ಎಲ್.ಡಿ.ಎಫ್. ಸಂಪುಟದಲ್ಲಿ ಮೂವರು ಮಹಿಳೆಯರು, 17 ಹೊಸ ಮುಖಗಳು

ಸಂಪುಟಲ್ಲಿ ಶೈಲಜಾ ಟೀಚರ್‌ ಇಲ್ಲದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ

ತಿರುವನಂತಪುರಂ: ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎಲ್.ಡಿ.ಎಫ್. ನ ಮಂತ್ರಿಮಂಡಲ ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ 21 ಸದಸ್ಯರಿರುವ ಈ ಮಂತ್ರಿಮಂಡಲದಲ್ಲಿ 17 ಹೊಸ ಮುಖಗಳಿವೆ ಎಂಬುದು ಈ ಸಂಪುಟದ ವೈಶಿಷ್ಟ್ಯ.

ಮೊತ್ತ ಮೊದಲ ಬಾರಿಗೆ ಮೂರು ಮಹಿಳಾ ಮಂತ್ರಿಗಳನ್ನು ಹೊಂದಿರುವುದು ಈ ಸಂಪುಟದ ಇನ್ನೊಂದು ವೈಶಿಷ್ಟ್ಯ. ಹಿಂದಿನ ಎಲ್‌ಡಿಎಫ್ ಸಂಪುಟದಲ್ಲಿ ಇಬ್ಬರು ಮಹಿಳಾ ಸದಸ್ಯರಿದ್ದರು. ಈ ಬಾರಿ ಇರುವ ಮೂವರು ಮಹಿಳೆಯರಲ್ಲಿ ಇಬ್ಬರು, ಪ್ರೊ..ಆರ್.ಬಿಂದು ಮತ್ತು ವೀಣಾ ಜಾರ್ಜ್ ಸಿಪಿಐ(ಎಂ)ನಿಂದ ಹಾಗೂ ಜೆ. ಚಿಂಚು ರಾಣಿ ಸಿಪಿಐ ನಿಂದ ಆರಿಸಿ ಬಂದವರು.

ಈಗಾಗಲೇ ವರದಿಯಾಗಿರುವಂತೆ ಈ ಸಂಪುಟದ ಸಿಪಿಐ(ಎಂ)ನ 12 ಸದಸ್ಯರಲ್ಲಿ ಮುಖ್ಯಮಂತ್ರಿಗಳನ್ನು ಬಿಟ್ಟು ಉಳಿದವರೆಲ್ಲರೂ ಹೊಸಬರು. ಹೊಸಬರಿಗೆ ಹೊಣೆಗಾರಿಕೆಗಳನ್ನು ಕೊಡಲಿಕ್ಕಾಗಿ ಮುಖ್ಯಮಂತ್ರಿಗಳನ್ನು ಬಿಟ್ಟು ಹಿಂದಿನ ಸಂಪುಟದಲ್ಲಿದ್ದ ಇತರ ಎಲ್ಲ ಸಿಪಿಐ(ಎಂ) ಮಂತ್ರಿಗಳನ್ನು ಈ ಸಂಪುಟದಲ್ಲಿ ಕೈಬಿಡಲು, ಸಿಪಿಐ(ಎಂ) ರಾಜ್ಯ ಸಮಿತಿ ಒಮ್ಮತದಿಂದ ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ಮೊದಲು, ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿಯೂ ರಾಜ್ಯ ಸಮಿತಿ ಹೊಸಬರಿಗೆ ಹೆಚ್ಚಿನ ಅವಕಾಶ ಕೊಡುವ ಸೂತ್ರವನ್ನು ಅವಲಂಬಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಸಿಪಿಐ(ಎಂ) ಕೈಬಿಡಲು ನಿರ್ಧರಿಸಿದವರಲ್ಲಿ, ಕೊವಿಡ್ ವಿರುದ್ಧ ಸಮರದಲ್ಲಿ ಆರೋಗ್ಯ ಮಂತ್ರಿಯಾಗಿ ಬಹುಮುಖ್ಯ ಪಾತ್ರ ವಹಿಸಿ ದೇಶ-ವಿದೇಶಗಳಲ್ಲೂ ಪ್ರಶಂಸೆ ಗಳಿಸಿರುವ ಕೆ.ಕೆ.ಶೈಲಜಾ ಟೀಚರ್ ಹೆಸರು ಕೂಡ ಸೇರಿರುವುದಕ್ಕೆ ದೇಶಾದ್ಯಂತ ವಿವಿಧ ಪ್ರತಿಕ್ರಿಯೆಗಳು ಬಂದಿವೆ.

