ತಿರುವನಂತಪುರಂ: ಸಹಕಾರ ಸಂಘಗಳು ಮತ್ತು ಬ್ಯಾಂಕ್ಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ನ ಹೊಸ ಮಾರ್ಗಸೂಚಿಯು ಸಹಕಾರ ಸಂಘಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಕೇರಳದ ಎಲ್ಡಿಎಫ್ ಸರ್ಕಾರವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
ಇತ್ತೀಚಿನ ಆರ್ಬಿಐ ಮಾರ್ಗಸೂಚಿಗಳು ಸಹಕಾರಿ ಸಂಘಗಳು “ಸಹಕಾರಿ ಬ್ಯಾಂಕ್” ಪದವನ್ನು ಬಳಸಬಾರದು ಎಂದು ಒತ್ತಾಯಿಸುತ್ತದೆ. ಕೆಲವು ದಿನಗಳ ಹಿಂದೆ ಹೊರಡಿಸಿದ ಟಿಪ್ಪಣಿಯ ಮೂಲಕ, ಮತದಾನದ ಹಕ್ಕು ಹೊಂದಿರದ ಸದಸ್ಯರಿಂದ ಠೇವಣಿಗಳನ್ನು ತೆಗೆದುಕೊಳ್ಳದಂತೆ ಸಹಕಾರ ಸಂಘಗಳನ್ನು ನಿರ್ಬಂಧಿಸಿದೆ. ಆರ್ಬಿಐನ ಹೊಸ ನಿರ್ಧಾರವು ಸುಮಾರು 1,625 ಪ್ರಾಥಮಿಕ ಸಹಕಾರ ಸಂಘಗಳು ಮತ್ತು ಸಾವಿರಾರು ಇತರ ಸಹಕಾರಿ ಬ್ಯಾಂಕ್ಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಆರ್ಬಿಐ ಕಠಿಣ ಷರತ್ತುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಮತ್ತು ಇತರ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲು ಕೇರಳ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸರ್ಕಾರದ ಪ್ರಕಾರ ಈ ನಿಯಮಗಳು ಸಹಕಾರ ಸಂಘಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂಬುದಾಗಿದೆ.
ಕೇರಳದ ಎಡರಂಗ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮುಂದಿನ ಕ್ರಮಕೈಗೊಳ್ಳಲು ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಮತ್ತು ಸಹಕಾರ ಸಚಿವ ವಿ ಎನ್ ವಾಸವನ್ ಅವರಿಗೆ ಜವಾಬ್ದಾರಿಯನ್ನು ವಹಿಸಿದೆ.
ಕೇರಳದಲ್ಲಿನ ಸಹಕಾರ ಸಂಘಗಳು ಆರ್ಬಿಐನ ಈ ಹೊಸ ಮಾರ್ಗಸೂಚಿಗಳು ರಾಜ್ಯದ ಹಿತಾಸಕ್ತಿಗಳಿಗೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಆರ್ಬಿಐನೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, ಕೇರಳವು ಇತರ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಲಿದೆ. ಇತರ ರಾಜ್ಯಗಳ ಸಹಕಾರ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ವಿಷಯದ ಬಗ್ಗೆ ಕೇರಳದ ಕಳವಳಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲು ನಿಯೋಗವನ್ನು ನವದೆಹಲಿ ತೆರಳಲಿದೆ.
ರಾಜ್ಯಗಳಲ್ಲಿನ ಸಹಕಾರಿ ಕ್ಷೇತ್ರದ ಕಾರ್ಯಚಟುವಟಿಕೆಗೆ ಮಧ್ಯಪ್ರವೇಶಿಸುವ ಕೇಂದ್ರ ಸರ್ಕಾರದ ಕ್ರಮವನ್ನು 97ನೇ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ವಿ ಎನ್ ವಾಸವನ್ ಅವರು ತಿಳಿಸಿದರು.
ಕೇರಳದಲ್ಲಿ 60 ಪ್ರತಿಶತ ಸೇವಾ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಕೇಂದ್ರ ಸರ್ಕಾರವು ಇಂತಹ ಬಲವಾದ ನಕಾರಾತ್ಮಕ ನಿಲುವನ್ನು ತೆಗೆದುಕೊಳ್ಳುತ್ತಿದೆ ಎಂದು ವಾಸವನ್ ಗಮನಸೆಳೆದರು.
ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯ್ದೆಯ ಆಧಾರದ ಮೇಲೆ ಪ್ರಾಥಮಿಕ ಸಹಕಾರ ಸಂಘಗಳನ್ನು ನಿಯಂತ್ರಿಸಲು ಆರ್ಬಿಐ ಕಠಿಣ ನಿಬಂಧನೆಗಳನ್ನು ಹೇರಿತು. ಆದರೆ ಕೇರಳದಲ್ಲಿ ಕಾಯ್ದೆಯ ನಿಬಂಧನೆಗಳು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಇದೀಗ ಕೇಂದ್ರ ಸರ್ಕಾರ ಈ ಮಾರ್ಗಸೂಚಿ ಹೊರಡಿಸುವ ಮೂಲಕ ರಾಜ್ಯದ ಮೇಲೆ ಒತ್ತಡ ಹೇರಲು ಮುಂದಾಗಿದೆ.