ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಶುಲ್ಕ-ದತ್ತಾಂಶ ಸಂಗ್ರಹ ಪಾರದರ್ಶಕತೆ ಇಲ್ಲ; ಡಾ.ಸುಧಾಕರ್‌

ಬೆಂಗಳೂರು: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಖಾಸಗಿ ಆಸ್ಪತ್ರೆಗಳಿಲ್ಲದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆದರೆ, ಕೆಲವು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವ ಚಿಕಿತ್ಸಾ ವೆಚ್ಚ ಹಾಗೂ ದತ್ತಾಂಶ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹೊಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಫಾನಾದಿಂದ ಆಯೋಜಿಸಲಾಗಿರುವ 3ನೇ ರಾಷ್ಟ್ರೀಯ ಆರೋಗ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಫಾನಾ ಸಹಯೋಗದಲ್ಲಿ ಕೆಲಸ ಮಾಡಬೇಕು. ಜನರಿಗೆ ಚಿಕಿತ್ಸಾ ವೆಚ್ಚಗಳು ಕಡಿಮೆ ದರದಲ್ಲಿ ದೊರೆಯುವಂತೆ ವ್ಯವಸ್ಥೆಯಾಗಬೇಕು. ನಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ. ಆದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ಗಮನಹರಿಸಬೇಕು ಮತ್ತು ಚರ್ಚೆಗಳು ನಡೆಯಬೇಕೆಂದು ಕರೆ ನೀಡಿದರು.

ಮಾನಸಿಕ ಆರೋಗ್ಯ ಸಮಸ್ಯೆಯು ಇಂದಿನ ಸಮಾಜದ ಪ್ರಮುಖ ಸಮಸ್ಯೆಯೂ ಆಗಿದೆ. ಈ ಸಂಬಂಧ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ʼಬ್ರೈನ್‌ ಹೆಲ್ತ್‌ ಇನೀಶಿಯೇಟಿವ್‌ʼ ಎಂಬ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗಿದೆ. ಇದರ ಪ್ರೇರಣೆಯಿಂದಾಗಿಯೇ ಕೇಂದ್ರ ಸರ್ಕಾರದ ಮಟ್ಟದಲ್ಲಿ ಇದೇ ಮಾದರಿಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಜಾರಿಯಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳ ಜನರ ನರ ಸಂಬಂಧಿ, ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸಂವಹನ, ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ಅನಾರೋಗ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ನರ ಸಂಬಂಧಿ ಸಮಸ್ಯೆ, ಮೂರ್ಛೆ ಹಾಗೂ ಪಾರ್ಶ್ವವಾಯು ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಬಾಲ್ಯದಲ್ಲೇ ಮಕ್ಕಳು ಅಂಗವಿಕಲರಾಗಲು ಇರುವ ಕಾರಣಗಳಲ್ಲಿ ನರ ಸಂಬಂಧಿ ಸಮಸ್ಯೆಗಳೇ ಶೇ. 70 ಪಾಲು ಹೊಂದಿವೆ. ನರ ಸಂಬಂಧಿ ರೋಗಗಳಿಂದಾಗಿ ಆರೋಗ್ಯ ಕ್ಷೇತ್ರದ ಮೇಲೆ ಹೊರೆ ಹೆಚ್ಚುತ್ತಿದೆ. ಇದು ಆರೋಗ್ಯ ವಲಯಕ್ಕೆ ದೊಡ್ಡ ಸವಾಲಾಗಿದೆ. ಇದು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ. ಇಂತಹ ಸಮ್ಮೇಳನದ ಮೂಲಕ ಸಮಸ್ಯೆಗಳಿಗೆ ಹೊಸ ಉತ್ತರ ದೊರೆಯಲಿದೆ. ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಮೊದಲು ವೈದ್ಯ ಕೇಂದ್ರಿತ ವ್ಯವಸ್ಥೆಯಿತ್ತು. ಈಗ ರೋಗಿಗಳ ಕೇಂದ್ರಿತ ವ್ಯವಸ್ಥೆ ಇದೆ. ಜೀವನಶೈಲಿ ಬದಲಾವಣೆಯಿಂದಾಗಿ ಅಸಾಂಕ್ರಾಮಿಕ ರೋಗಗಳೂ ಹೆಚ್ಚಾಗುತ್ತಿವೆ. 438 ʻನಮ್ಮ ಕ್ಲಿನಿಕ್‌ʼಗಳನ್ನು ಆರಂಭಿಸಲಾಗಿದೆ. ಜನವರಿ ಅಂತ್ಯಕ್ಕೆ ಎಲ್ಲಾ ಕ್ಲಿನಿಕ್‌ಗಳು ಕಾರ್ಯಾರಂಭವಾಗಲಿದೆ. ಕಾರ್ಮಿಕರು, ವಲಸಿಗರು, ಕೊಳೆಗೇರಿ ನಿವಾಸಿಗಳಿಗಾಗಿ ಈ ಕ್ಲಿನಿಕ್‌ಗಳು ಮೀಸಲಾಗಿವೆ. ಇದೇ ರೀತಿ ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ʼಆಯುಷ್ಮತಿʼ ಕ್ಲಿನಿಕ್‌ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರವು 370 ಬಿಲಿಯನ್‌ ಯುಎಸ್‌ ಡಾಲರ್‌ಗೆ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಅಂದಾಜಿದೆ. ಸಣ್ಣ ಆಸ್ಪತ್ರೆಗಳು ಕೂಡ ಬೆಳೆಯಬೇಕು. ಭಾರತದಲ್ಲಿ ನಾಲ್ಕು ವ್ಯಕ್ತಿಯಲ್ಲಿ ಒಬ್ಬರು ಮಧುಮೇಹಕ್ಕೊಳಗಾಗಿದ್ದಾರೆ ಎಂದು ಅಂದಾಜಿದೆ. ಇಂತಹ ಹಲವು ಚಿಕಿತ್ಸೆ ಒಳಗೊಂಡು ಅಸಾಂಕ್ರಾಮಿಕ ರೋಗಿಗಳನ್ನು ಗ್ರಾಮೀಣ ಹಂತದಲ್ಲೇ ತಪಾಸಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಈವರೆಗೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 60ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಂಪದ್ಭರಿತ ರಾಜ್ಯವನ್ನು ನಿರ್ಮಾಣ ಮಾಡಲು ಆರೋಗ್ಯಯುತ ರಾಜ್ಯವನ್ನು ನಿರ್ಮಿಸಬೇಕಿದೆ ಎಂದರು.

ಏಕಗವಾಕ್ಷಿ ವ್ಯವಸ್ಥೆಗೆ ಕ್ರಮ : ಖಾಸಗಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬೇಕಿರುವ ವಿವಿಧ ಅನುಮತಿಗಳಿಗೆ ಏಕಗವಾಕ್ಷಿ ವ್ಯವಸ್ಥೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *