ಬೆಂಗಳೂರು: ಏಪ್ರಿಲ್ 24ರಿಂದ ಖೇಲೋ ಇಂಡಿಯಾ ಕ್ರೀಡಾ ಕೂಟ ಆರಂಭವಾಗಲಿದ್ದು, ದೇಶದ ಅತಿದೊಡ್ಡ ಕ್ರೀಡಾಕೂಟ ಇದಾಗಿದೆ ಎಂದು ಯುವಜನಸೇವೆ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಕಳೆದ ಬಾರಿ ಈ ಕ್ರೀಡಾಕೂಟ ಒಡಿಶಾದಲ್ಲಿ ನಡೆದಿತ್ತು. ಎರಡನೇ ಕ್ರೀಡಾಕೂಡ ಕರ್ನಾಟಕದಲ್ಲಿ ನಡೆಯುತ್ತಿದೆ. ಕ್ರೀಡಾಕೂಟಕ್ಕೆ ಉಪರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದರು.
ಈ ಕ್ರೀಡಾ ಸ್ಪರ್ಧೆಯಲ್ಲಿ 4500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 1000ಕ್ಕೂ ಹೆಚ್ಚು ಕ್ರೀಡಾಳುಗಳು ಈಗಾಗಲೇ ಆಗಮಿಸಿದ್ದಾರೆ. ಇದಕ್ಕಾಗಿ 2800 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ರವಿಶಂಕರ್ ಗುರೂಜಿ ಆಶ್ರಮದಲ್ಲೂ ವ್ಯವಸ್ಥೆ ಮಾಡಿದ್ದೇವೆ. 2800 ವಾಹನಗಳನ್ನು ಕ್ರೀಡಾಪಟುಗಳಿಗೆ ನಿಯೋಜಿಸಲಾಗಿದೆ. 160 ಸಾರಿಗೆ ಬಸ್ಸುಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಜೈನ್ ವಿಶ್ವವಿದ್ಯಾಲುಯದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷವೇ ಈ ಕ್ರೀಡಾಕೂಟ ನಡೆಯಬೇಕಿತ್ತು. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದರೆ ಇದೀಗ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ ಎಂದು ವಿವರಿಸಿದರು.
ರಾಜ್ಯಕ್ಕೆ ಇದು ಉತ್ತಮ ಹೆಸರು ತಂದುಕೊಡಲಿದೆ. ಕ್ರೀಡಾಕೂಟಕ್ಕೆ 62 ಕೋಟಿ ರೂಗಳನ್ನು ವಿನಿಯೋಗಿಸಲಾಗುತ್ತಿದೆ. ರಾಜ್ಯ ಸರ್ಕಾರ 27, ಕೇಂದ್ರ ಸರ್ಕಾರದಿಂದ 35 ಕೋಟಿ ಭರಿಸಲಿದೆ ಎಂದು ತಿಳಿಸಿದರು.
ರಾಜ್ಯದಿಂದ 25 ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಜೈನ್, ಕಂಠೀರವ, ಹಾಕಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ 3800 ಜನ ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯೇ 890 ಜನ ಆಗಮಿಸಿದ್ದಾರೆ. ಇಂದು 800/900 ಜನ ಆಗಮಿಸಲಿದ್ದಾರೆ. ಕ್ರೀಡೆಗೆ ಯಾವುದೇ ಜಾತಿ ಭೇದ ಇರಬಾರದು. ಎಲ್ಲ ಧರ್ಮೀಯ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಭಾಗವಹಿಸುವ ಕ್ರೀಡಾಳುಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿರಬೇಕು. ದೇಶದ 210 ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ಮಲ್ಲಕಂಭ, ಕರಾಟೆ ಹೆಚ್ಚುವರಿಯಾಗಿ ಸೇರಿಸಿದ್ದೇವೆ ಎಂದರು.