ಈ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ “ನಾನು ಮಾತ್ರವಲ್ಲ, ಹಿಂದಿನ ಸಂಪುಟದ ಬಹುತೇಕ ಸದಸ್ಯರು ಈಗ ಮಂತ್ರಿಗಳಲ್ಲ. ಇವರೆಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದವರೇ” ಎಂದು ಶೈಲಜಾ ಟೀಚರ್ ಹೇಳಿದರು.

ಸಂಪುಟದಲ್ಲಿ ಅವರ ಅನುಪಸ್ಥಿತಿ ರಾಜ್ಯದಲ್ಲಿ ಕೊವಿಡ್ ವಿರುದ್ಧ ಸಮರಕ್ಕೆ ಅಡ್ಡಿಯಾಗಬಹುದು ಎಂಬುದು ಹಲವರ ಆತಂಕ. ಆದರೆ ಹಾಗೇನೂ ಆಗವುದಿಲ್ಲ ಎನ್ನುತ್ತಾರೆ ಶೈಲಜಾ ಟೀಚರ್. “ಈ ಭಯಾನಕ ಸಾಂಕ್ರಾಮಿಕದ ವಿರುದ್ಧ ಹೋರಾಟದ ಮುಂಚೂಣಿಯಲ್ಲಿ ಇರುವವರು ಆರೋಗ್ಯ ಮಂತ್ರಿ ಮಾತ್ರವೇ ಅಲ್ಲ. ಎಲ್ಲ ಇಲಾಖೆಗಳು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಟ್ಟಿಗೇ ಪರಿಣಾಮಕಾರಿಯಾಗಿ ಕೆಲಸ ಮಾಡಿದವು. ನಾನು ನನ್ನ ಪಾತ್ರವನ್ನು ವಹಿಸಿದ್ದೇನಷ್ಟೇ. ಇದು ಒಬ್ಬ ವ್ಯಕ್ತಿಯ ಪ್ರಶ್ನೆಯಲ್ಲ. ಒಂದು ಗಹನವಾದ ವ್ಯವಸ್ಥೆ ಕೆಲಸ ಮಾಡಿತು. ಪರದೆಯ ಹಿಂದೆ ಒಂದು ದೊಡ್ಡ ತಂಡವೇ ಕೆಲಸ ಮಾಡಿದೆ. ನಾನು ಆರೋಗ್ಯಮಂತ್ರಿಯಾಗಿ ನನ್ನ ಪಾತ್ರ ವಸಿಸಿದೆ, ಅಷ್ಟೇ” ಎಂದು ಟೀಚರ್ ಹೇಳಿದ್ದಾರೆ.

ಶೈಲಜಾ ಟೀಚರ್‌ ಕೈ ಬಿಟ್ಟದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ :  ಶೈಲಜಾ ಟೀಚರ್‌ ರವರನ್ನು ಹೊ ಸಂಪುಟದಲ್ಲಿ ಸೇರಿಸಿಕೊಳ್ಳದಿರುವುದು ಸರಿಯಾದ ಕ್ರಮವಲ್ಲ ಎಂದು ಕೆಲವರು ಹೇಳಿದರು. ಹೊಸಬರಿಗೆ ಅವಕಾಶ ನೀಡಿದ್ದು ಸರಿಯಾದ ಕ್ರಮ ಎಂಬ ಚರ್ಚೆಗಳು ಎದ್ದಿವೆ.

ಆದರೆ ಎಲ್ಲರಿಗೂ ಅವರ ಈ ಉತ್ತರದಿಂದ ಸಮಾಧಾನವಾದಂತಿಲ್ಲ. ಎಡಪಕ್ಷಗಳ ವಿರೋಧಿಗಳಂತೂ ಟೀಕೆಗಾಗಿಯಷ್ಟೇ ಟೀಕೆ ಮಾಡಿದ್ದಾರೆ. ಅದರೆ ಎಡಪಕ್ಷಗಳ ಮುಖಂಡರಿಗೂ ಕೇರಳ ಸಿಪಿಐ(ಎಂ) ರಾಜ್ಯಸಮಿತಿಯ ಈ ನಿರ್ಧಾರ ಒಪ್ಪತಕ್ಕದ್ದು ಎಂದನಿಸಿದಂತಿಲ್ಲ. ಸಿಪಿಐ(ಎಂಎಲ್) ಪೊಲಿಟ್ ಬ್ಯುರೊ ಸದಸ್ಯರಾದ ಕವಿತಾ ಕೃಷ್ಣನ್ “ಸಾಂಕ್ರಾಮಿಕದ ನಡುವೆಯೇ ಒಬ್ಬ ಸಮರ್ಥ ಆರೋಗ್ಯಮಂತ್ರಿಯನ್ನು ಬದಲಿಸುವುದಾದರೂ ಏಕೆ?” ಎಂದು ಪ್ರಶ್ನಿಸಿದ್ದಾರೆ. ಎನ್‌.ಎಫ್‌.ಐ.ಡಬ್ಲ್ಯು ಪ್ರಧಾನ ಕಾರ್ಯದರ್ಶಿ ಆನಿ ರಾಜ ಪ್ರತಿಕ್ರಿಯಿಸುತ್ತ, “ಮೊದಲನೆಯದಾಗಿ, ಎಲ್ಲ ಮಂತ್ರಿಗಳನ್ನೂ ಬದಲಿಸಲಾಗಿದೆ ಎಂಬ ತರ್ಕ ಒಡ್ಡುವುದು ಸರಿಯಲ್ಲ, ಇಲ್ಲಿ ಲಿಂಗ ನ್ಯಾಯದ ಪ್ರಶ್ನೆಯೂ ಇದೆ. ಎರಡನೆಯದಾಗಿ, ಸಿಪಿಐ(ಎಂ) ಸಂಪುಟದಲ್ಲಿ ಮಹಿಳಾ ಸದಸ್ಯರ ಸಂಖ್ಯೆಯನ್ನೇನೂ ಹೆಚ್ಚಿಸಿಲ್ಲ, ಕಳೆದ ಬಾರಿಯಂತೆ ಈಗಲೂ ಇಬ್ಬರೇ ಇದ್ದಾರೆ” ಎಂದು ಹೇಳಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ “ ಚುನಾಯಿತ ಸಿಪಿಐ(ಎಂ) ಶಾಸಕರು ಮತ್ತು ಸಂಪುಟ ರಚನೆಯ ವಿಷಯಗಳನ್ನು ಪಕ್ಷದ ರಾಜ್ಯ ಸಮಿತಿ ನಿರ್ಧರಿಸುತ್ತದೆ. ರಾಜ್ಯಸಮಿತಿ ಈ ಬಗ್ಗೆ ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದಿದೆ” ಎಂದು ಈ ಬಗ್ಗೆ ಪ್ರತಿಕ್ರಿಯಿಸುತ್ತ ಹೇಳಿದ್ದಾರೆ, ಮತ್ತು ಇನ್ನೊಬ್ಬ ಹಿರಿಯ ಮುಖಂಡರಾಗಿರುವ ಬೃಂದಾ ಕಾರಟ್ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ, “ನಮ್ಮ ಪಕ್ಷದಲ್ಲಿ ಮಂತ್ರಿಗಳನ್ನು ಆರಿಸುವ ನಿರ್ಧಾರವನ್ನು ಕೈಗೊಳ್ಳುವುದು ರಾಜ್ಯಸಮಿತಿಯ ವ್ಯಾಪ್ತಿಗೆ ಬರುತ್ತದೆ. ಅವರ ನಿರ್ಧಾರದ ಬಗ್ಗೆ ಏಳುವ ಪ್ರಶ್ನೆಗಳಿಗೆ ವಿವರಣೆ ಮತ್ತು ಉತ್ತರವನ್ನು ಅವರೇ ಕೊಡಬೇಕು” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಕೇರಳದ ನೂತನ ಸಚಿವ ಸಂಪುಟದಲ್ಲಿ ಶೈಲಜಾ ಟೀಚರ್ ಇರಬೇಕಿತ್ತು  ಎಂದು ಹಿರಿಯ  ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರತಿಕ್ರಿಯಿಸಿದ್ದಾರೆ.  ಔಷಧಿ ಇಲ್ಲದ ಕೊರೊನಾ ಗೆಲ್ಲಲು ಇರುವ ದೊಡ್ಡ ಅಸ್ತ್ರ ಸೋಂಕಿತರೊಳಗಿನ ಧೈರ್ಯ. ಆ ಧೈರ್ಯ ಹುಟ್ಟಬೇಕಾದರೆ ಜನತೆಗೆ ಸರ್ಕಾರದ ಮೇಲೆ ನಂಬಿಕೆ-ವಿಶ್ವಾಸ ಇರಬೇಕಾಗುತ್ತದೆ. ಕೇರಳದ ಜನತೆಯಲ್ಲಿ ಸರ್ಕಾರದ ಬಗ್ಗೆ ಇರುವ ನಂಬಿಕೆಗೆ ಕಾರಣ ಶೈಲಜಾ ಟೀಚರ್
