ಕೇರಳ ಸಚಿವರ ಭಾಷಣ: ಇದು ದೇಶದ್ರೋಹವೇ?

ಮೂಲ: ದಿ ಹಿಂದು ಅಕ್ಟೋಬರ್ 27, ಅನು: ಟಿ.ಸುರೇಂದ್ರರಾವ್

ಕೇರಳ ಸರ್ಕಾರದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಮಾಡಿದ ಭಾಷಣವು ‘ದೇಶದ್ರೋಹಿ’ಯಾಗಿದೆ, ಆದ್ದರಿಂದ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೇಳಿದ್ದಾರೆ. ಆ ಭಾಷಣವನ್ನು ಸಚಿವರು ಅಕ್ಟೋಬರ್ 19ರಂದು ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಮಾಡಿದ್ದರು. ರಾಜ್ಯಪಾಲರು ‘ದೇಶದ್ರೋಹಿ’ ಎಂದು ಆರೋಪಿಸಿದ ಆ ಭಾಷಣದ ಭಾಗಗಳನ್ನು ‘ದಿ ಹಿಂದು’ (ಅಕ್ಟೋಬರ್ 27) ಪ್ರಕಟಿಸಿದೆ. ಅದನ್ನು ಕೆಳಗೆ ಕೊಡಲಾಗಿದೆ. ಅದನ್ನು ಪರಿಶೀಲಿಸಿದರೆ ರಾಜ್ಯಪಾಲರ ಆರೋಪವು ಎಷ್ಟು ಅಸಂಬದ್ಧವಾದದ್ದು ಎನ್ನುವುದನ್ನು ತಿಳಿಯಬಹುದು.

“ಶಿಕ್ಷಣದ ಪ್ರಜಾಪ್ರಭುತ್ವೀಕರಣದಿಂದ ಕೇರಳವು ಬಹಳಷ್ಟು ಪ್ರಯೋಜನ ಪಡೆದುಕೊಂಡಿದೆ. ಒಬ್ಬ ವಿದ್ಯಾರ್ಥಿಯಾಗಿ ನಾನು ಪಡೆದ ಅನುಭವವು ಬಹುತೇಕ ಕೇರಳ ವಿಶ್ವವಿದ್ಯಾಲಯದಿಂದ ಗಳಿಸಿದ್ದು. ನಾನು ರಾಜ್ಯಸಭಾ ಸದಸ್ಯನಾಗಿದ್ದಾಗ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಹಾಗೂ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಗಳ ಸೆನೆಟ್ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತ್ತು. ಮತ್ತು ಒಬ್ಬ ವಿದ್ಯಾರ್ಥಿ ಕಾರ್ಯಕರ್ತನಾಗಿ ಈ ನಮ್ಮ ದೇಶದ ಬಹುತೇಕ ಎಲ್ಲಾ ವಿಶ್ವವಿದಾಲಯಗಳನ್ನು ಭೇಟಿ ಮಾಡಿದ್ದೇನೆ.

“ನನಗೆ ಒಂದು ನಿರ್ದಿಷ್ಟ ಘಟನೆ ನೆನಪಾಗುತ್ತಿದೆ. ಮಿಡ್ನಾಪುರದಲ್ಲಿ ನಡೆದ ಎಸ್.ಎಫ್.ಐ.ನ ರಾಷ್ಟ್ರೀಯ ಸಮ್ಮೇಳನದಲ್ಲಿ ನಾನು ಅಖಿಲ ಭಾರತ ಅಧ್ಯಕ್ಷನಾಗಿ ಚುನಾಯಿತನಾಗಿದ್ದೆ. ಸಮ್ಮೇಳನ ಮುಗಿದ ಕೆಲವೇ ದಿನಗಳಲ್ಲಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಐದು ವಿದ್ಯಾರ್ಥಿಗಳು ಗೋಲಿಬಾರಿನಿಂದ ಹತ್ಯಗೊಳಗಾಗಿದ್ದರಿಂದ ಅಲ್ಲಿಗೆ ಹೋಗಬೇಕಾಗಿ ಬಂತು. ಅಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಅಲ್ಲಿ ವಿದ್ಯಾರ್ಥಿಗಳನ್ನು ಕೊಂದವರಾರು ಎಂದು ನಿಮಗೆ ಗೊತ್ತಾ? ಉಪಕುಲಪತಿಗಳ ಭದ್ರತಾ ಪಡೆಯವರು ಗೋಲಿಬಾರ್ ಮಾಡಿದ್ದರು. ಉತ್ತರ ಪ್ರದೇಶದಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ 50-60 ಭದ್ರತಾ ಪಡೆಯವರಿದ್ದರು. ಇದೇ ಪರಿಸ್ಥಿತಿ ಹಲವಾರು ಇತರ ವಿಶ್ವವಿದ್ಯಾಲಯಗಳಲ್ಲಿಯೂ ಇದೆ.

“ಆದ್ದರಿಂದ, ಅಂತಹ ರಾಜ್ಯಗಳಿಂದ ಬಂದಂಥವರಿಗೆ ಕೇರಳ ವಿಶ್ವವಿದ್ಯಾಲಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಸರಿ! ಕೇರಳದ ವಿಶ್ವವಿದ್ಯಾಲಯಗಳು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಷಯಗಳನ್ನು ಎಲ್ಲಾ ವಿಭಾಗಗಳ ಜನರನ್ನೂ ಒಳಗೊಂಡು ಚರ್ಚಿಸಲಾಗುತ್ತದೆ. ಈ ವಿಶ್ವವಿದ್ಯಾಲಯಗಳು ಕೇರಳ ಸಮಾಜದಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗಿವೆ. ಈ ಜನಸಮುದಾಯದ ಸಂಸ್ಥೆಗಳ ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಳ್ಳಲು ಮತ್ತು ಶಿಕ್ಷಣವನ್ನು, ಶೈಕ್ಷಣಿಕ ಸಂರಚನೆಯನ್ನು ಬಲಪಡಿಸಲು, ಮತ್ತು ಕೇರಳದ ಶಿಕ್ಷಣದಲ್ಲಿ ಜನರನ್ನು ಒಳಗೊಳ್ಳುವ ಪ್ರಯತ್ನಗಳು ಆಗಬೇಕಿದೆ. ಕೇರಳದ ಶಿಕ್ಷಣವು ದೇಶದ ಬೇರೆಲ್ಲಾ ಪ್ರದೇಶಗಳಿಗಿಂತ ಹೆಚ್ಚು ಸಾರ್ವಜನಿಕ ರಂಗದಲ್ಲಿ ಅಭಿವೃದ್ಧಿಗೊಂಡಿದೆ ಮತ್ತು ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ ಕೂಡ. ಇದಕ್ಕಾಗಿ, ನಮ್ಮ ಸೆನೆಟ್‌ಗಳನ್ನು ಹಾಗೂ ಅಕಾಡೆಮಿಕ್ ಕೌನ್ಸಿಲ್‌ಗಳನ್ನು ಬಲಪಡಿಸಬೇಕಿದೆ. ದೇಶದ ಜನರು ಕೂಡ ಈ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ.”

ಇದು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದ ಭಾಗಗಳು. ಇದರಲ್ಲಿ ದೇಶದ್ರೋಹದ ಯಾವುದಾದರೂ ಪದಗಳಿದ್ದರೆ ಯಾರೂ ಕೂಡ ಆಕ್ಷೇಪಣೆ ಎತ್ತಬಹುದು.

