ಬೆಂಗಳೂರು: “ಸರ್ಕಾರವು ಖಾಸಗಿ ಮ್ಯಾನೇಜ್‌ಮೆಂಟ್ ಲಾಬಿಯ ಜೊತಗೆ ಸಂಪೂರ್ಣ ಶಾಮೀಲಾಗಿ, ಪ್ರತಿ ವರ್ಷ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳ ಶುಲ್ಕ ಏರಿಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಮತ್ತು ಖಾಸಗಿ ಮ್ಯಾನೇಜ್‌ಮೆಂಟ್ ನಡುವಣ ಸಂಬಂಧ ‘ನೀನು ಸತ್ತಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ’ ಎಂಬಂತಿದೆ ಎಂದು ಎಐಡಿಎಸ್‌ಓ ಸಂಘಟನೆ ಆರೋಪಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್‌ಓ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಾಸಗಿ ಮೆಡಿಕಲ್ ಹಾಗು ಡೆಂಟಲ್ ಮ್ಯಾನೇಜ್‌ಮೆಂಟ್‌ಗಳು ಈ ವರ್ಷವೂ ಶೇ.25 ರಿಂದ ಶೇ.30ರಷ್ಟು ಶುಲ್ಕ ಏರಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಮೊಟ್ಟಮೊದಲನೆಯದಾಗಿ, ಶುಲ್ಕ ಏರಿಕೆ ಎನ್ನುವ ಪ್ರಸ್ತಾವನೆಯೇ ಅಪ್ರಜಾತಾಂತ್ರಿಕ ಮತ್ತು ಇದನ್ನು ಅತ್ಯಂತ ಉಗ್ರವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: ಖಾಸಗಿ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ಗಳ ಶುಲ್ಕ ಏರಿಕೆಗೆ ಎಐಡಿಎಸ್‌ಓ ಖಂಡನೆ
ಕಳೆದ ಶೈಕ್ಷಣಿಕ ವರ್ಷ ಅಂದರೆ, 2020-21ರಲ್ಲಿ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಶೇ.15ರಷ್ಟು ಶುಲ್ಕ ಏರಿಕೆ ಆಗಿದೆ. ವೈದ್ಯಕೀಯ ಶಿಕ್ಷಣ ಈಗಾಗಲೇ ದುಬಾರಿ ಆಗಿದೆ. ಈ ರೀತಿ ಪ್ರತಿ ವರ್ಷ ಶುಲ್ಕ ಏರಿಕೆ ಮಾಡುವುದು ವೈದ್ಯಕೀಯ ಶಿಕ್ಷಣ ಮತ್ತಷ್ಟು ಖಾಸಗೀಕರಣಗೊಳಿಸುತ್ತದೆ. ಮುಂದುವರೆದು, ಮತ್ತೊಂದು ಅಪಾಯಕಾರಿ ಬೆಳವವಣಿಗೆಯಾಗಿ, ಇದು ಸಮಾಜದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ವ್ಯವಸ್ಥೆಯು ಸಹ ಸಂಪೂರ್ಣ ಖಾಸಗೀಕರಣಗೊಳ್ಳುತ್ತದೆ ಎಂದು ಆರೋಪಿಸಿದರು.
ಖಾಸಗಿ ಕಾಲೇಜುಗಳು ಪ್ರತಿವರ್ಷವೂ ವಿವಿಧ ರೀರಿಯಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ನಿಗದಿಪಡಿಸಲಿದೆ. ಇದರಿಂದಾಗಿ ಶುಲ್ಕ ಭರಿಸಿದ ವಿದ್ಯಾರ್ಥಿ, ಅಂತಿಮವಾಗಿ ವೈದ್ಯನಾಗಿ ಹೊರಬಂದ ಮೇಲೆ, ರೋಗಿಗಳನ್ನು ಗ್ರಾಹಕರನ್ನಾಗಿ ನೋಡುತ್ತಾನೆ, ತಾನು ವ್ಯಯಿಸಿದ ವೆಚ್ಚವನ್ನು ದ್ವಿಗುಣಗೊಳಿಸಲು, ಲಾಭ ಪಡೆಯುವ ಸಲುವಾಗಿ ವೈದ್ಯಕೀಯ ವೃತ್ತಿ ಆರಂಭಿಸುತ್ತಾನೆ ಎಂದ ಹೇಳಿದರು.
ಇದನ್ನು ಓದಿ: ಪದವಿ ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವ ಹೊಸ ನೀತಿ ಕೈಬಿಡಲು ವಿದ್ಯಾರ್ಥಿಗಳು ಪ್ರತಿಭಟನೆ
ಕೋವಿಡ್ ಹಿನ್ನೆಲೆಯಲ್ಲಿ ಜನಸಾಮಾನ್ಯರು, ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದಾರೆ. ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣ ಎಷ್ಟರ ಮಟ್ಟಿಗೆ ತೀವ್ರವಾಗಿ ಬೆಳೆಯುತ್ತಿದೆಯೆಂದರೆ, ದೊಡ್ಡ ಸಂಖ್ಯೆಯ ಗ್ರಾಮೀಣ, ಬಡ ಕುಂಟುಂಬ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಮಯದಲ್ಲಿ ‘ಜನಪರ ಸರ್ಕಾರ’ ವಿದ್ಯಾರ್ಥಿ ಶುಲ್ಕವನ್ನು ರದ್ದುಗೊಳಿಸಬೇಕಿತ್ತು ಎಂದಿದ್ದಾರೆ.
ವಿದ್ಯಾರ್ಥಿ ವೇತನಗಳನ್ನು ಹೆಚ್ಚಿಸಬೇಕಾಗಿದ್ದ ಸರ್ಕಾರವು ಅದಕ್ಕೆ ವಿರುದ್ಧವಾಗಿ ಖಾಸಗಿ ಸಂಸ್ಥೆಗಳು ಹಿತಾಸಕ್ತಿಗೆ ಮಣಿದಿರುವುದು ಅತ್ಯಂತ ವಿಷಾದನೀಯ. ಶೈಕ್ಷಣಿಕ ಶುಲ್ಕದ ವಿಚಾರವಾಗಿ ಸರ್ಕಾರ ಮತ್ತು ಖಾಸಗಿ ವಿದ್ಯಾಸಂಸ್ಥೆಗಳು ಮಾತ್ರವೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅವರಿಗೆ ಇಲ್ಲ. ಅದು ಅಪ್ರಜಾತಾಂತ್ರಿಕವಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರೊಂದಿಗೆ ಚರ್ಚಿಸಿ ಶುಲ್ಕದ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಪ್ರಜಾತಾಂತ್ರಿಕ. ಶುಲ್ಕ ಏರಿಕೆ ಮತ್ತು ವೈದ್ಯಕೀಯ ಶಿಕ್ಷಣದ ಖಾಸಗೀಕರಣದ ವಿರುದ್ಧ ವಿದ್ಯಾರ್ಥಿಗಳು, ವೈದ್ಯಕೀಯ ಉಪನ್ಯಾಸಕರು, ಸಿಬ್ಬಂದಿವರ್ಗ ಹೋರಾಟಕ್ಕೆ ಸಜ್ಜಾಗಬೇಕು ಎಂದು ಸಂಘಟನೆಯು ಕರೆ ನೀಡಿದೆ.