ದಲಿತ ಪ್ರತಿಭೆಗಳನ್ನು ಮೊಟಕುಗೊಳಿಸುವ ಮೇಲ್ಜಾತಿ ವರ್ಗ

ಪಿಎಚ್‌ಡಿ ಪದವೀಧರೆಯಾದ ದಲಿತ ಸಮುದಾಯದ ರೇಖಾ ರಾಜ್ ಅವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್)ಯಲ್ಲಿ ಪಾಸಾಗಿದ್ದರು. ಗರಿಷ್ಠ ಅಂಕಗಳನ್ನು ಗಳಿಸಿ ಕೊಟ್ಟಾಯಂನ ‘ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ’ದ ಸಹಾಯಕ ಅಧ್ಯಾಪಕರು ಹುದ್ದೆಗೆ ಆಯ್ಕೆಯಾಗಿದ್ದರು ಆದರೆ ಅವರ ಸ್ಥಾನದಲ್ಲಿ ಬದಲಿಯವರ ಹೆಸರನ್ನು ಸೇರಿಸಲಾಗಿದೆ ಎಂದು ಚಿಂತಕ ಶ್ರೀಪಾದ್‌ ಭಟ್‌ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಕೆಲ ತಾಂತ್ರಿಕ ಕಾರಣ(ಇದೂ ಸಹ ಸಿಂಧುವಲ್ಲ)ಗಳನ್ನು ಮುಂದು ಮಾಡಿ ಎರಡನೇ ಸ್ಥಾನದಲ್ಲಿರುವ ಮೇಲ್ಜಾತಿಯ ನಿಶಾ ವೇಲಪ್ಪನ್ ನಾಯರ್ ಕೇರಳ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟು ಕೇವಲ ಒಂದು ಆಯಾಮವನ್ನು ಮಾತ್ರ(ಪಿ.ಎಚ್.ಡಿ. ಪಡೆದ ಮೇಲೆ ನೆಟ್ ಪರಿಗಣಿಸಬೇಕೋ, ಬೇಡವೋ ಅಂತ. ಇಲ್ಲಿ ರೇಖಾ ಎರಡರಲ್ಲಿಯೂ ತೇರ್ಗಡೆಯಾಗಿದ್ದರು, ನಾಯರ್ ನೆಟ್ ತೇರ್ಗಡೆಯಾಗಿರಲಿಲ್ಲ) ಪರಿಗಣಿಸಿ ಮತ್ತು ರೇಖಾ ಅವರು ತಮ್ಮ ಸಂಶೋಧನಾ ಪ್ರಕಟಣೆಗಳನ್ನು ಸಲ್ಲಿಸುವಲ್ಲಿ ನಿಯಮ ಪಾಲಿಸಲಿಲ್ಲ ಎಂದು ನೆಪವೊಡ್ಡಿ, ನೆಟ್ ಪಾಸಾಗದೆ ಕೇವಲ ಪಿಎಚ್‌ಡಿ ಪಾಸಾಗಿದ್ದ ನಿಶಾ ನಾಯರ್ ಗೆ ಆರು ಅಂಕಗಳನ್ನು ಹೆಚ್ಚು ಕೊಡಲು ಮತ್ತು ನೆಟ್ ಹಾಗೂ ಪಿಎಚ್‌ಡಿ ಎರಡರಲ್ಲೂ ತೇರ್ಗಡೆಯಾಗಿರುವ ರೇಖಾ ರಾಜ್ ಅವರಿಗೆ ಐದು ಅಂಕ ಕಡಿತಗೊಳಿಸಲು ಸೂಚಿಸಲಾಯಿತು ಮತ್ತು ಆಯ್ಕೆಯಾಗಿದ್ದ ರೇಖಾ ಸ್ಥಾನದಲ್ಲಿ ನಾಯರ್ ಅವರನ್ನು ನೇಮಕಾತಿ ಮಾಡಲು ಆದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಇಂತಹ ವಂಚನೆಗೆ ಮುಖ್ಯ ಕಾರಣವೆಂದರೆ ದಲಿತ ಸಮುದಾಯದ ರೇಖಾ ಅವರು ಸಾಮಾನ್ಯ ಕೆಟಗರಿಯಲ್ಲಿ ಆಯ್ಕೆಯಾಗಿದ್ದರು.  ಈ ಶೇ. 50 ಪ್ರಮಾಣದ ಸಾಮಾನ್ಯ ಕೆಟಗರಿಯನ್ನು ‘ಬ್ರಾಹ್ಮಣರು, ಮೇಲ್ಜಾತಿ, ಪ್ರಬಲ ಜಾತಿಗಳ ಅಗ್ರಹಾರದ ಸ್ವತ್ತು’ ಎಂಬಂತೆ ವರ್ತಿಸಲಾಗುತ್ತಿದ್ದು, ಇದರಲ್ಲಿ ದಲಿತರಿಗೆ ಪ್ರವೇಶವಿಲ್ಲ ಎನ್ನುವ ಧೋರಣೆ ಹೊಂದಿದ್ದಾರೆ. ಈ ಘಟನಾವಳಿಯ ಕುರಿತು ʻದಿ ವೈರ್‌ʼ ಅಂತರ್ಜಾಲ ತಾಣ ವಿವರವಾದ ವರದಿಯೊಂದನ್ನು ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.

