ಬೆಂಗಳೂರು : ಇಂದು, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ (MGSP) ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ, ಬೆಂಗಳೂರು ನಗರದಲ್ಲಿ 24 ವರ್ಷದ ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್ಜೆಂಡರ್) ಮಹಿಳೆ ಸುಕನ್ಯಾ ಅವರ ಮೇಲಿನ ಭೀಕರ ಹಲ್ಲೆ, ಅಪಹರಣ, ಅಕ್ರಮ ಬಂಧನ ಮತ್ತು ಬಲವಂತದ ತಲೆಬೋಳಿಸುವ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ. ಬೆಂಗಳೂರು
ಇದನ್ನೂ ಓದಿ : ಬಾಲಕನ ಬೆದರಿಸಿ ಲೈಂಗಿಕ ದೌರ್ಜನ್ಯ: ಮಹಿಳೆಗೆ 54 ವರ್ಷ ಜೈಲು ಶಿಕ್ಷೆ
ವೈಶಾಲಿ, MGSP ರಾಜ್ಯ ಸಹಾಧ್ಯಕ್ಷರು (State Co-chairperson) ಮಾತನಾಡುತ್ತಾ “ಟ್ರಾನ್ಸ್ ಮಹಿಳೆ ಸುಕನ್ಯಾ ರವರ ಮೇಲಿನ ಹಲ್ಲೆಯು ಖಂಡನೀಯ. 31 ಅಕ್ಟೋಬರ್ 2025 ರಂದು ನಾಗರಿಕ ಸಮಾಜದ ಸಂಘಟನೆಗಳ ಮತ್ತು ನಾಯಕರ ತ್ವರಿತ ಹಸ್ತಕ್ಷೇಪದಿಂದ ಸುಕನ್ಯಾಳ ಜೀವ ಉಳಿದಿದೆ. ಇಲ್ಲವಾದರೆ ಆ ದಿನವೇ ಅವರ ಹತ್ಯೆ ಯಾಗುತ್ತಿತ್ತು. ಇದು ಪ್ರತ್ಯೇಕ ಘಟನೆಯಲ್ಲ, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಂದ ಇದೇ ರೀತಿಯ ಕ್ರೂರ ದಾಳಿಗಳು ಮೇ 2024 ರಲ್ಲಿ ದೊಡ್ಡಬಳ್ಳಾಪುರದಲ್ಲಿ, ಜೂನ್ 2024 ರಲ್ಲಿ ವಿಜಯಪುರದಲ್ಲಿ, ಸೆಪ್ಟೆಂಬರ್ 2024 ರಲ್ಲಿ ಮೈಸೂರಿನಲ್ಲಿ, ಮಾರ್ಚ್ 2025 ರಂದು ಕಲಬುರಗಿಯಲ್ಲಿ ನಡೆದಿವೆ. ನಾವು ಈ ಹಲ್ಲೆಗಳ ವಿರುದ್ದ ನಿಂತಿದ್ದೇವೆ” ಎಂದು ಹೇಳಿದರು.
ಮೋನಿಕಾ, MGSP ಸದಸ್ಯರು, ಹಿಜ್ರಾ ಘರಾಣಾ ವ್ಯವಸ್ಥೆ ಕುರಿತು ಮಾತನಾಡುತ್ತಾ “ಹಿಜ್ರಾ ಘರಾಣಾಗಳಲ್ಲಿ ಮೊದಲೆಲ್ಲಾ ಪ್ರೀತಿ, ವಿಶ್ವಾಸ ಮತ್ತು ಕರುಣೆ ಎದ್ದು ಕಾಣುತ್ತಿತ್ತು. ನಾವು ಹುಟ್ಟಿದ ಕುಟುಂಬದಿಂದ ಹೊರಬಂದು, ಸಮಾಜದಿಂದಲೂ ಹೊರಹಾಕಲ್ಪಟ್ಟಿದ್ದೇವೆ. ನಮ್ಮ ಸಮುದಾಯದ ಹಿರಿಯರನ್ನೇ ನಂಬಿ ಬದುಕುತ್ತಿದ್ದ ನಮ್ಮಂತ ಕೆಲವರ ಮೇಲೆ ಇತ್ತೀಚೆಗೆ ಹಿಂಸೆ ಮತ್ತು ದೌರ್ಜನ್ಯಗಳು ಹೆಚ್ಚಾಗಿವೆ. ಕೆಲವು ಹಿರಿಯ ಸಮುದಾಯದವರು ಹಣ ಮತ್ತು ಅಧಿಕಾರಕ್ಕಾಗಿ ಇತರರನ್ನು ಹೊಡೆಯುವುದು, ತಲೆಬೋಳಿಸುವುದು ನಡೆಯುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದರು.
ಕೃತಿಕಾ, MGSP ಸದಸ್ಯರು ಮಾತನಾಡುತ್ತಾ ಹೇಳಿದರು “ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯು ಕಳೆದ ಮೂರು ವರ್ಷಗಳಿಂದ ಸಂವಿಧಾನದ ಮೌಲ್ಯಗಳಾದ ಸಮಾನತೆ, ನ್ಯಾಯ, ಪ್ರಜಾಪ್ರಭುತ್ವ ಮತ್ತು ಬಂಧುತ್ವದ ಆಧಾರದ ಮೇಲೆ ಸಮುದಾಯದ ಹಕ್ಕುಗಳಿಗಾಗಿ ಹಾಗೂ ಎಲ್ಲಾ ರೀತಿಯ ಶೋಷಣೆ ಮತ್ತು ಹಿಂಸೆಗಳ ವಿರುದ್ದ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಸಮುದಾಯದವರು ಮಾಡಿದ ಅಪರಾಧ ಅಥವಾ ಹಿಂಸೆಯನ್ನು ನಾವು ಸಮರ್ಥಿಸಲು ಸಾಧ್ಯವಿಲ್ಲ. ಸುಕನ್ಯಾಳಿಗೆ ಆದ ಅನ್ಯಾಯ ಮತ್ತೆ ಯಾರಿಗೂ ಆಗಬಾರದು ಎಂದು ನಾವು ಆಗ್ರಹಿಸುತ್ತೇವೆ” ಎಂದರು.
ಬಿ.ಟಿ. ವೆಂಕಟೇಶ್, ಹಿರಿಯ ವಕೀಲರು “ಟ್ರಾನ್ಸ್ ಜೆಂಡರ್ ಸಮುದಾಯದವರು ತಮ್ಮದೇ ಸಮುದಾಯದವರ ಮೇಲೆ ಈ ರೀತಿಯ ಕ್ರೌರ್ಯ ತೋರಿಸುವುದು ಶೋಚನೀಯ. ಇಂತಹವರನ್ನು ಕಠಿಣವಾಗಿ ಶಿಕ್ಷಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸಮುದಾಯದ ನಾಯಕರ ಜವಾಬ್ದಾರಿಯಾಗುತ್ತದೆ” ಎಂದು ಮಾತನಾಡಿದರು.
ಆಶಾ ಕಿಲರು, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK) ಸದಸ್ಯೆರು ಮಾತನಾಡುತ್ತಾ “SAAK ಈ ಹಿಂಸೆಯಲ್ಲಿ ನೊಂದಿರುವ ಸಂತ್ರಸ್ಥಳ ಪರ ನಿಂತಿದೆ. ಯಾವುದೇ ರೀತಿಯ ಹಿಂಸೆಯ ವಿರುದ್ದ ನಾವು ನಿಲ್ಲುತ್ತೇವೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಲ್ಲಿ ನಡೆಯುತ್ತಿರುವ ಈ ರೀತಿಯ ಹಿಂಸೆ ಕೂಡಲೇ ನಿಲ್ಲಬೇಕು ಎಂದು” ಆಗ್ರಹಿಸಿದರು.
ರಾಜೇಶ್ ಶ್ರೀನಿವಾಸ್, MGSP ಸದಸ್ಯರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಮಾತನಾಡುತ್ತಾ ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸಿದರು:
1. ಸುಕನ್ಯಾ ಮೇಲಿನ ಹಲ್ಲೆಯ ಕುರಿತು ವೇಗವಾದ ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಮತ್ತು ಎಲ್ಲಾ ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು.
2. ಸುಕನ್ಯಾ ಅವರ ಸುರಕ್ಷತೆಯನ್ನು ಖಾತ್ರಿಪಡಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು (ಪ್ರತೀಕಾರದಿಂದ ರಕ್ಷಣೆ ಸೇರಿದಂತೆ).
3. ಕರ್ನಾಟಕ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸಮಾಡುವ ಸಂಘಟನೆಗಳ-ಸಮುದಾಯ ನಾಯಕರ ಜೊತೆಗೂಡಿ, ಹಿಂಸೆಯನ್ನು ತಡೆಯಲು ಮತ್ತು ತಕ್ಷಣ ಪ್ರತಿಕ್ರಿಯಿಸಲು ಕ್ರಮ ಕೈಗೊಳ್ಳಬೇಕು.
4. ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಉದ್ಯಮಶೀಲತೆ ಯೋಜನೆಗಳು, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಬೇಕು.
5. ಲಿಂಗತ್ವ ಅಲ್ಪಸಂಖ್ಯಾತರಿಗೆ ಸುರಕ್ಷಿತ, ಒಳಗೊಂಡ (inclusive) ಮತ್ತು ಕೈಗೆಟುಕುವ ವಸತಿಯನ್ನು ಒದಗಿಸಬೇಕು.
ಫೋಟೋಗಳನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು:
ಇದನ್ನೂ ನೋಡಿ: ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