ಯಾವುದೇ ಸಾಧನೆಯಲ್ಲಿ ದೊಡ್ಡ ಪಾತ್ರ ವಹಿಸುವುದು ಅನುಭವ. ಉಳಿದೆಲ್ಲವನ್ನೂ ದುಡ್ಡಿನಿಂದ ಖರೀದಿಸಬಹುದು‌, ಅನುಭವವನ್ನಲ್ಲ. Tried-Tested-Proved ನಾಯಕಿ ಶೈಲಜಾ ಟೀಚರ್ ಕೊರೊನಾ ಜೊತೆಯಲ್ಲಿಯೇ ಹೊಸ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಅನುಭವವನ್ನು ಗಳಿಸಿದವರು. ಯುದ್ಧ ಕಾಲದಲ್ಲಿ ಸಿದ್ದ ಅನುಭವವನ್ನು ಬಳಸಿಕೊಳ್ಳದೆ ಹೊಸಬರನ್ನು ತರಬೇತಿಗೊಳಿಸುವುದು ಜಾಣತನ ಅಲ್ಲ ಎಂದು ಖಾರವಾಗಿ ಪ್ರತಿಕ್ರೀಯಿಸಿದ್ದಾರೆ.
ಕೇರಳದಲ್ಲಿ ಶೈಲಜಾ ಟೀಚರ್ ಒಳ್ಳೆಯ ಎಕ್ಸಿಕ್ಯೂಟಿವ್. ಎಡರಂಗ ಸರ್ಕಾರದ ಆರೋಗ್ಯ ನೀತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದದ್ದಷ್ಟೇ ಶೈಲಜಾ ಟೀಚರ್ ಹೆಗ್ಗಳಿಕೆ. ಆದರೆ ನೀತಿಗಳೆಲ್ಲವೂ ಕಮ್ಯೂನಿಷ್ಟ್ ಸರಕಾರದ್ದಾಗಿದೆ ಎಂದು ಪತ್ರಕರ್ತ ನವೀನ್‌ ಸೂರಿಂಜೆ ಪ್ರತಿಕ್ರಿಯಿಸಿದ್ದಾರೆ.
ಶೈಲಜಾ ಟೀಚರ್ ಸಮರ್ಥ ಮತ್ತು ಉತ್ತಮ ಸಚಿವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸರ್ಕಾರ ಮತ್ತು ಪಕ್ಷದ ನೀತಿಗಳು ಮತ್ತು ನಿಲುವುಗಳು ಸರಿ ಇದ್ದಾಗ ಎಲ್ಲರೂ ಶೈಲಜಾ ಟೀಚರೇ ಆಗುತ್ತಾರೆ. ಪ್ರವಾಹ ದುರಂತವನ್ನು ನಿರ್ವಹಿಸಿದ್ದು ಅಲ್ಲಿನ ಕಂದಾಯ ಸಚಿವರು. ಆಕ್ಸಿಜನ್ ಸಮಸ್ಯೆಯನ್ನು ನಿವಾರಿಸಿದ್ದು ಕೈಗಾರಿಕಾ ಸಚಿವರು, ಗಲ್ಫ್ ನಿರಾಶ್ರಿತರ ಸಮಸ್ಯೆ ನಿವಾರಿಸಿದ್ದು ಅಲ್ಲಿನ ಕಾರ್ಮಿಕ ಸಚಿವರು… ಹೀಗೆ ಇಡೀ ಸಚಿವ ಸಂಪುಟವೇ ತನ್ನ ಐದು ವರ್ಷದ ಅಸೈನ್ಮೆಂಟ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಮತದಾರನಿಗೆ ಮರೆವಿನ ಸಮಸ್ಯೆ ಇಲ್ಲದೇ ಇದ್ದರೆ ಯಾವ ಅಲೆಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂಬುದು ಸೂರಿಂಜೆ ಯವರ ಅಭಿಪ್ರಾಯವಾಗಿದೆ. 
ಶೈಲಜಾ ಟೀಚರ್‌ ರವರನ್ನು ಕೇರಳ ಸಚಿವರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಬಗ್ಗೆ ಟೀಕೆ,ವಿಮರ್ಶೆ ಸಹಜ ಮತ್ತು ನಿರೀಕ್ಷಿತ. ಇಂತಹ ಪ್ರತಿಕ್ರಿಯೆಗಳು ಬರದೇ ಇದ್ದರೆ ಅದು ಅನಿರೀಕ್ಷಿತ ಮಾತ್ರವಲ್ಲ ಅತ್ಯಾಶ್ಚರ್ಯಕರ ವಾಗುತ್ತಿತ್ತು  ಎಂದು ಚಿಂತಕ ಜಿಎನ್‌ ನಾಗರಾಜ್‌ ಪ್ರತಿಕ್ರಿಯಿಸಿದ್ದಾರೆ.
ಒಂದು ಕಡೆ ವಿಶ್ವಾದ್ಯಂತ ಕೇರಳದ ಕೊರೊನಾ ನಿರ್ವಹಣೆಯ ಬಗ್ಗೆ ಬಂದ ಪ್ರಶಸ್ತಿಗಳು, ಪ್ರಶಂಸೆಗಳು, ಈ ನಿರ್ವಹಣೆಯ ಹೊಣೆ ಹೊತ್ತ ಶೈಲಜಾರವರ ಬಗ್ಗೆ ಪ್ರಶಂಸೆ, ಈ ಹಿನ್ನೆಲೆಯಲ್ಲಿ ಶೈಲಜಾ ಬಗ್ಗೆ ನಾವು ಬಂಡವಾಳಶಾಹಿ ಎಂದು ಕರೆಯುವ , ಈಗ ಕಾರ್ಪೊರೇಟ್ ಮಾಧ್ಯಮಗಳೆಂದು ಬಹಳಷ್ಟು ಪ್ರಜ್ಞಾವಂತ ಜನರು ಗುರುತಿಸುವ ಮಾಧ್ಯಮಗಳು ಬಹಳಷ್ಟು ಊಹಾಪೋಹಗಳನ್ನು ಹರಿಬಿಟ್ಟಿದ್ದವು. ಇಂತಹ ಕೆಲಸವನ್ನು ಮಾಡುವುದೇ ಈ ಮಾಧ್ಯಮಗಳ ” ಸುದ್ದಿ ” ಟಿಆರ್‌ಪಿ ಪ್ರವೃತ್ತಿ ಎಂದು ಈಗ ಗೊತ್ತಿರುವ ಸಂಗತಿ. ಆದರೆ ಸಿಪಿಎಂ‌ನ ಕೇರಳ ರಾಜ್ಯ ಸಮಿತಿಯ ಒಂದೆರಡು ವರ್ಷದ ತೀರ್ಮಾನಗಳು,ನಡೆಗಳನ್ನು ಗಮನಿಸುತ್ತಿದ್ದವರಿಗೆ ಸಚಿವ ಸಂಪುಟದ ಬಗೆಗಿನ ಈ ತೀರ್ಮಾನವೇನೂ ಆಶ್ಚರ್ಯಕರವಲ್ಲ ಎಂದು ಜಿ.ಎನ್.‌ ನಾಗರಾಜ್‌ ಅಭಿಪ್ರಯ ಪಟ್ಟಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *