ಗುರುರಾಜ ದೇಸಾಯಿ
ಮಳೆಯ ಅನಾಹುತ ಬಳಿಕ ಒಂದೊಂದು ಆತಂಕಕಾರಿ ವಿಚಾರ ಬೆಳಕಿಗೆ ಬರುತ್ತಿದ್ದು, ಸ್ವತಃ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಹಲವು ಕೆರೆಗಳನ್ನು ನುಂಗಿರುವ ಮಾಹಿತಿ ಹೊರಬಿದ್ದಿದೆ. ಬೆಂಗಳೂರನ್ನು ಅಭಿವೃದ್ಧಿ ಮಾಡಬೇಕಿದ್ದ ಬಿಬಿಎಂಪಿ ಮತ್ತು ಬಿಡಿಎ ಕೆರೆಗಳನ್ನೆ ನುಂಗಿ ನೀರು ಕುಡಿದಿದೆ. ಈ ನುಗಣ್ಣರ ಹಿಂದೆ ಮೂರು ಪಕ್ಷಗಳ ನಾಯಕರ ಪಾಲು ದೊಡ್ಡದಿದೆ.
ಅಗೆದಷ್ಟು ಅಗಲ-ಬಗೆದಷ್ಟು ಆಳ ಎನ್ನುವ ಹಾಗೇ, ಕೆರೆ ಒತ್ತುವರಿ ಕರ್ಮಕಾಂಡ ಬಯಲಾಗುತ್ತಲೇ ಇದೆ. ಎಲ್ಲವೂ ಹಿಂದಿನ ಸರ್ಕಾರ ಮಾಡಿದ್ದು ಅಂತ ಈಗಿನ ಸರ್ಕಾರ ಕೇವಲ ಕೆಲವು ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡೋ ಕಳ್ಳಾಟ ಮಾಡುತ್ತಿದೆ. ಕೆರೆಗಳನ್ನ ನುಂಗಿಹಾಕಿ ಸಾವಿರಾರು ನಿವೇಶನಗಳನ್ನು ನಿರ್ಮಿಸಿರುವ ಬಿಡಿಎದ ಕೆರೆ ಒತ್ತುವರಿ ಕರ್ಮಕಾಂಡ ಅಷ್ಟಿಸ್ಟಲ್ಲ. ಅಸಲಿಗೆ ಬೆಂಗಳೂರಲ್ಲಿ ಬಿಡಿಎ ಮತ್ತು ಬಿಬಿಎಂಪಿ ನುಂಗಿ ನೀರು ಕುಡಿದಿರುವ ಕೆರೆಗಳ ಸಂಖ್ಯೆ ಹಾಗೂ ಅದರಲ್ಲಿ ನಿರ್ಮಾಣವಾದ ಸೈಟ್ ಗಳ ಸಂಖ್ಯೆ ಎಷ್ಟು ಅಂತಾ ಕೇಳಿದರೆ ಎದೆ ಝಲ್ ಎನ್ನುತ್ತದೆ.
ಹೌದು, ಬಿಬಿಎಂಪಿ ದಾಖಲೆಯಲ್ಲಿರುವ 201 ಕೆರೆಗಳಲ್ಲಿ 851 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಇದರಲ್ಲಿ ಬಿಡಿಎ, ನೈಸ್, ಸ್ಲಂ ಬೋರ್ಡ್, ಶಾಲೆ, ಉದ್ಯಾನವನ, ಸ್ಮಶಾನ, ಕೆಎಚ್‌ಬಿ ಕ್ವಾರ್ಟರ್ಸ್, ಮಿಲಿಟರಿ, ರೈಲ್ವೆ ಇಲಾಖೆ, ಕೆಐಎಡಿಬಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಟಿಸಿ, ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿಗಳೂ ಸೇರಿವೆ. ಬೆಂಗಳೂರಿನಲ್ಲಿ 10 ವರ್ಷಗಳಿಂದೀಚೆಗೆ ಅಭಿವೃದ್ಧಿಗೊಂಡಿರುವ ಕೆರೆಗಳಲ್ಲೂ ಒತ್ತುವರಿ ಇದೆ. ಗೋವು ಆಶ್ರಮ, ಕೃಷಿ, ಸೈಕಲ್ ಶಾಪ್, ಪೆಟ್ರೋಲ್ ಬಂಕ್, ರಸ್ತೆ ಹೀಗೆ ಹಲವು ರೀತಿ ಹಾಗೂ ಖಾಸಗಿ ವ್ಯಕ್ತಿಗಳ ಹೆಸರಿನಲ್ಲೂ ಒತ್ತುವರಿಯ ಪ್ರಮಾಣವನ್ನು ಬಿಬಿಎಂಪಿ ದಾಖಲು ಮಾಡಿದೆ. ಒಟ್ಟಾರೆ ಒತ್ತುವರಿಯಾದ ಕೆರೆಗಳು ಯಾವುವು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.
ಕದಿರೇನಹಳ್ಳಿ ಕೆರೆಯ ಭಾಗದಲ್ಲಿ ಬನಶಂಕರಿ ಎರಡನೇ ಹಂತ. ಸಾರಕ್ಕಿ ಅಗ್ರಹಾರ ಕೆರೆಯು ಈಗಿನ ಜೆ.ಪಿ.ನಗರ ನಾಲ್ಕನೇ ಫೇಸ್. ಚಿನ್ನಗಾರ ಕೆರೆ ಹೋಗಿ ಈಗಿನ ಈಜಿಪುರ, ಚಲ್ಲಘಟ್ಟ ಕೆರೆಯ ಭಾಗದಲ್ಲಿ ಈಗ ಕರ್ನಾಟಕ ಗಾಲ್ಫ್ ಅಸೋಶಿಯೇಶನ್ ಇದೆ. ದೊಮ್ಮಲೂರು ಕೆರೆ ಇದ್ದ ಜಾಗದಲ್ಲಿ ಈಗ ದೊಮ್ಮಲೂರು ಎರಡನೇ ಸ್ಟೇಜ್ ಇದೆ.
ಧರ್ಮಾಂಬುದಿ ಕೆರೆಯ ಜಾಗದಲ್ಲಿ ಈಗಿನ ಕೆಂಪೇಗೌಡ ಬಸ್ ನಿಲ್ದಾಣ, ರಾಮಶೆಟ್ಟಿ ಪಾಳ್ಯ ಕೆರೆಯ ಜಾಗದಲ್ಲಿ ಮಿಲ್ಕ್ ಕಾಲೋನಿಯಿದೆ, ಅಗಸನ ಕೆರೆಯ ಭಾಗದಲ್ಲಿ ಗಾಯತ್ರಿದೇವಿ ಪಾರ್ಕ್ ಇದೆ. ಈಗಿನ ರಾಜಾಜಿನಗರ ಹಿಂದಿನ ಕೇತಮಾರನಹಳ್ಳಿ ಕೆರೆ. ಕಂಠೀರವ ಸ್ಟೇಡಿಯಂ ಜಾಗದಲ್ಲಿ ಸಂಪಿಗೆ ಕೆರೆಯಿತ್ತು. ಕೋರಮಂಗಲ ಕೆರೆಯ ಜಾಗದಲ್ಲಿ ನ್ಯಾಶನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಇದೆ.
ಹಾಳನಾಯಕನಹಳ್ಳಿ ಕೆರೆಯ ಭಾಗದಲ್ಲಿ ರೈನ್ ಬೋ ಲೇಔಟ್ ಸೊನ್ನೇನಹಳ್ಳಿ ಕೆರೆಯು ಆಸ್ಟಿನ್ ಟೌನ್ ಆಗಿದೆ, ಈಗಿನ ನಾಗಾವರ ಹಿಂದಿನ ಹೆಣ್ಣೂರು ಕೆರೆ. ರಾಜರಾಜೇಶ್ವರಿ ಲೇಔಟ್ ಹಿಂದಿನ ಕೊಟ್ಟೂರು ಕೆರೆ. ಪರಂಗಿಪಾಳ್ಯ ಕೆರೆ ಈಗಿನ ಎಚ್ ಎಸ್ ಆರ್ ಲೇಔಟ್, ಬಸವೇಶ್ವರನಗರ ಹಿಂದಿನ ಕುರುಬರಹಳ್ಳಿ ಕೆರೆಯಾಗಿತ್ತು, ಮಹದೇವಪುರ ವ್ಯಾಪ್ತಿಯ ಮುನೇನಕೊಳಲು ಕೆರೆ, ಬೆಳತ್ತಗೂರು ಕೆರೆ, ನಲ್ಲೂರಹಳ್ಳಿ ಕೆರೆ, ಗರುಡಾಚಾರ್ ಪಾಳ್ಯ ಕೆರೆ, ಯಮಲೂರು ಕೋಡಿ ಕೆರೆಯನ್ನೂ ಒತ್ತುವರಿ ಮಾಡಲಾಗಿದೆ.
ಇದನ್ನೂ ಓದಿ : ಸದನದಲ್ಲಿ ಪ್ರತಿಧ್ವನಿಸಿದ ‘ಹಗರಣ’ – ಆಡಳಿತ ವಿಪಕ್ಷದ ನಡುವೆ ಜಟಾಪಟಿ
23 ಕೆರೆಗಳನ್ನ ನೆಲಸಮ ಮಾಡಿ ಬಿಡಿಎ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ದಾಖಲೆಗಳು ಹೇಳುತ್ತಿವೆ. ಕೆರೆ ಮೇಲೆ ನಿರ್ಮಾಣ ಮಾಡಿರುವ ಲೇಔಟ್ ಗಳಲ್ಲಿ 3 ಪಕ್ಷದ ನಾಯಕರಿಗೆ ಜಿ ಕೆಟಗರಿ ನಿವೇಶನ ಹಂಚಲಾಗಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದ ಶಾಸಕರಿಗೆ, ಸಚಿವರಿಗೆ, ಹಾಲಿ, ಮಾಜಿ ಶಾಸಕರಿಗೆ ನಿವೇಶನ ನೀಡಲಾಗಿದೆ ಎಂಬ ಮಾಹಿತಿಯನ್ನು ಬಿಬಿಎಂಪಿ ಹೊರಹಾಕಿದೆ. ಇನ್ನೂ ಈ ಕೆರೆ ಒತ್ತುವರಿ ಯಾರೆಲ್ಲ ಮಾಡಿದ್ದಾರೆ ಅನ್ನೋದನ್ನ ನೋಡುವುದಾದರೆ,
- ಗೋವಿಂದ್ ಕಾರಜೋಳ, ಶಾಸಕ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 105, ಆರ್ ಎಂವಿ 2 ನೇ ಹಂತ 1998 ರಲ್ಲಿ ಹಂಚಿಕೆ ಮಾಡಲಾಗಿದೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್ ಇದಾಗಿದೆ. ಇವರು ಬಿಜೆಪಿ ಪಕ್ಷದ ಶಾಸಕರಾಗಿದ್ದಾರೆ.
- ಡಿಕೆ ಶಿವಕುಮಾರ್, ಶಾಸಕರ ಕೋಟಾದಲ್ಲಿ 50×80ವಿಸ್ತೀರ್ಣ, ನಿವೇಶನ ಸಂಖ್ಯೆ 105, ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ.ಇವರು ಕಾಂಗ್ರೆಸ್ ಶಾಸಕರಾಗಿದ್ದಾರೆ.
- ಡಿ.ಸುಧಾಕರ್, ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಸಂ.286/c ಆರ್ ಎಂವಿ 2 ಸ್ಟೇಜ್ ರಲ್ಲಿ ನಿವೇಶನ ಹಂಚಿಕೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್. ಇವರು ಆಗ ಬಿಜೆಪಿ ಶಾಸಕರಾಗಿದ್ದರು, ನಂತರದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
- ಆರ್ ಅಶೋಕ್, ಸಚಿವರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 195/L HBR1 stage, 5 ಬ್ಲಾಕ್, 2007 ರಲ್ಲಿ ಹಂಚಿಕೆಮಾಡಲಾಗಿದೆ. ಇವರು ಬಿಜೆಪಿ ಶಾಸಕರಾಗಿದ್ದಾರೆ.
- ಬಿ.ವೈ. ರಾಘವೇಂದ್ರ,ಎಂಪಿ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ1, ಆರ್ ಎಂವಿ 2 ಸ್ಟೇಜ್, ನಾಗಶೆಟ್ಟಿಹಳ್ಳಿ 2009 ಇವರು ಬಿಜೆಪಿ ಶಾಸಕರಾಗಿದ್ದರು.
- ಬಿ.ಕೆ. ಸಂಗಮೇಶ್, ಶಾಸಕರ ಕೋಟಾ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ 2009 ರಲ್ಲಿ ತೆಗೆದುಕೊಂಡಿದ್ದಾರೆ. ಇವರು ಕಾಂಗ್ರೆಸ್ ಶಾಸಕರಾಗಿದ್ದಾರೆ.
- ವೀರಣ್ಣ ಚರಂತಿಮಠ, ಶಾಸಕರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ, ನಿವೇಶನ ಸಂಖ್ಯೆ3, ಆರ್ ಎಂವಿ 2 ಸ್ಟೇಜ್4 ಬ್ಲಾಕ್, ನಾಗಶೆಟ್ಟಿಹಳ್ಳಿ 2006 ರಲ್ಲಿ ಹಂಚಿಕೆ ಮಾಡಲಾಗಿದೆ. ಇವರು ಬಿಜೆಪಿ ಶಾಸಕರು.
- ಎಸ್ ಸುರೇಶ್ ಕುಮಾರ್, ಸಚಿವರ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ2, ಆರ್ ಎಂವಿ 2 ಸ್ಟೇಜ್4 ಬ್ಲಾಕ್, 2009 ರಲ್ಲಿ ಹಂಚಿಕೆ. ಇವರು ಬಿಜೆಪಿ ಶಾಸಕರು.
- ನಜಿರ್ ಅಹ್ಮದ್, ಶಾಸಕರ ಕೋಟಾದಡಿ 50×80 ವೀಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 391 ಆರ್ ಎಂವಿ 2 ನೇ ಹಂತ 2 ನೇ ಬ್ಲಾಕ್ 1992 ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇವರು ಕಾಂಗ್ರೆಸ್ ಶಾಸಕರಾಗಿದ್ದಾರೆ.
- ಆರ್.ವಿ. ದೇವರಾಜ್, ಶಾಸಕರ ಕೋಟಾದಲ್ಲಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 108/ಎ ಆರ್ ಎಂವಿ 2 ನೇ ಸ್ಟೇಜ್ 2 ಬ್ಲಾಕ್ 1992 ರಲ್ಲಿ ಹಂಚಿಕೆಮಾಡಲಾಗಿದೆ. ಇವರು ಕಾಂಗ್ರೆಸ್ ಶಾಸಕರು.
- ಗೂಳಿಹಟ್ಟಿ ಶೇಖರ್, ಸಚಿವರ ಕೋಟಾ 2009 ರಲ್ಲಿ ಆರ್ ಎಂ ವಿ 2 ನೇ ಹಂತದಲ್ಲಿ ನಿವೇಶನ. ಇವರು ಪಕ್ಷೇತರರಾಗಿ ಗೆದ್ದು, ಬಿಜೆಪಿಯ ಜೊತೆ ಸಖ್ಯವನ್ನು ಹೊಂಡಿದ್ದರು.
- ಜಿ ಕೃಷ್ಣ ಪಾಲೇಮಾರ್, ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂ.12 ಆರ್ ಎಂವಿ 2 ಸ್ಟೇಜ್ ರಲ್ಲಿ ನಿವೇಶನ ಹಂಚಿಕೆ. ಇವರು ಬಿಜೆಪಿ ನಾಯಕರು.
- ಶಿವರಾಜ್ ತಂಗಡಗಿ, ಸಚಿವರ ಕೋಟಾದಡಿ 50× 80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂ.31 ಆರ್ ಎಂವಿ 2 ಸ್ಟೇಜ್ ರಲ್ಲಿ ನಿವೇಶನ ಹಂಚಿಕೆ. ಇವರು ಪಕ್ಷೇತರ ಶಾಸಕರಾಗಿ ಗೆದ್ದು, ಬಿಜೆಪಿ ಜೊತೆ ಸಖ್ಯ ಹೊಂದಿದ್ದರು. ನಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
- ಫಕೀರಪ್ಪ ಎಂಪಿ ಕೋಟಾದಡಿ 50× 80 ವಿಸ್ತೀರ್ಣದ ಹೊಂದಿದ್ದಾರೆ. ನಿವೇಶನ. ಸಂ.71 ಆರ್ ಎಂವಿ 2 ಸ್ಟೇಜ್ ಭೂಪಸಂಧ್ರ ರಲ್ಲಿ ನಿವೇಶನ ಹಂಚಿಕೆ. ಆರ್ ಎಂವಿ 2 ನೇ ಹಂತ ಗೆದ್ದಲ್ಲಹಳ್ಳಿ ಕೆರೆ ಹಾಗೂ ಚಿಕ್ಕಮಾರನಹಳ್ಳಿ ಕೆರೆ ಮೇಲೆ ನಿರ್ಮಿಸಿರುವ ಲೇಔಟ್ ಗಳು. ಇವರು ಬಿಜೆಪಿಯಿಂದ ಸಂಸದರಾಗಿದ್ದರು.
