, ವೇತನ, ಮನೆಯಂತಹ ಮೂಲ ಸೌಲಭ್ಯ ಮತ್ತು ಹಕ್ಕುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಕಳವಳ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿ ಬೇಗೂರಿನಲ್ಲಿ ನಡೆದ ಸಿ.ಪಿ.ಐ. (ಎಂ) ಬೆಂಗಳೂರು ದಕ್ಷಿಣ ಜಿಲ್ಲಾ24ನೇ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ದೀರ್ಘಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ, ಈಗ ಬಿಜೆಪಿ ಆಡಳಿತ ನಡೆಸುತ್ತಿದೆ. ಅವರಿಗೆ ಜನರ ಸಮಸ್ಯೆಗಳನ್ನು ಬಗೆ ಹರಿಸುವುದು, ಕಲ್ಯಾಣ ಸಾಧಿಸುವುದು ಬೇಕಾಗಿಲ್ಲ. ಅವರಿಗೆ ರಾಜಕೀಯವಷ್ಟೆ ಬೇಕು ಎಂದರು.

ಕಾಂಗ್ರೆಸ್- ಬಿಜೆಪಿ ಪಕ್ಷಗಳ ನಿಲುವಿನಿಂದ ರೋಸಿ ಹೋಗಿರುವ ಜನ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಒಂದೆ ಎಂದು ಬಹಳಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಭೂಮಿಯ ಮೇಲೆ ಎಲ್ಲವೂ ಒಂದೇ ಆಗಿಲ್ಲ. ಸಾಕಷ್ಟು ಭಿನ್ನತೆ, ವಿಶಿಷ್ಟತೆಯನ್ನು ಹೊಂದಿವೆ. ಅದೇ ರೀತಿ ಪಕ್ಷಗಳು ಎಲ್ಲವೂ ಒಂದೆ ಆಗಿಲ್ಲ, ಎಡಪಕ್ಷಗಳು ಜನರ ಪರ ಯೋಜನೆಗಳನ್ನು ರೂಪಿಸಿ ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿ ಮೂಲಸೌಲಭ್ಯಗಳನ್ನು ನೀಡಿ ಸಮಾನ ಬದುಕಿನ ಅವಕಾಶ ಕಲ್ಪಿಸಲು ಯೋಜನೆಗಳನ್ನು ಜಾರಿ ಮಾಡುತ್ತಿವೆ ಎಂದು ಕಾರ್ಲ್ ಮಾರ್ಕ್ಸ್ ಮತ್ತು ಏಂಗಲ್ಸ್ರವರ ಕಮ್ಯೂನಿಸ್ಟ್ ಪ್ರಣಾಳಿಕೆಯ ವಿಚಾರಗಳನ್ನು ಪ್ರಸ್ಥಾಪಿಸಿದರು.

ಇದನ್ನೂ ಓದಿ : ಏಷ್ಯಾದ ನೊಬೆಲ್‌ ಎಂದೇ ಖ್ಯಾತಿ ಹೊಂದಿರುವ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಶೈಲಜಾ ಟೀಚರ್

ಕಮ್ಯೂನಿಷ್ಟ ಪಕ್ಷಗಳಿಗೂ ಇತರೆ ಬಂಡವಾಳಶಾಹಿ ಪಕ್ಷಗಳಿಗೂ ಸಾಕಷ್ಟು ವ್ಯತ್ಯಾಸ ಇದೆ. ಕೇರಳದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಸುಧಾರಣೆ ಮಾಡಿದ್ದೇವೆ. ಕೋವಿಡ್ ನಿರ್ವಹಿಸಿದ ರೀತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಸಾರ್ವಜನಿಕ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಎಡರಂಗ ಸರ್ಕಾರ ಮಾಡಿದೆ ಎಂದರು.

ಮನ್ಕಿಬಾತ್ ನಲ್ಲಿ ಮಾತನಾಡುವ ಪ್ರಧಾನಿಯವರು ಮಣಿಪುರಕ್ಕೆ ಇಲ್ಲಿಯವರೆಗೆ ಭೇಟಿ ನೀಡಿಲ್ಲ. ಅಲ್ಲಿನ ಹಿಂಸಾಚಾರಗಳನ್ನು ತಡೆಯಲಿಲ್ಲ. ಅಲ್ಲಿರುವುದು ಬಿಜೆಪಿ ಸರ್ಕಾರವೇ!, ಇದರಿಂದ ಗೊತ್ತಾಗುವುದು ಏನೆಂದರೆ, ಬಿಜೆಪಿಯವರಿಗೆ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಬೇಕಿಲ್ಲ, ಮಹಿಳೆಯರಿಗೆ ಭದ್ರತೆ ನೀಡುವ ಮನಸ್ಸಿಲ್ಲ , ಅದು ಅವರಿಗೆ ಮುಖ್ಯವಲ್ಲ ಎಂಬುದನ್ನು ತೋರಿಸುತ್ತದೆ ಎಂದರು.

ಯುದ್ದಗಳು ಎಲ್ಲೋ ನಡೆಯುತ್ತಿವೆ ಎಂದು ನಾವು ಸುಮ್ಮನೆ ಇರುವುದು ಸರಿಯಲ್ಲ, ಅದನ್ನು ವಿರೋಧಿಸಿಬೇಕು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳಾಗುತ್ತಿವೆ, ಎಳೆಯ ಕಂದಮ್ಮಗಳ ಸಾವಿನ ರಾಶಿ ಕಣ್ಮುಂದೆಯೆ ಇದೆ, ಮನಯಲ್ಲಿರುವ ಮಕ್ಕಳಿಗೆ ಸಣ್ಣ ನೋವಾದರೆ ಅಯ್ಯೋ ಎಂದು ನಾವು ಮರುಗುತ್ತೇವೆ, ಸಂಕಟ ಪಡುತ್ತೇವೆ. ಪ್ಯಾಲೆಸ್ಟೈನನಲ್ಲಿ ಇಸ್ರೇಲ್ ದಾಳಿಯಿಂದ ಮಕ್ಕಳನ್ನು ಕಳೆದುಕೊಂಡವರ ನೋವಿಗೂ ನಾವು ಮರುಗಬೇಕಿದೆ ಎಂದು ತಿಳಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ.ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್.ವಿಮಲಾ, ಕೆ.ಎಸ್. ಲಕ್ಷ್ಮಿ, ಲಿಂಗರಾಜ, ಶ್ರೀಪತಿ, ನಾಗರಾಜ, ಮಹದೇಶ್, ಡಿ. ಸುರೇಶ್ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ವಲಯಗಳ ನಾಯಕರು, ಪ್ರತಿನಿಧಿಗಳು ಇದ್ದರು.

 

Donate Janashakthi Media

Leave a Reply

Your email address will not be published. Required fields are marked *