ಪ್ರಾಯಶಃ ಉತ್ತರದ ರಾಜ್ಯಗಳಿಗಿಂತ ದಕ್ಷಿಣದ ರಾಜ್ಯವಾದ ಕೇರಳವು ಅಭಿವೃದ್ಧಿ ಸೂಚ್ಯಾಂಕದಲ್ಲಿ ಉನ್ನತ ಸ್ಥಾನ ತಲುಪಿದೆ ಎಂಬ ಸಂಗತಿಯನ್ನು ಸಹಿಸಲಾಗದ ಕೇರಳದ ರಾಜ್ಯಪಾಲರು ಈ ಭಾಷಣದಲ್ಲಿ ‘ದೇಶದ್ರೋಹ’ದ ಕಳಂಕವನ್ನು ಕಂಡಿರಬಹುದೆ? ಅಥವಾ ಸಂವಿಧಾನದಲ್ಲಿ ನಮಗೆ ನಾವೇ ಕೊಟ್ಟುಕೊಂಡಿರುವ ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಕಟ್ಟಕಡೆಯ ಪ್ರಜೆಗಳಿಗೂ ತಲುಪಿಸಿರುವ ಕೇರಳದ ಸಾಧನೆಯು ಅವರಿಗೆ ವಿಪರೀತ ಎಂದು ಕಂಡಿರಬಹುದೆ?

ಅಥವಾ, ಕೇಂದ್ರದ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ವು ವಿಶ್ವವಿದ್ಯಾಲಯ ಉಪಕುಲಪತಿಗಳ ನೇಮಕಾತಿಯ ವಿಷಯದಲ್ಲಿ ವಿಧಿಸಿರುವ ನಿಯಮಗಳನ್ನು ಕೇರಳ ರಾಜ್ಯ ವಿಧಾನ ಸಭೆಯು ರದ್ದುಮಾಡಿ, ರಾಜ್ಯ ಸರ್ಕಾರವೇ ನೇಮಕಾತಿ ನಿಯಮಗಳನ್ನು ಮಾಡಬೇಕೆಂಬ ಮಸೂದೆಯನ್ನು ಕಳೆದ ಸೆಪ್ಟೆಂಬರಿನಲ್ಲಿ ಅಂಗೀಕರಿಸಿದ ವಿಷಯವು ರಾಜ್ಯಪಾಲರ ಕೋಪಕ್ಕೆ ಕಾರಣವಾಗಿದೆಯೇ? ಉಪಕುಲಪತಿಗಳ ನೇಮಕಾತಿಯ ತನಗೆ ಇದ್ದ ನೇಮಕಾತಿ ಅಧಿಕಾರವನ್ನು ಕೇರಳದ ವಿಧಾನ ಸಭೆಯಲ್ಲಿ ಅಂಗೀಕೃತವಾದ ಮಸೂದೆಯು ಕಿತ್ತುಹಾಕಿರುವ ಸಂಗತಿಯು ರಾಜ್ಯಪಾಲರನ್ನು ಹಲ್ಲುಕಿತ್ತ ಹಾವಿನಂತಾಗಿಸಿದೆ. ಈ ಕಾರಣಕ್ಕಾಗಿ, ಬಹುಶಃ ಅವರು ಇಲ್ಲಿಯವರೆಗೂ ಆ ಮಸೂದೆಗೆ ಸಹಿ ಮಾಡಿಲ್ಲ. ರಾಜ್ಯಪಾಲರ ಈ ವರ್ತನೆಯು ಕೇರಳದ ಪ್ರಜಾಸತ್ತಾತ್ಮಕ ಮನಸ್ಸುಗಳನ್ನು ಈಗಾಗಲೇ ಕೆರಳಿಸಿದೆ. ಈ ಹಲ್ಲುಕಿತ್ತ ಸರ್ಪ ಬುಸುಗುಡುತ್ತಾ ಯಾವಯಾವುದೋ ವಿಷಯಗಳ ಬಗ್ಗೆ ತನ್ನ ಕೋಪ ಕಾರುತ್ತಿರಬಹುದೆ ಎಂಬ ಶಂಕೆ ಕೇರಳದ ಜನರಿಗೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ವರ್ತನೆಯನ್ನು ಖಂಡಿಸಿ ನವಂಬರ್ 15ರಂದು ಕೇರಳದಲ್ಲಿ ರಾಜ್ಯವ್ಯಾಪೀ ಭಾರಿ ಪ್ರತಿಭಟನೆಯನ್ನು ಎಡರಂಗವು ಆಯೋಜಿಸಿದೆ.

Donate Janashakthi Media

Leave a Reply

Your email address will not be published. Required fields are marked *