- ಕೆ.ಜೆ. ಜಾರ್ಜ್ ಎಂಎಲ್ಎ ಕೋಟಾದಡಿ 76×60 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ. ಸಂಖ್ಯೆ 4033, ಹೆಚ್ ಎ ಎಲ್ 2 ಸ್ಟೇಜ್, 1992 ರಲ್ಲಿ ಹಂಚಿಕೆ.( ತಿಪ್ಪಸಂದ್ರ ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್) ಇವರು ಕಾಂಗ್ರೆಸ್ ಶಾಸಕರಾಗಿದ್ದರೆ.
- ಸಿ.ಟಿ. ರವಿ, ಶಾಸಕರ ಕೋಟಾದಲ್ಲಿ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 195 ಕೆ, ಹೆಚ್ ಬಿಆರ್ 1 ಸ್ಟೇಜ್, 5 ಬ್ಲಾಕ್ ನಲ್ಲಿ 40×60 ನಿವೇಶನ ಹಂಚಿಕೆ( ಹೆಣ್ಣೂರು ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್) ಇವರು ಬಿಜೆಪಿ ಶಾಸಕರು
- ಎಸ್ ಆರ್ ಪಾಟೀಲ,ಗೆ ಎಂಎಲ್ ಸಿ ಕೋಟಾದಡಿ ಹಾಗೂ ಆರ್ ಎಸ್ ಪಾಟೀಲ್ ಎಂಪಿ ಕೋಟಾದಲ್ಲಿ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 564,5 ಹಂಚಿಕೆ ಇವರು ಕಾಂಗ್ರೆಸ್ ನಾಯಕರು.
- ಹಂಪನಗೌಡ ಬಾದರ್ಲಿ, ಶಾಸಕರ ಕೋಟಾದಲ್ಲಿ ನಿವೇಶನ ಹಂಚಿಕೆ. ನಿವೇಶನ ಸಂಖ್ಯೆ 87 ಆರ್ ಎಂವಿ ಲೇಔಟ್ 1998 ರಲ್ಲಿ ನಿವೇಶನ ಹಂಚಿಕೆ. ಕಾಂಗ್ರೆಸ್ ಶಾಸಕರು.
- ಸಿಸಿ ಪಾಟೀಲ್ ಎಂಎಲ್ ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಹಂಚಿಕೆ. ನಿವೇಶನ ಸಂಖ್ಯೆ 3CC-907 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ. ಇವರು ಬಿಜೆಪಿ ಶಾಸಕರು
- ಬಿ.ಸಿ. ಪಾಟೀಲ್, ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 4M-407 HRBR3 ಬ್ಲಾಕ್ ಡಾಲರ್ಸ್ ಕಾಲೋನಿಯಲ್ಲಿ 2006 ರಲ್ಲಿ ಹಂಚಿಕೆ. ಇವರು ಬಿಜೆಪಿ ಶಾಸಕರು.
- ಪರಮೇಶ್ವರ್ ನಾಯ್ಕ್ ಎಂಎಲ್ಎ ಕೋಟಾದಡಿ 40×60 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 4M-415 HRBR ಲೇಔಟ್ ನ 3 ಬ್ಲಾಕ್ ನಲ್ಲಿ 2001 ರಲ್ಲಿ ಹಂಚಿಕೆ. ಕಾಂಗ್ರೆಸ್ ಶಾಸಕರು.
- ಪ್ರಕಾಶ್ ಖಂಡ್ರೆ ಎಂಎಲ್ ಎ ಕೋಟಾದಡಿ 50×80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ. ನಿವೇಶನ ಸಂಖ್ಯೆ 5C-319 HRBR1 ಬ್ಲಾಕ್ ನಲ್ಲಿ 2005 ರಲ್ಲಿ ಹಂಚಿಕೆ. ಹೆಚ್ ಆರ್ ಬಿಆರ್ 1 ನೇ ಹಂತ, ಬಾಣಸವಾಡಿ ಚನ್ನಸಂದ್ರ ಕೆರೆ ಮೇಲೆ ನಿರ್ಮಾಣ ಆಗಿರುವ ಲೇಔಟ್. ಇವರು ಇವರು ಬಿಜೆಪಿ ಶಾಸಕರಾಗಿದ್ದಾರೆ.
ಇದನ್ನೂ ಓದಿ : ಹಗರಣಗಳ “ಸುಳಿಯಲ್ಲಿ” ಸರಕಾರ
ಪತ್ರಕರ್ತ ಲಿಂಗರಾಜ ಮಳವಳ್ಳಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ಕೆರೆ ಒತ್ತುವರಿಯನ್ನು ಮಾಡಿಕೊಂಡಿದ್ದರಿಂದ ಬೆಂಗಳೂರು ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಸರಕಾರ ಒಂದು ಶಾಶ್ವತ ಪರಿಹಾರವನ್ನು ಮಾಡೋದಕ್ಕೆ ಹಿಂದೇಟು ಹಾಕುತ್ತಿದೆ. ಪ್ರತಿ ಬಾರಿ ಮಳೆ ಬಂದಾಗ ಈ ಚರ್ಚೆ ನಡೆಸಿ ನೆಪ ಮಾತ್ರಕ್ಕೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಐಟಿ-ಬಿಟಿ ಕಂಪನಿಗಳೇ ಹೆಚ್ಚಿರುವ ಪೂರ್ವಭಾಗದ ಬೆಳ್ಳಂಡೂರು, ಕಾಡಬಿಸನಹಳ್ಳಿ, ವೈಟ್ ಫೀಲ್ಡ್, ರಿಂಗ್ ರಸ್ತೆ ಪೂರ್ತಿಯಾಗಿ ಮುಳುಗಡೆ ಆಗಿದ್ದವು. ಇಲ್ಲಿನ ಶಾಸಕ ಅರವಿಂದ ಲಿಂಬಾವಳಿ ‘ಹೆಚ್ಚಿಗೆ ಮಳೆ ಬಂದ್ರೆ ನಾನೇನು ಮಾಡೋಕೆ ಆಗುತ್ತೆ’ ಎಂದು ಬೇಜವಾಬ್ದಾರಿ ಉತ್ತರ ಕೊಟ್ಟರು. ಜನ ಪ್ರವಾಹದಲ್ಲಿ ಮುಳುಗಿರುವಾಗ ಮಸಾಲೆ ದೋಸೆ ಸವಿಯಲು ಎಳಸು ಸಂಸದ ತೇಜಸ್ವಿಸೂರ್ಯ ಕರೆಕೊಟ್ಟಿದ್ದು ವೈರಲ್ ಆಗಿತ್ತು. ಬೆಂಗಳೂರಿನ ಉಸ್ತುವಾರಿಗಿರಿಗೆ ಕಚ್ಚಾಡಿಕೊಂಡು ಸದಾ ಸುದ್ದಿಯಲ್ಲಿರುತ್ತಿದ್ದ ಪ್ರಭಾವಿ ಮಂತ್ರಿಗಳಿಬ್ಬರು ದಿವ್ಯ ಮೌನಕ್ಕೆ ಶರಣಾಗಿದ್ದರು ಎಂದು ಆರೋಪಿಸಿದ್ದಾರೆ.
ಬೆಂಗಳೂರು ನಗರದ ನೈಸರ್ಗಿಕ ರಚನೆ, ಬೆಂಗಳೂರು ನಗರ ಸಮುದ್ರಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ನಗರ. ಇದರ ರಕ್ಷಣೆಗೆ ಬನ್ನೇರುಘಟ್ಟ ದಟ್ಟ ಅರಣ್ಯವೂ ಇದೆ. ಪ್ರವಾಹಕ್ಕೆ ಸಿಲುಕಲು ಅಕ್ಕಪಕ್ಕದಲ್ಲಿ ಯಾವ ನದಿಯೂ ಇಲ್ಲ. ಹೀಗಿದ್ದೂ ಬೆಂಗಳೂರು ಪ್ರವಾಹಕ್ಕೆ ಸಿಲುಕಿದ್ದು ಯಾಕೆ? ಎನ್ನುವ ಪ್ರಶ್ನೆಗೆ ದಂಡಿ ಉತ್ತರ ಇವೆಯಾದರೂ, ಕಾರ್ಯಗತಗೊಳಿಸಲು ಯಾರಿಗೂ ಇಚ್ಚಾಸಕ್ತಿ ಇಲ್ಲ. ಕೆರೆಗಳ ನಗರ ಬೆಂಗಳೂರಿನಲ್ಲೀಗ ಕೆಲವೇ ಕೆಲವು ಕೆರೆ ಉಳಿದಿವೆ. ಕೆರೆಗಳು ಲೇಔಟ್, ಐಷಾರಾಮಿ ವಿಲ್ಲಾಗಳು, ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಕೆರೆ ಕಬಳಿಸಿದ್ದು ಸಾಕಾಗದೇ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ; ಕೆಲವೆಡೆ ಪೂರ್ತಿಯಾಗಿ ಮುಚ್ಚಲಾಗಿದೆ. ಮತ್ತೆ ಕೆಲವೆಡೆ ಗ್ರ್ಯಾವಿಟಿಗೆ ವಿರುದ್ಧವಾಗಿ ಕಾಲುವೆಯ ದಿಕ್ಕನ್ನೇ ಬದಲಾಗಿಸಲಾಗಿದೆ. ಮಳೆನೀರು ಕಾಲುವೆ ಎಂದು ದಾಖಲೆಗಳಲ್ಲಿದೆ. ಆದರೆ ಇವು ಎಲ್ಲಿಯೂ ಕಾಣುವುದಿಲ್ಲ! ಕೆರೆ, ರಾಜಕಾಲುವೆ ಮತ್ತು ಇವುಗಳ ಭಪೋರ್ ಜೋನ್ (ಸುರಕ್ಷಿತ ವಲಯ), ರಸ್ತೆ, ಗೋಮಾಳ ಹೀಗೆ ಎಲ್ಲವನ್ನೂ ಒಂದಿಂಚೂ ಬಿಡದೇ ನುಂಗಿದ ಮೇಲೆ ಮಳೆ ನೀರು ಹರಿದು ಹೋಗುವುದಾದರೂ ಎಲ್ಲಿಗೆ? ಎಂದು ಪ್ರಶ್ನಿಸಿದ್ದಾರೆ.
ನಗರದ ಬಹುತೇಕ ಐತಿಹಾಸಿಕ ಕೆರೆಗಳು ಈಗ ಲೇಔಟ್‌ಗಳಾಗಿವೆ. ಅಕ್ರಮವಾಗಿ ಬಿಲ್ಡಿಂಗ್ ನಿರ್ಮಿಸುವವರು ಮೊದಲಿಗೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು, ಕೆರೆಯನ್ನು ಕುಗ್ಗಿಸುತ್ತಾರೆ. ಬಳಿಕ ಅದನ್ನು ಪೂರ್ತಿ ಮುಚ್ಚಿ, ಅದರ ಮೇಲೆ ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವುಗಳಲ್ಲಿ ಹಲವು ಪ್ರತಿಷ್ಠಿತ ಲೇಔಟ್‌ಗಳು ಪ್ರಮುಖ ಕೆರೆಗಳ ಮೇಲೆ ನಿರ್ಮಾಣವಾಗಿರುವುದು ಆಘಾತಕಾರಿ ವಿಚಾರ. ಕೇವಲ 42 ಕೆರೆಗಳು ಒತ್ತುವರಿಯಾಗಿವೆ ಎನ್ನುವುದು ಒಂದು ಸಣ್ಣ ಸಂಖ್ಯೆ ಅಷ್ಟೆ. ಐಟಿ ಕಂಪನಿಗಳು, ಡೆವಲಪರ್‌ಗಳು, ಶಾಲೆ, ಕಾಲೇಜು, ಆಸ್ಪತ್ರೆಯವರು ಭಾಗಿಯಾಗಿದ್ದಾರೆ. ಖಾಸಗಿ ವ್ಯಕ್ತಿಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳೂ ಕೆರೆ ಒತ್ತುವರಿ ಮಾಡಿಕೊಂಡಿವೆ. ಇದನ್ನು ಪಕ್ಷತೀತವಾಗಿ ತನಿಖೆ ನಡೆಸುವುದಾಗಿ ಸರಕಾರ ಹೇಳಿದೆ. ಆದರೆ ಡಸ್ಟಬೀನ್ ಸೇರದೆ ಇರಲಿ. ಕೆರೆ ನುಂಗಿದವರಿಂದ ನೀರು ಕಕ್ಕಿಸುವ ಕೆಲಸವನ್ನು ಸರಕಾರ ಮಾಡುವಂತಾಗಲಿ.