ಕಿವಿ ಹಿಂಡಬೇಕಾದ ಸಿದ್ಧರಾಮಯ್ಯನವರ ನಡೆಗಳು

ಎಸ್.ವೈ. ಗುರುಶಾಂತ್

ವಿಧಾನಸಭೆಯ ಒಳಗೆ ಅಥವಾ ಹೊರಗೆ ಸಿದ್ದರಾಮಯ್ಯನವರು ಆಡುವ ಮಾತುಗಳಿಗೆ ಒಂದು ‘ತೂಕ’ ಇದ್ದೇ ಇದೆ. ಬಿಜೆಪಿಯ ಆಕ್ರಮಣಕಾರಿ ರಾಜಕೀಯ ದಾಳಿಗಳಿಗೆ ಅಷ್ಟೇ ತೀಕ್ಷ್ಣವಾಗಿ ವೈಚಾರಿಕ ಮರುದಾಳಿ ಮಾಡುವುದು ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನಾಗಿ ನಿರ್ವಹಿಸಲೇಬೇಕಾದ ಗುರುತರ ಹೊಣೆಗಾರಿಕೆಯೂ ಹೌದು. ವಿಶೇಷವಾಗಿ ಹೆಚ್ಚುತ್ತಿರುವ ಕೋಮುವಾದಿಗಳ ದಾಳಿಗಳು, ಅದಕ್ಕೆ ಸರ್ಕಾರದ ಸಿದ್ಧ ಸಮರ್ಥನೆ ಮತ್ತು ಕುಮ್ಮಕ್ಕಿನ ನಡೆಗಳನ್ನು ಅತ್ಯಂತ ಕಠಿಣ ಮಾತುಗಳಲ್ಲಿ ಟೀಕಿಸುವ ಕೋಮುವಾದಿಗಳ ಹುನ್ನಾರಗಳನ್ನು ಬಯಲಿಗಿಡುವಲ್ಲಿ ಸಿದ್ದರಾಮಯ್ಯನವರು ವಹಿಸುವ ಪಾತ್ರ ಜನರ ಗಮನ ಸೆಳೆಯುತ್ತದೆ. ಮೆಚ್ಚುಗೆ, ಬೆಂಬಲವನ್ನು ಪಡೆಯುತ್ತದೆ. ಈಗ ವಿಧಾನ ಪರಿಷತ್ ನಲ್ಲಿ ಬಿ.ಕೆ. ಹರಿಪ್ರಸಾದ್ ಸೇರ್ಪಡೆ, ಕೋಮುವಾದದ ವಿರುದ್ಧ ಅವರ ದನಿಯಿಂದಾಗಿ ಮತ್ತಷ್ಟು ಬಲ ಬಂದಿದೆ.

ಸಿದ್ದರಾಮಯ್ಯನವರು ಕೆಳಹಂತದ ರಾಜಕಾರಣದಿಂದ ಮುಖ್ಯಮಂತ್ರಿಯಾಗುವ ವರೆಗೆ ವಿವಿಧ ಹಂತಗಳಲ್ಲಿ ಅಧಿಕಾರವನ್ನು ನಡೆಸಿ (ಅನುಭವಿಸಿ) ಬೆಳೆದವರು. ಲೋಹಿಯಾರವರ ಸಮಾಜವಾದಿ ವಿಚಾರಗಳ ಹಿನ್ನೆಲೆ ಅವರಿಗಿದೆ ಎಂದೂ ಹೇಳಲಾಗುತ್ತದೆ. ಲೋಹಿಯಾ ವಿಚಾರಗಳ ಆಳಕ್ಕೆ ಅಷ್ಟಾಗಿ ಹೋಗದೆ ಪ್ರಾಯೋಗಿಕ ಅನುಭವಗಳಿಂದ ಸಾಮಾಜಿಕ ವಾಸ್ತವಗಳನ್ನು ಅರಿತು ಬದಲಾವಣೆಯ ಕನಸಿನೊಂದಿಗೆ ಹಂಬಲಿಸಿದವರು ಸಿದ್ಧರಾಮಯ್ಯ ಅನ್ನುವುದು ಒಂದು ಹೆಗ್ಗಳಿಕೆ. ತಮ್ಮದೇ ಆದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಾರಿಗೊಳಿಸಲು ಆಸಕ್ತಿ ತೋರಿದವರು ಎನ್ನುವುದೂ ಮತ್ತೊಂದು ಅಂಶ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆಡಳಿತ, ನೀತಿಗಳ ವೈಫಲ್ಯವಾದಾಗ ಸೋತಿದೆ. ಇತ್ತೀಚೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ನೇತೃತ್ವವಹಿಸಿ ಚುನಾವಣೆಗೆ ಹೋದಾಗಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. 2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ನೆಚ್ಚದೇ ಜನತೆ ಯಾವುದೇ ಒಂದು ಪಕ್ಷ ಏಕಾಂಗಿಯಾಗಿ ಸರಕಾರ ರಚಿಸುವಂತೆ ಬಹುಮತ ನೀಡದೆ ಇರುವಾಗ ಮತ ನಿರಪೇಕ್ಷತೆಯ ಶಕ್ತಿಗಳ ಪರವಾದ ಜನಾದೇಶದಿಂದಾಗಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸರ್ಕಾರ ರಚಿಸಲು ಇದೇ ಕಾಂಗ್ರೆಸ್ ಬೇಷರತ್ತಿನ ಬೆಂಬಲ ನೀಡಿ ಸಮ್ಮಿಶ್ರ ಸರಕಾರವನ್ನು ರಚಿಸಿತು.

ಕೋಮುವಾದವನ್ನು ವಿರೋಧಿಸುವಾಗಲೇ ಉದಾರೀಕರಣದ ಆರ್ಥಿಕ ನೀತಿಗಳ ಪರ ಗಟ್ಟಿ ನಿಲುವು ಕಾಂಗ್ರೆಸ್ಸಿನದು. ರಾಜ್ಯದಲ್ಲಿ ಆ ನೀತಿಗಳನ್ನು ಜಾರಿಗೊಳಿಸುವಲ್ಲಿ ಮತ್ತು ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸದೆ ಇರುವಲ್ಲಿ ಅದರ ಪಾತ್ರವೂ ನಿಚ್ಛಳ. ಆದರೆ ಕೋಮುವಾದದ ವಿರುದ್ಧ ಮಾತನಾಡುವುದನ್ನು ಕಾಂಗ್ರೆಸ್ ಬಿಟ್ಟಿಲ್ಲ. ಅನೇಕ ಬಾರಿ ಪಕ್ಷದೊಳಗೇ ಬೆಂಬಲ ಸಿಗದೇ ಇರುವಾಗಲೂ ವಿಶೇಷವಾಗಿ, ಸಿದ್ದರಾಮಯ್ಯನವರು ಸತತವಾಗಿ ಒಡ್ಡುವ ಪ್ರತಿರೋಧ, ವಾದ ಮಂಡನೆಯೂ ಗಮನಾರ್ಹ. ಇದರಿಂದಾಗಿ ಅವರು ಅತ್ಯಂತ ಜನಪ್ರಿಯ ಹಾಗೂ ಜನಬೆಂಬಲದ ಅನುಭವಿ ನಾಯಕರಾಗಿಯೂ ಬೆಳೆದಿದ್ದಾರೆ.

