ವಿದ್ಯಾರ್ಥಿಗಳಿಗೆ ಏಕರೂಪ ಸಮವಸ್ತ್ರ – ಲಿಂಗ ಸಮಾನತೆಯತ್ತ ಕೇರಳ ಶಾಲೆಗಳು

ಕೋಝಿಕ್ಕೋಡ್ : ಕೇರಳದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಬಲುಸ್ಸೆರಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯು ತನ್ನ 11ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಮಾನವಾದ ಸಮವಸ್ತ್ರವನ್ನು ಜಾರಿಗೊಳಿಸಿ ಲಿಂಗ ತಾರತಮ್ಯಕ್ಕೆ ಬ್ರೇಕ್‌ ಹಾಕುವ ಮೂಲಕ ಗಮನ ಸೆಳೆದಿದೆ.

ಈ ಸರಕಾರಿ ಶಾಲೆಯಲ್ಲಿ 200ಕ್ಕೂ ಅಧಿಕ ಬಾಲಕಿಯರು ಹಾಗೂ 60 ಹುಡುಗರು ಬುಧವಾರದಿಂದ ನೀಲಿಬಣ್ಣದ ಪ್ಯಾಂಟ್ ಹಾಗೂ ಪಟ್ಟಿಗಳಿರುವ ಬಿಳಿ ಶರ್ಟ್‌ಗಳನ್ನು ಧರಿಸುತ್ತಿದ್ದಾರೆ. ಸಮಾನವಾದ ಸಮವಸ್ತ್ರಕ್ಕೆ ಸಂತಸ ವ್ಯಕ್ತ ಪಡಿಸಿರುವ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿ, ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ವಿದ್ಯಾಲಯದಲ್ಲಿ ಬಾಲಕಿಯರು ಸಲ್ವಾರ್-ಕಮೀಝ್ ಅಥವಾ ಸ್ಕರ್ಟ್ ಹಾಗೂ ಶರ್ಟ್ ಅನ್ನು ಸಮವಸ್ತ್ರವಾಗಿ ಧರಿಸುತ್ತಿದ್ದರು.

ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯೊಂದು ಲಿಂಗಭೇದವಿಲ್ಲದೆ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿರುವುದು ಇದೇ ಮೊದಲ ಸಲವಾಗಿದೆ. ಈ ಮೊದಲು ಕೇರಳದ ಕೆಲವು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಮಾನಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿತ್ತು.
ಎರ್ನಾಕುಲಂ ಸಮೀಪದ ವಲಯನ್ಚಿರಂಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ರಾಜ್ಯದಲ್ಲಿ ತನ್ನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮಾನ ಸಮವಸ್ತ್ರವನ್ನು ಜಾರಿಗೆ ತಂದ ಕೇರಳದ ಪ್ರಪ್ರಥಮ ಸರಕಾರಿ ಶಾಲೆಯಾಗಿದೆ.

ಅನೇಕ ಮಹಿಳಾ ಸಂಘಟನೆಗಳು ಹೊಸ ಉಪಕ್ರಮವನ್ನು ಶ್ಲಾಘಿಸಿವೆ ಮತ್ತು ಇದು ಲಿಂಗ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಆದರೆ ಕೆಲವೊಂದು ಮತೀಯ ಸಂಘಟನೆಗಳು ವಿರೋಧಿಸುತ್ತಿವೆ. ಸಣ್ಣ ಸಣ್ಣ ಪ್ರತಿಭಟನೆಗಳನ್ನು ನಡೆಸುತ್ತಿವೆ.

ಶಾಲೆಯ ಹೊಸ ಲಿಂಗ ತಟಸ್ಥ ಸಮವಸ್ತ್ರವನ್ನು ಉದ್ಘಾಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವೆ ಪ್ರೊ.ಆರ್.ಬಿಂದು, ‘ಅಂತಹ ಕ್ರಮಗಳನ್ನು ವಿರೋಧಿಸುವವರು ಕೇರಳ ಮತ್ತು ಅದರ ಭವಿಷ್ಯದ ಪೀಳಿಗೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ‘ಲಿಂಗ ನ್ಯಾಯ ಮತ್ತು ಸಮಾನತೆಯ ಯುಗಕ್ಕೆ ಜಗತ್ತು ನಾಂದಿ ಹಾಡುತ್ತಿರುವ ಈ ಸಮಯದಲ್ಲಿ ಬಾಲುಸ್ಸೆರಿ ಸರಕಾರಿ ಬಾಲಕಿಯರ ಶಾಲೆ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಶಾಲೆಯ ಹೊಸ ಯುನಿಸೆಕ್ಸ್ ಸಮವಸ್ತ್ರವನ್ನು ಅಧಿಕೃತವಾಗಿ ಉದ್ಘಾಟಿಸಿರುವುದು ನನಗೆ ಸಂತೋಷ ತಂದಿದೆ, ಇದನ್ನು ವಿದ್ಯಾರ್ಥಿಗಳು ಬಹಿರಂಗವಾಗಿ ಸ್ವಾಗತಿಸಿದ್ದಾರೆ. ಎಂದು ಅವರು ತಿಳಿಸಿದರು.

ಯುನಿಸೆಕ್ಸ್ ಡ್ರೆಸ್‌ನೊಂದಿಗೆ ವಿದ್ಯಾರ್ಥಿನೀಯರು ಆರಾಮದಾಯಕವಾಗಿದ್ದಾರೆ ಎಂದು ವಿಜಿ ಪಲೋತ್ತೋಡಿ ಹೇಳಿದ್ದಾರೆ. “ಇದು ಸ್ವಾಗತಾರ್ಹ ಉಪಕ್ರಮವಾಗಿದೆ ಮತ್ತು ಹೆಣ್ಣು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆರ್ಥೊಡಾಕ್ಸ್ ವಿಭಾಗಗಳಿಗೆ ಷರತ್ತುಗಳನ್ನು ನಿರ್ದೇಶಿಸುವ ಹಕ್ಕಿಲ್ಲ, ”ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ವಿಜಿ ಪಲೋತ್ತೋಡಿ ಹೇಳಿದರು

ಲಿಂಗ ಸಮಾನತೆ ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿರಬೇಕು. ಸ್ಕರ್ಟ್ ಧರಿಸುವಾಗ ಹುಡುಗಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೌಚಾಲಯಕ್ಕೆ ಹೋಗುವಾಗ ಮತ್ತು ಆಟವಾಡುವಾಗ ತೊಂದರೆಗಳು ಉಂಟಾಗುತ್ತವೆ. ಈ ಸಮಾನತೆಯ ಸಮವಸ್ತ್ರ ನಮಗೆ ವಿಶ್ವಾಸ ತುಂಬಿದೆ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *