ಈ ಬಾರಿ ಏನಾದರೂ ಕೇರಳದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ‘ಕಮ್ಯುನಿಸ್ಟ್ ಪಾರ್ಟಿ ಮುಕ್ತ ಭಾರತ’ ಎಂಬ ಹೆಡ್ ಲೈನ್ ಗಳು ರಾರಾಜಿಸುತ್ತಿದ್ದವು. ತ್ರಿಪುರ, ಪಶ್ಚಿಮ ಬಂಗಾಳದಲ್ಲಿ ನೆಲೆ ಮತ್ತು ಬೆಲೆ ಕಳೆದುಕೊಂಡ ಎಡ ಪಕ್ಷಗಳಿಗೆ ಕೇರಳವೊಂದೇ ಆಸರೆಯಾಗಿತ್ತು. ಆದರೆ ಸಿಪಿಎಂ ನೇತೃತ್ವದ ಎಲ್ಡಿಎಫ್ 38 ವರ್ಷಗಳ ‘ಅಧಿಕಾರದ ಪಾಳಿ’ ಪರಂಪರೆ ಮುರಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್ಅನ್ನು ಸೋಲಿಸಿ ಸರಕಾರ ಉಳಿಸಿಕೊಂಡಿದ್ದು ಈಗ ಇತಿಹಾಸ. ಇದಿಷ್ಟೇ ಅಲ್ಲ, ಸಂಪುಟ ವಿಸ್ತರಣೆಯಲ್ಲೂ ಎಡ ರಂಗ ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ದೇಶದ ರಾಜಕಾರಣಕ್ಕೆ ಮಾದರಿಯಾಗಿದೆ. ಎಲ್ ಡಿ ಎಫ್ ನ ಈ ನಡೆ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಪಾಠವೂ ಹೌದು.
ರಮೇಶ್ ಕುಮಾರ್ – ಸುದ್ದಿ ಸಂಪಾದಕರು ವಿಜಯ ಕರ್ನಾಟಕ
ಜಾತಿ ಎನ್ನುವುದು ರಾಜಕಾರಣದ ನೆರಳೇ ಆಗಿ ಬಿಟ್ಟಿದೆ. ಕರ್ನಾಟಕದಲ್ಲಂತೂ ಚುನಾವಣೆಗೆ ಟಿಕೆಟ್ ಕೊಡುವುದರಿಂದ ಹಿಡಿದು ಮಂತ್ರಿಮಂಡಲ ವಿಸ್ತರಣೆ, ಖಾತೆ ಹಂಚಿಕೆಯವರೆಗೂ ಜಾತಿಯದ್ದೇ ಗುಣಾಕಾರ ಭಾಗಾಕಾರ. ಆದರೆ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ಮಂತ್ರಿಮಂಡಲ ರಚನೆ ಜಾತಿ ಸಮೀಕರಣದ ಸಿದ್ಧಸೂತ್ರ ಮೀರಿ ನಿಂತು ಬೆರಗು ಮೂಡಿಸಿದೆ.
ಜಾತಿ ಲೆಕ್ಕಾಚಾರವನ್ನೇ ತೆಗೆದುಕೊಂಡರೆ, ಕೇರಳದಲ್ಲಿ ಶೇ.25ರಷ್ಟಿರುವ (ಹಿಂದೂಗಳ ಜನಸಂಖ್ಯೆ ಶೇ.55) ಈಳವ ಸಮುದಾಯಕ್ಕೆ ಸಿಂಹಪಾಲು ಸಿಗಬೇಕಿತ್ತು. ಕರ್ನಾಟಕದಲ್ಲಿ ಲಿಂಗಾಯತರ ಒಲವು ಸದ್ಯ ಹೇಗೆ ಬಿಜೆಪಿ ಕಡೆಗಿದೆಯೋ ಅಲ್ಲಿ ಈಳವರ ಬೆಂಬಲ ಎಲ್ಡಿಎಫ್ಗಿದೆ. ಈ ಬಾರಿ 26 ಈಳವ ಶಾಸಕರು ಗೆದ್ದಿದ್ದಾರೆ. ಆದರೆ 21 ಮಂದಿಯ ಸಂಪುಟದಲ್ಲಿ ಇವರಿಗೆ ಸಿಕ್ಕಿದ್ದು ನಾಲ್ಕು ಸಚಿವ ಖಾತೆ ಮಾತ್ರ! ಸಿಎಂ ಪಿಣರಾಯಿ ವಿಜಯನ್ ಇದೇ ಸಮುದಾಯದವರು.