ಮುಂಚೆ ಬ್ರಾಹ್ಮಣರ ಅಗ್ರಹಾರಗಳಿಗೆ ದಲಿತರ ಪ್ರವೇಶ ನಿರಾಕರಿಸಿದ ಮನಸ್ಸುಗಳು ಇಂದು ಸಾಮಾನ್ಯ ಕೆಟಗರಿಯಲ್ಲಿ ತೇರ್ಗಡೆಯಾಗುವ ದಲಿತರಿಗೆ ಅವಕಾಶ ನಿರಾಕರಿಸುವ ಪಿತೂರಿ ನಡೆಯುತ್ತಿದೆ. ರೇಖಾ ರಾಜ್‌ ಅವರನ್ನು ಒಳಗೊಂಡಂತೆ ಅನೇಕ ದಲಿತ ವಿದ್ಯಾರ್ಥಿಗಳು/ ಅಭ್ಯರ್ಥಿಗಳು ಸಾಮಾನ್ಯ ಕೆಟಗರಿ ಮೂಲಕ ಆಯ್ಕೆಯಾಗುತ್ತಿರುವುದು ಪ್ರಬಲ ಜಾತಿಯವರಿಗೆ ಹೊಟ್ಟೆ ತೊಳಸಿದಂತಾಗಿದೆ. ಅಂಬೇಡ್ಕರ್ ಅವರ ಶೋಷಿತರ ಆತ್ಮಗೌರವದ ಹೋರಾಟ ಕೇವಲ ಅಸ್ಪ್ರಶ್ಯತೆ ನಿವಾರಣೆಗೆ ಮಾತ್ರ ಸೀಮಿತವಾಗಿರಲಿಲ್ಲ.  ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯವೂ ಬಾಬಾಸಾಹೇಬರ ಸಾಮಾಜಿಕ ನ್ಯಾಯದ ಮುಖ್ಯ ಗುರಿಯಾಗಿತ್ತು. ಸಮಾಜೋ-ಆರ್ಥಿಕ ಚಲನಶೀಲತೆ ಸಾಧಿಸುವುದು ಈ ಮೇಲ್ಮಖ ಚಲನೆಯ ಮುಂದುವರಿಕೆಯಾಗಿತ್ತು. ಆದರೆ ಪ್ರಸಕ್ತ ಸಂದರ್ಭದಲ್ಲಿ ದಲಿತರಿಗೆ ಸಿಗುತ್ತಿರುವ ಅವಕಾಶಗಳನ್ನು ತಪ್ಪಿಸುವ ಉದ್ದೇಶ ಹೊಂದಿರುವ ಮೇಲ್ಜಾತಿ ವರ್ಗದ ಜನತೆ ದಲಿತರು ಉನ್ನತ ಹುದ್ದೆಗಳಿಗೆ ಏರದಂತೆ ಮಾಡಲಾಗುತ್ತಿದೆ ಎಂದಿದ್ದಾರೆ.

ಶೋಷಿತ ಸಮುದಾಯದವರ ಈ ಸಮಗ್ರ ಮೇಲ್ಮಖ ಚಲನೆಗೆ ಆರಂಭಿಕ ಅಸ್ಪ್ರಶ್ಯತೆ ಹಂತದಲ್ಲಿ ನಂತರ ಪ್ರಾತಿನಿದ್ಯದ ಹಂತದಲ್ಲಿ, ಅಲ್ಲಿಯೂ ದಾಟಿ ಬಂದರೆ ಈ ಸಮಾಜೋ-ಆರ್ಥಿಕ ಮೇಲ್ಮಖ ಚಲನೆಗೆ ಅಡ್ಡಿಯೊಡ್ಡುತ್ತಾರೆ. ರೇಖಾ ರಾಜ್ ಪ್ರಕರಣ ಇತ್ತೀಚಿನ ಉದಾಹರಣೆ ಮಾತ್ರ. ಸಾಮಾಜಿಕ ಸಂಘಟನೆಗಳ ಮೇಲೆ ತುಂಬಾ ಜವಾಬ್ದಾರಿಯಿದೆ. ಈಗಾಗಲೇ ಜಾರಿಯಲ್ಲಿರುವ ಇಡಬ್ಲ್ಯೂಎಸ್‌ ಶೇ. 10ರ ಕಾಯಿದೆಯ ಉದ್ದೇಶವೂ ಸಹ ಇದೇ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *