ಬೆಂಗಳೂರು: ಜನತೆಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಲಾಗದ ಕೇಂದ್ರ-ರಾಜ್ಯ ಸರಕಾರಗಳ ಈ ದುರ್ನಡೆ ನಾಚಿಕೆ ಗೇಡಿನದಾಗಿದೆ. ಜಲ ಜೀವನ ಮಿಷನ್ ಹೆಸರಿನ ಕಾರ್ಯಕ್ರಮದ ಮೂಲಕ ಗ್ರಾಮ ಪಂಚಾಯತ್‌ಗಳು ಜನತೆಯ ಮೇಲೆ ಮತ್ತಷ್ಟು ಹೊರೆ ಹೇರಲು ಹೊರಟಿವೆ. ತಲಾ ವ್ಯಕ್ತಿಗೆ 55 ಲೀಟರ್ ನೀರನ್ನು ಮನೆ ಮನೆಗೆ, ಮೀಟರ್ ಮಾಪನದೊಂದಿಗೆ, ವಯುಕ್ತಿಕ ನಳಗಳನ್ನು ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲಾಗುವುದೆಂದು ಮತ್ತು ಇದಕ್ಕಾಗಿ, ಗ್ರಾಮದ ಶೇ.85 ರಷ್ಠಿರುವ ಬಡ ಜನತೆಯು ಸೇರಿದಂತೆ ಶೇ.10 ರಷ್ಠು ವಂತಿಗೆಯನ್ನು ನೀಡುವಂತೆ ಒತ್ತಾಯಿಸಲಾಗುತ್ತದೆ.
ಸರಕಾರದ ಈ ಕ್ರಮವನ್ನು ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಖಾಸಗೀಕರಣವನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅಂತಹ ಎಲ್ಲಾ ಕಾರ್ಯಕ್ರಮಗಳನ್ನು ಕೈಬಿಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ.
ಇದನ್ನು ಓದಿ: ಎತ್ತಿನಹೊಳೆ ಯೋಜನೆ ಮೂಲಕ 29 ತಾಲ್ಲೂಕುಗಳ ಜನರಿಗೆ ಕುಡಿಯುವ ನೀರು: ಮುಖ್ಯಮಂತ್ರಿ
ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ʻʻರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಆಗಿಂದಾಗ್ಗೆ ಅದರ ಖಾಸಗೀಕರಣದ ಪ್ರಸ್ತಾಪಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಡೆಯಿಂದ ಬರುತ್ತಲೇ ಇದೆ. ರಾಜ್ಯದ ಜನತೆ ಅದನ್ನು ತೀವ್ರವಾಗಿ ವಿರೋಧಿಸುತ್ತಲೂ ಇದ್ದಾರೆʼʼ ಎಂದು ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆ, ಇದೀಗ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಖಾಸಗೀಕರಣದ ಕಾರ್ಯಕ್ರಮವನ್ನು, ಸದ್ದಿಲ್ಲದೇ ಗ್ರಾಮ ಪಂಚಾಯತ್‌ಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಲು ಮುಂದಾಗುತ್ತಿರುವುದು ತೀವ್ರ ಖಂಡನೀಯವಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ ಜಲ್ ಜೀವನ್ ಮಿಷನ್ ಪೂರ್ಣಗೊಳಿಸಿ: ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಮನೆ-ಮನೆಗೆ ವಯಕ್ತಿಕ ನಳಗಳ ಅಳವಡಿಕೆ ಮೂಲಕ ನೀರು ಸರಬರಾಜು ಮಾಡುವ ವಿಚಾರ ಒಪ್ಪಬಹುದಾಗಿದೆ. ಆದರೇ, ನಳಗಳಲ್ಲಿ ಬರುವ ನೀರನ್ನು ಮಾಪನ ಮಾಡುವ ಮೀಟರ್ ಅಳವಡಿಕೆಯನ್ನು ಒಪ್ಪಲಾಗದು. ಇದು ಜೀವ ಜಲದ ಖಾಸಗೀಕರಣದ ದುರುದ್ದೇಶ ಹೊಂದಿದೆ. ಅದೇ ರೀತಿ, ರೈತರು, ಕೂಲಿಕಾರರು, ಕಸುಬುದಾರರು, ಕಾರ್ಮಿಕರು, ಮಹಿಳೆಯರು, ದಲಿತರು, ದುರ್ಬಲರು ವಂತಿಗೆ ನೀಡುವ ಸ್ಥಿತಿಯಲ್ಲಿಲ್ಲದಿರುವುದು ಮತ್ತು ಮುಂದೆ ಖಾಸಗೀಕರಿಸಿದರೆ ನೀರಿನ ಬಿಲ್ ಕಟ್ಟುವ ಸ್ಥಿತಿಯಲ್ಲಿಲ್ಲ ಎಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.
ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಜನರ ವಂತಿಗೆಯ ಮೊತ್ತವನ್ನು ಭರಿಸಬೇಕು ಹಾಗೂ ನಳಗಳಿಗೆ ಮೀಟರ್ ಅಳವಡಿಕೆ ಮತ್ತು ಖಾಸಗೀಕರಿಸುವ ಪ್ರಸ್ಥಾಪಗಳನ್ನು ಕೈ ಬಿಟ್ಟು ಸಾರ್ವಜನಿಕ ರಂಗದಡಿ ಜಲ ಜೀವನ ಮಿಷನ್ ಕಾರ್ಯಕ್ರಮವನ್ನು ಜಾರಿಗೊಳಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬಲವಾಗಿ ಒತ್ತಾಯಿಸುತ್ತದೆ.