ಇದಕ್ಕೆ ವ್ಯತಿರಿಕ್ತವಾಗಿ ನಾಯರ್ ಸಮುದಾಯದ 7 ಮಂದಿ ಸಚಿವರಾಗಿದ್ದಾರೆ. ಪ್ರತಿಷ್ಠಿತ ಸ್ಪೀಕರ್ ಮತ್ತು ಚೀಫ್ ವಿಪ್ ಹುದ್ದೆಯೂ ಈ ಸಮುದಾಯಕ್ಕೆ ಒಲಿದಿದೆ. ಅದರಲ್ಲೂ, ಸಿಪಿಎಂ ಸಂಗಾತಿ ಸಿಪಿಐ ಪಾಲಿಗೆ ಬಂದಿರುವ ನಾಲ್ವರು ಸಚಿವರಲ್ಲಿ ಮೂವರು ನಾಯರ್ ಗಳು! ಅಂದರೆ ಜನಸಂಖ್ಯೆಯಲ್ಲಿ ಶೇ.15ರಷ್ಟಿರುವ ಈ ಸಮುದಾಯಕ್ಕೆ ಸಂಪುಟದಲ್ಲಿ ಸಿಕ್ಕಿರುವ ಪ್ರಾತಿನಿಧ್ಯ ಶೇ. 38!
ಶೇ. 27ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರಲ್ಲಿ ಇಬ್ಬರಿಗೆ ಮಂತ್ರಿಗಿರಿ ಸಿಕ್ಕಿದೆ. ಆದರೆ ಶೇ.18ರಷ್ಟಿರುವ ಕ್ರಿಶ್ಚಿಯನ್ನರಲ್ಲಿ ಮೂವರಿಗೆ ಅವಕಾಶ. 16 ಮೀಸಲು ಕ್ಷೇತ್ರಗಳ ಪೈಕಿ ಎಲ್ ಡಿ ಎಫ್ 14 ಕಡೆ ಜಯ ಗಳಿಸಿದೆ. ಆದರೆ ಅದು ಒಬ್ಬರೇ ಒಬ್ಬ ದಲಿತ ಎಂಎಲ್ಎಗೆ ಸಚಿವ ಸ್ಥಾನ ಕೊಟ್ಟಿದೆ.
ಈಳವ ಸಮುದಾಯ ಕೇಂದ್ರಿತ ‘ಭಾರತೀಯ ಧರ್ಮ ಜನಸೇನಾ’ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಕರ್ನಾಟಕದ ಕರಾವಳಿಯಲ್ಲಿ ಈ ಸಮುದಾಯದ (ಬಿಲ್ಲವ) ಬಲದಿಂದ ಬಿಜೆಪಿ ಸಶಕ್ತವಾಗಿ ಬೆಳೆದು ನಿಂತಿದೆ. ಆದರೆ ಕೇರಳದಲ್ಲಿ ಅವರ ಮತ ಸೆಳೆಯುವ ಬಿಜೆಪಿಯ ಆಸೆ ಠುಸ್ ಆಗಿದೆ. ಈಳವರು ಎಡರಂಗದ ಪರ ಮತ ಚಲಾಯಿಸಿದ್ದಾರೆ. ಇಷ್ಟಾಗಿಯೂ ಅವರಿಗೆ ಸಂಪುಟದಲ್ಲಿ ದೊಡ್ಡ ಪಾಲು ಸಿಕ್ಕಿಲ್ಲ. ಅಂದರೆ ಪಿಣರಾಯಿ ಸಚಿವ ಸಂಪುಟ ರಾಜಕೀಯದಲ್ಲಿನ ಜಾತಿ ವ್ಯವಸ್ಥೆ ಮತ್ತು ಜಾತಿ ಬೆಂಬಲದ ಲಾಭ-ನಷ್ಟದ ಲೆಕ್ಕಾಚಾರ ಮೀರಿ ನಿಂತಿರುವುದು ಸ್ಪಷ್ಟ.
ಪಿಣರಾಯಿ ಸಂಪುಟದ ಮತ್ತೊಂದು ಮಾದರಿ ನಡೆ ಅಂದರೆ ಹಳೆಯ ಮುಖಗಳ ಮೇಲೆ ಪರದೆ ಎಳೆದು ಹೊಸ ಮುಖಗಳನ್ನು ಮುನ್ನೆಲೆಗೆ ತಂದಿರುವುದು. ಸಿಪಿಎಂ (12) ಮತ್ತು ಸಿಪಿಐ(4)ನ ಹದಿನಾರೂ ಸಚಿವರು ಹೊಸಬರು. ಉಳಿದ ನಾಲ್ಕು ಮಿತ್ರ ಪಕ್ಷಗಳ ನಾಲ್ವರು ಸಚಿವರು ಮಾತ್ರ ಹಳಬರು.
ಆರೋಗ್ಯ ಸಚಿವೆಯಾಗಿ ಅಸಾಧಾರಣ ಕೊರೊನಾ ಪರಿಹಾರ ಕಾರ್ಯದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಕೆ ಕೆ ಶೈಲಜಾ ಅವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಎಡಪಕ್ಷಗಳ ರಾಜ್ಯ ಸಮಿತಿಯ ದಿಟ್ಟ ಮತ್ತು ಸ್ಪಷ್ಟ ನಿರ್ಧಾರಕ್ಕೆ ಸಾಕ್ಷಿ. “ಶೈಲಜಾ ಒಬ್ಬರಿಗೆ ವಿನಾಯಿತಿ ಕೊಡೋಣ. ಸಚಿವೆಯಾಗಿ ಅಷ್ಟೊಂದು ಖ್ಯಾತಿ ಪಡೆದ, 60 ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಗಳಿಸಿದ ಅವರನ್ನು ಕೈಬಿಟ್ಟರೆ ವ್ಯಾಪಕ ಜನಾಕ್ರೋಶ ಎದುರಿಸಬೇಕಾಗುತ್ತದೆ,” ಎಂಬ ಅಭಿಪ್ರಾಯವನ್ನೂ ಬದಿಗೊತ್ತಿ, ‘ಹೊಸಬರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ, ಎಲ್ಲರಿಗೂ ಒಂದೇ ನಿಯಮ’ ಎಂಬ ತನ್ನ ನಿಲುವಿಗೆ ಎಡ ಪಕ್ಷಗಳ ಉನ್ನತ ಸಮಿತಿ ಬದ್ಧವಾಗುಳಿದದ್ದು ಅಸಾಮಾನ್ಯ ಮತ್ತು ಅತ್ಯಂತ ದಿಟ್ಟ ನಿರ್ಧಾರ.
ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವಾಗಲೇ ಎಲ್ ಡಿ ಎಫ್, ಎರಡಕ್ಕಿಂತ ಹೆಚ್ಚು ಬಾರಿ ಗೆದ್ದ ಹಿರಿಯ ಮುಖಂಡರನ್ನೆಲ್ಲ ಒಣಗಿದ ಎಲೆಗಳನ್ನು ಗುಡಿಸಿ ಪಕ್ಕಕ್ಕೆ ಸರಿಸಿಡುವಂತೆ ಟಿಕೆಟ್ ನಿರಾಕರಿಸಿತ್ತು. ಥಾಮಸ್ ಐಸಕ್, ಜಿ ಸುಧಾಕರನ್, ಇ ಪಿ ಜಯರಾಮನ್, ಎ ಕೆ ಬಾಲನ್, ಸಿ ರವಿಚಂದ್ರನ್ ರಂಥ ಅತಿರಥ ಮಹಾರಥ ಮಂತ್ರಿಗಳೂ ಸೇರಿದಂತೆ 33 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು!
ಪಿಣರಾಯಿ ಸಂಪುಟ ವಿಸ್ತರಣೆಯಲ್ಲಿ ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಮಿತ್ರ ಧರ್ಮ ಪರಿಪಾಲನೆ. ಕೇರಳ ಕಾಂಗ್ರೆಸ್ (ಎಂ), ಇಂಡಿಯನ್ ನ್ಯಾಷನಲ್ ಲೀಗ್, ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್, ಎನ್ ಸಿ ಪಿ ಮತ್ತು ಜೆಡಿಎಸ್ ಒಂದೋ ಎರಡೋ ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದರೂ, ಯಾವುದೇ ತಕರಾರು ಮಾಡದೆ ಇವರೆಲ್ಲರಿಗೂ ಸಚಿವ ಸ್ಥಾನ ನೀಡಲಾಗಿದೆ.
ಪಕ್ಷ ರಾಜಕೀಯದಲ್ಲೀಗ ಮೈತ್ರಿ ಎನ್ನುವುದು ಕೇವಲ ಸಮಯ ಸಾಧಕತನವಾಗಿದೆ. ಮೈತ್ರಿಕೂಟದಲ್ಲಿ ಸೇರಿಸಿಕೊಂಡವರಿಗೂ ಬದ್ಧತೆ ಇಲ್ಲ, ಸೇರಿದವರಿಗೂ ನಿಯತ್ತಿಲ್ಲ. ಬಿಜೆಪಿಯಂತೂ ಮಿತ್ರ ಪಕ್ಷಗಳನ್ನು ಕೊರೊನಾ ಮಾಸ್ಕ್ ಗಳಂತೆ ಬಳಸಿ ಎಸೆಯುತ್ತಿದೆ! ಕಳೆದ ಮೋದಿ ಸಂಪುಟವನ್ನೇ ತೆಗೆದುಕೊಳ್ಳಿ. ಬಿಜೆಪಿಯೊಂದಕ್ಕೇ 300 ಪ್ಲಸ್ ಸೀಟುಗಳು ಸಿಕ್ಕಿದ್ದೇ ತಡ. ಎನ್ ಡಿ ಎಯ ಮಿತ್ರ ಪಕ್ಷಗಳನ್ನು ಕಡೆಗಣಿಸಲಾಯಿತು. ಮಹಾರಾಷ್ಟ್ರದಲ್ಲಿ 17 ಸಂಸದರನ್ನು ಹೊಂದಿರುವ ಶಿವಸೇನೆಗೆ ಕೇಂದ್ರದಲ್ಲಿ ಕೇವಲ ಒಂದು ಸಚಿವ ಸ್ಥಾನ ನೀಡಿ ಅವಮಾನಿಸಲಾಯಿತು. ಇಂತಹ ಸನ್ನಿವೇಶದಲ್ಲಿ ಕೇರಳ ಎಡರಂಗದ ಮಿತ್ರ ಧರ್ಮ ಬದ್ಧತೆಯೂ ಮೆಚ್ಚುವಂಥದ್ದು.
ಎಲ್ ಡಿ ಎಫ್ ನ ಮತ್ತೊಂದು ಕ್ರಾಂತಿಕಾರಿ ನಿರ್ಧಾರ
ಎಂದರೆ ಕೇರಳ ದೇವಸ್ವಂ(ದೇವಸ್ಥಾನ) ಮಂಡಳಿ ನಿರ್ವಹಣೆ ಖಾತೆಯನ್ನು ಸಂಪುಟದ ಏಕೈಕ ದಲಿತ ಸಚಿವ ಕೆ. ರಾಧಾಕೃಷ್ಣನ್ ಅವರಿಗೆ ವಹಿಸಿದ್ದು. ಹಿಂದೆಯೂ ದಲಿತ ಸಚಿವರು ಈ ಹೊಣೆಗಾರಿಕೆ ನಿರ್ವಹಿಸಿದ ಇತಿಹಾಸ ಇದೆ. ಆದರೆ, ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶ ಕುರಿತ ಪರ-ವಿರೋಧದ ಬಿಸಿ ಕಳೆದ ಬಾರಿ ಪಿಣರಾಯಿ ಸರಕಾರವನ್ನು ತೀವ್ರವಾಗಿ ತಟ್ಟಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭಾರಿ ಹಿನ್ನಡೆಗೆ ಇದು ಮುಖ್ಯ ಕಾರಣ ಎಂದೂ ವ್ಯಾಖ್ಯಾನಿಸಲಾಗಿತ್ತು. ಈ ನಡುವೆಯೂ ಎಲ್ ಡಿ ಎಫ್, ದಲಿತ ಸಚಿವರಿಗೆ ದೇವಸ್ಥಾನಗಳ ಹೊಣೆ ವಹಿಸಿದ್ದು
ಸುಧಾರಣಾವಾದಿ ಹೆಜ್ಜೆ.
ನಮ್ಮ ರಾಜ್ಯ ರಾಜಕಾರಣದಲ್ಲಂತೂ ಜಾತಿ ಪ್ರಾತಿನಿಧ್ಯ ಎನ್ನುವುದು ವಟಾರದ ಗಟಾರ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರೂ ಪಕ್ಷಗಳಿಗೂ ಜಾತಿ ಕೆಸರಿನಲ್ಲಿ ಬಿದ್ದು ಹೊರಳಾಡುವುದೆಂದರೆ ಎಲ್ಲಿಲ್ಲದ ಖುಷಿ. ಲಿಂಗಾಯತರನ್ನು ಉದ್ಧರಿಸಲು ಲಿಂಗಾಯತ ಮಂತ್ರಿಗಳೇ ಬೇಕೆ? ದಲಿತೋದ್ಧಾರ ದಲಿತ ಸಚಿವರಿಂದ ಮಾತ್ರ ಸಾಧ್ಯವೆ? ಒಕ್ಕಲಿಗರೊಬ್ಬರು ಮುಖ್ಯಮಂತ್ರಿ ಆದ ತಕ್ಷಣ ಮಣ್ಣಿನ ಮಕ್ಕಳೆಲ್ಲರ ಅಭ್ಯುದಯ ಆಗಿ ಬಿಡುತ್ತದೆಯೆ? ಬ್ರಾಹ್ಮಣರ ಅಭಿವೃದ್ಧಿಗೆ ಆ ಜಾತಿಯ ಮಂತ್ರಿಯೇ ಬೇಕೆ? ಇವೆಲ್ಲ ಸ್ಥಾಪಿತ ಹಿತಾಸಕ್ತಿಗಾಗಿ ರಾಜಕಾರಣಿಗಳು ತಾವೇ ಕೃತಕವಾಗಿ ಸೃಷ್ಟಿಸಿಕೊಂಡ ಹುನ್ನಾರ ಅಷ್ಟೆ.
ಪ್ರಬಲ ಸಮುದಾಯದವರೊಬ್ಬರು ಮುಖ್ಯಮಂತ್ರಿ ಆದರೆ ಅದೇ ಆ ಸಮುದಾಯಕ್ಕೆ ದೊಡ್ಡ ಶಕ್ತಿ ಅಲ್ಲವೆ? ಸಚಿವ ಸಂಪುಟ, ನಿಗಮ ಮಂಡಳಿ, ಪ್ರಾಧಿಕಾರ, ಆಯೋಗದಿಂದ ಹಿಡಿದು ಹಳ್ಳಿಯ ಶಾಲಾ ಅಭಿವೃದ್ಧಿ ಮಂಡಳಿಗಳವರೆಗೂ ಎಲ್ಲ ಅಧಿಕಾರ ಸೂತ್ರ ದೊಡ್ಡ ಸಮುದಾಯಕ್ಕೇ ಮೀಸಲಿರಲಿ ಅನ್ನೋದು ಯಾವ ನ್ಯಾಯ?
ಇನ್ನು ಚುನಾವಣೆ ಸ್ಪರ್ಧೆಯೂ ಅಷ್ಟೆ. ಏಳನೇ ಬಾರಿ, ಎಂಟನೇ ಬಾರಿಯೂ ಕ್ಷೇತ್ರದ ಮತದಾರರು ಅದದೇ ಮಾಸಿದ ಮುಖ ನೋಡಬೇಕು. ಸೊಂಟದಲ್ಲಿ ತ್ರಾಣ ಇಲ್ಲದಿದ್ದರೂ, ಪ್ರಾಣ ಮೂಗಿನ ತುದಿಯವರೆಗೆ ಬಂದು ನಿಂತಿದ್ದರೂ ಎಲೆಕ್ಷನ್ ಗೆ ನಿಲ್ಲುವ ತಲಬು ತೀರುವುದಿಲ್ಲ! ಖಾತೆ ನಿಭಾಯಿಸುವ ಅರ್ಹತೆಯೇ ಇಲ್ಲದಿದ್ದರೂ ಕೇವಲ ಜಾತಿ ಬಲದಿಂದ ಅಧಿಕಾರ ದಕ್ಕುತ್ತದೆ. ಟ್ಯೂಬೆಕ್ಟಮಿಗೂ ವ್ಯಾಸೆಕ್ಟಮಿಗೂ ಫರಕ್ ತಿಳಿಯದವರೂ ಕುಟುಂಬ ಕಲ್ಯಾಣ ಮಂತ್ರಿ. ಇಂಟರ್ಯಾಕ್ಷನ್ಗೂ ಇಂಟರ್ ಕೋರ್ಸ್ ಗೂ ವ್ಯತ್ಯಾಸ ಅರಿಯದವರೂ ಸಂಪರ್ಕ ಖಾತೆ ಸಚಿವರು. ಗೂಗಲ್ ಗೂ ಗಾಗಲ್ಗೂ ಅಂತರ ತಿಳಿಯದೆ ತಡಬಡಾಯಿಸುವವರೂ ಟೆಕ್ನಾಲಜಿ ಮಿನಿಸ್ಟರ್. ಗಾರ್ಲಿಕ್ಗೂ ಗಾರ್ಗಲ್ಗೂ ವ್ಯತ್ಯಾಸ ಗೊತ್ತಿರದವರೂ…
ಅಳಿಯ ಮೊಹಮ್ಮದ್ ರಿಯಾಜ್ ರನ್ನು ಸಂಪುಟಕ್ಕೆ ಸೇರಿಸಿಕೊಂಡ (ಲೋಕೋಪಯೋಗಿ ಖಾತೆ) ಕಪ್ಪು ಚುಕ್ಕೆಯೊಂದನ್ನು ಬಿಟ್ಟರೆ, ಯಾವ ಕೋನದಿಂದ ನೋಡಿದರೂ ಪಿಣರಾಯಿ ಸಚಿವ ಸಂಪುಟ ಆದರ್ಶವಾಗಿ ಹೊಳೆಯುತ್ತದೆ. ಈಗಿನ ಜಾತಿ ರಾಜಕೀಯದ ಕಲುಷಿತ ಸನ್ನಿವೇಶದಲ್ಲಿ ಮಾದರಿಯಾಗಿ ಕಾಣುತ್ತದೆ. ಆದರೆ, ತಾವು ‘ಜಾತ್ಯತೀತ’ ಎಂದು ಸದಾ ಪೀಪಿ ಊದುವ ಕೆಲವು ಕಮ್ಯುನಿಸ್ಟ್ ಚಿಂತಕರೇ ‘ಪಿಣರಾಯಿ ಸಂಪುಟದಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ, ಜಾತಿವಾರು ಮಾನ್ಯತೆಯೇ ಇಲ್ಲ’ ಎಂದು ರೋದಿಸುತ್ತಿರುವುದು ಮಾತ್ರ ಸೋಜಿಗ!