ಖಾಸಗೀಕರಣದ ನಡೆಗಳ ವಿರುದ್ಧ ಸಾಮಾನ್ಯ ವಿಮಾ ನೌಕರರ ದೇಶವ್ಯಾಪಿ ಮುಷ್ಕರ

ಲೋಕಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಆಗಸ್ಟ್ 2ರಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳನ್ನು ಖಾಸಗೀಕರಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಪಾಸು ಮಾಡಿಸಿಕೊಂಡಿರುವುದರ ವಿರುದ್ಧ ಆಗಸ್ಟ್ 4ರಂದು ದೇಶಾದ್ಯಂತ 66,000 ಸಾಮಾನ್ಯ ವಿಮಾ ನೌಕರರು ಪ್ರತಿಭಟನಾ ಮುಷ್ಕರವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಜೀವ ವಿಮಾ ನೌಕರರು ದೇಶಾದ್ಯಂತ ಮತಪ್ರದರ್ಶನಗಳ ಮೂಲಕ ಸೌಹಾರ್ದ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಈ ನೌಕರರನ್ನು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಅಭಿನಂದಿಸಿದ್ದಾರೆ.

ಜುಲೈ 30ರಂದು ಹಣಕಾಸು ಮಂತ್ರಿಗಳು ಸಾಮಾನ್ಯ ವಿಮಾ ವ್ಯವಹಾರಗಳು(ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ, 2021 ನ್ನು, ಆದರ ವಿರುದ್ಧ ವ್ಯಾಪಕವಾದ ಆಕ್ಷೇಪಗಳಿದ್ದರೂ ಅವನ್ನು ಗಮನಕ್ಕೆ ತಗೊಳ್ಳದೆ ಮಂಡಿಸಿದರು. ಪೆಗಸಸ್ ಗೂಢಚಾರಿಕೆ ಹಗರಣದ ಬಗ್ಗೆ ಮತ್ತು ಎಂಟು ತಿಂಗಳಿಂದ ರಾಜಧಾನಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗಳನ್ನು ಸರಕಾರ ಮನ್ನಿಸದ ಕಾರಣದಿಂದಾಗಿ ಎರಡೂ ಸದನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಗದ್ದಲದ ನಡುವೆಯೇ ಲೋಕಸಭೆ ಈ ಮಸೂದೆಯನ್ನು ಅಂಗೀಕರಿಸಿದೆ ಎಂದು ಪ್ರಕಟಿಸಲಾಗಿದೆ. ಇದನ್ನು ಪ್ರತಿಭಟಿಸಿ ಮುಷ್ಕರಕ್ಕೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳ ನೌಕರರ ಸಂಘಗಳ ಜಂಟಿ ವೇದಿಕೆ ಕರೆ ನೀಡಿತ್ತು.

ಈ ಬಾರಿಯ ಬಜೆಟ್ ಮಂಡಿಸುವಾಗಲೇ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮತ್ತು ಒಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಿಸುವ ಮತ್ತು ಎಲ್.ಐ.ಸಿ.ಯ ಐಪಿಒ ಪ್ರಕ್ರಿಯೆಯನ್ನು ಆರಂಭಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂಬುದು ಸ್ಪಷ್ಟವಾಗಿತ್ತು.

ಆದರೂ ಈ ಮಸೂದೆ ಸಾಮಾನ್ಯ ವಿಮಾ ಕಂಪನಿಗಳ ಖಾಸಗೀಕರಣಕ್ಕಾಗಿ ಅಲ್ಲ ಎಂದು ಹಣಕಾಸು ಮಂತ್ರಿಗಳ ವಾದ ಎಷ್ಟು ಹುಸಿಯೆಂಬುದು ಅವರು ತಂದಿದ್ದ ಎರಡು ತಿದ್ದುಪಡಿಗಳಿಂದಲೇ ಸ್ಪಷ್ಟವಾಗಿತ್ತು. ಮೊದಲನೆಯದಾಗಿ, 1972ರಲ್ಲಿ ಸಾಮಾನ್ಯ ವಿಮಾ ಉದ್ದಿಮೆಯನ್ನು ರಾಷ್ಟ್ರೀಕರಿಸಲು ತಂದ ಈ ಶಾಸನದ ಸೆಕ್ಷನ್ 10ಬಿ ಸರಕಾರದ ಪಾಲು ಕನಿಷ್ಟ 51% ಇರುತ್ತದೆ ಎಂದು ವಿಧಿಸಿತ್ತು. ಈಗ ಲೋಕಸಭೆ ಅಂಗೀಕರಿಸಿರುವ ಮಸೂದೆ  ಅದನ್ನು ಕೈಬಿಟ್ಟಿದೆ. ಸರಕಾರದ ಪಾಲು 51%ಕ್ಕಿಂತ ಕಡಿಮೆಯಾಗಬಹುದು ಎಂದರೆ ಅದರ ಸಾರ್ವಜನಿಕ ಒಡೆತನವನ್ನು ಬಿಟ್ಟುಕೊಡಲಾಗುತ್ತದೆ ಎಂದೇ ಅರ್ಥ.

