ನವದೆಹಲಿ: ದಿನಗಳ ಹಿಂದೆಯಷ್ಟೆ ಕೇರಳಕ್ಕೆ ತೆರಳಿದ್ದ ಪ್ರಧಾನಿ ಮೋದಿ, ಮತ್ತೆ ಎರಡು ದಿನಗಳ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ 16ರ ಮಂಗಳವಾರದಂದು ಕೊಚ್ಚಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿರುವ ಅವರು, ಜನವರಿ 17 ರ ಬುಧವಾರದಂದು ನಟ ಹಾಗೂ ಬಿಜೆಪಿ ನಾಯಕನೂ ಆಗಿರುವ ಸುರೇಶ್ ಗೋಪಿ ಅವರ ಮಗಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಗುರುವಾಯೂರಿಗೆ ವಿಮಾನದಲ್ಲಿ ತೆರಳಲಿದ್ದಾರೆ.
ಪ್ರಧಾನಿ ಮೋದಿ ಅವರು ಇತ್ತಿಚೆಗಷ್ಟೆ ಕೇರಳದ ತ್ರಿಶೂರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ತ್ರಿಶೂರ್‌ನಲ್ಲಿ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಗೆ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. 2019ರಲ್ಲಿ ಕೂಡಾ ಬಿಜೆಪಿಯಿಂದ ತ್ರಿಶೂರ್‌ನಲ್ಲಿ ಸ್ಪರ್ಧಿಸಿದ್ದ ಸುರೇಶ್ ಗೋಪಿ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಗಳಿಸಿದ್ದರು.
ಇದನ್ನೂ ಓದಿ: ರಾಮಮಂದಿರ | ಜನವರಿ 22 ರ ಮೊದಲು 3 ದಿನಗಳ ಕಾಲ ಪಕ್ಕದ ಜಿಲ್ಲೆಗಳಿಂದ ಅಯೋಧ್ಯೆಗೆ ಪ್ರಯಾಣ ನಿಷೇಧ!
2019ರಲ್ಲಿ ಸುರೇಶ್ ಗೋಪಿ ಅವರು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೂ, 2014ರಲ್ಲಿ ಬಿಜೆಪಿ ಪಡೆದಿದ್ದ ಮತ ಗಳಿಕೆಗಿಂತ 17% ಹೆಚ್ಚಿನ ಮತವನ್ನು ಅವರು ಪಡೆದಿದ್ದರು. ಅಂದು ಒಟ್ಟು ಚಲಾವಣೆಯಾದ ಮತಗಳಲ್ಲಿ ಸುರೇಶ್ ಗೋಪಿ ಅವರ ಪರವಾಗಿ 28.2% ಮತ ಚಲಾವಣೆಯಾಗಿತ್ತು. 2014ರ ತ್ರಿಶೂರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ 11.15% ಮತಗಳನ್ನಷ್ಟೆ ಪಡೆದಿತ್ತು.
ಪ್ರಧಾನಿಯವರು ಜನವರಿ 16 ರಂದು ಸಂಜೆ 5 ಗಂಟೆಗೆ ಕೊಚ್ಚಿ ನೌಕಾ ವಿಮಾನ ನಿಲ್ದಾಣವನ್ನು ತಲುಪಲಿದ್ದು, ನಂತರ ಒಂದು ಕಿಲೋಮೀಟರ್ ದೂರದ ರೋಡ್ ಶೋ ಮಹಾರಾಜಸ್ ಕಾಲೇಜು ಮೈದಾನದಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ತೆರೆದ ವಾಹನವನ್ನು ಬಳಸಿ ರ‍್ಯಾಲಿ ನಡೆಯಲಿದ್ದು, ಸುಮಾರು 50,000 ಪಕ್ಷದ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪ್ರಧಾನಿಯವರನ್ನು ಹುರಿದುಂಬಿಸಲು ಬಿಜೆಪಿ ಯೋಜಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೋಮಶೇಖರ ರೆಡ್ಡಿ, ಶ್ರೀರಾಮುಲುಗೆ ಖಡಕ್ ಎಚ್ಚರಿಕೆ ನೀಡಿದ ಅರುಣಾ ಲಕ್ಷ್ಮೀ
ರಾತ್ರಿ ಕೊಚ್ಚಿಯಲ್ಲಿ ತಂಗಿ ಮರದಿನ ಬುಧವಾರ ಬೆಳಗ್ಗೆ 7 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಗುರುವಾಯೂರಿಗೆ ತೆರಳಲಿದ್ದಾರೆ. ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಅವರು ಬೆಳಿಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಸ್ಥಳದಲ್ಲಿ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದ್ದು, ಮದುವೆಗೆ ಗೃಹ ಸಚಿವ ಅಮಿತ್ ಶಾ ಕೂಡ ಆಗಮಿಸಲಿದ್ದಾರೆ ಎಂಬ ಊಹಾಪೋಹಗಳಿವೆ.
ಸಮಾರಂಭದ ನಂತರ, ವಿಲ್ಲಿಂಗ್ಡನ್ ಐಲ್ಯಾಂಡ್‌ನಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ನ ಅಂತರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ ಮತ್ತು ಡ್ರೈ ಡಾಕ್ ಅನ್ನು ಉದ್ಘಾಟಿಸಲು ಮೋದಿ ಅವರು ಕೊಚ್ಚಿಗೆ ಹಿಂತಿರುಗಲಿದ್ದಾರೆ. ಅವರು ಬೆಳಿಗ್ಗೆ 11 ಗಂಟೆಗೆ ಮರೈನ್ ಡ್ರೈವ್‌ನಲ್ಲಿ 7,000 ಶಕ್ತಿ ಕೇಂದ್ರದ ಉಸ್ತುವಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದ್ದು, ಅದರ ನಂತರ ಪ್ರಧಾನಿ ದೆಹಲಿಗೆ ವಾಪಸಾಗಲಿದ್ದಾರೆ.
ವಿಡಿಯೊ ನೋಡಿ: ಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ? Janashakthi Media