ಹೀಗಿರುವಾಗಲೂ ಸಿದ್ದರಾಮಯ್ಯನವರ ಕೆಲವು ರಾಜಕೀಯ ನಡೆಗಳು ಪ್ರಶ್ನಾರ್ಹವಾಗಿವೆ. ಮುಖ್ಯವಾಗಿ, ಇತ್ತೀಚೆಗೆ ನಡೆದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಾಲ್ಕನೆಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಿದ್ಧರಾಮಯ್ಯನವರು ರೂಪಿಸಿದ ರಾಜಕೀಯ ತಂತ್ರಗಾರಿಕೆ ಪ್ರಮುಖ ಪಾತ್ರವಹಿಸಿದೆ ಎನ್ನಲಾಗುತ್ತಿದೆ. ಇದರಲ್ಲಿ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನಕ್ಕೆ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಜೆಡಿಎಸ್ ತನ್ನ ಮತಗಳ ಜೊತೆಗೆ, ತನ್ನ ಅಭ್ಯರ್ಥಿಗೆ ಹಾಕಿ ಉಳಿದ ಮತಗಳಲ್ಲಿ ಎರಡನೆಯ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಪಕ್ಷ ನೀಡಿದ್ದರೆ ಜೆಡಿಎಸ್ ಅಭ್ಯರ್ಥಿಯ ಗೆಲುವು ನಿಶ್ಚಿತವಿತ್ತು, ಬಿಜೆಪಿಯನ್ನು ಸೋಲಿಸಬಹುದಿತ್ತು. ಹಾಗೆ ಮಾಡದೇ ಸ್ಪರ್ದಿಸದಿರುವ ಹಿಂದಿನ ನಿರ್ಧಾರ ಬದಲಿಸಲು ಹೈಕಮಾಂಡನ್ನು ಒಪ್ಪಿಸಿ ಆ ಸ್ಥಾನಕ್ಕೆ ತನ್ನ ಮತ್ತೊಬ್ಬ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಜೆಡಿಎಸ್ ಸೋಲಲು, ಬಿಜೆಪಿ ಗೆಲ್ಲಲು ಅವಕಾಶವನ್ನು ಮಾಡಿಕೊಡಲಾಯಿತು. ಇದರಲ್ಲಿ ಕಾಂಗ್ರೆಸ್ ನಾಯಕರು ಅದರಲ್ಲೂ ಸಿದ್ಧರಾಮಯ್ಯನವರು ಬಿಜೆಪಿ ನಾಯಕರೊಂದಿಗೆ ‘ಡೀಲ್’ ಮಾಡಿಕೊಂಡಿದ್ದಾರೆ ಎಂಬ ಅತ್ಯಂತ ಗಂಭೀರ ಆರೋಪ ಕೇಳಿ ಬಂತು. ಇದನ್ನು ಸಮರ್ಥಿಸುವಂತೆ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನವರು ವಿಮಾನ ನಿಲ್ದಾಣದಲ್ಲಿ ಮಾತುಕತೆ ನಡೆಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಗಳು ಪ್ರಕಟವಾಗಿವೆ. ಒಳ ಸಖ್ಯತೆಯ ಕಾರಣದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಸಿದ್ದರಾಮಯ್ಯನವರು ಅನುಕೂಲ ಮಾಡಿಕೊಟ್ಟಿದ್ದು ಎಷ್ಟು ಸರಿ ಮತ್ತು ಕೋಮುವಾದವನ್ನು ವಿರೋಧಿಸುವ ಅವರ ರಾಜಕಾರಣಕ್ಕೆ ನಿಜವಾಗಲೂ ಏನಾದರೂ ಅರ್ಥವಿದೆಯೇ? ಮಾತು ಮತ್ತು ಕೃತಿಗಳಲ್ಲಿ ಸಾಮ್ಯತೆ ಇಲ್ಲದ ಅವರ ನಡೆ ಪ್ರಶ್ನಾರ್ಹ. ಇದಕ್ಕೆ ಜೆಡಿಎಸ್ ನಾಯಕರ ಮೇಲಿನ ಸೇಡು ಕಾರಣವಾಯಿತೇ ಅಥವಾ ನೆಪವಾಯಿತೇ? ಎಂಬಂತಹ ಪ್ರಶ್ನೆಗಳು ಬಂದಿವೆ.

ಈ ವಿಧಾನಸಭಾ ಚುನಾವಣೆ ಬಳಿಕ ಕೋಮುವಾದೀ ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರ ಇಡಬೇಕೆಂದು ಏರ್ಪಟ್ಟ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟದ ಸರಕಾರ ಕಿತ್ತಾಟ, ಎಳೆದಾಟದಲ್ಲಿ ಪತನವಾಯಿತು ಮತ್ತು ಬಿಜೆಪಿ ಹೇಗೆಲ್ಲಾ ಕುತಂತ್ರ ಹೂಡಿ ಅಧಿಕಾರ ಹಿಡಿಯಿತು? ಈ ನಾಟಕಕ್ಕೆ ಇಂಬು ಒದಗಿಸುವಲ್ಲಿ ಸಿದ್ಧರಾಮಯ್ಯನವರ ಪಾತ್ರ ಏನಿತ್ತು ಎನ್ನುವುದನ್ನೂ ನೆನಪಿಸಿಕೊಳ್ಳಲಾಗುತ್ತಿದೆ. ಅಂದು ಮುಂಬೈನಲ್ಲಿಯ ಬಿಜೆಪಿಯ ‘ರೆಸಾರ್ಟ್’ ಸೇರಿದ್ದ 18 ಜನ ಸಚಿವಾಕಾಂಕ್ಷಿ ಅತೃಪ್ತರಲ್ಲಿ ಬಹುತೇಕರು ಸಿದ್ದರಾಮಯ್ಯನವರ ಬಣದವರು, ಅತಿ ಆಪ್ತರು ಎನ್ನುವುದು ಗಮನಾರ್ಹ. ಅಧಿಕಾರದಾಹಿಗಳ ಒಳ ಬಂಡಾಯ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಕೋಮುವಾದಿ ಫ್ಯಾಶಿಸ್ಟರು ಅಧಿಕಾರ ಹಿಡಿಯುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಆಗ ತನ್ನ ಕೈ ಮೀರಿದೆ ಎಂದು ಸಿದ್ಧರಾಮಯ್ಯನವರೂ ಕೈ ಚೆಲ್ಲಿದರು. ವಿರೋಧ ಪಕ್ಷದ ನಾಯಕನಾಗಿ ಪ್ರತಿಷ್ಠಾಪಿತವಾಗಿ ರಾಜ್ಯದ ರಾಜಕಾರಣದಲ್ಲಿ ಶಕ್ತಿ ರಾಜಕಾರಣದ ಒಂದು ಮುಖ್ಯ ಕೇಂದ್ರ ಬಿಂದುವಾಗಲು ಅವರು ಬಯಸಿದರೇ ಎನ್ನುವುದು ಮುಚ್ಚಿಡಲಾಗದ ಜೀವಂತ ಪ್ರಶ್ನೆ! ಬಿಜೆಪಿ ಆಡಳಿತದಲ್ಲಿ ಕರ್ನಾಟಕದ ವರ್ತಮಾನದ ವಿಧ್ವಂಸಕ ವಿದ್ಯಾಮಾನಗಳನ್ನು ಅವಲೋಕಿಸಿದರೆ ಸರಕಾರ ಉರುಳಲು, ಹೊಸ ಸರಕಾರ ಬರಲು ಅಂದು ಸೃಷ್ಟಿಗೊಂಡ ಕಾರಣಗಳು ಏನೇ ಇರಲಿ, ಆದ ಪ್ರಮಾದ ಅಕ್ಷಮ್ಯವೂ ಆಗಿದೆ. ಇದರ ಹೊಣೆಗಾರಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಇಬ್ಬರ ಮೇಲೆ ಇದೆ ಎನ್ನುವುದು ನಿಜ. ಆದರೆ ಅತ್ಯಂತ ಗಟ್ಟಿ ದನಿಯಲ್ಲಿ ಕೋಮುವಾದಿಗಳನ್ನು, ಫ್ಯಾಶಿಸ್ಟ್ ಸಂಘಪರಿವಾರದ ಜನ್ಮ ಜಾಲಾಡುವ ಸಿದ್ದರಾಮಯ್ಯನವರು ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಅವೇ ಶಕ್ತಿಗಳ ಬೆಳವಣಿಗೆಗೆ ಮೆಟ್ಟಿಲಾಗುವುದು ಅಪಾಯಕರ. ಇಂತಹ ಆಟಗಳು ‘ಸೆಕ್ಯುಲರ್’ ಸಮಾಜವಾದಿ ಸಿದ್ಧರಾಮಯ್ಯನವರನ್ನು ನಾಯಕ ಸ್ಥಾನದಿಂದ ನಿಧಾನವಾಗಿಯಾದರೂ ಖಳ ನಾಯಕನ ಸ್ಥಾನಕ್ಕೆ ತಳ್ಳಬಲ್ಲದು. ಜನ ಸಾಮಾನ್ಯರ ಪ್ರಜ್ಞೆ, ಸಂವೇದನೆಗಳನ್ನು, ಪ್ರತಿಕ್ರಿಯೆಗಳನ್ನು ನಾಯಕರಾದವರು ಅಷ್ಟು ಲಘವಾಗಿ ಪರಿಗಣಿಸಬಾರದು. ಕಾಂಗ್ರೆಸ್ ಪಕ್ಷದಲ್ಲಿನ  ಧ್ವಂದಗಳು, ಸ್ವಾರ್ಥ ರಾಜಕಾರಣ, ಅಧಿಕಾರದ ಅಡ್ಡ ಹಾದಿಗಳು ಕೋಮುವಾದದ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತವೆ ಮತ್ತು ಅತಿ ದೀರ್ಘ, ಘೋರ ಪರಿಣಾಮಗಳನ್ನು ಉಂಟು ಮಾಡುತ್ತವೆ ಎನ್ನುವುದನ್ನು ಅವರು ನೆನಪಿಡಬೇಕು.

ಆದ್ದರಿಂದ ಸಿದ್ಧರಾಮಯ್ಯನವರಿಗೆ ಕಿವಿ ಹಿಂಡಿ ಕಿವಿ ಮಾತು ಹೇಳಬೇಕಾದ ಜರೂರು ಇದೆ. ಸಿದ್ದರಾಮಯ್ಯನವರ ನುಡಿ- ನಡೆಗಳು ಕಾಂಗ್ರೆಸ್ ರಾಜಕಾರಣದ ಭಾಗ, ಆಂತರಿಕ ವಿಷಯಗಳು ಎನ್ನುವುದನ್ನು ಗಮನದಲ್ಲಿರಿಸಿಯೇ ಅವರ ಜನ ಕಾಳಜಿಯನ್ನು ಲಕ್ಷಿಸಿ ರಾಜ್ಯ ರಾಜಕಾರಣದ ಹಿತದೃಷ್ಟಿಯಲ್ಲಿ ಹೇಳಬೇಕಾಗಿದೆ.

ಕಾಂಗ್ರೆಸ್ ಪಕ್ಷ ಈಗಲೂ ಬಿಜೆಪಿ ಎದುರಿಸಲು ಮೂರನೆಯ ಪರ್ಯಾಯ ಅಥವಾ ಅಂತಹ ಶಕ್ತಿಗಳೊಡನೆ ಸಹಯೋಗ ಹೊಂದಿದ, ಹೊಂದುವ ಪ್ರಸಂಗಗಳು ಇವೆಯಾದರೂ ಮೂಲತಃ ಅದು ಅಧಿಕಾರದ ಏಕಸ್ವಾಮ್ಯದ ಭ್ರಮಾಧೀನ ಮನೋಭಾವದಿಂದ ಹೊರತಾಗಿಲ್ಲ. ಇತರೆ ಸೆಕ್ಯುಲರ್- ಪ್ರಾದೇಶಿಕ ರಾಜಕೀಯ ಶಕ್ತಿಗಳ ಅಸ್ತಿತ್ವ ಹಾಗೂ ಅವುಗಳ ಮೂಲಕ ಜನತೆಯ ಒತ್ತಾಸೆಗಳನ್ನು ಮಾನ್ಯ ಮಾಡುವುದಿರಲಿ ಅವೇ ತನ್ನ ಬೆಳವಣಿಗೆಗೆ ಅಡ್ಡಿಯೆಂದೂ, ತನ್ನ ಶತೃವೆಂದೇ ಭಾವಿಸಿ ಅದರ ನಾಶಕ್ಕೂ ಯತ್ನಿಸುವ ಉದಾಹರಣೆಗಳಿಗೂ ಕಡಿಮೆ ಇಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನೀತಿಗಳನ್ನು ಧಿಕ್ಕರಿಸಿ ಪರ್ಯಾಯ ಕಂಡುಕೊಳ್ಳುವ ಜನರ ರಾಜಕೀಯ ವಾಸ್ತವವನ್ನೂ ಕಾಂಗ್ರೆಸ್ ಪರಿಗಣಿಸುವುದಿಲ್ಲ. ಪರಿಗಣಿಸಿದರೂ ಅದೊಂದು ತಾತ್ಕಾಲಿಕ ಅಧಿಕಾರದ ತಂತ್ರವನ್ನಾಗಿ ಮಾತ್ರ ನೋಡುತ್ತದೆ.

ಸೈದ್ಧಾಂತಿಕವಾಗಿ, ರಾಜಕೀಯ, ಆಡಳಿತಾತ್ಮಕವಾಗಿ ಕಾಂಗ್ರೆಸ್ ದುರ್ಬಲಗೊಳ್ಳುತ್ತಿರುವ ಪರಿಸ್ಥಿತಿಯೂ ಕೆಲವು ಜನಪ್ರಿಯ ನಾಯಕರ ಹುಚ್ಚಾಟಗಳಿಗೆ ಇಂಬು ಕೊಡುವ ಸನ್ನಿವೇಶವನ್ನೂ ಕಡೆಗಣಿಸುವಂತಿಲ್ಲ. ಅದನ್ನು ತಡೆದು ಕೋಮುವಾದಿಗಳನ್ನು ಹಿಮ್ಮೆಟ್ಟಿಸುವ ಕರ್ತವ್ಯ ನಾಯಕರು ಮತ್ತು ಆ ಪಕ್ಷದ ಒಳಗೆ ಮೂಡಬೇಕಾದ ವಿವೇಕ ಮತ್ತು ಎಚ್ಚರವೂ ಆಗಿದೆ.

ಆರ್ಥಿಕ ದುಸ್ಥಿತಿಗೆ ಕಾರಣವಾಗುವ ಕಾರ್ಪೋರೇಟ್ ಲೂಟಿಕೋರತನದಿಂದ ಮತ್ತು ಒಡೆದಾಳುವ ಕೋಮುವಾದಿ ದಾಳಿ ದೌರ್ಜನ್ಯಗಳಿಂದ ರಾಜ್ಯ ನಲುಗಿ ಹೋಗಿರುವಾಗ ಸಿದ್ಧರಾಮಯ್ಯನಂತಹವರು ಜವಾಬ್ಧಾರಿ ನಡೆ ಇಡುವುದು ಜನತೆಗೆ ಧೈರ್ಯವನ್ನು, ಬಲವನ್ನು ತುಂಬುವಂತಹದಾಗುತ್ತದೆ. ರಾಜ್ಯದಲ್ಲಿ ಬಿಜೆಪಿಗೆದುರಾಗಿ ಕಾಂಗ್ರೆಸ್ಸೇತರ ಪರ್ಯಾಯ ದುರ್ಬಲವಾಗಿರುವಾಗ ಇಂತಹ ನಡೆ ಜನಹಿತದ ದೃಷ್ಠಿಯಿಂದ ರಾಜ್ಯದ ಪ್ರಗತಿಪರ ಮನಸ್ಸುಗಳು ಮತ್ತು ಜನತೆ ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು.

Donate Janashakthi Media

Leave a Reply

Your email address will not be published. Required fields are marked *