ಇದು ಎರಡನೇ ತಿದ್ದುಪಡಿಯಲ್ಲಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ತಿದ್ದುಪಡಿ ಒಂದು ಹೊಸ ಸೆಕ್ಷನ್ 24 ಬಿ ಯನ್ನು ಸೇರಿಸುತ್ತಿದ್ದು, ಅದರ ಪ್ರಕಾರ ಈ ಶಾಸನ ಸರಕಾರದ ಪಾಲು 51%ಕ್ಕಿಂತ ಕಡಿಮೆಯಿರುವ ಸಾಮಾನ್ಯ ವಿಮಾ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಅಂದರೆ ಸರಕಾರದ ಪಾಲು 51%ಕ್ಕಿಂತ ಕಡಿಮೆಯಿರುವ ಕಂಪನಿಗಳ ಮೇಲೆ ಸರಕಾರದ ಹತೋಟಿಯೇನೂ ಇರುವುದಿಲ್ಲ ಎಂದಾಗುತ್ತದೆ. ಈ ರೀತಿಯಲ್ಲಿ ಈ ಮಸೂದೆ ಸಾರ್ವಜನಿಕ ವಲಯದಲ್ಲಿರುವ ನಾಲ್ಕೂ ಸಾಮಾನ್ಯ ವಿಮಾಕಂಪನಿಗಳನ್ನು ಮತ್ತು ಜಿಐಸಿ ರಿ-ಇನ್ಶೂರೆನ್ಸ್ ನ್ನು ಖಾಸಗೀಕರಿಸಲು ಹಾದಿಯನ್ನು ಪ್ರಶಸ್ತಗೊಳಿಸುತ್ತದೆ.

ಈ ತಿದ್ದುಪಡಿಗಳಿಂದ ಖಾಸಗಿಯವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗಿ ಸಾಮಾನ್ಯ ವಿಮಾ ಉದ್ದಿಮೆ ಹೆಚ್ಚು ವಿಸ್ತಾರಗೊಳ್ಳಲು ಅವಕಾಶವಾಗುತ್ತದೆ ಎಂಬುದು ಹುಸಿತರ್ಕವಷ್ಟೇ. ಕೊವಿಡ್ ಕಾಲದಲ್ಲೂ ಸಾಮಾನ್ಯ ವಿಮಾ ಉದ್ದಿಮೆ ಸಾಕಷ್ಟು ವ್ಯವಹಾರ ನಡೆಸಿದ್ದು, ಅದರ ಮುಂಚೂಣಿಯಲ್ಲಿರುವುದು ಸಾರ್ವಜನಿಕ ವಲಯದ ಕಂಪನಿಗಳೇ ಎನ್ನುತ್ತಾರೆ ಸಾಮಾನ್ಯ ವಿಮಾನೌಕರರ ಸಂಘಟನೆಗಳ ಮುಖಂಡರು. ಅಲ್ಲದೆ ಈಗಲೂ ಸಣ್ಣ ಪಟ್ಟಣಗಳಲ್ಲಿಯೂ ಶಾಖೆಗಳನ್ನು ಹೊಂದಿರುವುದು ಸಾರ್ವಜನಿಕ ವಲಯದ ಕಂಪನಿಗಳೇ. ಖಾಸಗಿಯವರ ವ್ಯವಹಾರಗಳು ಮಹಾನಗರಗಳಲ್ಲೇ ಕೇಂದ್ರೀಕೃತವಾಗಿದೆ.

