ಹೆಚ್ಚಾಗುತ್ತಿರುವ ಮಂಕಿಪಾಕ್ಸ್ ಭೀತಿ; ರಾಜ್ಯದಲ್ಲೂ ಮುನ್ನಚ್ಚರಿಕೆ

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಮಂಕಿಪಾಕ್ಸ್ ರೋಗದ ಎರಡನೇ ಪ್ರಕರಣ ದಾಖಲಾಗಿದೆ. ಕಣ್ಣೂರಿನಲ್ಲಿ ಆರೋಗ್ಯ ಅಧಿಕಾರಿಗಳು ಎರಡನೇ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತ್ರಿಶೂರ್‌ನ ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ.ನರೇಶ್ ಪುರೋಹಿತ್ ಈ ವಿಷಯಗಳನ್ನು ತಿಳಿಸಿದ್ದಾರೆ.

ಜುಲೈ 14ರಂದು ಕೇರಳದ ಕೊಲ್ಲಂನಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ದಾಖಲಾಗಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವ್ಯಕ್ತಿಯೊಬ್ಬ ಮಂಕಿಪಾಕ್ಸ್ ಬಳಲುತ್ತಿರುವುದು ಕಂಡುಬಂದಿತ್ತು. ಈ ವಿಷಯದ ಬಗ್ಗೆ ಮಾತನಾಡಿರುವ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಪುರೋಹಿತ್, ಮಂಕಿಪಾಕ್ಸ್ ಹೆಚ್ಚಾಗಿ ಸ್ವಯಂ-ಸೀಮಿತಗೊಳಿಸುವ ಕಾಯಿಲೆಯಾಗಿದೆ, ರೋಗಿಯ ಆರೋಗ್ಯದ ಮೇಲೆ ದೀರ್ಘಕಾಲೀನ ಹಾನಿಕಾರಕ ಪರಿಣಾಮಗಳನ್ನು ಬೀರುವುದಿಲ್ಲ ಎಂದಿದ್ದಾರೆ.

ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವ ಹೆಚ್ಚಿನ ಮಕ್ಕಳು ಮತ್ತು ವಯಸ್ಕರು ಸೋಂಕಿಗೆ ಒಳಗಾಗಿದ್ದರೂ ಸಹ ಗಂಭೀರವಾದ ಅನಾರೋಗ್ಯವನ್ನು ಅನುಭವಿಸುವುದಿಲ್ಲ. ಮೇ ತಿಂಗಳ ಆರಂಭದಿಂದ ಜಗತ್ತಿನಾದ್ಯಂತ ಮಂಕಿಫಾಕ್ಸ್‌ ಕಾಯಿಲೆ ವೇಗವಾಗಿ ಹರಡುತ್ತಿದೆ. ಇದು ವಿಶೇಷವಾಗಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರಲ್ಲಿ ಹರಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಯುರೋಪ್, ಅಮೆರಿಕಾ, ಆಫ್ರಿಕಾ, ಪಶ್ಚಿಮ ಪೆಸಿಫಿಕ್ ಮತ್ತು ಪೂರ್ವ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ ಈ ರೀತಿಯ ಕಾಯಿಲೆ ಮೊದಲು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಈ ರೋಗವು ಸಾಮಾನ್ಯವಾಗಿ ಕಂಡುಬರದ ಸ್ಥಳಗಳನ್ನು ಒಳಗೊಂಡಂತೆ ಬಹು-ದೇಶದಲ್ಲಿ ಏಕಾಏಕಿ ಪ್ರಸ್ತುತ ಕಾಣಿಸಿಕೊಳ್ಳಲಾರಂಭಿಸಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿಯೂ ಕಟ್ಟೆಚ್ಚರ

ಕೇರಳದಲ್ಲಿ ದೇಶದ ಎರಡನೇ ಮಂಕಿಪಾಕ್ಸ್ ಪ್ರಕರಣ ವರದಿಯಾದ ಬೆನ್ನಲ್ಲೇ ಮೈಸೂರು ಮತ್ತು ಮಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಯೊಳಗೆ ಪ್ರವೇಶಿಸುವ ಜನರ ಮೇಲೆ ತೀವ್ರ ನಿಗಾ ಇರಿಸುತ್ತಿದ್ದಾರೆ.

ಮಂಕಿಪಾಕ್ಸ್ ರೋಗಿಯ ಜೊತೆ ಸಹ ಪ್ರಯಾಣಿಕರು ಮಂಗಳೂರಿಗೆ ಬಂದಿದ್ದು ನಿನ್ನೆ(ಜುಲೈ 18) ಎರಡನೇ ಪ್ರಕರಣ ವರದಿಯಾದ ಕೂಡಲೇ ಸಹ ಪ್ರಯಾಣಿಕರನ್ನು ಮಂಗಳೂರು ಆರೋಗ್ಯಾಧಿಕಾರಿಗಳು ಪತ್ತೆಹಚ್ಚಿ ಮನೆ ಆರೈಕೆಯಲ್ಲಿ ಇರಿಸಿದ್ದಾರೆ.

ಸೋಂಕಿತ ವ್ಯಕ್ತಿಯು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಜುಲೈ 13ರಂದು ಬಂದಿದ್ದನು. ದಕ್ಷಿಣ ಕನ್ನಡ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ ರಾಜೇಶ್, ಪ್ರಯಾಣಿಕನನ್ನು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ತಪಾಸಣೆ ನಡೆಸಲಾಗಿತ್ತು ಆಗ ನೆಗೆಟಿವ್ ವರದಿ ಬಂದಿತ್ತು. ಅವರು ಕೇರಳದ ಕಣ್ಣೂರಿಗೆ ಹೋದ ಮೇಲೆ ಅಲ್ಲಿ ಮಂಕಿಪಾಕ್ಸ್ ನ ಲಕ್ಷಣಗಳು ಗೋಚರವಾಗಿದೆ ಎಂದರು.

ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ ಟಿ ರವಿಕುಮಾರ್ ನೇತೃತ್ವದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೇರಳದಿಂದ ಬಾವಲಿ ಚೆಕ್ ಪೋಸ್ಟ್ ಗೆ ಪ್ರವೇಶಿಸುವವರ ತಪಾಸಣೆ ಸರಿಯಾಗಿ ಮಾಡಲಾಗುತ್ತಿದೆಯೇ ಎಂದು ಉಸ್ತುವಾರಿ ನಡೆಸುತ್ತಿದ್ದಾರೆ. ಕೇರಳದಲ್ಲಿ ವರದಿಯಾದ ಮೊದಲ ಪ್ರಕರಣ 37 ವರ್ಷದ ವ್ಯಕ್ತಿಯು ಕರ್ನಾಟಕ ಗಡಿಭಾಗಕ್ಕೆ ಹತ್ತಿರದಲ್ಲಿ ವಾಸಿಸುತ್ತಿದ್ದಾರೆ. ಕೇರಳದಲ್ಲಿ ವಾಹನದಲ್ಲಿ ಪ್ರವೇಶಿಸುವವರ ಮೇಲೆ ಕೂಡ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದರು.

ಈ ಮಧ್ಯೆ, ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ಹೇಗೆ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಿದೆ. ವೈರಸ್ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ಅಲ್ಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸಭೆಯಲ್ಲಿ ವಿಮಾನ ನಿಲ್ದಾಣ ಮತ್ತು ಬಂದರು ಆರೋಗ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ನಿರ್ದೇಶಕರು ಭಾಗವಹಿಸಿದ್ದರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *