ಬೆಂಗಳೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆ ಮೈಸೂರಿನ ಹೊಸಕೇರಿ ನಿವಾಸಿ 24 ವರ್ಷದ ಯುವಕ ಕಿಕ್ ಬಾಕ್ಸರ್ ನಿಖಿಲ್ ಸುರೇಶ್ ಎದುರಾಳಿಯ ಒಂದೇ ಒಂದು ಏಟಿಗೆ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಜುಲೈ 10ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಕೆ1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ರಿಂಗ್‌ನಲ್ಲಿ ಸೆಣೆಸಾಡುತ್ತಿದ್ದ ವೇಳೆ ಎದುರಾಳಿ ಏಟಿಗೆ ನಿಖಿಲ್ ಕುಸಿದು ಬಿದಿದ್ದರು .
ಕಿಕ್ ಬಾಕ್ಸಿಂಗ್ ವೇಳೆ ನಿಖಿಲ್ ಅವರ ಶ್ವಾಸಕೋಶಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಒಳಭಾಗದಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಕೋಮಾದಲ್ಲಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೋಷಕರಿಂದ ದೂರು ದಾಖಲು
ಬಾಕ್ಸರ್ ನಿಖಿಲ್ ಸಾವಿನ ಬಗ್ಗೆ ಪೋಷಕರು ಆಯೋಜಕರ ವಿರುದ್ಧ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ನಿಖಿಲ್ ತಂದೆ ಸುರೇಶ್ ಅವರು, ಬೆಂಗಳೂರಿನ ಜ್ಞಾನಜ್ಯೋತಿ ನಗರದ ಪೈ ಇಂಟರ್‌ನ್ಯಾಷನಲ್ ಕಟ್ಟಡದಲ್ಲಿ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡು ಪ್ರಜ್ಞಾಹೀನಾಗಿದ್ದಾನೆ. ಆಯೋಜಕರು ಹಾಗೂ ಕೋಚ್ ಅವರ ನಿರ್ಲಕ್ಷದಿಂದಲೇ ತಮ್ಮ ಮಗ ಸಾವನ್ನಪ್ಪಿರುವುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಆಯೋಜಕರನ್ನು ವಿಚಾರಿಸಿದಾಗ ಸ್ಪರ್ಧೆ ನಡೆಯುವ ರಿಂಗ್‌ನಲ್ಲಿ ನೆಲಕ್ಕೆ ಹಾಸಿದ್ದ ಸ್ಪಂಜ್ ತೆಳುವಾಗಿತ್ತು. ಸ್ಪರ್ಧೆಯ ಸಂದರ್ಭದಲ್ಲಿ ಬಿದ್ದ ನಿಖಿಲ್ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಪ್ಯಾರಮೆಡಿಕಲ್ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ. ಐದನೇ ಮಹಡಿಯಲ್ಲಿ ಸ್ಪರ್ಧೆ ಇತ್ತು. ಪೆಟ್ಟಾದಾಗ ಸೆಕ್ಚರ್ ಇರಲಿಲ್ಲ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿರಲಿಲ್ಲ. ಆಯೋಜಕರು ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ.
ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಯೋಜಕರು ಮಾಹಿತಿ ನೀಡದೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿರುತ್ತಾರೆ. ಹಾಗಾಗಿ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಖಿಲ್ ತಂದೆ ಸುರೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.