ಅಲ್ಲದೆ 2020 ಮತ್ತು 2021ರಲ್ಲಿ ತಪ್ಪು ವ್ಯವಹಾರಗಳಿಗಾಗಿ ದಂಡನೆಗೆ ಒಳಗಾಗಿರುವುದೆಲ್ಲ ಖಾಸಗಿ ಸಾಮಾನ್ಯ ವಿಮಾ ಕಂಪನಿಗಳೇ. ಸಾಮಾನ್ಯ ವಿಮಾ ವ್ಯವಹಾರಗಳ ವಿರುದ್ಧ ದೂರುಗಳಲ್ಲಿ 82% ಖಾಸಗಿ ಕಂಪನಿಗಳ ವಿರುದ್ಧ, 18% ಮಾತ್ರ ಸಾರ್ವಜನಿಕ ವಲಯದ ಕಂಪನಿಗಳ ವಿರುದ್ಧ ಎಂಬ ಸಂಗತಿಯತ್ತವೂ ಅವರು ಗಮನ ಸೆಳೆದಿದ್ದಾರೆ.

ಇನ್ನೊಂದು ಗಮನಾರ್ಹ ಅಂಶವೆಂದರೆ, 2 ಲಕ್ಷ ರೂ.ಗಳ ಅಪಘಾತ ವಿಮಾ ರಕ್ಷಣೆ ಒದಗಿಸುವ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನಾದಲ್ಲಾಗಲೀ, ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನಾದಲ್ಲಾಗಲೀ ಖಾಸಗಿ ಸಾಮಾನ್ಯ ವಿಮಾ ಕಂಪನಿಗಳು ಯಾವ ಆಸಕ್ತಿಯನ್ನೂ ತೋರಿಸಿಲ್ಲ. ಏಕೆಂದರೆ ಇವು, ಕಡಿಮೆ ಪ್ರೀಮಿಯಂನ ಯೋಜನೆಗಳಾಗಿದ್ದು ಒಟ್ಟಾರೆಯಾಗಿ ನಷ್ಟ ಉಂಟುಮಾಡುವ ಯೋಜನೆಗಳು. ಈ ತಿದ್ದುಪಡಿಗಳ ಪರಿಣಾಮವಾಗಿ ಸರಕಾರದ ಹತೋಟಿ ಸೀಮಿತಗೊಂಡಾಗ ಈ ಬಹುಪ್ರಚಾರಿತ ಯೋಜನೆಗಳ ಗತಿಯೇನು ಎಂಬುದು ಸಹಜವಾಗಿ ಏಳುವ ಪ್ರಶ್ನೆ.

ಆದರೂ ವ್ಯಾಪಕ ಖಾಸಗೀಕರಣದ ಗೀಳನ್ನು ಹಚ್ಚಿಕೊಂಡಿರುವ ಸರಕಾರ ಇಂತಹ ಧೋರಣೆಯನ್ನು ಮುಂದುವರೆಸುತ್ತಿರುವುದರ ವಿರುದ್ಧ ಸಾರ್ವತ್ರಿಕ ಪ್ರತಿಭಟನೆಯ ಸಂಕೇತವಾಗಿ ಸಾಮಾನ್ಯ ವಿಮಾ ನೌಕರರ ಈ ಮುಷ್ಕರಕ್ಕೆ ಜೀವ ವಿಮಾ ನೌಕರರು ಮಾತ್ರವಲ್ಲ, ಸಮಸ್ತ ಕಾರ್ಮಿಕ ವರ್ಗ ಬೆಂಬಲ, ಸೌಹಾರ್ದ ನೀಡಿದೆ. ಈ ಹಿನ್ನೆಲೆಯಲ್ಲಿ ಖಾಸಗೀಕರಣದ ಮೂಲಕ ದೇಶದ ಸಂಪನ್ಮೂಲಗಳ ಲೂಟಿಯ ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಬೆಕು, ದೇಶವನ್ನು ಮೋದಿ-ನೇತೃತ್ವದ ಸರಕಾರದ ವಿನಾಶಕಾರಿ ಧೋರಣೆಗಳಿಂದ ರಕ್ಷಿಸಬೇಕು ಎಂದು ಸಿಐಟಿಯು ಸಮಸ್ತ ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *